ಮಾಸ್ತಿ, ಪ್ರೇಮ್ ಚಂದ್ ಮತ್ತು ಕಾಸ್ಮಿಕ್ ಎನರ್ಜಿ

ಸಿ ಪಿ ರವಿಕುಮಾರ್



ಗುಲ್ಜಾರ್ ಅವರ ನಿರ್ದೇಶನದಲ್ಲಿ ಪ್ರೇಮ್ ಚಂದ್ ಅವರ ಕತೆಗಳು ಹೊಳಪು ಮಾಡಿದ ವಜ್ರಗಳ ಹಾಗೆ ಕಂಗೊಳಿಸುತ್ತಿವೆ. ಮಾಸ್ತಿ ಅವರ ಕತೆಗಳನ್ನೂ ಇಂದಿನ ಪೀಳಿಗೆಗೆ ಇದೇ ರೀತಿ ಅತ್ಯುತ್ತಮ ರೀತಿಯಲ್ಲಿ ಸಮರ್ಥ ನಿರ್ದೇಶಕರ ಕೈಯಲ್ಲಿ ಸಿದ್ಧಗೊಳಿಸಿ ಸುಲಭವಾಗಿ ಸಿಕ್ಕುವ ಹಾಗೆ ಮಾಡುವುದು ಇಂದಿನ ಅಗತ್ಯ.

ಕೆಲವು ದಿನಗಳ ಹಿಂದೆ ನನಗೆ ಒಂದು ಈ-ಮೇಲ್ ಸಂದೇಶ ಬಂತು. ಕನ್ನಡ ಲೇಖಕ ಶ್ರೀ ಕೆ ಸತ್ಯನಾರಾಯಣ ಅವರ ಪತ್ರ. ಇದಕ್ಕೆ ಒಂದು ಹಿನ್ನೆಲೆ ಹೀಗೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂದಿಗೂ ಪ್ರಸ್ತುತರೇ ಎಂಬ ಬಗ್ಗೆ  ಅವರು ನೀಡಿದ ಭಾಷಣದ ಬಗ್ಗೆ ನಾನು ಹಿಂದೆ ಬರೆದಿದ್ದೆ. ಅದನ್ನು ನೀವು ಇಲ್ಲಿ ಓದಬಹುದು. ನನ್ನ ಗುರುಗಳಾದ ಶ್ರೀ ಎಚ್ ಎಸ್ ಮಾಧವರಾವ್ ಈ ಬ್ಲಾಗನ್ನು ಓದಿ ಕೆ ಎಸ್ ಅವರಿಗೆ ಆ ವಿಷಯ ಹೇಳಿದರಂತೆ. ತಮ್ಮ ಪತ್ರದಲ್ಲಿ ನನ್ನ ತಂದೆಯವರು ಹಿಂದೂ ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಾಲಂ "Between You and Me" ತಾವು ಓದುತ್ತಿದ್ದರೆಂದು  ನೆನೆಸಿಕೊಂಡಿದ್ದರು. ನಾನು ಮಾಸ್ತಿ ಅವರನ್ನು ಕುರಿತು ಬರೆದದ್ದು ಅವರಿಗೆ ತುಂಬಾ ಸಂತೋಷವಾಗಿತ್ತು. ತಾವು ಬರೆದ "ಮಾಸ್ತಿಗನ್ನಡಿ" ಎಂಬ ಕತೆಯನ್ನು ನನಗೆ ಓದಲು ಕಳಿಸಿದರು.

