ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧ 

ಮೂಲ: ಮಹಾತ್ಮಾ ಗಾಂಧಿ
ಕನ್ನಡ ಅನುವಾದ:  ಡಾ. ಸಿ. ಪಿ. ರವಿಕುಮಾರ್



ಇಂದು ಗಾಂಧೀಜಿಯವರ ಪುಣ್ಯತಿಥಿ. ಯಾಂತ್ರೀಕೃತ ಮಗ್ಗಗಳು ಕೈಮಗ್ಗಗಳನ್ನು ನಿರ್ನಾಮಗೊಳಿಸಿ ನಿರುದ್ಯೋಗವನ್ನು ಸೃಷ್ಟಿಸುತ್ತವೆ ಎಂದು ಪ್ರತಿಭಟಿಸಿ ರಂಗ ನಾಟಕ ಕರ್ಮಿ ಮತ್ತು ಗಾಂಧೀವಾದಿ ಪ್ರಸನ್ನ ಇಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಗುಡಿ ಕೈಗಾರಿಕೆಗಳನ್ನು ಕುರಿತು ವ್ಯಕ್ತ ಪಡಿಸಿರುವ ಅಭಿಪ್ರಾಯಗಳನ್ನು ನೋಡುವುದು ಸೂಕ್ತ. 
ಗ್ರಾಮೀಣ ಕೈಗಾರಿಕೆಗಳ ಅಳಿವಿನಿಂದ ಭಾರತದ ಏಳು ಲಕ್ಷ ಗ್ರಾಮಗಳ ನಾಶವಾಗುತ್ತದೆ.

ನಾನು ಕೊಟ್ಟ ಸಲಹೆಗಳನ್ನು ಕುರಿತು ಪತ್ರಿಕೆಗಳಲ್ಲಿ ಬಂದ ಟೀಕೆಗಳನ್ನು ಗಮನಿಸಿದ್ದೇನೆ. ನಿಸರ್ಗದ ಯಾವ ಶಕ್ತಿಗಳ ಮೇಲೆ ಮನುಷ್ಯ ವಿಜಯ ಸಾಧಿಸಿದ್ದಾನೋ ಆ ಶಕ್ತಿಗಳ ಬಳಕೆಗೆ ನಾನು ಶರಣಾಗಬೇಕೆಂದು ಕೆಲವರು ನನಗೆ ಸಲಹೆ ಕೊಟ್ಟಿದ್ದಾರೆ.  ನೀರು, ಗಾಳಿ, ತೈಲ ಮತ್ತು ವಿದ್ಯುತ್ - ಇವುಗಳನ್ನು ಪಾಶ್ಚಾತ್ಯರು ಬಳಸಿಕೊಂಡಷ್ಟೇ ಸಂಪೂರ್ಣವಾಗಿ ನಾವೂ ಉಪಯೋಗಿಸಬೇಕು ಎಂದು ನನ್ನ ಟೀಕಾಕಾರ ಅಭಿಪ್ರಾಯ. ನಿಸರ್ಗದ ನಿಗೂಢ ಶಕ್ತಿಗಳ ಮೇಲೆ ಸಾಧಿಸಿದ ಹತೋಟಿಯ ಕಾರಣ ಪ್ರತಿಯೊಬ್ಬ ಅಮೇರಿಕನ್ ಪ್ರಜೆಗೂ ಮೂವತ್ತಮೂರು ಜನ ದಾಸರು ದೊರೆತಿದ್ದಾರಂತೆ.

ಇದೇ ಮಾದರಿಯನ್ನು ಭಾರತದಲ್ಲಿ ಅಳವಡಿಸಿದರೆ ಪ್ರತಿಯೊಬ್ಬನಿಗೂ ಮೂವತ್ತಮೂರು ದಾಸರು ಸಿಕ್ಕುವುದು ಹಾಗಿರಲಿ, ಭಾರತೀಯರನ್ನು ಮೂವತ್ತುಮೂರು ಪಟ್ಟು ದಾಸ್ಯಕ್ಕೆ ಅದು ತಳ್ಳುತ್ತದೆ ಎಂದು ನನ್ನ ಅಭಿಪ್ರಾಯ.

