ರಾಗಿ ನೂಡಲ್ - ಒಂದು ಹರಟೆ



ಈಚೆಗಿನ ಅತ್ಯದ್ಭುತ ಇನ್ನೋವೇಶನ್ ಏನೆಂದು ಯಾರಾದರೂ ಕೇಳಿದರೆ ನನ್ನ ಉತ್ತರ ಸಿದ್ಧವಾಗಿದೆ. ರಾಗಿ ಶ್ಯಾವಿಗೆ! ಇದುವರೆಗೂ ನೀವು ಟ್ರೈ ಮಾಡದೇ ಇದ್ದರೆ ೨೦೧೬ರಲ್ಲಿ ಮಾಡುವರಾಗಿ ಮತ್ತು ತಿನ್ನುವರಾಗಿ. ಎಲ್ಲಾ ಜನಾನೂ ರಾಗಿ ತಿಂದರೆ ರಾಗಿ ಜನಾನುರಾಗಿಯಾಗದೇ ಇರುವುದೇ? ರಾಗ-ದ್ವೇಷ ಬೇಡ ಎಂದು ಮಕ್ಕಳಿಗೆ ಪಾಠ ಹೇಳಿಕೊಡುವರಲ್ಲಾ, ಅವರು ರಾಗಿ-ದ್ವೇಷವನ್ನೇಕೆ ಖಂಡಿಸುವುದಿಲ್ಲ? ರಾಗವೆಂದರೆ ಬಣ್ಣ. ರಾಗಿಗೆ ನಿಜವಾದ ಹೆಸರು ಕರಿ-ರಾಗಿ ಅಥವಾ ಕಪ್ಪು ಬಣ್ಣದ್ದು ಎಂದೇ ಎಂಬುದು ನನ್ನ ಊಹೆ. ಆದರೆ ರಾಗಿಗೆ ಕರಿಯ ಕಂಪನಿ ಇಷ್ಟವಾಗದೆ  ಸಾರಿನ ಸಾಂಗತ್ಯವೇ ಪ್ರಿಯವಾದಾಗ "ಕರಿ" ಬಿಟ್ಟುಹೋಗಿ ಬರೀ ರಾಗಿ ಉಳಿದಿರಬಹುದು. 

ರಾಗಿಯ ರಾಗವನ್ನು ನೋಡಿಯೇ ಅದಕ್ಕೆ "ಬೈಬೈ" ರಾಗ ಹಾಡುವ ಬೈರಾಗಿಗಳು ಎಂದಾದರೂ ರಾಗಿ ಶ್ಯಾವಿಗೆಯ ರುಚಿಯನ್ನು ಸವಿದರೆ - ಅದರಲ್ಲೂ ನನ್ನ ಹೆಂಡತಿ ಕೆಂಪು-ಹಳದಿ-ಹಸಿರು ಕ್ಯಾಪ್ಸಿಕಮ್ ಇತ್ಯಾದಿ ಬೆರೆಸಿ ಮಾಡುವ ಶ್ಯಾವಿಗೆಯ ರುಚಿಯನ್ನು ಸವಿದರೆ - ಮ್ಯಾಗಿಯನ್ನು ಮರೆತು ರಾಗಿಯನ್ನೇ ಧ್ಯಾನಿಸಿಯಾರು. ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಈ ಕೆಂಪು-ಹಸಿರು-ಹಳದಿಗಳ ವೈಭವ ನೋಡಿದವರಿಗೇ ಗೊತ್ತು! ಮುದ್ದಣನು ಕರಿಮಣಿಯ ಸರದಲ್ಲಿ ಕೆಂಪು ಹವಳವನ್ನು ಕೋದರೆ ಚೆನ್ನವೆಂದು ಮನೋರಮೆಗೆ ತಿಳಿಹೇಳಲಿಲ್ಲವೇ? ಆಗ ಅವನು ತನ್ನ ಹೆಂಡತಿ ಮನೋರಮೆಗೆ ರಾಗಿ-ಶ್ಯಾವಿಗೆಯಲ್ಲಿ ನೀನು ಒಂದಷ್ಟು ಕೆಂಪು ಕ್ಯಾಪ್ಸಿಕಮ್ ಬೆರೆಸಬಾರದೇ ಎಂದು ಸೂಚಿಸಿರಲೂ ಸಾಕು. ನನ್ನ ಮನೋರಮೆಯು ಹಾಗಲ್ಲ. ಅವಳು ಎಲ್ಲೋ ನೋಡಿದ ರೆಸಿಪಿಯ ಅಂದಚಂದಗಳನ್ನು ರಾಗಿ-ಶ್ಯಾವಿಗೆಯಲ್ಲೂ ಬಿಡಿಸಬಲ್ಲಳು. ರಾಗಿ-ಶ್ಯಾವಿಗೆಯ ಪ್ಯಾಕೆಟ್ ಮೇಲೆ ಇವಳ ರೆಸಿಪಿ ಮುದ್ರಿಸಿದರೆ ಖಂಡಿತವಾಗಿಯೂ ಮಾರಾಟಕ್ಕೆ ರಂಗೇರುವುದು. 

