ಆಲಿಸು ಕೃಷ್ಣನ ಕೊಳಲಿನ ಕರೆ!

 ಸಿ ಪಿ ರವಿಕುಮಾರ್


ಕೃಷ್ಣನ ಕೊಳಲಿನ ಕರೆ!
ಆಲಿಸು ಕೃಷ್ಣನ ಕೊಳಲಿನ ಕರೆ!

ಹಿಂದೊಮ್ಮೆ ರೇಡಿಯೋ ಮನರಂಜನೆಯ ಮುಖ್ಯ ಸಾಧನವಾಗಿದ್ದ ಕಾಲದಲ್ಲಿ ಈ ಗೀತೆ ಆಕಾಶವಾಣಿಯಿಂದ ಆಗಾಗ ತೇಲಿಬರುತ್ತಿತ್ತು. ಇಂದು ಈ ಹಾಡು ಅಷ್ಟಾಗಿ ಕೇಳಿಸುವುದಿಲ್ಲ.  ನೀವು ಈ ಹಾಡನ್ನು ಕೇಳಿಲ್ಲದೆ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ. ಇಂಟರ್ ನೆಟ್ ಮೇಲೆ ಹುಡುಕಿದಾಗ ಇಲ್ಲಿ ಸಿಕ್ಕಿತು - ನೀವೂ ಕೇಳಿ.  ಇದು "ಸುಬ್ಬಾಶಾಸ್ತ್ರಿ"  ಎಂಬ ಚಲನಚಿತ್ರದಲ್ಲಿ ಬರುವ ಗೀತೆ; ಬಹಳ ದೊಡ್ಡ ಘಟಾನುಘಟಿಗಳು ಈ ಗೀತೆಯ ರಚನೆಯ ಹಿಂದೆ ಇದ್ದಾರೆ! ಕನ್ನಡದ ಕವಿ ಪು. ತಿ. ನರಸಿಂಹಾಚಾರ್ ಅವರ ಕವಿತೆಯನ್ನು ಗೀತೆಗೆ ಅಳವಡಿಸಿಕೊಳ್ಳಲಾಗಿದೆ. ಗೀತೆಗೆ ಸಂಗೀತ ನೀಡಿದವರು ಸ್ವತಃ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಆಕಾಶವಾಣಿಯ ಡೈರೆಕ್ಟರ್ ಆಗಿದ್ದ ಶ್ರೀ ಎಸ್. ಕೃಷ್ಣಮೂರ್ತಿ.  ಹಾಡಿದವರು ಶ್ರೀರಂಗಂ ಗೋಪಾಲರತ್ನಂ.  ಅತ್ಯಂತ ಸುಶ್ರಾವ್ಯವಾದ ಸಂಗೀತ. ಕೇಳಿದ ನಂತರ ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂಥ ಹಾಡು.

ಪು ತಿ ನರಸಿಂಹಾಚಾರ್ ಕನ್ನಡದ ನವೋದಯ ಕಾವ್ಯಪ್ರಕಾರದಲ್ಲಿ ಬಹಳ ಮುಖ್ಯ ಕವಿ; ಬೇಂದ್ರೆ, ಕುವೆಂಪು ಮತ್ತು ಪು.ತಿ.ನ. ಇವರನ್ನು ನವೋದಯ ಕಾಲದ ದಿಗ್ಗಜರು ಎಂದು ಕರೆಯಲಾಗುತ್ತದೆ. ಪು.ತಿ.ನ. ಅವರ ವಿಶೇಷವೆಂದರೆ ಅವರು ಸಂಗೀತದಲ್ಲಿ ವಿಶೇಷ ಜ್ಞಾನ ಹೊಂದಿದ್ದರಿಂದ ಅನೇಕ ಗೀತೆಗಳನ್ನು ಅವರು ಹಾಡಲೆಂದೇ ಬರೆದಿದ್ದಾರೆ.  ಇದನ್ನು ನಾವು ಡಿವಿಜಿ ಮತ್ತು ವಿ. ಸೀತಾರಾಮಯ್ಯ ಅವರ ರಚನೆಗಳಲ್ಲೂ ಕಾಣಬಹುದು. "ಗೋಕುಲನಿರ್ಗಮನ" ಮುಂತಾದ ಅನೇಕ ಗೀತನಾಟಕಗಳನ್ನು ಪುತಿನ ಬರೆದರು. ಅವರು ಕಾವ್ಯರಚನೆಯಲ್ಲಿ ಉಪಯೋಗಿಸುವ  ಭಾಷೆ ಸ್ವಲ್ಪ ಕಷ್ಟವಾದ, ಸಂಸ್ಕೃತ ರಾರಾಜಿಸುವ ಭಾಷೆಯಾದ್ದರಿಂದ  ಅವರನ್ನು ಓದಿದವರು ಹೆಚ್ಚು ಜನರಿಲ್ಲ.  ಪಠ್ಯಪುಸ್ತಕಗಳಲ್ಲೂ ಅವರು ಅಷ್ಟಾಗಿ ಕಾಣಿಸುವುದಿಲ್ಲ.

