ಪದಗಳ ಹುಟ್ಟು ಮತ್ತು ಗುಟ್ಟು (ಹರಟೆ)
ಸಿ. ಪಿ. ರವಿಕುಮಾರ್
ನನ್ನ ಫೇಸ್ ಬುಕ್ ಮಿತ್ರರಾದ ಭರತ್ ಕುಮಾರ್ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಕನ್ನಡ ಪದಗಳ ಮೂಲವನ್ನು ವಿಶ್ಲೇಷಿಸಿ ಬರೆಯಲು ಒಂದು ಫೇಸ್ ಬುಕ್ ಪುಟವನ್ನು ಹೊರತಂದಿದ್ದಾರೆ: https://www.facebook.com/padaguttu
ಇಂಗ್ಲಿಷ್ ಭಾಷೆಯಲ್ಲಿ ಪದಗಳ ಹುಟ್ಟು ಹೇಗಾಗಿದೆ ಎಂಬುದನ್ನು ಕುರಿತು ಹಲವು ಪುಸ್ತಕಗಳಿವೆ. ಜೀ ಆರ್ ಈ ಪರೀಕ್ಷೆಗೆ (ಗ್ರಾಜುಯೇಟ್ ರೆಕಾರ್ಡ್ ಎಕ್ಸಾಮಿನೇಷನ್) ಕುಳಿತುಕೊಳ್ಳುವ ವಿದ್ಯಾರ್ಥಿಗಳೆಲ್ಲರೂ ಈ ಪುಸ್ತಕಗಳನ್ನು ಬಹಳ ಭಯ-ಭಕ್ತಿಗಳೊಂದಿಗೆ ಓದುವುದನ್ನು ಕಾಣಬಹುದು. ನಾನೂ ಓದಿದೆ! ಉತ್ತರ ಅಮೆರಿಕಾಗೆ ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳು ಅನಂತರ ಈ ಮಟ್ಟದ ಇಂಗ್ಲಿಷ್ ಬಳಸುವುದು ಅಷ್ಟರಲ್ಲೇ ಇದೆ! ನನ್ನ ಕೆಲವು ವಿದ್ಯಾರ್ಥಿಗಳು ಜೀ ಆರ್ ಈ ಪರೀಕ್ಷೆಯಲ್ಲಿ ಅತ್ಯದ್ಭುತ ವಿಜಯ ಸಾಧಿಸಿದವರು ತಮ್ಮ ಪ್ರಾಜೆಕ್ಟ್ ರಿಪೋರ್ಟ್ ಬರೆಯುವಾಗ ಬರೀ ತಪ್ಪು ಬರೆದು ನನ್ನ ಕೆಂಪು ಮಸಿಯ ಲೇಖನಿಗೆ ಸಾಕಷ್ಟು ಕೆಲಸ ಕೊಟ್ಟಿದ್ದಾರೆ. ಅದು ಹಾಗಿರಲಿ!
ನಾನು ಇಂಥ ಒಂದು ಪುಸ್ತಕ ಓದುವಾಗ ಜಗರ್ನಾಟ್ (juggernaut) ಎಂಬ ಇಂಗ್ಲಿಷ್ ಪದದ ಮೂಲ ಜಗನ್ನಾಥ ಎಂಬುದನ್ನು ತಿಳಿದು ಉತ್ಸಾಹಿತನಾಗಿದ್ದು ನನಗೆ ನೆನಪಿದೆ. ಒರಿಸ್ಸಾದಲ್ಲಿರುವ ಪುರಿ ಜಗನ್ನಾಥನ ತೇರನ್ನು ಎಳೆಯುವಾಗ ಅದನ್ನು ನಿಗ್ರಹಿಸುವುದು ಸಾಧ್ಯವಿಲ್ಲ; ತನ್ನ ಮನಸ್ಸಿಗೆ ಬಂದ ಹಾಗೆ ಅದು ಚಲಿಸುತ್ತದೆಯಂತೆ! ಆಗ ದಾರಿಯಲ್ಲಿ ಆಡ್ಡವಿದ್ದವರನ್ನು ತೇರು ಬಲಿ ತೆಗೆದುಕೊಳ್ಳಬಹುದು. ಪ್ರತಿವರ್ಷ ಇಂಥ ಘಟನೆಗಳು ನಡೆಯುತ್ತವಂತೆ. ಇಂಥ ನಿಗ್ರಹಾತೀತ ಶಕ್ತಿಗೆ ಜಗ್ಗರ್ನಾಟ್ ಎಂಬ ಪದವನ್ನು ಇಂಗ್ಲಿಷ್ ಭಾಷೆಯಲ್ಲಿ ಸೇರಿಸಲಾಗಿದೆ. ಹೀಗೇ ಜಗತ್ತಿನ ಅನೇಕ ಭಾಷೆಗಳಿಂದ ಇಂಗ್ಲಿಷ್ ಭಾಷೆಯು ಪದಗಳನ್ನು ಸ್ವೀಕರಿಸಿದೆ. ಕನ್ನಡವೂ ಇದಕ್ಕೆ ಹೊರತಲ್ಲ. ಸಂಸ್ಕೃತ, ಉರ್ದೂ, ಇಂಗ್ಲಿಷ್, ಪೋರ್ತುಗೀಸ್ ಮೊದಲಾದ ಭಾಷೆಗಳಿಂದ ಪದಗಳನ್ನು ನಾವೂ ಸ್ವೀಕರಿಸಿ ನಮಗೆ ಹೇಗೆ ಬೇಕೋ ಹಾಗೆ ತಿರುಚಿಕೊಂಡಿದ್ದೇವೆ. ಹೀಗಾಗಿ ಈ ಪದಗಳ ಹುಟ್ಟು ಮರೆತುಹೋಗಿದೆ.
ಪೊರಕೆ!
ಪದಗಳ ಹುಟ್ಟನ್ನು ಹುಡುಕುವುದು ಒಂದು ಮೋಜಿನ ಕೆಲಸ. ಆಮ್ ಆದ್ಮಿ ಪಾರ್ಟಿಯ ಚಿಹ್ನೆಯಾಗಿ ರಾರಾಜಿಸುತ್ತಿರುವ ಪೊರಕೆಯನ್ನೇ ತೆಗೆದುಕೊಳ್ಳಿ. ಪೊರಕೆಯನ್ನು ಕುರಿತು ಕನ್ನಡದಲ್ಲಿ ಒಂದು ಕವಿತೆಯೇ ಇದೆ. ನನಗೆ ನೆನಪಿರುವಂತೆ ಇದನ್ನು ಬರೆದವರು ನಮ್ಮ ಕುವೆಂಪು. ತನ್ನ ಕೆಲಸವನ್ನು ತನ್ನ ಪಾಡಿಗೆ ತಾನು ಮಾಡಿ ಯಾವ ಹೊಗಳಿಕೆಯ ಆಕಾಂಕ್ಷೆ ಇಲ್ಲದೆ ಮೂಲೆ ಸೇರುವ ಪೊರಕೆಯನ್ನು ಅವರು "ಕಸಪೊರಕೆ ಎನ್ನ ಗುರು, ಮೇಣೆನ್ನ ಬಾಳಗುರಿ!" ಎಂದು ಮೂಲೆಯಿಂದ ಅಟ್ಟಕ್ಕೇರಿಸಿಬಿಟ್ಟಿದ್ದಾರೆ! ಕಸಪೊರಕೆ ಎಂಬ ಪದದ ಉತ್ಪತ್ತಿ ಕಸವನ್ನು ಪೊರಕ್ಕೆ (ಹೊರಗೆ) ಹಾಕಲು ಬಳಸುವ ವಸ್ತು ಎಂದು. ಕಸಪೊರಕೆ ಪದದಿಂದ ಕಾಲಕ್ರಮೇಣ ಕಸವನ್ನೇ ಹೊರಕ್ಕೆ ಹಾಕಿ ಬರೀ ಪೊರಕೆ ಉಳಿದುಕೊಂಡಿದೆ! ಕಸವನ್ನಲ್ಲದೇ ಬೇರೇನನ್ನು ಹೊರಗೆ ಹಾಕಲು ಸಾಧ್ಯ ಎಂದು ನಮ್ಮ ಕನ್ನಡ ಜನರ ಸರಳ ಯೋಚನೆ. ಇಂದು ಸಮಾಜದಲ್ಲಿ ಕಾಣುವ ವಿವಿಧ ರೀತಿಯ ಕಸಗಳನ್ನು ಅವರು ಕಂಡಿರಲಿಲ್ಲ ಎಂಬುದು ಕನ್ನಡ ಜನತೆಯ ಸಾಚಾತನಕ್ಕೆ ಕನ್ನಡಿಯಾಗಿದೆ! ಆಮ್ ಆದ್ಮಿ ಪಾರ್ಟಿಯ ಪೊರಕೆಗೆ ಭ್ರಷ್ಟತಾಪೊರಕೆ ಎಂಬ ಹೆಸರನ್ನು ನಾವು ಸೂಚಿಸಬಹುದಾದರೂ ಅದು ಬೇರೆಯೇ ಅರ್ಥವನ್ನು ಹೊಮ್ಮಿಸಬಹುದು!
