ಹೀಗೊಂದು ಇತ್ತು ಬಾಲ್ಯ

ಮೂಲ ಹಿಂದಿ ಕವಿತೆ: ಗುಲ್ಜಾರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಹೀಗೊಂದು ಇತ್ತು ಬಾಲ್ಯ
ಪುಟ್ಟದಾಗಿತ್ತು, ಇಷ್ಟೇ ಇಷ್ಟು,
ಬಾಲ್ಯ 
ಬಾಲ್ಯದಲ್ಲೊಬ್ಬರು, ಅಪ್ಪ ಎಂಬವರು, 
ಸಾಚಾತನ, ಒಳ್ಳೆಯತನ ಅವರ ಆಂತರ್ಯ 
ಹೇಗಿತ್ತು ನಮ್ಮ ಸುಂದರ ಬಾಂಧವ್ಯ!
ಹೀಗೊಂದು ಇತ್ತು ಬಾಲ್ಯ 

ಮೇಲೆ ರೆಂಬೆಯನ್ನೇರಿ 
ಬಾ  ಎನ್ನುವ  ಹೂಗಳು
ಹಿಡಿಯಲು ಕೈ ಎತ್ತಿದರೆ 
ನಿಲುಕಲಾರವು  ಚಾಚಿದರೂ 
ಆಗ ಎಲ್ಲಿಂದಲೋ ಬಂದು 
ಬಾಲ್ಯದ ಎರಡು ಕೈಗಳು 
ಮೇಲೆತ್ತಿದರೆ ಮುಟ್ಟುವುದು 
ಹೂವಿನೊಂದಿಗೆ ಹೂಬೆರಳು -
ಇತ್ತು ಬಾಲ್ಯ ಹೀಗೊಂದು 

ಹೀಗೇ ಬರುವಾಗ 
ಎಲ್ಲೋ ಯಾವಾಗಲೋ 
ಬಾಲ್ಯದಲ್ಲೇ ಅಪ್ಪ 
ಲೀನವಾದರು  ಕೈಬಿಟ್ಟು 
ಮುಷ್ಟಿಯಲ್ಲಿವೆ ಇನ್ನೂ 
ಒಣಗಿ ಹೋದ ಹೂದಳ 
ಬದುಕ ಬೇಕೆಂಬಾಸೆ 
ಈ ಹೂವಿನ ಪರಿಮಳ -
ಹೀಗೊಂದು ಇತ್ತು ಬಾಲ್ಯ 

ನನ್ನ ತುಟಿಗಳ ಮೇಲೆ ಇನ್ನೂ 
ಅವರ ದನಿ ಆಡುತ್ತಿದೆ  ಲಾಸ್ಯ 
ನನ್ನ ಉಸಿರಿನಲ್ಲಿ ಇನ್ನೂ ಇದೆ 
ಅವರಿತ್ತ ಆತ್ಮವಿಶ್ವಾಸ 
ಎಂದು ಸಿಕ್ಕುವರೋ ಮತ್ತೆ 
ಯಾವುದೋ ತಿರುವಿನಲ್ಲಿ 
ಕೇಳುವರು - ನೆನಪಿದೆಯೇ 
ಬಾಲ್ಯದ ವಿಳಾಸ?
ಹೀಗೊಂದು ಇತ್ತು ಬಾಲ್ಯ 

Kannada translation of a poem "Ek tha Bachpan" by Gulzar 

(ಹಿಂದಿಯ ಆಶೀರ್ವಾದ್ ಎಂಬ ಚಿತ್ರದಲ್ಲಿ ಗುಲ್ಶಾರ್ ಅವರ "ಏಕ್  ಥಾ ಬಚ್ ಪನ್ " ಕವಿತೆಯನ್ನು ಲತಾ ಮಂಗೇಷ್ಕರ್ ಹಾಡಿದ್ದಾರೆ.)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)