ಹಣತೆಯ ಮತ್ತೆ ಬೆಳಗುವ ಬನ್ನಿ!

ಮೂಲ ಹಿಂದಿ ಕವಿತೆ : ಅಟಲ್ ಬಿಹಾರಿ ವಾಜಪೇಯಿ 
ಅನುವಾದ: ಸಿ ಪಿ ರವಿಕುಮಾರ್ 



ಕವಿತೆಯನ್ನು ಕುರಿತು 
ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ನಮ್ಮ ದೇಶದ ಪ್ರಧಾನಿಯಾಗಿದ್ದವರು. ಅವರು ಹಿಂದಿಯಲ್ಲಿ ಎಂಟು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಈ ಕವಿತೆಯಲ್ಲಿ ಕವಿಗೆ ದೇಶ ಹಾದಿ ತಪ್ಪುತ್ತಿದೆ ಎನ್ನುವ ತಲ್ಲಣವಿದೆ. ಸುತ್ತಲೂ ತಮ (ಕತ್ತಲು) ಕವಿದಂತೆ ಭಾಸವಾಗುತ್ತಿದೆ. ಕತ್ತಲೆ ಇರುವುದು ನಮ್ಮ ಮನಸ್ಸಿನ ಒಳಗೆ; ಅದನ್ನು ಹೋಗಲಾಡಿಸಲು ನಮಗೆ ಬೇಕಾಗಿರುವುದು ವಿದ್ಯೆ ಮತ್ತು ಇಚ್ಛಾಶಕ್ತಿ. ಇಂದಿನ ಮೋಹದಲ್ಲಿ ನಾವು ನಾಳೆಯನ್ನೇ ಮರೆತು ಬಿಡುತ್ತಿದ್ದೇವೆಯೇ ಎಂದು ಕವಿಗೆ ಭಯವಾಗುತ್ತದೆ. ನಮ್ಮ ದೇಶ ಇನ್ನೂ ಪ್ರಗತಿಪಥದಲ್ಲಿ ಸಾಕಷ್ಟು ಮುಂದೆ ಹೋಗಬೇಕಾಗಿದೆ. ಈ ಪ್ರಗತಿಯಲ್ಲಿ ನಮ್ಮ ಒಳಜಗಳಗಳೇ ನಮಗೆ ವಿಘ್ನಗಳು. ದೇವ-ದಾನವರ ಕಾಳಗದಲ್ಲಿ ಬೇಕಾದ ವಜ್ರಾಯುಧವನ್ನು ದಧೀಚಿ ಎಂಬ ಮಹರ್ಷಿಯ ಬೆನ್ನುಮೂಳೆಯಿಂದ ತಯಾರಿಸಲಾಯಿತಂತೆ. ಇಂದಿನ ಯುವಕರು ತಮ್ಮ ಪ್ರಯಾಸದಿಂದ ವಿಘ್ನಗಳನ್ನು ಪಾರು ಮಾಡಿ ದೇಶವನ್ನು ಮುಂದಕ್ಕೆ ಕರೆದೊಯ್ಯಬೇಕು ಎಂಬುದು ಕವಿಯ ಆಶಯ. 


ನಡುಹಗಲಲ್ಲೂ  ತಮಾಂಧಕಾರ
ನೆರಳಿಗೆ ಸೋತಿರುವನು ದಿವಾಕರ
ಒಳಗಿನ ತಮಸ್ಸಿಗೆ ನೀಡು ತಿಲಾಂಜಲಿ
ಮನಸಿನಾಳಕ್ಕೆ ಬೆಳಕು ಹರಿಯಲಿ!
              ಹಣತೆಯ ಮತ್ತೆ ಬೆಳಗುವ ಬನ್ನಿ!

ಬಳಸನ್ನೇ ಗುರಿಯೆಂದು ನಂಬಿದೆವು
ಧ್ಯೇಯವೇ ಮರೆಯಾಗಿ ಹೋಯಿತು
ವರ್ತಮಾನ-ಮೋಹದ ಸುಳಿಯಲ್ಲಿ
ಸಿಕ್ಕಿ ಮರೆಯುವುದೆ  ನಾಳೆಯ, ಹೇಳಿ!
             ಹಣತೆಯ ಮತ್ತೆ ಬೆಳಗುವ ಬನ್ನಿ!

ಪೂರ್ಣಾಹುತಿ ಇನ್ನೂ ನಡೆದಿಲ್ಲ
ಇನ್ನೂ ಅಪೂರ್ಣವಾಗಿದೆ ಯಜ್ಞ
ನಮ್ಮವರೇ ತಂದಿಟ್ಟಿದ್ದಾರೆ
ಪ್ರಗತಿಪಥದಲ್ಲಿ ವಿಘ್ನದ  ಬಾಧೆ!
ಅಂತಿಮ  ವಿಜಯದ  ವಜ್ರಕ್ಕಾಗಿ
ಮೂಳೆಯ ಕರಗಿಸು ನವ್ಯದಧೀಚಿ!
            ಹಣತೆಯ ಮತ್ತೆ ಬೆಳಗುವ ಬನ್ನಿ!


Kannada translation of a poem by Bharataratna Atal Bihari Vajapeyi
(c) 2014, C.P. Ravikumar

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)