ಕನ್ನಡ ಡಿಂಡಿಮ
ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳು.
ಘಟನೆ ಒಂದು. ಸ್ಥಳ - ಕ್ಷೌರದ ಅಂಗಡಿ. ಈಗ ಅದನ್ನು ಯಾರೂ ಈ ಹೆಸರಿನಿಂದ ಕರೆಯುವುದಿಲ್ಲ. "ಸಲೂನ್", "ಹೇರ್ ಡ್ರೆಸಿಂಗ್ ಸಲೂನ್", ಇತ್ಯಾದಿ ಹೆಸರುಗಳಿಂದ ಕರೆಯುವುದು ರೂಢಿಯಾಗಿದೆ. ಮಾತಾಡುವಾಗ ಕೆಲವರು "ಬಾರ್ಬರ್ ಶಾಪ್" ಅಂತಲೂ ಕರೆಯಬಹುದು. ನಾನು ನನ್ನ ತಲೆಯನ್ನು ಬಾರ್ಬರನಿಗೆ ಒಪ್ಪಿಸಿ ಕುಳಿತಿದ್ದೇನೆ. ಗಿರಾಕಿಗಳು ಕಾಯಲು ಕೂಡುವ ಬೆಂಚಿನ ಮೇಲೆ ಒಬ್ಬ ಪುಟ್ಟ ಹುಡುಗ ತಾಯಿಯ ಜೊತೆ ಕುಳಿತಿದ್ದಾನೆ. ಪುಟ್ಟ ಹುಡುಗನ ತಮ್ಮ ತಾಯಿಯ ತೊಡೆಯ ಮೇಲೆ ಕುಳಿತಿದ್ದಾನೆ.
ಬೆಂಚ್ ಮೇಲೆ ಕುಳಿತ ಹುಡುಗ ಅರಳು ಹುರಿದ ಹಾಗೆ ತಮ್ಮ ಮತ್ತು ತಾಯಿಯ ಜೊತೆ ಕನ್ನಡದಲ್ಲಿ ಹರಟೆ ಹೊಡೆಯುತ್ತಿದ್ದಾನೆ. ಅವನ ಭಾಷೆ ಕೇಳಲು ನಿಜಕ್ಕೂ ಚೆನ್ನಾಗಿದೆ. ಅವನು ಹೇಳಿದ್ದಕ್ಕೆಲ್ಲಾ ಅವನ ತಾಯಿ ಮುರುಕಲು ಇಂಗ್ಲಿಷ್ ನಲ್ಲಿ ಉತ್ತರ ಕೊಡುತ್ತಿದ್ದಾಳೆ. ಈಕೆ ಬಾಬ್ ಕಟ್ ಮಾಡಿಸಿಕೊಂಡಿರುವುದನ್ನು ನಾನು ಕನ್ನಡಿಯಲ್ಲಿ ಗಮನಿಸುತ್ತೇನೆ.
ಘಟನೆ ಎರಡು. ಒಂದು ಕಾಲೇಜಿನಲ್ಲಿ ನನ್ನನ್ನು ಮೀಟಿಂಗ್ ಗಾಗಿ ಕರೆದಿದ್ದಾರೆ. ಗೇಟ್ ನಲ್ಲಿ ಆರಕ್ಷಕ ಸಿಪಾಯಿ (ಸೆಕ್ಯೂರಿಟಿ ಗಾರ್ಡ್) ನಮ್ಮ ಕಾರನ್ನು ಒಂದು ಕ್ಷಣ ನಿಲ್ಲಿಸಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾನೆ. ನನ್ನನ್ನು ಕರೆದುಕೊಂಡು ಹೋದ ಡ್ರೈವರ್ ಗೆ ಇದು ಗೊತ್ತಿದೆ - ಅವನು ಅದನ್ನು ತಿಳಿಸುತ್ತಾನೆ. (ಟ್ಯಾಕ್ಸಿ ಡ್ರೈವರ್ ಕನ್ನಡ ಬಲ್ಲವನು - ನಾನು ಅವನ ಜೊತೆ ಕನ್ನಡದಲ್ಲೇ ಮಾತಾಡಿಕೊಂಡು ಹೋಗಿದ್ದೇನೆ.) ಅಲ್ಲೇ ಇದ್ದ ಒಬ್ಬರು ಕ್ಲೀನರ್ ಹೆಂಗಸು ಟ್ಯಾಕ್ಸಿ ಡ್ರೈವರ್ ಗೆ ಮುರುಕಲು ಇಂಗ್ಲಿಷ್ ನಲ್ಲಿ ಪಾರ್ಕಿಂಗ್ ಎಲ್ಲಿದೆ ಎನ್ನುವುದನ್ನು ತಿಳಿಸುತ್ತಾರೆ.
