ಸಮವಸ್ತ್ರ
ಸಿ. ಪಿ. ರವಿಕುಮಾರ್
ಅವತ್ತು ಬೆಸಸಂಖ್ಯಾದಿವಸ. ದೆಹಲಿಯಲ್ಲಿ ಬೆಸಸಂಖ್ಯೆಯ ಲೈಸೆನ್ಸ್ ಪ್ಲೇಟುಗಳಿಗೆ ಮಾತ್ರ ಓಡಾಡಲು ಅವಕಾಶ. ಯಶೋದಾನಂದನ್ ಗುಪ್ತಾನ ಕಾರ್ ಲೈಸೆನ್ಸ್ ಪ್ಲೇಟ್ ಸಮಸಂಖ್ಯೆಯದು. ಲೇಟಾಗಿ ಎದ್ದಿದ್ದರಿಂದ ಬಸ್ ಅಥವಾ ಮೆಟ್ರೋ ನೆಚ್ಚಿಕೊಳ್ಳುವಹಾಗಿಲ್ಲ. ಬಾಸ್ ಮೊದಲೇ ಇವನ ಮೇಲೆ ನಿಗಾ ಇಟ್ಟಿದ್ದಾನೆ. ಸಾಮಾನ್ಯವಾಗಿ "ಯಶ್" ಎಂದೇ ಅವನನ್ನು ಸಂಬೋಧಿಸುತ್ತಿದ್ದ ತಾಯಿ ಅವನನ್ನು "ಯಶೋದಾನಂದನ್ ಗುಪ್ತಾ, ನೀನು ಹೀಗೆ ತಡವಾಗಿ ಏಳೋ ಅಭ್ಯಾಸ ಯಾವತ್ತು ಬಿಡ್ತೀಯೋ ಅವತ್ತು ಉದ್ಧಾರವಾಗ್ತೀಯ!" ಎಂದು ಬೈದಳು. ಅವನಿಗೆ ತಲೆಯಲ್ಲಿ ಅದೇನೋ ಹೊಳೆಯಿತು. "ಅಮ್ಮಾ, ನಾನು ನಿನಗೆ ಹೇಳೋದು ಮರೆತೆ. ಗ್ಯಾಸ್ ಏಜೆನ್ಸಿಯ ಫೋನ್ ಬಂದಿತ್ತು. ಇವತ್ತು ತಕ್ಷಣ ಆಧಾರ್ ಕಾರ್ಡ್ ತರದೇ ಹೋದರೆ ಗ್ಯಾಸ್ ಸಪ್ಲೈ ಮಾಡೋದಿಲ್ಲವಂತೆ." ಆಕೆ ಇದನ್ನು ಕೇಳಿ ಸ್ತಂಭೀಭೂತಳಾಗಿ ನಿಂತುಬಿಟ್ಟಳು. "ಮೊದಲೇ ಯಾಕೆ ಹೇಳಲಿಲ್ಲ?" ಎಂದು ಬೈಯುತ್ತಾ ಬೇಗಬೇಗ ತಯಾರಾಗಿ "ಪೂರಿ-ಭಾಜಿ ಮಾಡಿಟ್ಟಿದ್ದೀನಿ. ತಿನ್ನದೇ ಹೋಗಬೇಡ!" ಎಂದು ನೆನಪಿಸಿ ಮನೆಯಿಂದ ಹೊರಗೆಬಿದ್ದಳು.
ಇದಾದ ಒಂದು ಗಂಟೆಯ ಸಮಯದಲ್ಲಿ ಸಮಸಂಖ್ಯೆಯ ಕಾರೊಂದು ಎಮ್‌ಎನ್‌ಕ್ಯೂ ಸಾಫ್ಟ್ ಕಚೇರಿಯ ಎದುರಿಗೆ ನಿಂತಿತು. ಯುವತಿಯೊಬ್ಬಳು ಕೆಳಗಿಳಿದಳು. ಬಾಬ್ ಕೂದಲು, ಕಣ್ಣಿಗೆ ಕನ್ನಡಕ, ದೊಡ್ಡ ಬಿಂದಿ, ಲಿಪ್ ಸ್ಟಿಕ್. ಚೂಡಿದಾರ್-ಕುರ್ತಾ. ಹೆಗಲಿಗೆ ಬ್ಯಾಗ್ ಮತ್ತು ಕೈಯಲ್ಲಿ ಒಂದು ಬ್ರೀಫ್ ಕೇಸ್ ಹಿಡಿದು ಆಕೆ ನಡೆದುಹೋಗುತ್ತಿದ್ದಾಗ ಅವಳು ಇತರ ಯುವತಿಯರಂತೆ ಹೈ-ಹೀಲ್ಡ್ ಶೂ ಧರಿಸದೆ ಗಂಡಸರು ಬಳಸುವಂಥ ಶೂ ಹಾಕಿಕೊಂಡಿದ್ದನ್ನು ಯಾರಾದರೂ ಸೂಕ್ಷ್ಮವಾಗಿ ನೋಡಿದರೆ ಗಮನಿಸಬಹುದಾಗಿತ್ತು. "ವಿಸಿಟರ್" ಎಂಬ ಕಡೆ ಹೋಗಿ ಆಕೆ ಅಲ್ಲಿದ್ದ ದೊಡ್ಡ ಕಡತದಲ್ಲಿ ತನ್ನ ಹೆಸರನ್ನು ಬರೆದು ಬೇಗಬೇಗ ಲಿಫ್ಟ್ ಕಡೆ ಹೆಜ್ಜೆ ಹಾಕಿದಳು. ರಿಸೆಪ್ಷನಿಸ್ಟ್ ಗುರ್ಜೀತ್ ಕೌರ್ ಕುತೂಹಲದಿಂದ ಹೊಸಮುಖದವಳ ಹೆಸರೇನೆಂದು ಕಡತದ ಕಡೆ ಕಣ್ಣು ಹಾಯಿಸಿದಳು. "ಇಷ್ಟು ಮಾಡರ್ನ್ ಆಗಿರೋ ಹುಡುಗಿಗೆ ಎಷ್ಟು ಹಳೇ ಕಾಲದ ಹೆಸರು - ಯಶೋದಾ!" ಎಂದು ಗೊಣಗಿದಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