ಮೊಗ್ಗಾಗಿ, ಬೀಸುವ ತಂಗಾಳಿಯಾಗಿ

ಸಿ ಪಿ ರವಿಕುಮಾರ್



ಅಭಿನೇತ್ರಿ ಸುಚಿತ್ರಾ ಸೇನ್ ಇಲ್ಲವಾದರೆಂಬ ಸುದ್ದಿ ಬಂದಿದೆ.  "ಆಂಧಿ" ಹಿಂದಿ ಚಿತ್ರದಲ್ಲಿ ಮಾಡಿದ ಪಾತ್ರದಿಂದ ಅಪೂರ್ವ ಯಶಸ್ಸು ಗಳಿಸಿದ ಕಲಾವಿದೆ ಸುಚಿತ್ರಾ ಸೇನ್. ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ದಿನಗಳಲ್ಲಿ  ಈ ಚಿತ್ರ ಹೊರಬಂತು. ಇದರ ನಿರ್ದೇಶಕ ಗುಲ್ಜಾರ್. ಒಬ್ಬ ರಾಜಕಾರಣಿಯ ಕತೆಯನ್ನು ಚಿತ್ರ ಹೇಳುತ್ತದೆ;  ರಾಜಕಾರಣಕ್ಕೆ ಬಂದ ನಂತರ  ಗಂಡನೊಂದಿಗೆ ಕ್ರಮೇಣ ಸಂಬಂಧ ಕಳೆದುಕೊಳ್ಳುವ ನಾಯಕಿ ಸಮಾಜದಲ್ಲಿ ದೊಡ್ಡ ಹೆಸರು ಗಳಿಸಿದ್ದರೂ ತನ್ನ ಖಾಸಗಿ ಜೀವನದಲ್ಲಿ ಸೋಲು ಅನುಭವಿಸಿದವಳು. ಒಂದು ಸಲ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಏಕಾಏಕಿ ತನ್ನ ಪತಿಯನ್ನು ಸಂಧಿಸುತ್ತಾಳೆ. ಆತ ಒಂದು ಹೋಟೆಲ್ ಮಾಲೀಕ (ಅಭಿನಯ - ಸಂಜೀವ್ ಕುಮಾರ್). ಇಬ್ಬರಿಗೂ ಪರಸ್ಪರ ಗೌರವ ಮತ್ತು ಪ್ರೀತಿ ನಶಿಸಿಲ್ಲ. ಸುಪ್ತವಾಗಿದ್ದ ಭಾವನೆಗಳು ಮತ್ತೆ ಮೇಲೆದ್ದು ರಾಜಕಾರಣಿ ಸಾಂಸಾರಿಕ ಜೀವನಕ್ಕೆ ಮರಳುವ ನಿರ್ಧಾರಕ್ಕೆ ಬರುತ್ತಾಳೆ. ಚುನಾವಣೆಯಲ್ಲಿ ತನಗೆ ಮತದಾನ ಮಾಡಬೇಡಿ ಎಂದು ಜನರನ್ನು ಕೇಳಿಕೊಳ್ಳುತ್ತಾಳೆ   ಆದರೆ ಜನ ಅವಳನ್ನು ಗೆಲ್ಲಿಸುತ್ತಾರೆ!

ತುರ್ತುಸ್ಥಿತಿಯ ಸಮಯದಲ್ಲಿ ಈ ಚಿತ್ರ ವಿವಾದಕ್ಕೆ ಸಿಕ್ಕಿತು. ರಾಜಕಾರಣಿಯೂ ಶ್ರೀಮತಿ ಇಂದಿರಾ ಗಾಂಧಿಯನ್ನೇ ಹೋಲುತ್ತಾಳೆ ಎಂಬ ಕಾರಣಕ್ಕಾಗಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಯಿತು. ಇದರಿಂದ ಚಿತ್ರಕ್ಕೆ ಲಾಭವೇ ಆಯಿತು. ಸ್ವಲ್ಪ ಸಮಯದ ನಂತರ ಚಿತ್ರವನ್ನು ಮತ್ತೆ ಪ್ರದರ್ಶಿಸಲು ಅನುಮತಿ ದೊರೆತಾಗ ವಿವಾದಗಳಿಂದ ಹುಟ್ಟಿದ ಕುತೂಹಲ ಚಿತ್ರಕ್ಕೆ ಅಧ್ಬುತ ಯಶಸ್ಸು ತಂದುಕೊಟ್ಟಿತು. ಸುಚಿತ್ರಾ ಸೇನ್ ಮತ್ತು ಸಂಜೀವ್ ಕುಮಾರ್ ಅವರ ಅಭಿನಯ ಎಲ್ಲರನ್ನೂ ಸೆಳೆಯಿತು. ಇದಕ್ಕಿಂತ ಹೆಚ್ಚಾಗಿ ಚಿತ್ರದ ಗೀತೆಗಳು ತುಂಬಾ ಜನಪ್ರಿಯವಾದವು. ಗುಲ್ಜಾರ್ ಬರೆದ ಹಾಡುಗಳು ಮತ್ತು ಆರ್ ಡಿ ಬರ್ಮನ್ ಸಂಗೀತ; ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಗಾಯನ.