ಮುರಗ!
ಒಮ್ಮೆ ನಾನು ಮುರುಗ ಎಂಬ ಪದದ ಬಗ್ಗೆ ಬರೆದಿದ್ದೆ. "ಗ" ಎಂಬುದು 'ಗಮನ' (ಚಲನೆ) ಎಂಬುದರ ಹೃಸ್ವ ರೂಪ. ಉದಾಹರಣೆಗೆ ಖಗ ಎಂದರೆ ಖ + ಗ = ಆಕಾಶದಲ್ಲಿ ಚಲಿಸುವುದು ಎಂಬ ಅರ್ಥ. ಹಿಂದೆ ಅದಕ್ಕೆ ಪಕ್ಷಿ ಎಂಬ ತಾತ್ಪರ್ಯ ಇತ್ತು. ಇಂದು ಏರೋಪ್ಲೇನ್, ಸ್ಯಾಟೆಲೈಟ್, ಡ್ರೋನ್ ಎಲ್ಲವೂ ಖಗಗಳೇ! ಹಾಗೇ ಮೃಗ ಎಂದರೆ ಮಣ್ಣಿನಲ್ಲಿ (ಮಣ್ಣಿನ ಮೇಲೆ) ಚಲಿಸುವ ಪ್ರಾಣಿ ಎಂಬ ಅರ್ಥವಿದೆ. ನಾವೂ ಮೃಗಗಳೇ! ಆದರೆ ಎಷ್ಟೋ ಸಲ ನಮ್ಮ ಕಾಲು ನೆಲದ ಮೇಲೆ ನಿಲ್ಲದೆ ಆಕಾಶಕ್ಕೆ ಹೋಗಿ ಅನಾಹುತಗಳಾಗುತ್ತವೆ! ಇದನ್ನು ನೋಡಿ ಬೇಂದ್ರೆ ತಮ್ಮ ಚಾಮತ್ಕಾರಿಕ ರೀತಿಯಲ್ಲಿ
ನೆಲದ ಮೇಲೆ ನಡೆಯಲಾರೆ ಅಂತ-ಎಂದು "ಅಂತರಿಕ್ಷ" ಎಂಬ ಪದವನ್ನು ಸೀಳಿ ಆಟೋ ರಿಕ್ಷಾದಲ್ಲಿ ಕೂಡುವ ಸಾಧಾರಣ ಸಂಗತಿಗೂ ಕಾವ್ಯದ ಮೆರುಗನ್ನು ಕೊಟ್ಟಿದ್ದಾರೆ!
ರಿಕ್ಷದಲ್ಲಿ ಹೊರಟೆ
ಉರಗ ಎಂಬ ಪದಕ್ಕೆ ಉರ+ಗ ಎಂಬ ಉತ್ಪತ್ತಿ ಇದೆ. ಉರ ಎಂದರೆ ಎದೆ. ಎದೆಯ ಮೇಲೆ ನಡೆಯುವ ಪ್ರಾಣಿ ಉರಗ - ಹಾವು ಮೊದಲಾದ ಸರೀಸೃಪಗಳು! ಇನ್ನು ಮುರಗ ಎಂಬ ಪದಕ್ಕೆ ಮುರ+ಗ ಎಂಬ ಉತ್ಪತ್ತಿ ಸಹಜವೇ ತಾನೆ? ಮುರ ಎಂಬುದು ಮಯೂರ ಎಂಬ ಪದದ ಶೇಷ; ಯಾರು ನವಿಲಿನ ಮೇಲೆ ಹೋಗುತ್ತಾನೋ ಅವನು ಮುರಗ.