ಪುತಿನ ದೈವಭಕ್ತರು; ದೈವಚಿಂತನೆ ಅವರ ಕಾವ್ಯದಲ್ಲಿ ಮತ್ತಿತರ ಬರಹಗಳಲ್ಲಿ ಸದಾ ಇಣುಕುತ್ತದೆ.  ಗೋಕುಲಾಷ್ಟಮಿ ಎಂಬ ಅವರ ಪ್ರಬಂಧವನ್ನು ಓದಿದ್ದು ನನಗೆ ನೆನಪಿಗೆ ಬರುತ್ತಿದೆ. ಕೃಷ್ಣ ಅವರ ಇಷ್ಟದೈವವೆಂದು ತೋರುತ್ತದೆ. ಪ್ರಸಕ್ತ ಕವಿತೆಯಲ್ಲೂ ಅವರು ಕೃಷ್ಣನ ಕೊಳಲಿನ ಕರೆಯ ಬಗ್ಗೆ ಬರೆದಿದ್ದಾರೆ.  ಈ ಕವಿತೆಯಲ್ಲಿ ಕೃಷ್ಣನ ಕೊಳಲಿಗೆ ಆಕರ್ಷಿತಳಾದ ಒಬ್ಬ ಹೆಣ್ಣು (ನಾಯಕಿ) ತನ್ನ ಸಖಿಗೆ ಅದನ್ನು ಕುರಿತು ಹೇಳುತ್ತಿರುವ ಸಂದರ್ಭವಿದೆ.   ಕೃಷ್ಣನ ಆಕರ್ಷಣೆಯೇ ನಾಯಕಿಯ ರೂಪದಲ್ಲಿ ಬಂದು ಸಖಿಯೊಂದಿಗೆ ಮಾತಾಡುತ್ತಿದೆ ಎಂದು ಕೂಡಾ ಕವಿತೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ.

ಕೃಷ್ಣನ  ಕೊಳಲಿನ ನಾದ ಸಖಿಯನ್ನು ಚುಂಬಕದಂತೆ ಸೆಳೆಯುತ್ತಿದೆ. ಆದರೆ ಅಲ್ಲಿಗೆ ಹೋಗಲು ಅವಳಿಗೆ ಅಳುಕಿದೆ. ನಾನಾ ಕಾರಣಗಳನ್ನು ಅವಳು ಮುಂದೊಡ್ಡುತ್ತಾಳೆ. ತಾನು ಸಿಂಗರಿಸಿಕೊಂಡು ಬರಲಿಲ್ಲವಲ್ಲಾ ಎಂದು ತನ್ನ ಪೇಚಾಟವನ್ನು ಹೇಳಿಕೊಳ್ಳುತ್ತಾಳೆ -
ಮುತ್ತಿನ ಕುಪ್ಪುಸ, ಹರಳೋಲೆ, ಮಲ್ಲಿಗೆ ಜಾಜಿ ಮುಡಿಮಾಲೆ
ಹೆಜ್ಜೆಯ ನೇವುರ, ಗೆಜ್ಜೆಯ ಪಿಲ್ಲಿ ಮರೆತೇ ಬಂದೆನೆ ಮನೆಯಲ್ಲೇ!
(ನೇವುರ = ನೂಪುರ = ಗೆಜ್ಜೆ)

ಆದರೆ ವೇಣುಗಾನವನ್ನು ಕೇಳಲು ಅಲಂಕಾರವೇಕೆ! ಕುವೆಂಪು ಅವರ ಒಂದು ಕವಿತೆಯಲ್ಲಿ "ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ?" ಎಂದು ಹೇಳಿದ್ದೂ ಇದೇ ಅರ್ಥದಲ್ಲಿ!

ಕವಿತೆಯಲ್ಲಿ ಬರುವ ಸಖಿಗೆ ಮದುವೆಯಾಗಿ ಮಕ್ಕಳೂ ಇದ್ದಾರೆ.  ಅವರನ್ನು ಮನೆಯಲ್ಲಿ ಬಿಟ್ಟು ಹೊರಡುವುದು ಹೇಗೆ ಎಂಬ ಅವಳ ಆಲೋಚನೆಯನ್ನು ತಿಳಿದುಕೊಂಡು ನಾಯಕಿ ಹೀಗೆ ಉತ್ತೇಜಿಸುತ್ತಾಳೆ -

ತೊಟ್ಟಿಲಿನ ಹಸುಗೂಸ ಮರೆ! ಪಕ್ಕದ ಗಂಡನ್ನ ತೊರೆ!
ಬೃಂದಾವನಕೆ ತ್ವರೆ! ಆಲಿಸು ಕೃಷ್ಣನ ಕೊಳಲಿನ ಕರೆ! 

