ತಮಸ್ - ಸ್ವಾತಂತ್ರ್ಯ ದಿವಸದ ಸಂದರ್ಭದಲ್ಲಿ ಒಂದು ನೋಟ



ಯಾರು ಹಿಂದೆ ನಡೆದದ್ದನ್ನು ನೆನಪಿಡಲಾರರೋ ಅವರಿಗೆ ಅದರ  ಪುನರಾವೃತ್ತಿಯೇ ಶಾಪ - ಜಾರ್ಜ್ ಸಾಂತಾಯನ . 
ಸಿ ಪಿ ರವಿಕುಮಾರ್

ಗೋವಿಂದ್ ನಿಹಲಾನಿ ಅವರು ನಿರ್ದೇಶಿಸಿದ "ತಮಸ್" ಚಿತ್ರವನ್ನು ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ನೋಡಿ; ಇದು ಇಂಟರ್ ನೆಟ್ ಮೇಲೆ ಲಭ್ಯವಾಗಿದೆ.  ಪ್ರಸಿದ್ಧ ಹಿಂದಿ ಲೇಖಕ ಭೀಷ್ಮ ಸಾಹನಿ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರದ ಕತೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಪೂರ್ವದ ಕೆಲವು ದಿನಗಳಲ್ಲಿ ನಡೆದ ಘಟನೆಗಳ ಸುತ್ತ ಹೆಣೆಯಲಾಗಿದೆ.

ಈಗಾಗಲೇ ದೇಶವನ್ನು ವಿಭಜನೆ ಮಾಡುವ ಮಾತು ಪ್ರಾರಂಭವಾಗಿದೆ.  ಲಾಹೋರ್ ನಗರದಲ್ಲಿ ದಂಗೆಯ ಸೂಚನೆಗಳು ದಟ್ಟವಾಗಿವೆ.  ಮೂರು ವಿವಿಧ ಧರ್ಮದ ಜನ ಲಾಹೋರ್ ನಲ್ಲಿ ನೆಲೆಸಿದ್ದಾರೆ - ಹಿಂದೂ, ಮುಸ್ಲಿಂ, ಮತ್ತು ಸಿಖ್. ಇವರ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ಸಾಮಾನ್ಯ ಜನ ಅದನ್ನು ಮರೆತು ತಮ್ಮ ಪಾಡಿಗೆ ತಾವಿದ್ದಾರೆ; ಸಾಮರಸ್ಯದಿಂದ ಬಾಳುತ್ತಿದ್ದಾರೆ.  ಒಬ್ಬ ಮುಸ್ಲಿಂ ಕವಿ ಸಂಸ್ಕೃತದ ಶಾಕುಂತಲಾ ಕಾವ್ಯವನ್ನು ಉರ್ದುವಿಗೆ ತರ್ಜುಮೆ ಮಾಡುತ್ತಾನೆ. ಮುಸ್ಲಿಂ ಶಿಕ್ಷಕನೊಬ್ಬ ಸಿಖ್ ಪರಿವಾರದವರ ಮನೆಯಲ್ಲಿ ಬಾಡಿಗೆಗೆ ಇದ್ದಾನೆ. ಮುಸ್ಲಿಂ ಜನರೇ ಹೆಚ್ಚಾಗಿ ವಾಸಿಸುವ ಬಡಾವಣೆಯಲ್ಲಿ ಹಿಂದೂ ಧರ್ಮೀಯ ಸೇಠ್ ಜೀ ಯಾವ ಭಯವಿಲ್ಲದೆ ವಾಸವಾಗಿದ್ದಾನೆ.  ತೊಂಬತ್ತೊಂಬತ್ತು ಭಾಗ ಸಾಮರಸ್ಯ ಮತ್ತು  ಎಲ್ಲೋ ಒಂದು ಭಾಗ ಭಿನ್ನಾಭಿಪ್ರಾಯ. ಆದರೆ ಸಮಾಜವನ್ನು ಒಡೆಯುವ ಶಕ್ತಿಗಳು ವಿವಿಧ ಧರ್ಮೀಯ ಜನರ ನಡುವೆ ಇರುವ  ಒಂದು ಭಾಗ ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಲು ಪ್ರಯತ್ನಿಸುತ್ತವೆ.