ಯಾವಾಗ ಕೆಲಸ ಮಾಡುವ ಕೈಗಳು ಕೆಲವೇ ಇರುತ್ತವೋ ಆಗ ಯಂತ್ರಗಳ ಬಳಕೆ ಒಳ್ಳೆಯದು. ಭಾರತದಲ್ಲಿ ಕೆಲಸ ಮಾಡಲು ಸಿದ್ಧವಾದ ಕೈಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಯಾಂತ್ರೀಕರಣ ಒಂದು ಅನಿಷ್ಟ. ಕೆಲವೇ ಚದುರಡಿ ನೆಲವನ್ನು ಹದಗೊಳಿಸಲು ನಾನು ನೇಗಿಲನ್ನು ಬಳಸುವುದಿಲ್ಲ.  ನಮ್ಮ ಹಳ್ಳಿಗಳಲ್ಲಿ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ವಾಸವಾಗಿರುವ ಭಾರತೀಯರಿಗೆ ಹೇಗೆ ಒಂದಷ್ಟು ಬಿಡುವು ಕೊಡಬಹುದು ಎಂಬುದು ನಮ್ಮ ಸಮಸ್ಯೆಯಲ್ಲ. ನಮ್ಮ ಸಮಸ್ಯೆ ಅವರ ಬಿಡುವಿನ ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು; ಲೆಕ್ಕ ಹಾಕಿದರೆ ಪ್ರತಿಯೊಬ್ಬ ಹಳ್ಳಿಗನೂ ವರ್ಷಕ್ಕೆ ಅರ್ಧದಷ್ಟು ದಿವಸ ನಿರುದ್ಯೋಗಿಯಾಗಿ ಕಳೆಯುತ್ತಾನೆ. ನಿಮಗೆ ಇದು ವಿಚಿತ್ರ ಎನ್ನಿಸಬಹುದು - ಆದರೆ  ಹಳ್ಳಿಗಳಲ್ಲಿ ಸ್ಥಾಪಿತವಾದ ಗಿರಣಿಗಳು ಅವರಿಗೆ ತೊಂದರೆಯನ್ನೇ ಕೊಡುತ್ತಿವೆ.  ಒಂದು ಅಂದಾಜಿನ ಮೂಲಕ ಹೇಳುವುದಾದರೆ ಹತ್ತು ಜನ ಗ್ರಾಮೀಣರು ಮಾಡುವ ಕೆಲಸವನ್ನು ಗಿರಣಿ ಮಾಡಿಹಾಕುತ್ತದೆ.  ಗಿರಣಿಯ ಮಾಲೀಕ ಹತ್ತು ಜನರ ಹೊಟ್ಟೆಯ ಮೇಲೆ ಹೊಡೆದು ತಾನು ಹೆಚ್ಚಿಗೆ ಗಳಿಸುತ್ತಾನೆ.  ನೂಲುವ ಮತ್ತು ನೇಯುವ ಗಿರಣಿಗಳು ಗ್ರಾಮೀಣರ ಕೈಗಳಿಂದ ಕೆಲಸಗಳನ್ನು ಕಿತ್ತುಕೊಂಡಿವೆ.

