ಮಿಡಿಯುವೆಯೇಕೆ ಮೌನದಲಿ ಕಣ್ಣೀರು?

ಮೂಲ ಹಿಂದಿ ಕವಿತೆ: ನೀರಜ್ 
ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್ 

ಮಿಡಿಯುವೆಯೇಕೆ  ಮೌನದಲಿ ಕಣ್ಣೀರು?
ವ್ಯರ್ಥ ಹರಿಸುವೆಯೇಕೆ ಮುತ್ತುಗಳ ಧಾರೆ?
ಕೆಲವೊಂದು ಕನಸುಗಳ ಕೊಲೆಯಾದರೇನಂತೆ 
ಅನಂತ ಜೀವನವು ಕೊನೆಯಾಗಿಬಿಡುವುದೆ?

ಕನಸೆಂದರೇನು? ನಯನ ಶಯ್ಯೆಯ ಮೇಲೆ 
ಮಲಗಿರುವ ಒಂದು ಕಣ್ಣೀರ ಹನಿಯಷ್ಟೆ 
ಮುರಿದುಹೋದರೆ ಕನಸು ಅದರರ್ಥವಿಷ್ಟೆ:
ಯೌವ್ವನವು ಅರೆನಿದ್ದೆಯಲ್ಲೆದ್ದಂತೆ 
ಒದ್ದೆ ಮಾಡುವೆಯಲ್ಲ ಬದುಕು? ಮೀಯುವೆಯಲ್ಲ ಹಾಕದೇ ಮುಳುಗು?
ಹರಿದುಹೋದರೆ ಹೋಯ್ತು ಒಂದಷ್ಟು ನೀರು; ಅದರಿಂದ ಶ್ರಾವಣಕ್ಕೆ ಬರುವುದೇ ಸಾವು?

ಹರಿದು ಹೋಯಿತೆ ಮಾಲೆ? ತಾನೇ ಬಗೆ ಹರಿಯಿತು ಸಮಸ್ಯೆ!
ಕಣ್ಣಲ್ಲಿ ಚಿಮ್ಮಿತೇ ಒಮ್ಮೆಲೇ ಧಾರೆ? ಮುಗಿಯಿತೊಂದು ದೀರ್ಘ ತಪಸ್ಯೆ! 
ಮುನಿಸಿಕೊಂಡೇ ಕಳೆವೆ ಏತಕ್ಕೆ ದಿನವನ್ನು ಹರಿದು ಹೋದದ್ದಕ್ಕೆ ಹಾಕುತ್ತ ತೇಪೆ?
ಒಂದೆರಡು ದೀಪಗಳು  ಆರಿಹೋದರೆ ಮಂಕೆ  ಸಾವು ಬರುವುದೇ ಹೇಳು ಮನೆಯ ಅಂಗಳಕೆ?

ಕಳೆದು  ಹೋಗದು ಎಂದೂ  ಯಾವುದೂ ಇಲ್ಲಿ; ಅದೇ ಥೈಲಿ, ಬದಲು ಹೊರಕವಚ ಮಾತ್ರ 
ರಾತ್ರಿ ಹೊದ್ದ ಹುಣ್ಣಿಮೆಯನು ಕಳಚಿ ಬೆಳಗು ಉಟ್ಟಂತೆ ಬಿಸಿಲಿನ ಧೋತ್ರ 
ಹೊರವಸ್ತ್ರ ಬದಲಾಯಿಸಿ ಬೇರೆಯಾಗುವೆಯಾ? ನಡಿಗೆ ಬದಲಾಯಿಸಿ ಬೇರೆ ಗುರಿಯ ಸೇರುವೆಯಾ?
ಕಳೆದು ಹೋದರೆ ಆಟಿಕೆಗಳೊಂದೆರಡು  ಸತ್ತು ಹೋಗುವುದೇನು ಹೇಳು  ಬಾಲ್ಯ?

ಗಡಿಗೆಗಳು ಲಕ್ಷ ಸಲ ಮುರಿದು ಚೂರಾದವು; ಬಾವಿಕಟ್ಟೆಗೆ ಯಾರು ದೂರು ಹೇಳಿದರು?
ಮುಳುಗಿದವದೆಷ್ಟೋ ಲಕ್ಷ ಸಲ ನಾವೆಗಳು; ಜನನಿಬಿಡವಾಗಿಹುದು ನದಿಯ ದಡ ಆದರೂ
ಯಾಕೆ ಹೆಚ್ಚಿಸುವೆ ತಮಸ್ಸಿನ ಆಯಸ್ಸು? ಯಾಕೆ ಬಿಡುತಿರುವೆ ಬಿಸಿ ನಿಟ್ಟುಸಿರು?
 ಶಿಶಿರವು ಎಷ್ಟೇ ಪ್ರಯತ್ನಿಸಿದರೂ ಉಪವನಕ್ಕೆಂದೂ ಬರದು ಸಾವು 

ಮಾಲಿಯೇ  ತೋಟಕ್ಕೆ ಕನ್ನ ಹಾಕಿದರೂ ಕದಿಯಲಾಗುವುದೆ ಹೂವಿಂದ ಕಂಪು?
ಶತಪ್ರಯತ್ನ ಮಾಡಿದರೂ ಬಿರುಗಾಳಿ  ಮುಚ್ಚಲಾಯಿತೇ ಧೂಳಿನ ಕಿಟಕಿಯನ್ನು?
ದ್ವೇಷವನ್ನು ಸ್ವೀಕರಿಸುವೆಯೇಕೆ? ಧೂಳೆರಚುವೆ ಏಕೆಲ್ಲರಮೇಲೂ?
ಒಬ್ಬಿಬ್ಬರ ಹುಬ್ಬುಗಳು ಗಂಟಾದರೇನು, ಕನ್ನಡಿಗೆ ಬರುವುದೇ ಅದರಿಂದ ಸಾವು?

(Hindi poem by Neeraj, translated by C.P. Ravikumar.)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)