ಚಳಿಯಲ್ಲೊಂದು ಬೆಳಗ್ಗೆ

ಚಳಿಯಲ್ಲೊಂದು ಬೆಳಗ್ಗೆ 
Woman Sleeping

ಸಿ ಪಿ ರವಿಕುಮಾರ್ 



"ಏಳು, ಅದು ಯಾಕೆ ಕಿಟಕಿಗಳನ್ನೆಲ್ಲಾ ಹಾಗೆ ಮುಚ್ಚಿ  ಮಲಕ್ಕೊಂಡಿದೀಯಾ?"
"..."
"ಚಳಿ ನನಗಿಲ್ಲವಾ? ನನಗೂ ಹೊದ್ದುಗೊಂಡು ಮಲಕ್ಕೋಬೇಕು ಅಂತ ಆಸೆ ಆಗೋಲ್ಲವಾ?" ಎಂದು ಹೊದಿಕೆಯನ್ನು ಮೇಲಕ್ಕೆ ಎತ್ತಿದೆ.
"..."
"ಯಾಕೆ? ಮೈ ಹುಷಾರಿಲ್ವಾ?"
"..."
"ಏನಾಯಿತು? ಏಳು, ಕಿಟಕಿ ತೆಗೆದು ಕೆಲಸ ಶುರು ಮಾಡು ..."
"..."
"ಏಯ್! ನಿನಗೇ ಹೇಳ್ತಾ ಇರೋದು ..."
"..."
"ತಾಳು, ನಿನಗೆ ಕಚಗುಳಿ ಕೊಟ್ಟರೆ ..."
"..."
"ಏಯ್! ಬೂಟ್ ತರಲಾ?"
"..."
"ಅಯ್ಯೋ! ಏನಾಯಿತು? ಸರಿ, ನಡಿ ಡಾಕ್ಟರ್ ಹತ್ತಿರ!"

ಡಾಕ್ಟರ್ ಹತ್ತಿರ ಕೈಯಲ್ಲಿ ಅನಾಮತ್ತು ಎತ್ತಿಕೊಂಡೇ ಹೋಗಬೇಕಾಯಿತು.  ಎದೆ ಹೊಡಕೊಳ್ಳತೊಡಗಿತು.

"ಡಾಕ್ಟರ್, ನೋಡಿ, ಯಾಕೋ ಮುಖದಲ್ಲಿ ಸ್ವಲ್ಪವೂ ಕಳೆಯೇ ಇಲ್ಲ. ನೆನ್ನೆ ಮಲಗೋ ಮುಂಚೆ ಏನೂ ತೊಂದರೆ ಇರಲಿಲ್ಲ. ಇವತ್ತು ಬೆಳಗ್ಗೆ ಮೇಲೆ ಏಳೋದಕ್ಕೇ ರೆಡಿ ಇಲ್ಲ!"

"ನೀವು ಸ್ವಲ್ಪ ಸಮಾಧಾನವಾಗಿ ಕೂತುಕೊಳ್ಳಿ, ನೋಡೋಣ."

"ಅಯ್ಯೋ, ಏನಾದರೂ ಮೇಜರ್ ಪ್ರಾಬ್ಲಮ್ ಇದೆಯಾ ಡಾಕ್ಟ್ರೇ?!"

"ನನಗೆ ನೋಡೋದಕ್ಕೆ ಬಿಡ್ತೀರಾ?"

"ಸಾರಿ."

ಡಾಕ್ಟರ್ ಮುಟ್ಟಿದ ಕೂಡಲೇ ಅದೇನು ಮಾಯೆಯೋ ಎಂಬಂತೆ ಇದುವರೆಗೂ ಸಂಪೂರ್ಣವಾಗಿ ಕಾಂತಿರಹಿತವಾದ ಮುಖದಲ್ಲಿ ಒಮ್ಮೆಲೇ ಜ್ಯೋತಿಯೊಂದು ಬೆಳಗಿತು.

"ಹುರ್ರಾ! ಡಾಕ್ಟರೇ! ನಿಮ್ಮ ಕೈಗುಣ ದೊಡ್ಡದು! ನಾನು ಕೈಬಿಟ್ಟಂತೆ ಅಂತಲೇ ಅಂದುಕೊಂಡಿದ್ದೆ!"

ಜ್ಯೋತಿಯು ಕ್ರಮೇಣ ಮುಖದ ತುಂಬಾ ಹರಡಿ "Resuming Windows" ಎಂಬ ಸಂದೇಶವು ಮೂಡಿತು. ಕಿಟಕಿಗಳು ಒಂದೊಂದೇ ತೆರೆದವು.  ನಾನು ಉಸಿರಾಡಿದೆ.

"ಹೈಬರ್ನೇಷನ್ ಮೋಡಿಗೆ ಹೋಗಿತ್ತು," ಎಂದರು ಡಾಕ್ಟ್ರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)