ಈ ಮಿಲ್ ಗಳು ಅವರು ತಯಾರಿಸುವ ಬಟ್ಟೆಗಿಂತಲೂ ನಯವಾದ ಬಟ್ಟೆಯನ್ನು ಕಡಿಮೆ ಖರ್ಚಿನಲ್ಲಿ ತಯಾರಿಸುತ್ತವೆ ಎಂಬುದು ಇದಕ್ಕೆ ಉತ್ತರವಲ್ಲ.  ಸಾವಿರಾರು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ಮಿಲ್ ಬಟ್ಟೆಯನ್ನು ಅಗ್ಗ ಎಂದು ಹೇಗೆ ಹೇಳುತ್ತೀರಿ? ಅದು ಗ್ರಾಮೀಣರು ನೇಯಬಹುದಾದ ಅತ್ಯಂತ ಬೆಲೆಬಾಳುವ ಖಾದಿಗಿಂತಲೂ ತುಟ್ಟಿ.   ಗಣಿಯಿಂದ ಕಲ್ಲಿದ್ದಲನ್ನು ತೆಗೆಯುವ ಗಣಿಗಾರನಿಗೆ ಕಲ್ಲಿದ್ದಲು ತುಟ್ಟಿ ಎನ್ನಿಸುವುದಿಲ್ಲ. ಹಾಗೇ ತನ್ನ ಖಾದಿ ಬಟ್ಟೆಯನ್ನು ತಾನೇ ನೇಯ್ದುಕೊಳ್ಳುವ ಹಳ್ಳಿಗನಿಗೆ ಖಾದಿ ತುಟ್ಟಿ ಎನ್ನಿಸುವುದಿಲ್ಲ.  ಅತ್ತ ಮಿಲ್ ಬಟ್ಟೆಗಳು ಹಳ್ಳಿಗರ ಕೈಗಳಿಂದ ಕೆಲಸ ಕಿತ್ತುಕೊಂಡರೆ, ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳು ಸಹಸ್ರಾರು ಸಂಖ್ಯೆಯಲ್ಲಿ ಬಡ ಹೆಂಗಸರ ಕೈಗಳಿಂದ ಕೆಲಸ ಕಸಿದುಕೊಳ್ಳುತ್ತವೆ. ಅಷ್ಟೇ ಅಲ್ಲ, ಜೊತೆಗೆ ಹಳ್ಳಿಗರ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಯಾರು ಮಾಂಸಾಹಾರದ ವೆಚ್ಚವನ್ನು ಭರಿಸಬಲ್ಲರೋ ಮತ್ತು ಮಾಂಸಾಹಾರವನ್ನು ಒಪ್ಪಿಕೊಂಡು ಅದನ್ನು ತಿನ್ನುತ್ತಾರೋ ಅವರು ಬೆಳ್ಳಗಿನ ಹಿಟ್ಟು ಮತ್ತು ಪಾಲಿಶ್ ಮಾಡಿದ ಅಕ್ಕಿ ತಿಂದರೆ ಏನೂ ತೊಂದರೆ ಇರಲಾರದೇನೋ. ಆದರೆ ಮಾಂಸಾಹಾರವನ್ನು ಒಪ್ಪಿಕೊಂಡವರಿಗೂ ಅದು ಸಿಕ್ಕುವುದು ದುರ್ಲಭವಾಗಿರುವ ನಮ್ಮ ಹಳ್ಳಿಗರಿಂದ ಗೋಧಿಯ ಹೊಟ್ಟು ಮತ್ತು ಕೆಂಪಕ್ಕಿಗಳಲ್ಲಿ ಇರುವ ಪೌಷ್ಟಿಕಾಂಶಗಳನ್ನು ಕಸಿದುಕೊಳ್ಳುವುದು ಪಾಪಕರ.  ವೈದ್ಯರು ಇನ್ನಾದರೂ ಪಾಲಿಶ್ ಮಾಡಿದ ಅಕ್ಕಿ ಮತ್ತು ಹೊಟ್ಟು ತೆಗೆದ ಗೋಧಿಹಿಟ್ಟುಗಳ ಹಾನಿಗಳನ್ನು ಕುರಿತು ಜನರಿಗೆ ಎಚ್ಚರಿಸಬೇಕು.

ಕೆಲವು ಕಣ್ಣುಕುಕ್ಕುವ ವಿಷಯಗಳ ಬಗ್ಗೆ ಗಮನ ಸೆಳೆಯುವ ಮೂಲಕ ನಾನು ಹೇಳಬೇಕಾಗಿರುವುದು ಇಷ್ಟೇ. ಹಳ್ಳಿಗರಿಗೆ ಕೆಲಸ ಕೊಡಬೇಕಾಗಿರುವುದು ಯಂತ್ರಗಳ ಮೂಲಕವಲ್ಲ, ಅವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಗುಡಿ ಕೈಗಾರಿಕೆಗಳ ಮೂಲಕ.