ಅಯ್ಯೋ, ಮನೆಯಲ್ಲಿ ಬೇಕಾದಷ್ಟು ಕೆಲಸ ಹಾಗೇ ಉಳಿದಿದೆಯಲ್ಲ! ಎಂದು ಸಖಿ ಭೀತಳಾದಾಗ ನಾಯಕಿ ಅವಳಿಗೆ ಧೈರ್ಯ ಹೇಳುತ್ತಾಳೆ!
ಹೊತ್ತಾರೆ ಹೊರೆಗೆಲಸ ಮಿಕ್ಕಾರೆ ಮಿಗಲಿ, ಪಕ್ಕದ ನೆರೆಹೊರೆ ನಕ್ಕಾರೆ ನಗಲಿ!
ಬೃಂದಾವನದೊಳ್ ಲಾಲಿಸಿರೋ ಮುರಳಿ!

ಕೃಷ್ಣನ ಆಕರ್ಷಣೆ ಕೊನೆಗೂ ಗೆಲ್ಲುತ್ತದೆ -

ನೇಸರ ಕಿರಣ ಆಗಸದಿರುಳ ತೊರೆಯಿಸುವ ರೀತಿ
ಮುರಳೀಧರನ ಮುರಳೀಮಾಯೆಗೆ ಮನ ಬಿಟ್ಟಿತು ಭೀತಿ
ಇನ್ನಾಯಿತು ಪ್ರೀತಿ!

ಸೂರ್ಯನ ರಶ್ಮಿ ಹೇಗೆ ಕತ್ತಲನ್ನು ದೂರ ಮಾಡುತ್ತದೋ ಹಾಗೆ ಕೃಷ್ಣನ ಕೊಳಲಿನ ಮಾಯೆಯು ಸಖಿಯ ಮನಸ್ಸಿನಿಂದ ಅಳುಕನ್ನು ದೂರ ಮಾಡಿದೆ. ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ! ಎಂದು ಸಖಿ ಹೊರಟೇ ಬಿಡುತ್ತಾಳೆ!

ಈ ಕವಿತೆಯನ್ನು ನಾವು ಇನ್ನೊಂದು ರೀತಿಯಲ್ಲೂ ಅರ್ಥ ಮಾಡಿಕೊಳ್ಳಬಹುದು. ಮುರಳಿಯ ಮಾಯೆ ಎಂದರೆ ಯಾವುದೇ ಆಕರ್ಷಣೆಯಾಗಬಹುದು. ಸಂಶೋಧನೆಗೆ ಹೊರಟ ವ್ಯಕ್ತಿಯನ್ನೂ ಇಂಥ ಅನೇಕ ಸಂಶಯಗಳು ಕಾಡಬಹುದು - ಮನೆ, ಸಂಸಾರ, ಇತ್ಯಾದಿ. ಆದರೆ ಸತ್ಯವನ್ನು ಹುಡುಕಿ ಹೊರಟವನಿಗೆ ಅನ್ವೇಷಣೆಯ ಆಕರ್ಷಣೆ ಇವೆಲ್ಲವನ್ನೂ ಮರೆಸುತ್ತದೆ.  ಇಂಗ್ಲೆಂಡ್ ಗೆ ಗಣಿತ ಸಂಶೋಧನೆಗೆ ಹೊರಟ  ರಾಮಾನುಜಂಗೆ ಮದುವೆಯಾಗಿ ಹೆಂಡತಿ ಇದ್ದರು.  ಗಾಂಧೀಜಿಗೆ ಮಡದಿ-ಮಕ್ಕಳು-ಮೊಮ್ಮಕ್ಕಳು ಎಲ್ಲರೂ ಇದ್ದರು. ಆದರೆ ಅನ್ವೇಷಕನಿಗೆ ಇವೆಲ್ಲಾ ಕಾಣದಂತಾಗುತ್ತದೆ. ಅದಕ್ಕೇ "ಮಾಯೆ" ಎಂಬ ಪದವನ್ನು ಕವಿ ಬಳಸುತ್ತಾರೆ.

ಇಂದು ಇಂಟರ್ ನೆಟ್, ಸಾಮಾಜಿಕ ತಾಣಗಳು ಇದೇ ಬಗೆಯ ಮಾಯೆಯನ್ನು ನಮ್ಮ ಯುವಪೀಳಿಗೆಯತ್ತ ಬೀಸುತ್ತಿವೆ. ಕೃಷ್ಣನ ಕೊಳಲು ಫೇಸ್ ಬುಕ್ಕೋ ಅಥವಾ ನಿಮ್ಮ ನಿಜವಾದ ಧ್ಯೇಯವೋ ಎಂಬುದನ್ನು ನೀವೇ ಕೇಳಿಕೊಳ್ಳಿ! ಆನಂತರ -

ಆಲಿಸು ಕೃಷ್ಣನ ಕೊಳಲಿನ ಕರೆ!



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)