ಚರ್ಮದ ಕೆಲಸ ಮಾಡುವ ಒಬ್ಬನಿಗೆ ಯಾರೋ ಒಬ್ಬರು ಬಂದು ದೊಡ್ಡ ಮೊತ್ತದ ಆಸೆ ತೋರಿಸಿ ಒಂದು ಹಂದಿಯನ್ನು ಕೊಲ್ಲಬೇಕೆಂದು ತಾಕೀತು ಮಾಡುತ್ತಾರೆ. ಅಂದಿನ ಬ್ರಿಟಿಷ್ ಸರಕಾರವೇ ಈ ಕೆಲಸಕ್ಕೆ ಪ್ರೇರೇಪಿಸಿತು ಎಂಬ ಸೂಚನೆ ಚಿತ್ರದಲ್ಲಿದೆ. ಹಂದಿಯ  ದೇಹ "ವೈದ್ಯಕೀಯ ಸಂಶೋಧನೆಗೆ ಬೇಕು" ಎಂದು ಸುಳ್ಳು ಹೇಳುತ್ತಾರೆ. ಆದರೆ ಹಂದಿಯ ಹೆಣವನ್ನು ಒಂದು ಮಸೀದಿಯ ಮುಂದೆ ಎಸೆದು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಈ ಸಮಾಜಘಾತಕ ಶಕ್ತಿಗಳ ನಿಜವಾದ ಉದ್ದೇಶವಾಗಿರುತ್ತದೆ.  ಭಯ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿಯಾಗಲು ಎಷ್ಟು ಹೊತ್ತು ಬೇಕು? ಒಂದಾಗಿದ್ದ ಜನ ಇದ್ದಕ್ಕಿದ್ದಂತೆ ಬೇರೆಯಾಗುತ್ತಾರೆ - ಹಾಲಿನಲ್ಲಿ ಹುಳಿ ಹಿಂಡಿದಂತೆ.

ಬ್ರಿಟಿಷ್ ಸರಕಾರ ತಾನು ಭಾರತವನ್ನು ಬಿಟ್ಟು ಹೋಗುವ ಮುನ್ನ ಇಲ್ಲೊಂದು ದೊಡ್ಡ ಗಾಯ ಮಾಡಿಹೋಗಬೇಕೆಂದು ಈ ಕೆಲಸ ಮಾಡಿತೆ? ಲಾಹೋರಿನ ಡೆಪ್ಯುಟಿ ಕಮೀಷನರ್ (ಬ್ರಿಟಿಷ್ ಮನುಷ್ಯ) ದಂಗೆಯ ಘಟನೆಗಳನ್ನು "ಇವಕ್ಕೂ ನನಗೂ ಸಂಬಂಧ ಇಲ್ಲ" ಎಂಬಂತೆ ನಿರ್ವಿಕಾರವಾಗಿ ನೋಡುವುದನ್ನು ನಾವು ಕಾಣುತ್ತೇವೆ. ಅವನ ಹೆಂಡತಿಯನ್ನು  ಮಾತ್ರ ಈ ಘಟನೆಗಳು  ಅಲುಗಾಡಿಸುತ್ತವೆ. ಆಕೆ ಚಡಪಡಿಸುತ್ತಾಳೆ. ತನ್ನ ಗಂಡನ ಮನೋಭಾವವನ್ನು  ಅರ್ಥೈಸಿಕೊಳ್ಳಲು ಹೆಣಗುತ್ತಾಳೆ.  ಇಂಥ ಸ್ಪೋಟಕ ಸನ್ನಿವೇಶದಲ್ಲೂ ಮನೆಯಲ್ಲೇ ಕುಳಿತು ಬೋರ್ ಆಗಿ ಕಾಲ ಕಳೆಯಲು ಕಷ್ಟವಾಗುವುದು ಅವಳಿಗೆ ಸ್ವಯಂ ನಾಚಿಕೆಗೇಡಿನ ವಿಷಯವಾಗಿದೆ.