ಈ ಗೀತೆಯಲ್ಲಿ ಬಳಸಿಕೊಳ್ಳಲಾದ ಗುಲ್ಜಾರ್ ಅವರ "ಹಾದಿಗಳು"  ಕವಿತೆಯ ಅನುವಾದವನ್ನು ನನ್ನ ಬ್ಲಾಗ್ ನಲ್ಲಿ ಓದಬಹುದು. ಇಂದೊಂದು ಸರಳವಾದ ಕವಿತೆ; ಕವಿ ಅನೇಕ ರಸ್ತೆಗಳು ಕೂಡುವ ಸ್ಥಾನದಲ್ಲಿ ನಿಂತಿದ್ದಾನೆ ಎಂದು ಊಹಿಸಿಕೊಳ್ಳಬಹುದು. ಅವನಿಗೆ ಕಾಣುವ ರಸ್ತೆಗಳಲ್ಲಿ ಒಂದೊಂದೂ ವಿಭಿನ್ನ ಗುರಿಗಳನ್ನು ತಲುಪುತ್ತದೆ - ಒಂದು ಕಲ್ಲಿನ ಕೋಟೆಗೆ, ಒಂದು ಕಡ್ಡಿಗಳಿಂದ ಮಾಡಿದ ಪುಟ್ಟ ಗೂಡಿನ ಕಡೆ ಸಾಗುತ್ತದೆ. ಚಿತ್ರದಲ್ಲಿ ಬರುವ ರಾಜಕಾರಣಿಯ ಜೀವನದಲ್ಲಿ ಇದೇ ಬಗೆಯ ಪರಿಸ್ಥಿತಿ ಇದೆ. ಸಕ್ರಿಯ ರಾಜಕೀಯದ ಕಡೆ ಒಂದು ದಾರಿ; ಕೌಟುಂಬಿಕ ಜೀವನದ ಕಡೆ ಇನ್ನೊಂದು ಹಾದಿ. ಕೆಲವು ಹಾದಿಗಳು ಬಿರುಗಾಳಿಯ ವೇಗದಲ್ಲಿ ಸಾಗುವ ಹಾದಿಗಳು; ಕೆಲವು ಮೆಲ್ಲನೆ ಸಾಗುವ ಹಾದಿಗಳು.  "ಲೈಫ್ ಆನ್ ದ ಫಾಸ್ಟ್ ಲೇನ್" ಎಂಬ ಮಾತಿದೆ. ಇಂಥ ವೇಗದ ಬದುಕಿಗೆ ಒಗ್ಗಿದ ಮೇಲೆ ಯಾವ ಏರುಪೇರುಗಳಿಲ್ಲದ ಸಾಧಾರಣ ಬದುಕು ಸಪ್ಪೆ ಎನ್ನಿಸಬಹುದು. ಆದರೆ ಕೆಲವು ಹಂತಗಳಲ್ಲಿ ಇಂಥ ಸಾವಧಾನ ಗತಿಯ ಬದುಕೇ ಮೇಲು ಎನ್ನಿಸುವ ಸ್ಥಿತಿಯೂ ಬರುತ್ತದೆ.  ಚಿತ್ರದ ನಾಯಕಿ ಕೇಳುತ್ತಾಳೆ:

ಯೋಚಿಸುತ್ತಾ ಕುಳಿತಿದ್ದೇನೆ
ಈ ದಾರಿಗಳಲ್ಲಿ ಒಂದಾದರೂ
ಇರಬಹುದಲ್ಲವೆ ನಿನ್ನನ್ನು ತಲುಪುವ ರಸ್ತೆ?


