ಮೀನು ಮತ್ತು ಕೊಳ



ಸಿ ಪಿ ರವಿಕುಮಾರ್

ಮೀನು ವಿಲವಿಲ ಒದ್ದಾಡುತ್ತಿತ್ತು. ಕೊಳದ ಕಡೆ ದೈನ್ಯದಿಂದ ನೋಡುತ್ತಿತ್ತು. ಆಗ ಅಲ್ಲಿಗೆ ಬಂದ ಮಾಧ್ಯಮ ವರದಿಗಾರ ಅದರ ಚಿತ್ರ ತೆಗೆಯತೊಡಗಿದ. ಮೀನು ಆಘಾತಗೊಂಡು ಅವನ ಕಡೆ ನೋಡಿತು. "ನಾನೇನು ಮಾಡಲಿ? ಇದು ನನ್ನ ಕರ್ಮ. ನಾನೇನಿದ್ದರೂ ವರದಿಗಾರ. ನೀನು ಚಿಂತೆ ಮಾಡಬೇಡ. ನಾಳೆ ದೊಡ್ಡ ಅಕ್ಷರಗಳಲ್ಲಿ ವರದಿ ಬರುತ್ತದೆ. ಹಿಂದುಳಿದ ವರ್ಗದ ಮೀನುಗಳನ್ನು ಕೊಳದಿಂದ ಹೊರಗೆ ಹಾಕಿದ ತಿಮಿಂಗಿಲಗಳು." ಆಗ ಅಲ್ಲಿಗೆ ಒಬ್ಬ ರಾಜಕಾರಣಿ ಬಂದ. ಮೀನಿನ ಜೊತೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದ. ಮೀನು ಇನ್ನಷ್ಟು ಆಘಾತಗೊಂಡು ಅವನ ಕಡೆ ನೋಡಿತು. ಈಗ ಮಾಧ್ಯಮದವನು ಚೀಲದಿಂದ ಕ್ಯಾಮೆರಾ ತೆಗೆದು "ಸರ್, ಏನಾದರೂ ಸೌಂಡ್ ಬೈಟ್ಸ್ ಕೊಡಿ," ಎಂದ. ಸ್ವಲ್ಪ ಹೊತ್ತಿನ ನಂತರ ಗರಿಮುರಿಯಾದ ಖಾದೀ ಜುಬ್ಬಾ, ಗಡ್ಡ ಮತ್ತು ದೊಡ್ಡ ಸೈಜಿನ ಕನ್ನಡಕ ತೊಟ್ಟವನೊಬ್ಬ ಬಂದ. ಅವನೊಂದಿಗೆ ಬೆಲೆಬಾಳುವ ಖಾದೀ ಸೀರೆಯನ್ನುಟ್ಟ ಒಬ್ಬಾಕೆಯೂ ಬಂದಳು. ಅವರು ಮೀನಿನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. "ನೋಡು, ಇದು ಈ ದೇಶದ ದುರಂತ. ಇಲ್ಲಿ ಮೀನುಗಳನ್ನು ಅದೆಷ್ಟು ಸಾವಿರ ವರ್ಷಗಳಿಂದ ಹೀಗೆ ಶೋಷಣೆ ಮಾಡಲಾಗುತ್ತಿದೆಯೋ! ಅದರಲ್ಲೂ ಹೆಣ್ಣು ಮೀನುಗಳನ್ನಂತೂ ವಿಶೇಷವಾಗಿ ಶೋಷಿಸಲಾಗಿದೆ. ನಿನ್ನ ಪಿಎಚ್.ಡಿ. ಪ್ರಬಂಧದಲ್ಲಿ ನೀನು ಇದನ್ನು ಕುರಿತು ಬರೆಯಬೇಕು." ಎಂದು ಗಡ್ಡ ಧರಿಸಿದವನು ಹೇಳುತ್ತಿದ್ದುದನ್ನು ಆಕೆ ತನ್ನ ಪಾರ್ಕರ್ ಪೆನ್ ಬಳಸಿ ಚಾಚೂ ತಪ್ಪದೆ ನೋಟ್ ಮಾಡಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಒಬ್ಬ ಹುಡುಗ ಅಲ್ಲಿಗೆ ಆಡುತ್ತಾ ಬಂದವನು ಮೀನಿನ ದುರ್ಗತಿ ನೋಡಿ ಅದನ್ನೆತ್ತಿ ಕೊಳದಲ್ಲಿ ಹಾಕಲು ಮುಂದಾದ. ಹಿಂದೆ ಬಂದವರೆಲ್ಲರೂ ತಕ್ಷಣ ಅವನನ್ನು ಕೊಳದಲ್ಲಿ ನೂಕಿ ಏನೂ ಆಗದವರಂತೆ ತಮ್ಮ ಕೆಲಸ ಮುಂದುವರೆಸಿದರು. ಮೀನು ವಿಲವಿಲ ಒದ್ದಾಡುತ್ತಿತ್ತು.

- ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)