ಆಕಳು ಕಪ್ಪಾದರೂ ಹಾಲು ಕಪ್ಪೇ ಎನ್ನುವ ಗಾದೆ ಇದೆ. ರಾಗಿಶಾವಿಗೆ ಕಪ್ಪಾದರೂ ರುಚಿ ಸಪ್ಪೇ? ಎಂಬ ಹೊಸ ಗಾದೆಯನ್ನು ನಾನು ಸೂಚಿಸಬಯಸುತ್ತೇನೆ. ಕಪ್ಪ ನೂಡಲ್ಸ್ ಎಂಬ ನುಡಿಗಟ್ಟನ್ನು ರಾಗಿ ಶಾವಿಗೆಗೆ ಬಳಸಬಹುದಾಗಿತ್ತು ನೋಡಿ - ದುರ್ದೈವವಶಾತ್ ಅದಾರೋ ಇದನ್ನು ಕದ್ದುಬಿಟ್ಟಿರುವರು. ಇದು ರಾಗಿಗಾದ ಅನ್ಯಾಯವಲ್ಲದೆ ಬೇರಿನ್ನೇನು! ಇರಲಿ, ರಾಗಿಯು ಮಿಂಚಲು ಕಾಲ ಮಿಂಚಿಲ್ಲ. ಬಾಬಾ ರಾಮದೇವರಿಗೆ ನಾನು ಮಿಂಚೆ ಬರೆಯುತ್ತೇನೆ. ಅವರ ನೂಡಲಿನಲ್ಲಿ ರಾಗಿ ಬಳಸಿದರೆ ಖಂಡಿತಾ ಎಲ್ಲರೂ "ಈ ನೂಡಲ್ ನಲ್ಲಿ ಏನಿದೆ? ಏನಿದೆ?" ಎಂದು ಬೆರಗಾದಾರು. ರಾಗಿ ಶ್ಯಾವಿಗೆಯ ಘಮಘಮ ಪರಿಮಳ ಬರುತ್ತಿದ್ದರೆ ಪ್ರಾಣಾಯಾಮಕ್ಕೂ ಒಂದಷ್ಟು ವೇಗ ಬರುತ್ತದೆ. ಹೇಳಿಕೇಳಿ ರಾಗಿಯ ಇನ್ನೊಂದು ಹೆಸರೇ ರಾಮಧಾನ್ಯ. ರಾಮದೇವ ಬಾಬಾ ಅವರು ರಾಮಧಾನ್ಯವನ್ನು ಸ್ವಲ್ಪ ಧ್ಯಾನಿಸಬೇಕೆಂದು ನಾನು ಬರೆಯುತ್ತೇನೆ. ಮಾತೆತ್ತಿದರೆ ಚೇಂಜ್ ಡಾಟ್ ಆರ್ಗ್ ನವರು ಮಿಂಚೆ ಕಳಿಸಿ ಅದನ್ನು ಬದಲಾಯಿಸಿ, ಇದನ್ನು ಬದಲಾಯಿಸಿ ಎಂದು ದುಂಬಾಲು ಬೀಳುತ್ತಾರೆ - ನೂಡಲಿನಲ್ಲಿ ರಾಗಿಯನ್ನೇ ಬಳಸಿ ಎಂದು ನಾನು ಒಂದು ಅಭಿಯಾನ ಪ್ರಾರಂಭಿಸಲೇ ಎಂಬ ಯೋಚನೆಯಲ್ಲಿದ್ದೇನೆ. 