ಕೆ ಎಸ್ ಅವರ ಭಾಷಣ ಕೇಳಿದ ನಂತರ ನಾನು ನನ್ನಲ್ಲಿದ್ದ ಮಾಸ್ತಿ ಅವರ ಸಣ್ಣಕತೆಗಳ ಸಂಗ್ರಹವನ್ನು ಮತ್ತೆ ಹೊರತೆಗೆದೆ.
ಪ್ರಿಸಂ ಪ್ರಕಾಶಕರು ಪ್ರಕಟಿಸಿದ ಪುಸ್ತಕದಲ್ಲಿ ಕನ್ನಡದ ಇನ್ನೊಬ್ಬ ಖ್ಯಾತ ಕತೆಗಾರ ಯಶವಂತ ಚಿತ್ತಾಲ ಅವರು ಆರಿಸಿದ ಕತೆಗಳಿವೆ.   ಹಿಂದೆ ನಾನು ಈ ಕತೆಗಳನ್ನು ಓದಿದಾಗ "ಟಾಲ್ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು" ಕತೆ ನನ್ನಗೆ ಮೆಚ್ಚುಗೆಯಾಗಿತ್ತು. ಈ ಸಲ "ಬೈಚೇಗೌಡ" ಕತೆ ನನ್ನನ್ನು ಹಿಡಿದು ನಿಲ್ಲಿಸಿತು.  ಈ ಕತೆಯಲ್ಲಿ ಬೈಚೇಗೌಡನ ಪಾತ್ರ ಯಾರನ್ನಾದರೂ ಸ್ತಂಭೀಭೂತ ಮಾಡಬಲ್ಲ ಪಾತ್ರ.  ಲೆಕ್ಕ ಪತ್ರದಲ್ಲಿ ಮೋಸ ಮಾಡುತ್ತಿದ್ದ ಯುವಕ ಶಾನುಭೋಗನಿಗೆ ಪಾಠ ಕಲಿಸಲು ಬೈಚೇಗೌಡ ಒಂದು ತಂತ್ರ ಹುಡುಕುತ್ತಾನೆ; ಈ ಬಲೆಗೆ ಶಾನುಭೋಗ ಸೀತಪ್ಪ ಬೀಳುವ ಸಂದರ್ಭ ಬಂದಾಗ ಬೈಚೇಗೌಡ ಅವನಿಗೆ ಬುದ್ಧಿ ಹೇಳಿ ತಿದ್ದುವ ಪ್ರಯತ್ನ ಮಾಡುತ್ತಾನೆ.  ಶಾನುಭೋಗ ಜೈಲಿಗೆ ಹೋಗುವುದು ಇವನಿಗೆ ಬೇಡ; ಅವನನ್ನು ತಿದ್ದುವುದು ಮುಖ್ಯ.  ಈ ಘಟನೆಯ ನಂತರ ಬೈಚೇಗೌಡ ತಾನೇ ಊರು ಬಿಟ್ಟು ಪಟ್ಟಣ ಸೇರುತ್ತಾನೆ.  ಕತೆ ಇಲ್ಲಿಗೇ ಮುಗಿಯುವುದಿಲ್ಲ.  ಸೀತಪ್ಪ ಮತ್ತು ಬೈಚೇಗೌಡ ಮತ್ತೆ ಸಂಧಿಸುವ ಸನ್ನಿವೇಶ ಬರುತ್ತದೆ. ಗೌಡ ಈಗ ಜೈಲಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಸೀತಪ್ಪ ಯಾವುದೋ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರುತ್ತಾನೆ.  ಗೌಡ ಇದನ್ನು ಕಂಡು ಮರುಗುತ್ತಾನೆ. ಮತ್ತೆ ಸೀತಪ್ಪನಿಗೆ ಬುದ್ಧಿವಾದ ಹೇಳುತ್ತಾನೆ.  ಮುಂದೆ ಒಂದು ನಾಟಕೀಯ ಸನ್ನಿವೇಶ ಎದುರಾಗುತ್ತದೆ - ಸೀತಪ್ಪನ ಹೆಂಡತಿ ಹೆರಿಗೆಯ ನಂತರ ಜ್ವರ ಬಂದು ಕ್ಷೀಣಳಾಗಿದ್ದಾಳೆ.  ಅವಳು ಬದುಕಿ ಉಳಿಯುವುದು ಕಷ್ಟ. ಜೈಲಿನಲ್ಲಿರುವ ಸೀತಪ್ಪನಿಗೆ ಹೆಂಡತಿಯನ್ನು ನೋಡುವ ಉತ್ಕಟ ಅಪೇಕ್ಷೆ.  ಗೌಡನನ್ನು ಒಂದು ದಿವಸದ ಮಟ್ಟಿಗೆ ತನ್ನನ್ನು ಜೈಲಿನಿಂದ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿಕೊಳ್ಳುತ್ತಾನೆ!  ಗೌಡನಿಗೆ ಉಭಯಸಂಕಟ. ಅವನು ಯಾವ ನಿರ್ಣಯ ತೆಗೆದುಕೊಂಡ ಮತ್ತು ಅದರ ಪರಿಣಾಮ ಏನಾಯಿತು ಎಂಬುದನ್ನು ನಾನು ವಿವರಿಸಲು ಹೋಗುವುದಿಲ್ಲ.  ಗೌಡನ ಪಾತ್ರದ ಘನತೆ ಮತ್ತು ಅದನ್ನು ಮಾಸ್ತಿಯವರು ಚಿತ್ರಿಸುವ ರೀತಿ ನನಗೆ ಬಹಳ ಇಷ್ಟವಾಯಿತು.

