ಶೂನ್ಯ ರೇಖೆ

ಮೂಲ ಹಿಂದಿ ಕವಿತೆ: ಗುಲ್ಜಾರ್ 
ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 

(ಕವಿತೆಯನ್ನು ಓದಿದ ಮೇಲೆ ಕೆಳಗಿರುವ ಟಿಪ್ಪಣಿ ಓದಿ ನಂತರ ಕವಿತೆಯನ್ನು ಮತ್ತೊಮ್ಮೆ ಓದಿ.)

ಹೆಜ್ಜೆಗಳನ್ನು ಅಳೆಯುತ್ತಾ  ನಾನು ವಾಘಾದಲ್ಲಿ
ಶೂನ್ಯರೇಖೆಯ ಮೇಲೆ ಬಂದು ನಿಂತಾಗ
ನನ್ನ ನೆರಳು ಪಾಕೀಸ್ತಾನದಲ್ಲಿತ್ತು.
ಸೂರ್ಯ ನನ್ನ ಬೆನ್ನಿಗಿದ್ದ.
ಎದುರಿಗೆ ನನ್ನ ಅಬ್ಬೂ ಗೋಚರಿಸಿದರು.
ನನ್ನನ್ನು ನೋಡಿದವರೇ
ಕೈಯಲ್ಲಿದ್ದ ಕೋಲನ್ನು ನೆಲಕ್ಕೆ ಊರಿ
ಮುಗುಳ್ನಕ್ಕು ಮಾತಾಡಿಸಿದರು:

"ಅಲ್ಲಿ ಮಣ್ಣು ಹಾಕಿದ ಮೇಲೆ
 ನಾನು ನನ್ನ ಮನೆಗೆ ಮರಳಿ ಬಂದೆ;
 ನನಗೆ ವಿದಾಯ ಹೇಳಲು
 ನೀನು ಬಂದೇ ಬರುತ್ತೀಯ
 ಅಂತ ನನಗೆ ಭರವಸೆ ಇತ್ತು.
 ನನ್ನ ಸಾವಿನ ಸುದ್ದಿ ನಿನಗೆ ಮುಟ್ಟಿರಲಿಲ್ಲ!"

ಕೋಲನ್ನು ನೆಲಕ್ಕೆ ಮತ್ತೊಮ್ಮೆ ಬಡಿದು
ನನ್ನ ಕಡೆ ಕೈ ಚಾಚಿ ನುಡಿದರು -
"ನಡೆ, ದೀನಾಗೆ ಹೋಗೋಣ."

[ಗುಲ್ಜಾರ್ ಹುಟ್ಟಿದ್ದು ಇಂದಿನ ಪಾಕಿಸ್ತಾನದ ದೀನಾ ಎಂಬ ಊರಿನಲ್ಲಿ.  ಭಾರತದ ವಿಭಜನೆಗೆ ಮುಂಚೆ ಅವರ ತಂದೆ  ಪಾಕಿಸ್ತಾನದಲ್ಲಿದ್ದ  ತಮ್ಮ ನೆಲೆಯನ್ನು ತ್ಯಜಿಸಿ ಕುಟುಂಬದೊಂದಿಗೆ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದರು. ಮುಂದೆ ಗುಲ್ಜಾರ್ ಕವಿತೆಗಳನ್ನು ಬರೆಯತೊಡಗಿ ಮುಂಬೈಗೆ ಚಿತ್ರರಂಗದಲ್ಲಿ ಕೆಲಸ ಮಾಡಲೆಂದು ಹೋದಾಗ ಅವರ ತಂದೆಗೆ ಅದು ಇಷ್ಟವಿರಲಿಲ್ಲ. "ಇದರಲ್ಲಿ ನಿನಗೆ ಏನು ಸಂಪಾದನೆ ಇದ್ದೀತು? ನಿನ್ನ ಅಣ್ಣನ ಮೇಲೆ ನೀನು ಹೊರೆಯಾಗುತ್ತೀಯ," ಎಂದು ಅವರು ಮುನಿಸಿಕೊಂಡು ಹೇಳಿದ್ದರು. ತಂದೆ ಕಾಲವಾದಾಗ ಈ  ಸುದ್ದಿ ಗುಲ್ಜಾರ್ ಗೆ ತಲುಪಿದ್ದು ಐದು ದಿನಗಳ ತರುವಾಯ. ಅವರು ದೆಹಲಿಗೆ ಬಂದಾಗ ತಂದೆಯ ದೇಹವನ್ನು ಆಗಲೇ ಮಣ್ಣು ಮಾಡಿ ಆಗಿತ್ತು. ಇದು ಗುಲ್ಜಾರ್ ಅವರಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು.