- ಹರಿಜನ್, ೧೬-೧೧-೧೯೩೪


ಗ್ರಾಮೀಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಬೇಕಾದ ಸಂದರ್ಭಗಳಲ್ಲಿ ನಾವು ಯೋಚಿಸಬೇಕಾದ ಕ್ರಮ ಹೀಗೆ. ನಮಗೆ ಬೇಕಾಗಿರುವ ಯಾವುದಾದರೂ ವಸ್ತುವಿನ  ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಆಗದೇ ಇದ್ದ ಪಕ್ಷದಲ್ಲಿ ಆ ವಸ್ತುವನ್ನು ಸ್ವಲ್ಪ ಮಾತ್ರ ಕಷ್ಟ ಪಟ್ಟು, ಸ್ವಲ್ಪ ವ್ಯವಸ್ಥಿತವಾಗಿ ದುಡಿಯುವ ಮೂಲಕ ಗ್ರಾಮೀಣರು ಆ ವಸ್ತುವನ್ನು ನಮಗೆ ಸರಬರಾಜು ಮಾಡಬಲ್ಲರೇ? ಲಾಭವನ್ನು ಲೆಕ್ಕ ಮಾಡುವಾಗ ನಾವು ಹಳ್ಳಿಗರ  ವಿಷಯ ಯೋಚಿಸಬೇಕೇ ಹೊರತು ನಮ್ಮ ಬಗ್ಗೆ ಯೋಚಿಸಬಾರದು. ಮೊದಮೊದಲು ನಾವು ಹೆಚ್ಚು ಬೆಲೆ ಕೊಟ್ಟು ಸ್ವಲ್ಪ ಕಳಪೆ ಮಟ್ಟದ ವಸ್ತುಗಳನ್ನು ಪಡೆಯಲೂ ಸಿದ್ಧರಾಗಿರಬೇಕು. ಸರಬರಾಜು ಮಾಡುವವನಲ್ಲಿ ನಾವು ಆಸಕ್ತಿ ತೋರಿಸಿ, ಅವನಿಗೆ ಸೂಕ್ತವಾದ ಸಹಾಯ ಮಾಡಿ, ಅವನಿಂದ ಹೆಚ್ಚಿನ ಗುಣಮಟ್ಟದ ನಿರೀಕ್ಷೆಯನ್ನು ನಾವು ಇಟ್ಟುಕೊಂಡಲ್ಲಿ ಕ್ರಮೇಣ ಸ್ಥಿತಿ ಸುಧಾರಿಸುತ್ತದೆ.

- ಹರಿಜನ್, ೨೩-೧೧-೧೯೩೪

ಹಳ್ಳಿಗಳು ನಾಶವಾದರೆ ಭಾರತವೂ ನಾಶವಾಗುತ್ತದೆ. ಆಗ ಭಾರತವು ಭಾರತವಾಗಿರುವುದಿಲ್ಲ.  ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಗುರಿಯನ್ನು ಕಳೆದುಕೊಳ್ಳುತ್ತದೆ. ಯಾವಾಗ ಹಳ್ಳಿಗಳ ಶೋಷಣೆ ನಿಲ್ಲುತ್ತದೋ ಆಗ ಮಾತ್ರ ಅದರ ಉದ್ಧಾರ ಸಾಧ್ಯ.  ದೊಡ್ಡ ಪ್ರಮಾಣದ ಕೈಗಾರಿಕೀಕರಣದ ಸ್ಥಾಪನೆಯಾದಾಗ ಪೈಪೋಟಿ ಮತ್ತು ಜಾಹೀರಾತುಗಳ ವಿಷಯ ಮೇಲೆದ್ದು  ಗ್ರಾಮೀಣರ ಪ್ರತ್ಯಕ್ಷ ಅಥವಾ ಪರೋಕ್ಷ ಶೋಷಣೆ ನಡೆಯುತ್ತದೆ.  ಆದ್ದರಿಂದ ನಾವು ಒಂದು ಹಳ್ಳಿಯು ಹೇಗೆ ಸ್ವಯಂ-ಸಂಪೂರ್ಣವಾಗಬಲ್ಲದು, ಉಪಯೋಗಕ್ಕಾಗಿ (ಮಾತ್ರ) ಪದಾರ್ಥವನ್ನು ತಯಾರಿಸಬಲ್ಲದು  ಎಂಬುದರ ಕಡೆ ಗಮನ ಹರಿಸಬೇಕು.  ಹಳ್ಳಿಗಳ ಈ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದರೆ ಆಗ ಆ ಹಳ್ಳಿಗರು ತಾವೇ ತಯಾರಿಸಿಕೊಳ್ಳಬಹುದಾದ ಆಧುನಿಕ ಉಪಕರಣಗಳನ್ನು ಬಳಸಿದರೆ ಅದರಿಂದ ಏನೂ ತೊಂದರೆಯಿಲ್ಲ. ಆಗಲೂ ನಾವು ನೆನಪಿಡಬೇಕಾದದ್ದು ಈ ಯಂತ್ರಗಳಿಂದ ಇತರರ ಶೋಷಣೆ ಆಗಬಾರದು ಎಂಬುದನ್ನು.