ಕೆ ಎಸ್ ಅವರ ಮಾಸ್ತಿಗನ್ನಡಿ ಕತೆಯನ್ನು ಮೊದಲು ನನಗೆ ಓದಲು ಸಾಧ್ಯವೇ ಆಗಲಿಲ್ಲ. ನುಡಿ ತಂತ್ರಾಂಶದ ಫಾಂಟ್ ನನ್ನ ಬಳಿ ಇರಲಿಲ್ಲ. ಡೌನ್ ಲೋಡ್ ಮಾಡಲು ಹೋದರೆ ಕರ್ನಾಟಕ ಸರಕಾರದ ವೆಬ್ ತಾಣ ಮುಖ ತಿರುಗಿಸಿತು. ಮರು ನುಡಿಯಿಲ್ಲದೆ ನಾನು ಕೆ ಎಸ್ ಅವರಿಗೆ ನನ್ನ ಕಷ್ಟ ಹೇಳಿಕೊಂಡೆ. ಅವರು ತಾಳ್ಮೆಯಿಂದ ತಮ್ಮ ಕಥೆಯ ಸ್ಕ್ಯಾನ್ ಕಾಪಿ ಕಳಿಸಿದರು.  ಅಷ್ಟರಲ್ಲಿ ನನಗೆ ಒಮ್ಮೆಲೇ ನಾನು ಯಾಕೆ ಗೂಗಲ್ ಮೊರೆ ಹೋಗಬಾರದು ಎಂಬ ಆಲೋಚನೆ ಹೊಳೆಯಿತು.  ಬೇಶಕ್ ನನಗೆ ಗೂಗಲ್ ಹುಡುಕಿಕೊಟ್ಟಿತು - ಮಾಸ್ತಿಗನ್ನಡಿ ಕತೆಯನ್ನು ಯಾರೋ ಆನ್ಲೈನ್ ಶೇಖರಿಸಿದ್ದಾರೆ! ನೀವೂ ಓದಿ!

ಮಾಯಣ್ಣನ ಕನ್ನಡಿ ಎಂಬುದು ಮಾಸ್ತಿಯವರ ಕೊನೆಯ ಕತೆ.  "ಮಾಸ್ತಿಗನ್ನಡಿ" ಕತೆಯಲ್ಲಿ ಕೆ ಎಸ್ ಅವರು ನಮಗೆ ಒಂದು ಬಗೆಯ ಕನ್ನಡಿಯಲ್ಲಿ ಮಾಸ್ತಿಯವರ ದರ್ಶನ ಮಾಡಿಸುತ್ತಾರೆ.   ಮಾಸ್ತಿ ಅವರು ಮರಳಿ ಭೂಲೋಕಕ್ಕೆ ಬಂದಿಳಿಯುವ  ನಾಟಕೀಯ ಸನ್ನಿವೇಶ ಸೃಷ್ಟಿಸುತ್ತಾರೆ.  ಇಂದಿನ ಬದಲಾದ ಸನ್ನಿವೇಶವನ್ನು ನೋಡಿ ಮಾಸ್ತಿ ಕಂಗಾಲಾಗುತ್ತಾರೆ.  ಕತೆಯು ಮಾಸ್ತಿಯವರ ಸಾಹಿತ್ಯಕ್ಕೆ ಮಾತ್ರವಲ್ಲ ಇಂದಿನ ಬದುಕಿಗೂ ಕನ್ನಡಿ ಹಿಡಿಯುತ್ತದೆ.  ಕೆ ಎಸ್ ಅವರು ಮಾಸ್ತಿಯವರ ಶೈಲಿಯನ್ನೂ ಹಿಡಿದು ಕತೆಯನ್ನು ಬರೆದಿರುವುದು ಒಂದು ವೈಶಿಷ್ಟ್ಯ.  ಈ ಕತೆ ಓದಿದಾಗ ನನಗೆ ರಸಿನ್ ಬಾಂಡ್ ಬರೆದ ಒಂದು ಸಣ್ಣ ಕತೆ ನೆನಪಿಗೆ ಬಂತು.  ಇಲ್ಲಿ ರಸ್ಕಿನ್ ಬಾಂಡ್ ಗೆ ಲೇಖಕ ರಡ್ಯಾರ್ಡ್ ಕಿಪ್ಲಿಂಗ್ ನ ಭೂತದ ಭೇಟಿಯಾಗುತ್ತದೆ.  ಕಿಪ್ಲಿಂಗ್ ಜನರು ತನ್ನನ್ನು ಮರೆತಿರುವುದನ್ನು ಕಂಡು ದುಃಖಿಸುತ್ತಾನೆ.  ತನಗೆ "ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಕಾಲತುಗಾರ" ಎಂಬ ಪಟ್ಟ ಕೊಟ್ಟು ತನ್ನ ಸಾಹಿತ್ಯವನ್ನು ಕಡೆಗಣಿಸಿದ್ದರ ಬಗ್ಗೆ ಅವನಿಗೆ ವಿಷಾದವಿದೆ. ತಾನು ಕಂಡ ಉತ್ತರಭಾರತದ ನೆನಪುಗಳನ್ನು ಮೆಲುಕು ಹಾಕುತ್ತಾನೆ - ಇವೆಲ್ಲಾ ಇನ್ನೂ ಹಾಗೇ ಇವೆಯೇ ಎಂದು ಕುತೂಹಲದಿಂದ ಕೇಳುತ್ತಾನೆ.

