ಏನೋ ತಪ್ಪಾಗಿದೆ ಎಂದೇ ಅರ್ಥ

(ಪೇಶಾವರ್ ಹುತಾತ್ಮರಿಗೆ  ಶ್ರದ್ಧಾಂಜಲಿ)

ಮೂಲ ಹಿಂದಿ ಕವಿತೆ - ಪ್ರಸೂನ್ ಜೋಷಿ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 


ನಿನ್ನ ತೋಳುಗಳಲ್ಲಿ ಬಾಲ್ಯ ಯಾವಾಗ ಬರಲು ಹಿಂಜರಿಯುವುದೋ
ತಾಯ ಗರ್ಭದಿಂದ ಇಣುಕಿದ ಜೀವ ಯಾವಾಗ ಹೊರಬರಲು ಅಳುಕುವುದೋ
ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ.

ಖಡ್ಗಗಳು ಯಾವಾಗ ಹೂಗಳ ಮೇಲೆ ಪ್ರಹಾರ ಮಾಡುತ್ತವೋ
ಮುಗ್ಧ ಕಣ್ಣುಗಳಲ್ಲಿ ಯಾವಾಗ ಭೀತಿ ಇಣುಕುತ್ತದೋ
ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ.
ಕೋಮಲ ಹಿಮಬಿಂದುಗಳ ಧಾರೆ ಅಂಗೈ ಮೇಲಲ್ಲದೆ
 ಶಸ್ತ್ರಗಳ ಅಲುಗಿನಲ್ಲಿ ಹರಿದಾಗ
 ಹಾದುಹೋಗಬೇಕಾದಾಗ ಪುಟ್ಟ ಪುಟ್ಟ ಹೆಜ್ಜೆಗಳು ಬೆಂಕಿಯ ನಡುವೆ
 ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ.

ಹೆದರಿಕೆಗೆ ಒಮ್ಮೆಲೇ ನಿಂತುಹೋದಾಗ ನಗು-ಕೇಕೆ
ಸ್ಮಶಾನಮೌನದಲ್ಲಿ ಕರಗಿಹೋದಾಗ ತೊದಲು ನುಡಿ
ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ.
ಅಂತಿಂಥ ತಪ್ಪಲ್ಲ, ತೀರಾ ದೊಡ್ಡದೇ ನಡೆದುಹೋಗಿದೆ.
ಜೋರಾಗಿ ಮಳೆಯಾಗಬೇಕಾಗಿತ್ತು ಇಡೀ ಜಗತ್ತಿನಲ್ಲಿ.
ಎಲ್ಲಾ ಕಡೆ ಹನಿಯಬೇಕಾಗಿತ್ತು ಕಣ್ಣೀರು.
ಮೇಲಿರುವವನು ಬಿಕ್ಕಿಬಿಕ್ಕಿ ಅಳಬೇಕಾಗಿತ್ತು ಆಕಾಶದಲ್ಲಿ.
ನಾಚಿಕೆಯಿಂದ ತಗ್ಗಬೇಕಾಗಿತ್ತು ಮನುಷ್ಯನ ಸಭ್ಯತೆಯ ಕುತ್ತಿಗೆ.


ಶೋಚನೀಯ ಕಾಲವಲ್ಲ ಇದು, ಯೋಚನೆಯ ಕಾಲ;
ಅಂತ್ಯಕ್ರಿಯೆಯ ಕಾಲವಲ್ಲ ಇದು, ಪ್ರಶ್ನೆಗಳ ಕಾಲ;
ಇಷ್ಟಾದ ಮೇಲೂ ಮಾನವ ತಲೆ ಎತ್ತಿ ನಿಲ್ಲಬಲ್ಲವನೇ ಆದರೆ
ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)