ಕರಗ ಎಂಬ ಪದವನ್ನೂ ಹೀಗೆ ಬಿಡಿಸಬಹುದೇ? ಒಂದು ಕಾಲದಲ್ಲಿ ತಮ್ಮ ಕೈ ಗಳ ಮೇಲೆ ನಡೆದಾಡಿ ಸಾಹಸವನ್ನು ಮೆರೆಯುತ್ತಿದ್ದಿರಬಹುದಾದ ಜನರನ್ನು ಕುರಿತು ಈ ಪದ ಹುಟ್ಟಿಕೊಂಡಿತೆ? ಇದರ ಗುಟ್ಟನ್ನು "ಪದಗುಟ್ಟು" ಪುಟದ ಅಧ್ವರ್ಯುಗಳೇ ಹೇಳಬೇಕು! ಯಾವುದು ಚಲಿಸುವುದಿಲ್ಲವೋ ಅದು ಅಚಲ ಅಥವಾ ಬೆಟ್ಟ; ಅದಕ್ಕೆ ಅಗ ಎಂಬ ಪದವಿದೆ (ಅ+ಗ). ಇಂದು ಅಗಗಳನ್ನೂ ಅಗೆದು "ಇಟ್ ಇಸ್ ಆಲ್ ಮೈನ್!" ಎಂದು ಸಮ ಮಾಡಿಬಿಟ್ಟಿದ್ದಾರೆ; ಅದರ ವಿಷಯ ಈಗ ಬೇಡ. "ನಗನಾಣ್ಯ" ಎಂಬ ದ್ವಂದ್ವ ಪದದಲ್ಲಿ ನಡೆದಾಡುವ ನಾಣ್ಯದ ಜೊತೆ ನಡೆದಾಡದ ಸ್ಥಿರಾಸ್ತಿಗಳನ್ನೇ "ನಗ" ಎನ್ನುತ್ತಾರೆಯೆ?
"ನಾನು ಹೇಳಿದ್ದು ತಿಳಿಯಿತೆ?" ಎಂದು ನಾನು ನಿಮಗೆ ಕೇಳಿದರೆ "ಅರ್ಥವಾಯಿತೇ?" ಎಂದು ತಾನೇ ಅರ್ಥೈಸುತ್ತೀರಿ? "ತಿಳಿ" ಎಂದರೆ Clear ಎಂಬ ಅರ್ಥವಿದೆ. ಉದಾಹರಣೆಗೆ "ಆಡಿ ಬಾ ನನ ಕಂದ। ಅಂಗಾಲ ತೊಳೆದೇನು। ತೆಂಗಿನಕಾಯಿ ತಿಳಿನೀರು ತಕ್ಕೊಂಡು। ಬಂಗಾರ ಪಾದ ತೊಳೆದೇನು।।" ಎಂಬ ಜನಪದ ತ್ರಿಪದಿಯನ್ನು ನೀವು ಓದಿರಬಹುದು. "Is it clear to you?" ಎಂಬುದನ್ನು ಕನ್ನಡದಲ್ಲಿ "ನಿನಗೆ ತಿಳಿಯಿತೆ?" ಎಂದು ನಾವು ಎಷ್ಟು ಸುಲಭವಾಗಿ ಹೇಳುತ್ತೇವೆ!
ಮಡಕೆ, ಕುಡಿಕೆ!