ಕೆ ಎಸ್ ಅವರಿಗೆ ರಸ್ಕಿನ್ ಬಾಂಡ್ ಕತೆಯ ನನ್ನ ಅನುವಾದವನ್ನು ಕಳಿಸಿಕೊಟ್ಟೆ. ಅವರ ಮಾಸ್ತಿನಿಷ್ಠೆ ಎಷ್ಟೆಂದರೆ "ರವಿಕುಮಾರ್, ಮಾಸ್ತಿ ಅವರ ಸಾಹಿತ್ಯದಲ್ಲಿರುವ ಆಳ, ವಿಸ್ತಾರ ಬೇರೆ ಕಡೆ ಸಿಕ್ಕುವುದು ಕಷ್ಟ ಸಾಧ್ಯ!" ಎಂದು ಬರೆದರು!

ಕೆ ಎಸ್ ತಮ್ಮ ಭಾಷಣದಲ್ಲಿ "ಮಾಸ್ತಿ ಅವರ ಕತೆಯಲ್ಲಿ ಕಾಸ್ಮಿಕ್ ಎನರ್ಜಿ ಗೋಚರಿಸುತ್ತದೆ, ಅದು ಪ್ರೇಮ್ ಚಂದ್ ಅವರ ಕಥೆಗಳಲ್ಲಿ ಕಾಣದು" ಎಂದು ಹೇಳಿದ್ದು ನನ್ನನ್ನು ಕೊರೆಯಿತು.  ನಾನು ಪ್ರೇಮ್ ಚಂದ್ ಅವರ ಕತೆಗಳನ್ನು ಮೆಚ್ಚಿ ಕೊಂಡವನು.  ಪ್ರೇಮ್ ಚಂದ್ ಅವರ ಸಣ್ಣ ಕತೆಗಳನ್ನು ಲೇಖಕ ದಿವಂಗತ ಶಾ ಬಾಲೂರಾವ್ ಬಹಳ ಅದ್ಭುತವಾಗಿ ಕನ್ನಡಿಸಿದ್ದಾರೆ (ಇದು ನ್ಯಾಷನಲ್ ಬುಕ್ ಟ್ರಸ್ಟ್ ಮೂಲಕ ಪ್ರಕಟವಾಗಿದೆ). ಮೊದಲು ಕನ್ನಡದಲ್ಲಿ ಓದಿ ಆನಂತರ  ಹಿಂದಿಯಲ್ಲಿ ನಾನು ಕಫನ್, ಈದ್ ಗಾಹ್, ನಮಕ್ ಕಾ ದರೋಗಾ, ಬೂಢಿ ಕಾಕಿ ಮೊದಲಾದ ಕತೆಗಳನ್ನು ಓದಿದೆ.  ಬಾಲೂರಾವ್ ಅವರ ಸಂಗ್ರಹದಲ್ಲಿ ಇಲ್ಲದ ಕೆಲವು ಕತೆಗಳನ್ನೂ ಓದಿದೆ - ಉದಾಹರಣೆಗೆ ಪೂಸ್ ಕೀ ರಾತ್ (ಪುಷ್ಯದ ಒಂದು ರಾತ್ರಿ).  ಗೂಗಲ್ ಮೇಲೆ ಹುಡುಕಾಡಿದಾಗ ಗುಲ್ಜಾರ್ ಅವರು ನಿರ್ದೇಶಿಸಿದ ಪ್ರೇಮ್ ಚಂದ್ ಅವರ ಕತೆಗಳನ್ನು ಆಧರಿಸಿದ ಚಿತ್ರಗಳು ಯೂ ಟ್ಯೂಬ್ ಮೇಲೆ ಸಿಕ್ಕವು. ಅವುಗಳಲ್ಲಿ "ಗೋದಾನ್" ಕಾದಂಬರಿಯನ್ನು ಆಧರಿಸಿದ ಚಿತ್ರ ಒಟ್ಟು ಹನ್ನೆರಡು ಕಂತುಗಳ ಸುಮಾರು ನಾಲ್ಕು ಗಂಟೆಗಳ ಅವಧಿಯ ಚಿತ್ರ. ಇದನ್ನು ನೋಡಿದಾಗ ಮುಖ್ಯ ಪಾತ್ರಗಳಾದ ಹೋರಿ ಮತ್ತು ಧನಿಯಾ ಹಾಗೂ ಅವರ ಸಂಸಾರದ ಮೇಲೆ ನಡೆಯುವ ಸಮಾಜದ ಶೋಷಣೆ ಇವುಗಳನ್ನು ಕಂಡು ಕಣ್ಣು ಒದ್ದೆಯಾಗದೇ ಇರದು.  ಕಾಸ್ಮಿಕ್ ಎನರ್ಜಿ ಎಂದರೆ ಏನೆಂದು ನನಗಿನ್ನೂ ಸ್ಪಷ್ಟವಾಗಿಲ್ಲ.  ಕೆ ಎಸ್ ಅವರು ನನಗೆ ಬರೆದು "ಮೂಲ ಚೈತನ್ಯ" ಎಂಬ ಬಗ್ಗೆ ತಾವು ಮೊದಲು ಸ್ವಾಮಿ ಸೋಮನಾಥಾನಂದ ಅವರ ಬರಹದಲ್ಲಿ ಓಡಿದ್ದನ್ನು ನೆನೆದು ಅದನ್ನೇ ತಾವು ಕಾಸ್ಮಿಕ್ ಎನರ್ಜಿ ಎಂದು ಕರೆದಿದ್ದಾಗಿ ವಿವರಿಸಿದ್ದಾರೆ.  ಪ್ರೇಮ್ ಚಂದ್ ಅವರ ಕತೆಗಳ ಮತ್ತು ಮಾಸ್ತಿ ಅವರ ಕತೆಗಳ ತುಲನಾತ್ಮಕ ಅಧ್ಯಯನ ಕೂಡಾ ಒಳ್ಳೆಯ ಸಂಶೋಧನಾ ವಿಷಯವಾಗಬಹುದೇನೋ!

