ರಾಜ್ ಕಪೂರ್ ನೆನಪು

ಸಿ ಪಿ ರವಿಕುಮಾರ್

ಈ ನವೆಂಬರ್ ತಿಂಗಳಲ್ಲಿ ನಾನು ವಿಮಾನದಲ್ಲಿ ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣ ಮಾಡಿದಾಗ ಭಾರತೀಯ ಭಾಷೆಗಳ ಅನೇಕ ಚಲನಚಿತ್ರಗಳು ಮನರಂಜನೆಯ ಮೆನುವಿನಲ್ಲಿದ್ದವು. ಬಾಲಿವುಡ್ ಚಿತ್ರಗಳಲ್ಲದೆ ಕನ್ನಡ, ತಮಿಳು, ತೆಲುಗು ಚಿತ್ರಗಳೂ ಇವುಗಳಲ್ಲಿ ಸೇರಿದ್ದವು. ಕೇವಲ ಐದು ವರ್ಷಗಳ ಹಿಂದೆ ಈ ಸ್ಥಿತಿ ಇರಲಿಲ್ಲ. ಮನರಂಜನೆ ಎಂದರೆ ಹಾಲಿವುಡ್ ಚಿತ್ರಗಳು ಮಾತ್ರ ಎನ್ನುವ ಪರಿಸ್ಥಿತಿ ಇತ್ತು.

ಇವತ್ತು ಭಾರತದಲ್ಲಿ ತಯಾರಾದ ಚಲನಚಿತ್ರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಬಹುಶಃ ಮೊಟ್ಟಮೊದಲು ಭಾರತೀಯ ಚಿತ್ರಗಳನ್ನು ನಮ್ಮ ದೇಶದಿಂದ ಹೊರಗೆ ಜನಪ್ರಿಯಗೊಳಿಸಿದ ಕೀರ್ತಿ ರಾಜ್ ಕಪೂರ್ ಅವರಿಗೆ ಸಲ್ಲುತ್ತದೆ. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ಅವರು ತಯಾರಿಸಿದ ಕಪ್ಪು-ಬಿಳುಪು ಚಿತ್ರಗಳು ರಷ್ಯಾ ಮತ್ತು ಜಪಾನ್ ದೇಶಗಳಲ್ಲಿ ಜನಪ್ರಿಯವಾದವು. ಆವಾರಾ ಚಿತ್ರವಂತೂ ಅದ್ಭುತ ಯಶಸ್ಸು ಗಳಿಸಿತು. ನೆಹರೂ ಅವರ ಸರ್ಕಾರ ರಷ್ಯನ್ ದೇಶದೊಂದಿಗೆ ವಿಶೇಷ ಸಂಬಂಧ ಹೊದಿದ್ದು ಕೂಡಾ ಇದಕ್ಕೆ ಕಾರಣವಾಗಿರಬಹುದು. ರಷ್ಯನ್ ಮತ್ತು ಜಪಾನ್ ದೇಶದ ಜನರಿಗೆ ರಾಜ್ ಕಪೂರ್ ಅವರ ಮುಗ್ಧ ಪಾತ್ರಗಳ ಅಭಿನಯ ಹಿಡಿಸಿತು. ಮುಂದೆ "ಮೇರಾ ನಾಮ್ ಜೋಕರ್" ಎಂಬ ರಾಜ್ ಕಪೂರ್ ಚಿತ್ರದಲ್ಲಿ ಒಬ್ಬ ರಷ್ಯನ್ ನಟಿ ನಟಿಸಿದರು ಕೂಡಾ.