ಘಟನೆ ಮೂರು. ನಮ್ಮ ಆಫೀಸ್ ಕ್ಯಾಂಟೀನ್ ನಲ್ಲಿ ಉಪಾಹಾರ ಮಾರಲು ಬರುವ ಒಂದು ಸಂಸ್ಥೆಯ ನೌಕರರು ಕೆಂಪು ಬಣ್ಣದ ಸಮವಸ್ತ್ರ ಧರಿಸಿಕೊಂಡು ಯಾವಾಗಲೂ ಟಿಪ್-ಟಾಪ್ ಆಗಿರುತ್ತಾರೆ. ಅಲ್ಲಿರುವ ಒಬ್ಬನಿಗೆ ಅದೇನೋ ಹಿಂದಿ ಕಲಿಯುವ ಹುಮ್ಮಸ್ಸು ಬಂದಿದೆ. ನಾನು ಕನ್ನಡದಲ್ಲಿ ಮಾತಾಡಿದರೂ ಹಿಂದಿಯಲ್ಲಿ ಉತ್ತರಿಸಲು ಪ್ರಯತ್ನಿಸುತ್ತಿದ್ದಾನೆ.
ಘಟನೆ ನಾಲ್ಕು. ನಮ್ಮ ಮನೆಯ ನೀರಿನ ಫಿಲ್ಟರ್ ಕೆಟ್ಟಿದೆ. ದುರಸ್ತಿಗಾಗಿ ನಾನು ಅವರ ಸರ್ವಿಸ್ ಸೆಂಟರ್ ಗೆ ಫೋನ್ ಮಾಡುತ್ತೇನೆ. ನಾನು "ಕನ್ನಡದಲ್ಲಿ ಮಾತಾಡಲು" ಮೂರನೇ ನಂಬರಿನ ಬಟನ್ ಒತ್ತುತ್ತೇನೆ. ಬಹಳ ಹೊತ್ತಿನ ನಂತರ ಮಾತಾಡುವ ಹೆಣ್ಣುದನಿ ನನ್ನ ಜೊತೆ ಇಂಗ್ಲಿಷ್ ನಲ್ಲಿ ಮಾತಾಡುತ್ತದೆ! ನಾನು ಇದೇಕೆ ಹೀಗೆಂದು ಆಕೆಯನ್ನು ಕೇಳಿದಾಗ ಧ್ವನಿ "ಸರ್, ಕನ್ನಡ ಮಾತಾಡುವವರು ಈಗ ಬಿಸಿಯಾಗಿದ್ದಾರೆ" ಎಂದು ಸಮಜಾಯಿಷಿ ಹೇಳುತ್ತದೆ. ನಾನು "ಇಲ್ಲ, ನನಗೆ ಕನ್ನಡದವರೇ ಬೇಕು" ಎಂದು ಸ್ವಲ್ಪ ಬಿರುಸಾಗೇ ಹೇಳುತ್ತೇನೆ. ನನಗೆ ಕಾಲ್ ಮಾಡಲಾಗುತ್ತದೆ ಎಂಬ ಭರವಸೆಯೊಂದಿಗೆ ಆಕೆ ಬೀಳ್ಕೊಡುತ್ತಾಳೆ. ಬಹಳ ಹೊತ್ತು ಕಾಲ್ ಬರದೇ ನಾನೇ ಮತ್ತೆ ಫೋನ್ ಮಾಡಬೇಕಾಗುತ್ತದೆ.
ಘಟನೆ ಐದು. ಮಾಲ್ ಒಂದರಲ್ಲಿ ಬಟ್ಟೆ ಕೊಳ್ಳಲು ಹೋದಾಗ ಕನ್ನಡದಲ್ಲಿ ಪ್ರಶ್ನಿಸಿದರೆ "ಅಯ್ಯೋ! ಇವರೇನು ಮಹಾ ವ್ಯಾಪಾರ ಮಾಡಬಹುದು?" ಎಂಬ ರೀತಿಯಲ್ಲಿ ನೋಡಿ ಬೇರೆ ಭಾಷೆ ಮಾತಾಡುವ ಗಿರಾಕಿಗಳತ್ತ ಒಲವು ತೋರುವ (ಕನ್ನಡದವರೇ ಆದ) ಕೆಲಸಗಾರರು.
ಘಟನೆ ಆರು. ಮಾಲ್ ಒಂದರಲ್ಲಿ ನಾನು ಗಮನಿಸಿದಂತೆ ಗಲ್ಲಾ ಪೆಟ್ಟಿಗೆಯಲ್ಲಿ ಮತ್ತು ಸೂಪರ್ ವೈಸರ್ ಆಗಿ ಕೆಲಸ ಮಾಡುವವರು ಎಲ್ಲರೂ ಪಕ್ಕದ ರಾಜ್ಯಗಳಿಂದ ಬಂದವರು. ಅವರ ಜೊತೆ ಕನ್ನಡಲ್ಲಿ ಮಾತಾಡಿದರೂ ಅವರು ಅಸಹಾಯರಾಗಿ "ಇಂಗ್ಲಿಷ್ ನಲ್ಲಿ ಮಾತಾಡಬಾರದೇ" ಎಂಬ ಹಾಗೆ ನಿಮ್ಮ ಕಡೆ ನೋಡುತ್ತಾರೆ.