ಕನ್ನಡದ ಜನ ಪದಗಳನ್ನು ಎಷ್ಟು ಸರಳವಾಗಿ ಸೃಷ್ಟಿಸಿದ್ದಾರೆ ಎಂಬುದಕ್ಕೆ ಇದು ಉದಾಹರಣೆ: ಯಾವುದನ್ನು ಕುಡಿಯಲಿಕ್ಕೆ ಬಳಸುತ್ತೇವೋ ಅದನ್ನು ಚಿಕ್ಕದು ಮಾಡಿ ಕುಡಿಕೆ ಎಂಬ ಪದವನ್ನು ರೂಪಿಸಿದ್ದಾರೆ. ಹಾಗೇ ಯಾವುದನ್ನು "ಮಡಗಲಿಕ್ಕೆ" ಉಪಯೋಗಿಸುತ್ತಾರೋ ಅದು ಮಡಕೆ. ಯಾವುದು ಬೇರೊಬ್ಬರು ಕೋಣೆಗೆ ಒಳಗೆ ಬರದಂತೆ ತಡಿಯುತ್ತದೋ ಅದು ತಡಿಕೆ (ಬಾಗಿಲು). ಯಾವುದನ್ನು "ಹಾಸಲಿಕ್ಕೆ" ಉಪಯೋಗಿಸುತ್ತಾರೋ ಅದು "ಹಾಸಿಗೆ." ಹೊದೆಸಲು ಬಳಸುವುದು ಹೊದಿಕೆ. ಯಾವುದನ್ನು ನೀರು ತುಂಬಲು ಉಪಯೋಗಿಸುತ್ತಾರೋ ಅದು ತುಂಬುಗೆ (ಈಗ ತಂಬಿಗೆ). ಅಡು ಎಂದರೆ ಬೇಯಿಸು ಎಂಬ ಅರ್ಥ; ಅದು ಮಾಡುವ ಕ್ರಿಯೆ ಅಡುಗೆ. ಅಡುಗೂಲಜ್ಜಿ ಎಂಬುದು ಕೂಳನನ್ನು ಅಡುವ ಅಜ್ಜಿಗೇ ಹೇಳುವುದು; ಇಂಥ ಅಜ್ಜಿಯರು ಹಿಂದಿನ ಕಾಲದಲ್ಲಿ ಯಾತ್ರಿಕರಿಗೆ ನೆರವಾಗುತ್ತಿದ್ದರಂತೆ. ಬೆಂದ ಅವರೆಕಾಳನ್ನು ಕೆಂಪೇಗೌಡನಿಗೆ ಕೊಟ್ಟ ಒಬ್ಬ ಅಡುಗೂಲಜ್ಜಿ ನಮ್ಮ ಬೆಂಗಳೂರಿಗೆ ಹೆಸರು ಬರಲು ಕಾರಣಳಾದಳು! ಮಚ್ ಅಡೂ ಅಬೌಟ್ ನಥಿಂಗ್ ಎಂಬುದನ್ನು ಷೇಕ್ಸ್ ಪಿಯರ್ ಹೇಳುವ ಮುನ್ನವೇ ನಮ್ಮವರು ಅಡೂ ಎಂಬ ಪದವನ್ನು ಹುಡುಕಿದ್ದರು. ಮನೆಯಲ್ಲಿ ಅಡುಗೆ ಕೆಟ್ಟು ಹೋದಾಗ "ಮಚ್ ಅಡೂ, ಬಟ್ ನಥಿಂಗ್!" ಎಂದು ನಾನು ಅಡೂ ಮಾಡಿದ ನನ್ನ ಹೆಂಡತಿಗೆ ಹೇಳಿದಾಗ ಅವಳು ಹೇಗೆ ಪ್ರತಿಕ್ರಯಿಸಿದಳು ಎಂಬುದನ್ನು ನಾನು ಹೇಳುವುದಿಲ್ಲ.
"ಪದಾರ್ಥ ಚಿಂತಾಮಣಿ" ಎಂಬ ಪುಸ್ತಕವೇ ಕನ್ನಡದಲ್ಲಿದೆ. ಪದಾರ್ಥ ಎಂಬ ಪದಕ್ಕೆ ಯಾವಾಗ ಮಟೀರಿಯಲ್ ಎಂಬ ಅರ್ಥ ಬಂತೋ ಅದರ ಗುಟ್ಟನ್ನೂ ನಾವು ಹುಡುಕಬೇಕಾಗಿದೆ! ಪದಗುಟ್ಟು ಹುಟ್ಟುಹಾಕಿರುವ ಭರತ್ ಕುಮಾರ್ ಅವರಿಗೆ ನನ್ನ ಶುಭಾಶಯಗಳು.
=======
ನೀವು ಓದಬೇಕಾದ ಕೆಲವು:
1. http://www.epapervijayavani.in/Details.aspx?id=17117&boxid=23441921
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