ಮುಂದೆ ಗುಲ್ಜಾರ್ ಬಿಮಲ್ ರಾಯ್ ಜೊತೆ ಕೆಲಸ ಮಾಡಲಾರಂಭಿಸಿದರು.  ಬಿಮಲ್ ರಾಯ್ ಅವರಲ್ಲಿ ಗುಲ್ಜಾರ್ ತಮ್ಮ ತಂದೆಯನ್ನು ಕಂಡರು. ತಮ್ಮ ಕೊನೆಯ ಚಿತ್ರ "ಅಮೃತ ಕುಂಭ"ದ ಚಿತ್ರೀಕರಣದ ವೇಳೆ ಬಿಮಲ್ ರಾಯ್ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಇದನ್ನು ವಸ್ತುವಾಗಿಟ್ಟುಕೊಂಡು ಗುಲ್ಜಾರ್ ಒಂದು ಕತೆ ಕೂಡಾ ಬರೆದಿದ್ದಾರೆ.  ಬಿಮಲ್ ರಾಯ್ ಸತ್ತಾಗ ಅವರ ಅಂತ್ಯ ಕ್ರಿಯೆಯನ್ನು ಗುಲ್ಜಾರ್ ಮಾಡಿದರು. "ಹೀಗೆ ಐದು ವರ್ಷಗಳ ನಂತರ ನಾನು ತಂದೆಯ ಅಂತ್ಯ ಕ್ರಿಯೆ ಮಾಡಿದೆ" ಎಂದು  ಗುಲ್ಜಾರ್ ಬರೆದಿದ್ದಾರೆ.

ಇತ್ತೀಚೆಗೆ ಒಂದು ಚಿತ್ರೀಕರಣದ ಸಂದರ್ಭದಲ್ಲಿ ಎಂಬತ್ತರ ಅಂಚಿನ ಗುಲ್ಜಾರ್ ಪಾಕಿಸ್ತಾನಕ್ಕೆ ಎಪ್ಪತ್ತು ವರ್ಷಗಳ ನಂತರ ಮತ್ತೆ ಹೋಗಿದ್ದರು. ತಾವು ಇದ್ದ ಮನೆ, ದೀನಾದಲ್ಲಿರುವ ರೈಲ್ವೆ ಸ್ಟೇಷನ್ ಮೊದಲಾದವುಗಳನ್ನು ಮತ್ತೆ ನೋಡಿದ ಗುಲ್ಜಾರ್ ಗದ್ಗದಿತರಾದರು. ತಂದೆಯ ನೆನಪು ಅವರನ್ನು ಕಾಡಿತು.  ಈ ಕವಿತೆಯನ್ನು ಆಗ ಬರೆದಿದ್ದು.

ಪಂಜಾಬಿನ ವಾಘಾ ಎಂಬ ಸ್ಥಾನದಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಹಾಕಿದ ಶೂನ್ಯರೇಖೆ ಇದೆ. ರಸ್ತೆಯ ಮೂಲಕ ಒಂದು ದೇಶದಿಂದ ಇನ್ನೊಂದಕ್ಕೆ ಹೋಗಬೇಕಾದವರು ಈ ಗಡಿಯನ್ನು ದಾಟಿ ಹೋಗಬೇಕು. ]







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)