ಮ್ಯಾಗಿಯಲ್ಲಿ ಸೀಸವಿದ್ದಿತೋ ಇಲ್ಲವೋ ನಾನು ಕಾಣೆ. ಒಮ್ಮೆ ಸೀಸ ಇದೆ, ಒಮ್ಮೆ ಸೀಸ ಇಲ್ಲ ಎಂದು ಸೀಸಾ ಮಾದರಿಯಲ್ಲಿ ಸಾಗಿದ ಸಂಶೋಧನೆ ಕೊನೆಗೆ "ನೇ" (Nay) ಎಂದೇ ಮುಗಿಯಿತು. ಮ್ಯಾಗಿ ನೂಡಲ್ ಮತ್ತೆ ಮಾರುಕಟ್ಟೆಯಲ್ಲಿ ನೋಡಲ್ ಸಿಕ್ಕುತ್ತಿದೆ. ಮ್ಯಾಗಿಯಲ್ಲಿ ಏನಾದರೂ ಇರಲಿ, ರಾಗಿಯಲ್ಲಿ ಧಂಡಿಯಾಗಿ ಕಬ್ಬಿಣ ಇದೆಯಂತೆ. ಇದನ್ನು ಯಾವ ಅಂಜಿಕೆಯಿಲ್ಲದೆ ಪ್ಯಾಕೆಟ್ ಮೇಲೆ ರಾಜಾರೋಷವಾಗಿ ಮುದ್ರಿಸಲಿ!  "ಐರನ್ ಮ್ಯಾನ್" ನಂತೆ ಆಗಬೇಕೇ? ರಾಗಿ ನೂಡಲ್ಸ್ ತಿನ್ನಿ ಎನ್ನುವ ಜಾಹೀರಾತನ್ನು ಕಲ್ಪಿಸಿಕೊಳ್ಳಿರಿ. ರಾಗಿ ಶ್ಯಾವಿಗೆಯನ್ನು ತಿನ್ನುತ್ತಿರುವ ಐರನ್-ಮ್ಯಾನ್ ಚಿತ್ರವನ್ನು ಕಲ್ಪಿಸಿಕೊಳ್ಳಿರಿ. ಬಕೆಟ್ ಪಾಪ್-ಕಾರ್ನ್ ಬದಲು ಥಿಯೇಟರಿನಲ್ಲಿ ಒಂದು ಕಪ್ ರಾಗಿ ನೂಡಲ್ ಕೈಯಲ್ಲಿದ್ದರೆ ಹೇಗಿದ್ದೇತೆಂದು ಕಲ್ಪಿಸಿಕೊಳ್ಳಿರಿ!

ನಿಮ್ಮ ಕಲ್ಪನಾಲೋಕಕ್ಕೆ ನಾನು ಭಂಗ ತರುವುದಿಲ್ಲ. ನನ್ನ ಏಕಾಗ್ರತೆಗೆ ಭಂಗ ಬರುತ್ತಿದೆ. ಅಡಿಗೆಮನೆಯಿಂದ ಏನೋ ಸುವಾಸನೆ ಬರುತ್ತಿದೆ!

(ಕೆ.ಎನ್.ಎನ್. ಮತ್ತು ಎಚ್.ಎಸ್.ಎಮ್.ಆರ್. ಅವರಿಗೆ, ಹೊಸವರ್ಷದ ಶುಭಾಶಯದೊಂದಿಗೆ)

-- ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)