ದಂಗೆಗೆ ಪ್ರೋತ್ಸಾಹ ಸಿಕ್ಕಿದ್ದು ಎಲ್ಲಿಂದ? ಯಾವ ಧರ್ಮದ ಜನರಿಂದ? ಸಮಾಜಘಾತಕರಿಗೆ ಧರ್ಮ ಎನ್ನುವುದಿಲ್ಲ. ತಾವು ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಎಂದೆಲ್ಲಾ ಹೇಳಿಕೊಂಡು ಧರ್ಮಕ್ಕೆ ವಿರುದ್ಧವಾದ ಕೆಲಸ ಮಾಡುವುದನ್ನು ನೋಡುತ್ತೇವೆ. ದಂಗೆಯ ದಿನಗಳ ಕ್ರೌರ್ಯವನ್ನು ಲೇಖಕ-ನಿರ್ದೇಶಕರು ನಮಗೆ ಮನದಟ್ಟು ಮಾಡಿಕೊಡುತ್ತಾರೆ.  ಹೇಗೆ ನೋಡುನೋಡುತ್ತಿದ್ದಂತೆ ವಿನಾಶ ಉಂಟಾಯಿತು, ಅದನ್ನು ತಡೆಯಲು ನಡೆದ ಎಷ್ಟೊಂದು ಪ್ರಯತ್ನಗಳು ಹೇಗೆ ವಿಫಲವಾದವು ಎಂಬುದನ್ನು ನೋಡುತ್ತೇವೆ. ವಿನಾಶಕಾಲದಲ್ಲಿ ತಮ್ಮ ಮಿತ್ರರನ್ನೂ ಶತ್ರುಗಳಂತೆ ಕಾಣುವ ಪಾತ್ರಗಳನ್ನು ನೋಡುತ್ತೇವೆ. ತಮ್ಮ ಧರ್ಮಕ್ಕೆ ಬದ್ಧರಾಗಿ ನಿಂತರೂ ಮಾನವ ಧರ್ಮವನ್ನು ಬಿಡದೆ ಉದಾತ್ತತೆಯನ್ನು ಮೆರೆಯುವ ಪಾತ್ರಗಳನ್ನು ಕೂಡಾ ನೋಡುತ್ತೇವೆ.

ಒಂದು ಹಳ್ಳಿಯಲ್ಲಿ ಇದ್ದ ಏಕಮಾತ್ರ ಸಿಖ್ ಪರಿವಾರದ ವಯಸ್ಸಾದ ಗಂಡ-ಹೆಂಡತಿ ದಂಗೆ ಪ್ರಾರಂಭವಾದರೂ "ಇಲ್ಲಿ ಎಲ್ಲರೂ ನಮ್ಮವರೇ" ಎಂಬ ಭರವಸೆಯ ಮೇಲೆ ಹಳ್ಳಿ ಬಿಟ್ಟು ಹೊರಡಲು ನಿಧಾನ ಮಾಡುತ್ತಾರೆ. ಆದರೆ ಒಂದು ದಿನ ಅವರನ್ನು ಚೆನ್ನಾಗಿ ಬಲ್ಲ ಮುಸ್ಲಿಂ ಮುಂದಾಳು "ಇಲ್ಲಿದ್ದರೆ ನಿಮಗೆ ಅಪಾಯ, ಹೊರಟುಬಿಡಿ" ಎಂದು ಎಚ್ಚರಿಸುತ್ತಾನೆ. ಹೊರಗಡೆಯಿಂದ ಬಂದ ಬಂಡುಕೋರರಿಂದ ಅಪಾಯವಿದೆ ಎನ್ನುತ್ತಾನೆ. ದಂಪತಿಗಳು ತಮ್ಮ ಮನೆಮಾರು ಬಿಟ್ಟು ಹೊರಟಾಗ ಅವರು ಸಾಕಿದ ಗಿಳಿಯನ್ನು ಹೆಂಡತಿ ಮುಕ್ತಗೊಳಿಸಿದರೂ ಅದು ಪಂಜರದಲ್ಲೇ ಕುಳಿತು ಅವಳು ಹೇಳಿಕೊಟ್ಟಿದ್ದ ಮಾತುಗಳನ್ನು ಒಪ್ಪಿಸುತ್ತದೆ.  ಈ ಗಿಳಿಯಂತೆ ತಮ್ಮ ಪಂಜರಗಳಲ್ಲಿ ತಾವು ಸುಖವಾಗಿದ್ದ ಜನರಿಗೆ ಒಮ್ಮೆಲೇ ಅವರು ಬಯಸದ "ಸ್ವಾತಂತ್ರ್ಯ" ಸಿಕ್ಕುತ್ತದೆ.