ಸಮಾಜದ ಅನ್ಯಾಯಗಳಿಗೆ ಸಿಕ್ಕಿ ಹಾಕಿಕೊಳ್ಳುವ ಒಬ್ಬ ಮುಗ್ಧ ಯುವಕನ ಪಾತ್ರಗಳಲ್ಲಿ  ರಾಜ್ ಕಪೂರ್ ಎಲ್ಲರ ಸಹಾನುಭೂತಿ  ಗಿಟ್ಟಿಸಿಕೊಳ್ಳುತ್ತಿದ್ದರು. ಅಮಿತಾಭ್ ಬಚ್ಚನ್ ಸಮಾಜದ ಅನ್ಯಾಯಗಳ ವಿರುದ್ಧ ಸಿಟ್ಟಿನಿಂದ ಹೋರಾಡಿ "ರೋಷದ ಯುವಕ" ಎಂಬ ಬಿರುದಿಗೆ ಪಾತ್ರರಾದಂತೆ ರಾಜ್ ಕಪೂರ್ ಅನ್ಯಾಯಗಳನ್ನು .ಅಸಹಾಯಕತೆಯಿಂದ ಮೌನವಾಗಿ ಸಹಿಸಿಕೊಂಡು ದುಃಖಿಸುವ ಪಾತ್ರಗಳಲ್ಲಿ ಮಿಂಚಿದರು.  ಬಫೂನ್ ಹಾಗೆ ನಟಿಸಿ ನಗಿಸುವ ಪಾತ್ರಗಳು ಅಂದಿನ ಜನರಿಗೆ ಇಷ್ಟವಾದವು. ಮಹಾಯುದ್ಧದ ಕರಾಳ ದಿನಗಳಿಂದ ಜಗತ್ತು ಇನ್ನೂ ಚೇತರಿಸಿಕೊಳ್ಳುತ್ತಿದ್ದ ದಿನಗಳು. ಬಡತನ, ಆಹಾರದ ಕೊರತೆ, ಇವು  ಇಡೀ ವಿಶ್ವವನ್ನು ಕಾಡುತ್ತಿದ್ದ ಸಮಸ್ಯೆಗಳು. ಇಂಥ ಸನ್ನಿವೇಶದಲ್ಲಿ ನಗೆ ಉಕ್ಕಿಸುವ ಹೀರೋ   ಆಗಿ ರಾಜ್ ಕಪೂರ್ ಕಾಣಿಸಿಕೊಂಡರು.  ಜನರಿಗೆ ಅವರ ಚಿತ್ರಗಳು ಕಮ್ಫರ್ಟ್ ಫುಡ್ ಹಾಗೆ  (ಸೀಮೆ ಅಕ್ಕಿ ಪಾಯಸದಂತೆ ಹಿತ ಉಂಟು ಮಾಡುವ ಆಹಾರ)  ಕಂಡಿರಬಹುದು.  ಬಹುಶಃ ಬಫೂನ್ ಪಾತ್ರಗಳಲ್ಲಿ ಕಾಣಿಸಿಕೊಂಡ ಮೊದಲ ಹೀರೋ ಅವರೇ ಆಗಿರಬೇಕು. ಅಂದು ಹೀರೋ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಸೈಡ್ ಕಿಕ್ ಇಂಥ ಹಾಸ್ಯಪಾತ್ರಗಳನ್ನು ಮಾಡುತ್ತಿದ್ದ.

