ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!

ಮೂಲ ಹಿಂದಿ ಕವಿತೆ: ಶಿವಮಂಗಲ ಸಿಂಗ್ ಸುಮನ್
ಕನ್ನಡಕ್ಕೆ: ಸಿ.ಪಿ. ರವಿಕುಮಾರ್
Body of Water Waves

ಇಂದು ಸಾಗರವು ವಿಷವನು ಕಕ್ಕಿ 
ಅಲೆಗಳಲೊಮ್ಮೆಲೆ  ಯೌವ್ವನ ಉಕ್ಕಿ 
ಹೃದಯದಲ್ಲಿಯೂ ಸಾಗರದಂತೆ 
ಮೇಲೇಳುತ್ತಿದೆ ಪ್ರವಾಹಸಿಂಧು 

ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು! 

ಅಲೆಗಳ ಭಾಷೆಯಲೇ ಮಾತಾಡು 
ಚಂಡಮಾರುತದ ಸಾಹಸ ಬೇಡು  
ಜೀವನದಲ್ಲೆಲ್ಲೋ ಒಮ್ಮೊಮ್ಮೆ 
ಸಿಗುವುದು ಬಿರುಗಾಳಿಯ  ಸಮ ಬಂಧು!

ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು! 

ಅನಂತ ಸಾಗರವೂ ಅರಿತಿಹುದು 
ಸೀಮಾರೇಖೆಯು ಇದೆ ತನಗೊಂದು!
ಉಕ್ಕುತಿರುವ ಅಲೆಗಳಿಗೂ ಗೊತ್ತು 
ಸೋಲೊಪ್ಪನು ಮೃಡ ಮಾನವನೆಂದು!

ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು! 

ಇರಬಹುದೆಷ್ಟೋ ಕಡಲೊಳು ಕೆಚ್ಚು 
ದಣಿವಿಲ್ಲದ ನಾವಿಕನಿಗೆ ಇನ್ನೆಷ್ಟು?
ದೇಹದೊಳಿರುವಾಗಿನ್ನೂ ಕೊನೆಯುಸಿರು 
ತ್ಯಜಿಸುವನೇ ಹರಿಗೋಲನು ಕೈಬಿಟ್ಟು?
ಈ ಛಲದಿಂದಲೆ ಗೆದ್ದನು ಬಿಡದೆ 
ಸಪ್ತಸಾಗರಗಳಲೊಂದೂ!

ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!

(Hindi poem by Shivmangal Singh Suman, translated by C.P. Ravikumar)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)