ಹಂದಿಯನ್ನು ಕೊಂದ ಚರ್ಮದ ಕೆಲಸಗಾರ ಇಡೀ ದಂಗೆಗೆ ತಾನೇ ಕಾರಣನಾದೆ ಎಂದು ಮಮ್ಮಲ ಮರುಗುತ್ತಾನೆ.  ಅವನ ಗರ್ಭಿಣಿ ಹೆಂಡತಿ ಮತ್ತು ವೃದ್ಧ ತಾಯಿಯನ್ನು ಕರೆದುಕೊಂಡು ಊರು ಬಿಟ್ಟು ಹೊರಡುತ್ತಾನೆ. ತೀರಾ ನಿಶ್ಶಕ್ತಳಾದ ತಾಯಿಯನ್ನು ಬೆನ್ನ ಮೇಲೆ ಹೊತ್ತು ನಡೆಯಬೇಕು.  "ಅವಳನ್ನು ಮನೆಯಲ್ಲೇ ಬಿಟ್ಟು ಹೊರಟುಹೋಗು" ಎಂಬ ಅವನ ಮಿತ್ರರ ಸಲಹೆ ಅವನಿಗೆ ಸರಿ ಎನ್ನಿಸಿದರೂ ಅವನ ಮಾನವತೆ ಅವನನ್ನು ಹಾಗೆ ಮಾಡಲು ಬಿಡುವುದಿಲ್ಲ.  ಸೈಯದ್ ಪುರ ಎಂಬ ಗ್ರಾಮದ ಸಿಖ್ ಗುರುದ್ವಾರಕ್ಕೆ ಅವರು ಹೇಗೋ ಬಂದು ಸೇರಿಕೊಳ್ಳುತ್ತಾರೆ. ದಾರಿಯಲ್ಲಿ ವೃದ್ಧ ಸಿಖ್ ದಂಪತಿಗಳೂ ಜೊತೆಯಾಗುತ್ತಾರೆ.  ಆದರೆ ದಂಗೆ ಅಲ್ಲಿಗೂ ಹಬ್ಬುತ್ತದೆ.  ಗುರುದ್ವಾರದ ಮೇಲೆ ದಾಳಿಯಾದಾಗ ಒಳಗಿದ್ದ ಸಿಖ್ ಯುವತಿಯರು ಬಾವಿಗೆ ಹಾರಿಕೊಳ್ಳುತ್ತಾರೆ.

ಬ್ರಿಟಿಷ್ ಸರಕಾರ ಶಾಂತಿ ಸ್ಥಾಪಿಸಲು ವಿವಿಧ ಧರ್ಮದ ಮುಂದಾಳುಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತದೆ; ಈ ಸಮಿತಿಯಲ್ಲಿ ಪಾಪಕ್ಕೆ ಕಾರಣರಾದವರೂ ಇರುವುದು ಒಂದು ವಿಪರ್ಯಾಸ.  ದಂಗೆಯಲ್ಲಿ ನೊಂದವರಿಗಾಗಿ ಕ್ಯಾಂಪ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿರುವ ಸರಕಾರೀ ಗುಮಾಸ್ತನಿಗೆ ಬಂದವರು ಎಷ್ಟು ನಷ್ಟ ಅನುಭವಿಸಿದರು, ಎಷ್ಟು ಜನ ಸತ್ತರು ಎಂಬ ಅಂಕಿ-ಅಂಶಗಳನ್ನು ಹೊರತು ಮಿಕ್ಕಿದ್ದೇನೂ ಬೇಡ. ಇಂಥ ಪರಿಸ್ಥಿತಿಯಲ್ಲೂ ಜನ ಹೇಗೆ ಲಾಭ ಮಾಡಿಕೊಳ್ಳಲು ಯತ್ನಿಸಿದರು ಎಂಬುದನ್ನು ಚಿತ್ರ ತೋರಿಸುತ್ತದೆ.