ಕಾಲ ಕಳೆದಂತೆ ಜನರ ಅಭಿರುಚಿ ಬದಲಾಯಿತು. ರಾಜ್ ಕಪೂರ್ ಕೂಡಾ ತಮ್ಮ ಚಿತ್ರಗಳಲ್ಲಿ ನಟಿಯರ ದೇಹಸೌಂದರ್ಯವನ್ನು ಬಂಡವಾಳ ಮಾಡಿಕೊಂಡು ಚಿತ್ರಗಳನ್ನು ನಿರ್ಮಿಸಿದರು. ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತಂದರು. ತಂದೆ ಪ್ರಥ್ವಿರಾಜ್ ಕಪೂರ್ ಮತ್ತು ಮಗ ರಣಧೀರ್ ಕಪೂರ್ ಜೊತೆ ಅವರು ನಟಿಸಿದ ಚಿತ್ರ ಕಲ್ ಆಜ್ ಔರ್ ಕಲ್,  ರಿಷಿ ಕಪೂರ್ ಅವರನ್ನು ಮುಖ್ಯಪಾತ್ರದಲ್ಲಿಟ್ಟುಕೊಂಡು  ತಯಾರಾದ "ಬಾಬಿ" ಚಿತ್ರಗಳನ್ನು ನೆನೆಯಬಹುದು.  ಅವರು ತುಂಬಾ ವೆಚ್ಚ ಮಾಡಿ ತಯಾರಿಸಿದ ಮೇರಾ ನಾಮ್ ಜೋಕರ್ ಎಂಬ ಚಿತ್ರ ಭಾರೀ ಸೋಲು ಕಂಡಿತು,  ಇದರಲ್ಲಿ ನಾಯಕ ಬಡತನದಲ್ಲಿಯೇ ಬೆಳೆದ ಹುಡುಗ. ಅವನನ್ನು ಎಲ್ಲರೂ ಹಂಗಿಸಿ "ಜೋಕರ್" ಪಟ್ಟ ಕಟ್ಟಿಬಿಡುತ್ತಾರೆ.  ಅವನ ಜೀವನದಲ್ಲಿ ಮೂರು ಹೆಣ್ಣುಗಳ ಪ್ರವೇಶವಾಗುತ್ತದೆ. ಎಲ್ಲರೂ ಅವನನ್ನು ಇಷ್ಟ ಪಡುತ್ತಾರೆ; ಆದರೆ ಯಾರೂ ಅವನನ್ನು ಸಂಗಾತಿಯನ್ನಾಗಿ ಸ್ವೀಕರಿಸುವುದಿಲ್ಲ.  ಹೀಗೆ ಸ್ವಂತ ಜೀವನದಲ್ಲಿ ಎಷ್ಟೇ ಕಹಿಯಿದ್ದರೂ ಸರ್ಕಸ್ ರಂಗಸ್ಥಳದ ಮೇಲೆ ಎಲ್ಲರನ್ನೂ ನಗಿಸುವ ಜೋಕರ್ ಆಗಿ ರಾಜ್ ಕಪೂರ್ ಜನರ ಸಹಾನುಭೂತಿ ಬಯಸಿದರು. ಆದರೆ ಚಿತ್ರಕ್ಕೆ ಅವರು ನಿರೀಕ್ಷಿಸಿದ ಪ್ರತಿಕ್ರಿಯೆ ಬರಲಿಲ್ಲ. ಭಾರೀ ಪ್ರಮಾಣದ ಆರ್ಥಿಕ ನಷ್ಟಕ್ಕೆ ಗುರಿಯಾದರು. ಆಗ ಅವರು "ಬಾಬಿ" ಎಂಬ ಕಡಿಮೆ ಬಜೆಟ್ ಚಿತ್ರ ಮಾಡಿ ಮತ್ತೆ ಯಶಸ್ಸಿನ ಶಿಖರ ಏರಿದರು.

ಇವತ್ತು ರಾಜ್ ಕಪೂರ್ ಅವರ ತೊಂಬತ್ತನೇ ಹುಟ್ಟಿದ ಹಬ್ಬ.  ಅವರ ಸ್ಮರಣಾರ್ಥವಾಗಿ ಗೂಗಲ್ ತನ್ನ ಮುಖ್ಯಪುಟವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ. ರಾಜ್ ಕಪೂರ್ ಮತ್ತು ನರ್ಗಿಸ್ ದತ್ ಅವರ ಅಭಿನಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಯುಗಳ ಗೀತೆಯ ದೃಶ್ಯ ("ಪ್ಯಾರ್ ಹುವಾ ಇಕ್^ರಾರ್ ಹುವಾ ...") ಈ ಚಿತ್ರದ ಹಿನ್ನೆಲೆಯಲ್ಲಿದೆ. ಆವಾರಾ ಚಿತ್ರದಲ್ಲಿ ಅವರು ಕಾಣಿಸಿಕೊಂಡ ಬಗೆಯನ್ನು ಈ ದೃಶ್ಯದ ಮುನ್ನೆಲೆಯಲ್ಲಿ ತೋರಿಸಲಾಗಿದೆ.

ಅವರ ಚಿತ್ರವೊಂದರಲ್ಲಿ ಬಳಸಾದ ಸಾಹಿರ್ ಲುಧಿಯಾನ್ವಿ ಅವರ ಗೀತೆಯನ್ನು ಕುರಿತ ಬ್ಲಾಗ್ ಇಲ್ಲಿ ಓದಿ.

Raj Kapoor's 90th Birthday

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)