ಗುಲ್ಜಾರ್ ಅವರು ಸ್ವತಃ ಅತ್ಯುತ್ತಮ ಲೇಖಕ. ಅವರ ನಿರ್ದೇಶನದಲ್ಲಿ ಪ್ರೇಮ್ ಚಂದ್ ಅವರ ಕತೆಗಳು ಹೊಳಪು ಮಾಡಿದ ವಜ್ರಗಳ ಹಾಗೆ ಕಂಗೊಳಿಸುತ್ತಿವೆ.  ಮಾಸ್ತಿ ಅವರ ಕತೆಗಳನ್ನೂ ಇಂದಿನ ಪೀಳಿಗೆಗೆ ಇದೇ ರೀತಿ ಅತ್ಯುತ್ತಮ ರೀತಿಯಲ್ಲಿ ಸಮರ್ಥ ನಿರ್ದೇಶಕರ ಕೈಯಲ್ಲಿ ಸಿದ್ಧಗೊಳಿಸಿ ಸುಲಭವಾಗಿ ಸಿಕ್ಕುವ ಹಾಗೆ ಮಾಡುವುದು ಇಂದಿನ ಅಗತ್ಯ.  ಆಗ "ಕನ್ನಡದ ಆಸ್ತಿ ಮಾಸ್ತಿ" ಎಂಬ ಘೋಷಣೆಗೆ ಸ್ವಲ್ಪವಾದರೂ ಬೆಲೆ ಬರಬಹುದು. ಬೈಚೇಗೌಡ ಕತೆಯ ನಾಟಕೀಯತೆ ಚಿತ್ರಮಾಧ್ಯಮಕ್ಕೆ ಎಷ್ಟು ಸೂಕ್ತವಾಗಿದೆ ಎಂಬುದನ್ನು ನೆನೆಸಿಕೊಳ್ಳುತ್ತಾ ಈ ಬರಹವನ್ನು ಮುಗಿಸುತ್ತೇನೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)