ಕವಿತೆಯನ್ನು ಇನ್ನೊಂದು ಅರ್ಥದಲ್ಲಿ ನೋಡಬಹುದು. ಗುರಿಯನ್ನು ಸೇರಲು ಯಾವ ದಾರಿ ಎಂಬ ಜಿಜ್ಞಾಸೆ ನಮ್ಮನ್ನು ಕಾಡಬಹುದು. ಇಲ್ಲಿ "ಗುರಿ" ಎಂಬುದು ಯಶಸ್ಸಾಗಿರಬಹುದು, ಭಗವಂತನೇ ಆಗಿರಬಹುದು. ಯಶಸ್ಸು ಪಡೆಯಲು ಕೆಲವರು ಶಾರ್ಟ್ ಕಟ್ ಹಿಡಿದು ಬಿರುಗಾಳಿಯ ವೇಗದಲ್ಲಿ ಸಾಗಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಸ್ಲೋ ಅಂಡ್ ಸ್ಟೆಡೀ ಮಾರ್ಗವನ್ನು ಅನುಸರಿಸುತ್ತಾರೆ. ಇವುಗಳಲ್ಲಿ ಯಾವುದು ತನ್ನನ್ನು ಗುರಿಯತ್ತ ಕರೆದೊಯ್ಯಬಲ್ಲುದು ಎಂಬ ಪ್ರಶ್ನೆ ನಮ್ಮನ್ನು ಬಾಧಿಸುತ್ತದೆ.

ಗುಲ್ಜಾರ್ ಅವರು ಸುಚಿತ್ರಾ ಸೇನ್ ಜೊತೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆಂಧಿ ಚಿತ್ರಕ್ಕೆ ಮುಂಚೆ ಇನ್ನೊಂದು ಯಾವುದೋ ಚಿತ್ರಕ್ಕೆ ನಾಯಕಿಯ ಪಾತ್ರಕ್ಕೆ ಸುಚಿತ್ರಾ ಸೇನ್ ಅವರನ್ನು ಆಹ್ವಾನಿಸಲು ಗುಲ್ಜಾರ್ ಹೋಗಿದ್ದರು. ಆದರೆ ಕತೆ ಕೇಳಿದ ನಂತರ ಸುಚಿತ್ರಾ ಸೇನ್ ಕೆಲವು ಮಾರ್ಪಾಟುಗಳನ್ನು ಮಾಡಬೇಕೆಂದು ಕರಾರು ಹಾಕಿದರು. ಇದಕ್ಕೆ ಗುಲ್ಜಾರ್ ಒಪ್ಪಲಿಲ್ಲ. "ನೀವು ಎರಡು ಗಂಟೆ ಕೂತು ಕತೆ ಕೇಳಿದ್ದೀರಿ, ನಾನು ಆರು ತಿಂಗಳಿನಿಂದ ಈ ಕತೆ ಬರೆದಿದ್ದೇನೆ" ಎಂದು ಎದ್ದುಬಿಟ್ಟರು. ಆಂಧಿ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆದಿದ್ದಾಗ ನಟ ಸಂಜೀವ್ ಕುಮಾರ್ ಅವರು ಸುಚಿತ್ರಾ ಸೇನ್ ಅವರನ್ನು ಕರೆತರುವಂತೆ ಕೋರಿದರಂತೆ. ಗುಲ್ಜಾರ್ ಅವರು ಮತ್ತೊಮ್ಮೆ ಸುಚಿತ್ರಾ ಸೇನ್ ಅವರ ಬಳಿ ಬಂದರು. "ನೋಡಿ, ಈ ಸಲ ನಾನು ಯಾವ ಬದಲಾವಣೆಯನ್ನೂ ಸೂಚಿಸುವುದಿಲ್ಲ! ಪ್ರಾಮಿಸ್! ಪ್ರಾಮಿಸ್! ಪ್ರಾಮಿಸ್!" ಎಂದು ಮೂರು ಸಲ ಆಣೆ  ಹಾಕಿದರಂತೆ.