"ಎಲ್ಲರೂ ಒಬ್ಬರನ್ನೊಬ್ಬರು ಕಡಿದುಹಾಕುತ್ತಿರುವಾಗ ಈ ಮಗು ಹುಟ್ಟಲು ಹೊರಟಿದೆ!" ಎಂದು ಚರ್ಮದ ಕೆಲಸಗಾರ ತನ್ನ ಗರ್ಭಿಣಿ ಹೆಂಡತಿಯನ್ನು ಗಾಡಿಯ ಮೇಲೆ ಕುಳ್ಳಿರಿಸಿ ದೂಡುವಾಗ ಆಡಿದ ಮಾತಿಗೆ ಆಕೆ ಅನ್ನುತ್ತಾಳೆ - 'ಜನ ಸಾವಿನ ಆಟ ಪ್ರಾರಂಭಿಸಿದರೆ ಮಕ್ಕಳು ಹುಟ್ಟುವುದು ನಿಲ್ಲುತ್ತದೆಯೇ?'

ದಂಗೆಯಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಗರ್ಭಿಣಿ ರಿಲೀಫ್ ಕ್ಯಾಂಪ್ ನಲ್ಲಿ ಮಗುವನ್ನು ಹೆರುತ್ತಾಳೆ. ಮಗುವಿನ ಅಳುವಿನ ಸದ್ದು ಕೇಳಿ ಅಂತಹ ಸನ್ನಿವೇಶದಲ್ಲೂ ವೃದ್ಧ ಸಿಖ್ ದಂಪತಿಯ ಮುಖದಲ್ಲಿ ನಗು ಅರಳುತ್ತದೆ.

* * *

ಗೋವಿಂದ್ ನಿಹಲಾನಿ ಒಬ್ಬ ಪಳಗಿದ ನಿರ್ದೇಶಕರು. ಅವರ  ಸಮರ್ಥ ನಿರ್ದೇಶನದಲ್ಲಿ 'ತಮಸ್' ಉತ್ತಮವಾಗಿ ಮೂಡಿ ಬಂದಿದೆ.  ಚಿತ್ರದ ಛಾಯಾಗ್ರಹಣದಲ್ಲಿ ಇತ್ತೀಚಿಗೆ ನಿಧನರಾದ ಕನ್ನಡಿಗೆ ವಿ ಕೆ ಮೂರ್ತಿ ಕೂಡಾ ಇರುವುದು ನಮಗೆ ಹೆಮ್ಮೆಯ ವಿಷಯ.

ತಮಸ್ (ಕತ್ತಲು) ನೋಡಬೇಕಾದ ಚಿತ್ರ; ಅದರಿಂದ ನಾವು ಕಲಿಯಬೇಕಾದದ್ದು ಬಹಳವಿದೆ. "Those who cannot remember the past are condemned to repeat it" ಎಂಬ ವಾಕ್ಯದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. "ಯಾರು ಹಿಂದೆ ನಡೆದದ್ದನ್ನು ನೆನಪಿಡಲಾರರೋ ಅವರಿಗೆ ಅದರ  ಪುನರಾವೃತ್ತಿಯೇ ಶಾಪ."  ಜಾರ್ಜ್ ಸಾಂತಾಯನ ಎಂಬ ದಾರ್ಶನಿಕನ ಮಾತು ಕೇಳಿದಾಗ ಮೈ ಜುಂ ಎನ್ನುತ್ತದೆ.  ಇಂಥ ದೊಡ್ಡ ದಂಗೆಯನ್ನು ತಮ್ಮ ಸಾತ್ವಿಕ ಉಪವಾಸ ಸತ್ಯಾಗ್ರಹದಿಂದ ನಿಲ್ಲಿಸಿದ ಗಾಂಧೀಜಿಯವರನ್ನು ಕುರಿತು ಮತ್ತು ಅವರ ಮಾತುಗಳನ್ನು ಕೇಳಿಸಿಕೊಂಡು ಮತ್ತೆ ಧರ್ಮ ನಿರಪೇಕ್ಷತೆಯನ್ನು ಮೈಗೂಡಿಸಿಕೊಂಡ ಭಾರತದ ಬಗ್ಗೆ ನಮಗೆ ಹೊಸಬಗೆಯ ಭಕ್ತಿಭಾವ ಮೂಡುತ್ತದೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)