* * *
ಮೇಲಿನ ಘಟನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತಾಡಿದರೆ ಮರ್ಯಾದೆ ಕಡಿಮೆ ಎಂದೇ? "ಮಾತೃಭಾಷೆಯಲ್ಲಿ ಕಲಿತರೆ ಒಳ್ಳೆಯದು" ಎನ್ನುವ ಮಾತು ಕೇಳುತ್ತಲೇ ಇರುತ್ತೇವೆ - ಇಲ್ಲಿ ಮಾತೆಯೇ ಬೇರೆ ಭಾಷೆ ಮಾತಾಡುತ್ತಿದ್ದಾಳೆ! ಮಗುವಿನ ಸ್ಪಷ್ಟವಾದ ಕನ್ನಡಕ್ಕೆ ಮುರುಕಲು ಇಂಗ್ಲಿಷ್ ಉತ್ತರ ಕೊಡುತ್ತಿದ್ದಾಳೆ! ಕ್ಲೀನರ್ ಹೆಂಗಸಿಗೆ ಸಮವಸ್ತ್ರ ತೊಟ್ಟ ಟ್ಯಾಕ್ಸಿ ಡ್ರೈವರ್ ಕನ್ನಡದವನು ಆಗಲು ಸಾಧ್ಯವಿಲ್ಲ ಎಂಬ ಪೂರ್ವಾಗ್ರಹವೇ? ಕ್ಯಾಂಟೀನ್ ನಲ್ಲಿ ದುಡಿಯುವ ಹುಡುಗನಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತಾಡಿದರೆ ಇನ್ನೂ ಒಳ್ಳೆಯ ಕೆಲಸ ಸಿಗಬಹುದು ಎಂಬ ಆಸೆ ಇರಬಹುದೇ? ಕನ್ನಡದಲ್ಲಿ ಮಾತ್ರ ಮಾತಾಡುವವರಿಗೆ ಸಂಬಳ ಕಡಿಮೆ ಸಿಕ್ಕುತ್ತದೆಯೇ? ಸರ್ವಿಸ್ ಸೆಂಟರ್ ಗೆ ಫೋನ್ ಮಾಡುವವರು ಹೆಚ್ಚು ಕನ್ನಡದಲ್ಲಿಯೇ ಮಾತಾಡುತ್ತಾರೆಯೇ? ಹಾಗಾದರೆ ಇನ್ನಷ್ಟು ಕನ್ನಡದಲ್ಲಿ ಮಾತಾಡುವ ಏಜೆಂಟರನ್ನು ಯಾಕೆ ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ? ಅಥವಾ ಕನ್ನಡದಲ್ಲಿ ಸರ್ವಿಸ್ ಬೇಡುವವರು ಬಹಳ ಕಡಿಮೆಯಾದ್ದರಿಂದ ಒಬ್ಬರೇ ಏಜೆಂಟ್ ಎಲ್ಲರಿಗೂ ಉತ್ತರಿಸುತ್ತಾರೆಯೇ? ಬೆಂಗಳೂರಿನಲ್ಲಿ ಮಾತ್ರ ಹೀಗೇ? ನಮ್ಮ ಇತರ ಜಿಲ್ಲೆಗಳಲ್ಲಿ ಸ್ಥಿತಿ ಬೇರೆಯಾಗಿದೆಯೇ?
ಪ್ರಶ್ನೆಗಳು ತುಂಬಾ ಇವೆ. ಉತ್ತರಗಳು ಹೊಳೆಯುತ್ತಿಲ್ಲ. ಈ ಕಡೆ "ಕನ್ನಡ ಮಾಧ್ಯಮ"ದಲ್ಲಿ ಶಿಕ್ಷಣದ ಬಗ್ಗೆ ಚರ್ಚೆ ನಡೆಯುತ್ತಿದೆ.
ಕನ್ನಡ ಡಿಂಡಿಮವನ್ನು "ಬಾರಿಸುವ" ಬದಲು ನಾವು ಬಾರ್ ಮಾಡುತ್ತಿದ್ದೇವೆ ಅಂತ ನಿಮಗೂ ಅನ್ನಿಸುತ್ತಾ?
barred - preventing entry or exit or a course of action; "a barricaded street"; "barred doors"; "the blockaded harbor"
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