ಕವಿ ಮತ್ತು ಕಲಾಶ್ನಿಕೋವ್
ಕನ್ನಡದ ಕವಿ ಜಿ. ಎಸ್. ಎಸ್. ಅವರು ದಿವಂಗತರಾದ ದಿವಸವೇ ಎ.ಕೆ.-೪೭ ರೈಫಲ್ ಅನ್ವೇಷಕ ಕಲಾಶ್ನಿಕೋವ್ ಕೂಡಾ ನಿಧನನಾದ.
ಕವಿ ಮತ್ತು ಕಲಾಶ್ನಿಕೋವ್
ಸಿ. ಪಿ. ರವಿಕುಮಾರ್
ಸರಿಸುಮಾರು ಒಂದೇ ಹೊತ್ತಿಗೆ ಗರಿಬಿಚ್ಚಿ
ಮೇಲಕ್ಕೆ ಹಾರಿದವು ಎರಡು ಪಕ್ಷಿ -
ಒಂದು
ಎದೆ ತುಂಬಿ ಹಾಡಿದ ಹಕ್ಕಿ
ಬೆಂಗಳೂರಿನಿಂದ ಹಾರಿಬಂತು
ಕವಿಯ ಪ್ರಾಣವನ್ನು ಬಾಯಲ್ಲಿ ಕಚ್ಚಿ
ಇನ್ನೊಂದು
ಎದೆಯನ್ನು ಜರಡಿಮಾಡುವ
ಏಕೆ-ನಲವತ್ತೇಳರ
ಪೇಟೆಂಟ್ ವಾರಸುದಾರನ ಪ್ರಾಣ
ಕೊಕ್ಕಿನಲ್ಲಿಟ್ಟುಕೊಂಡ ರಣಭಕ್ಷಿ
ಎರಡೂ ಕಾದು ಕೂತವು
ಸ್ವರ್ಗದ ಬಾಗಿಲು ತೆರೆಯುವುದನ್ನೇ ನೆಚ್ಚಿ
"ನೀನೇನು ಮಾಡಿದೆ ಅಲ್ಲಿ ಭೂಮಿಯ ಮೇಲೆ?"
ಮಾತು ಬಯಸಿತು ಕವಿಯ ಪ್ರಾಣಪಕ್ಷಿ
"ಕಲಾ ಕೋವಿ-ದ ನಾನು" ಎಂದು ಉತ್ತರಿಸಿತು
ಕಲಾ-ಶ್ನಿಕೋವಿನ ಹಕ್ಕಿ (ನಗೆಯುಕ್ಕಿ)
"ಯಾವ ಕಲೆ? ನಾನೂ ಕಲಾವಿದನೆ!
ಕವಿ, ವಿಮರ್ಶಕ, ಅಕ್ಷರಕುಕ್ಷಿ!"
"ಕೊಲ್ಲುವುದೂ ಒಂದು ಕಲೆಯೇ!
ಒಂದಲ್ಲ ಇಪ್ಪತ್ತು ಜನರನ್ನು
ಒಂದೇ ಸಮ ಧಡಧಡನೆ ಕುಕ್ಕಿಕುಕ್ಕಿ!"
ಆಘಾತವಾಯಿತು ಕವಿಚೇತನಕ್ಕೆ!
"ಏಕೆ ಮಾಡಿದೆ ಕೊಲ್ಲುವ ಯಂತ್ರಗಳ ಸೃಷ್ಟಿ?"
"ಆತ್ಮರಕ್ಷಣೆಗೆ!"
ಸಿದ್ಧವಾಗಿತ್ತು ಉತ್ತರ!
ಧ್ವನಿಯೂ ಗಟ್ಟಿ!
"ಶಾಲಾ ಬಾಲಕನೊಬ್ಬ
ಕೊಂದು ಹಾಕಿದನಲ್ಲ
ನಿರಪರಾಧಿಗಳನ್ನು ಕೊಚ್ಚಿ ಕೊಚ್ಚಿ!
ನಿಶ್ಶಸ್ತ್ರ ಜನರನ್ನು ಕೊಂದು ಹಾಕುವುದೀಗ
ಮಾನವತೆಯ ಶತ್ರುಗಳ ನಿತ್ಯವೃತ್ತಿ!"
"ಯಾರೋ ಬಳಸಿದರೆ ನನ್ನ ಕೋವಿಯನ್ನು ಆಕ್ರಮಣಕ್ಕೆ
ಅದು ನನ್ನ ತಪ್ಪೆನ್ನುವುದು ದೋಷದೃಷ್ಟಿ!"
ಸಿದ್ಧವಾಗಿತ್ತು ಪ್ರತ್ಯುತ್ತರ
ಆದರೂ ಧ್ವನಿಯಲ್ಲಿ ಉಡುಗಿತ್ತು ಶಕ್ತಿ:
"ನೀನು ಕವಿ! ಉತ್ತರಿಸಬಲ್ಲೆಯಾ?
ಮಾತಿಗೇಕಿಲ್ಲ ಮೊದಲಿನ ಮಾಂತ್ರಿಕ ಶಕ್ತಿ?
ಮಾತಿನಿಂದೇಕೆ ಉಂಟಾಗದು ಶಾಂತಿ?"
ಮೌನ ಆವರಿಸಿತು ಅಲ್ಲಿ
ಮನದಲ್ಲಿ ಪ್ರಶ್ನೆಗಳು
ನೀರಗುಳ್ಳೆಗಳಂತೆ ನೂರಾರು ಉಕ್ಕಿ
ಎಷ್ಟು ಉತ್ತರಿಸಿದರೂ
ಮತ್ತೆ ಮೇಲೇಳುವುವು
ಎಷ್ಟು ಉತ್ತರಿಸಿದರೂ ಒಂದಷ್ಟು ಮಿಕ್ಕಿ
Super lines sir
ಪ್ರತ್ಯುತ್ತರಅಳಿಸಿಮಂಜು,
ಅಳಿಸಿನಿಮಗೆ ಇಷ್ಟವಾಗಿದ್ದು ಸಂತೋಷ. ತಿಳಿಸಿದ್ದಕ್ಕೆ ಧನ್ಯವಾದಗಳು.