ಸುಚಿತ್ರಾ ಸೇನ್ ಅವರನ್ನು ಕುರಿತು ಬಂಗಾಳಿ ಚಿತ್ರರಂಗದಲ್ಲಿ ಇಂದಿಗೂ ಅಪಾರವಾದ ಗೌರವವಿದೆ. ಅವರು ತಮ್ಮ ಚಿತ್ರವೃತ್ತಿಯನ್ನು ತೊರೆದು ಎಷ್ಟೋ ವರ್ಷಗಳ ನಂತರವೂ ಸ್ಟೂಡಿಯೋ ಕೆಲಸಗಾರರು ಅವರ ಮೇಕ್ ಅಪ್ ರೂಮನ್ನು "ಸುಚಿತ್ರಾ ಸೇನ್ ಅವರ ಮೇಕ್ ಅಪ್ ರೂಂ" ಎಂದೇ ಕರೆಯುತ್ತಿದ್ದರು ಎಂದು ಗುಲ್ಜಾರ್ ಬರೆದಿದ್ದಾರೆ. ನಿವೃತ್ತಿಯ ನಂತರ ಸುಚಿತ್ರಾ ಸೇನ್ ಎಲ್ಲರಿಂದ ದೂರವಾಗಿ ವಿರಾಗಿಣಿಯಂತೆ ಬದುಕಿದರು. ತಾವು ಶಾರದಾಮಾತೆಯ ಪಾತ್ರ ವಹಿಸಬೇಕೆಂದು ಅವರ ಆಸೆಯಾಗಿತ್ತು; ಇದು ಫಲಿಸಲಿಲ್ಲ.

ಸುಚಿತ್ರಾ ಸೇನ್ ಅವರನ್ನು ನೆನೆದಾಗ ಅವರ ಅಭಿನಯದ ಇನ್ನೊಂದು ಜನಪ್ರಿಯ ಗೀತೆ "ರಹೇ ನ ರಹೇ ಹಮ್" ನೆನಪಾಗುತ್ತದೆ. ನಾನು ಈ ಚಿತ್ರವನ್ನು ನೋಡಿಲ್ಲ; ಆದರೆ ಈ ಗೀತೆಯನ್ನು ಕೇಳಿ ಮೆಚ್ಚಿದ್ದೇನೆ. ಈ ಗೀತೆಯ ಸಂದರ್ಭವೇನೋ ಗೊತ್ತಿಲ್ಲ. ಮಜರೂಹ್ ಸುಲ್ತಾನ್ ಪುರಿ ಅವರ ಗೀತೆ ಗಂಭೀರವಾಗಿದೆ:

ನಾನು ಬದುಕಿದರೇನು ಅಳಿದರೇನು?
ಪ್ರೀತಿ ಎಂಬ ಉಪವನದಲ್ಲಿ
ಹೀಗೇ ಸುಗಂಧ ಬೀರುತ್ತಿರುವೆ,
ಮೊಗ್ಗಾಗಿ, ಬೀಸುವ ತಂಗಾಳಿಯಾಗಿ 
ಮುಂದೊಂದು ದಿನ ಈ ದಾರಿಯಲ್ಲಿ ಬಂದಾಗ
ನನ್ನ ಗೋರಿಯ ಮೇಲೆ ನಿಂತಾಗ ನೀನು
ಕಣ್ಣೀರಿನಲ್ಲಿ ತೊಯ್ದ ಬೆಳದಿಂಗಳಲ್ಲಿ
ಕರೆಯೊಂದು ನಿನ್ನ ಕಿವಿಗೆ ಕೇಳಿಸುವುದು -
ನಿನ್ನ ಜೊತೆ ಸೇರುವೆನು ಆಗ ನಾನು
ಮೊಗ್ಗಾಗಿ, ಬೀಸುವ ತಂಗಾಳಿಯಾಗಿ 
ಸುಚಿತ್ರಾ ಸೇನ್ ಇಂದು ಇಲ್ಲದಿದ್ದರೂ ಅವರ ನೆನಪು ಸುಗಂಧವನ್ನು ಬೀರುತ್ತಿದೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)