- ಹರಿಜನ್, ೨೯-೮-೧೯೩೬

ನಾವು ಆಯ್ಕೆ ಮಾಡಿಕೊಳ್ಳಬೇಕಾಗಿರುವುದು ಹಳ್ಳಿಗಳ ಮತ್ತು ನಗರಗಳ ಭಾರತಗಳಲ್ಲಿ ಒಂದನ್ನು. ಹಳ್ಳಿಗಳ ಭಾರತವು ಭಾರತದಷ್ಟೇ ಪ್ರಾಚೀನ. ನಗರಗಳ ಭಾರತವು ಪರರಾಷ್ಟ್ರಗಳ ಮೇಲುಗೈಯಿಂದ ಜನಿತವಾದದು. ಇಂದು ನಗರಗಳ ಪ್ರಭಾವ ಹೆಚ್ಚುತ್ತಿದೆ; ನಗರಗಳು ಹಳ್ಳಿಗಳ ರಸ ಹೀರುತ್ತಾ ಅವುಗಳನ್ನು ನಿಸ್ಸತ್ತ್ವಗೊಳಿಸುತ್ತಿವೆ. ಈ ಪ್ರಭಾವವು ಕೊನೆಗೊಂಡಾಗ  ನಗರಗಳು ಹಳ್ಳಿಗಳ ಸೇವೆಗೆ ನಿಲ್ಲಬೇಕು ಎಂದು ನನ್ನ ಖಾದೀ ಮನೋಭಾವವು ಹೇಳುತ್ತಿದೆ.  ಹಳ್ಳಿಗಳ ಶೋಷಣೆಯೂ ವ್ಯವಸ್ಥಿತವಾದ ಹಿಂಸೆಯೇ. ಅಹಿಂಸೆಯ ಆಧಾರದ ಮೇಲೆ ನಾವು ಸ್ವರಾಜ್ಯವನ್ನು ಕಟ್ಟಬೇಕಾಗಿದ್ದರೆ ನಾವು ಹಳ್ಳಿಗಳಿಗೆ ತಕ್ಕ ಸ್ಥಾನವನ್ನು ಕೊಡಲೇಬೇಕು.

- ಹರಿಜನ್, ೨೦-೧-೧೯೪೦

[Gandhi's views about village industry. Translated by C.P. Ravikumar]


ಕಾಮೆಂಟ್‌ಗಳು

  1. ಬಾಗಲೋಡಿ ದೇವರಾಯ ಅವರು ಬರೆದ "ಮಗ್ಗದ ಸಾಹೇಬ" ಕತೆಯ ಕನ್ನಡ ಅನುವಾದವನ್ನು ಓದಿ ನಿಮ್ಮ ಮಿತ್ರರೊಂದಿಗೂ ಹಂಚಿಕೊಳ್ಳಿ:
    http://cp-ravikumar-english.blogspot.in/2014/01/kannada-story-by-bagalodi-devaraya.html

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)