ಸರೋವರ ತ್ಯಜಿಸಿದ ಮೀನು ಮಕರಮಿಲನಕ್ಕೆ ಬಂದಂತೆ

ಸಿ. ಪಿ. ರವಿಕುಮಾರ್ 


"ನಂದನಂದನ ದಿಠು ಪಡೆಯಾ ಮಾಯಿ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು. ಲತಾ ಮಂಗೇಶ್ಕರ್ ಇದನ್ನು ಹಾಡಿದ್ದಾರೆ. ನಿಮಗೆ ಅಂತರ್ಜಾಲದ ಮೇಲೆ ರೆಕಾರ್ಡಿಂಗ್ ಸಿಕ್ಕುತ್ತದೆ.   ಈ ಭಜನೆಯಲ್ಲಿ ಮೀರಾಬಾಯಿ ಕೃಷ್ಣನನ್ನು ಕುರಿತು ತನಗಿರುವ ಅಪೂರ್ವ ಆಕರ್ಷಣೆಯ ಕಾರಣವನ್ನು ತಿಳಿಸುತ್ತಾಳೆ. ನಂದನಂದನ ಕೃಷ್ಣನ ಮೈಬಣ್ಣ ಕಪ್ಪು.  ತಲೆಯ ಮೇಲೆ ಓರೆಯಾಗಿಟ್ಟ ನವಿಲುಗರಿಯ ಚಂದ್ರಕಿರೀಟ! ಹಣೆಯ ಮೇಲೆ ಕೇಸರಿ ತಿಲಕ.  ಅವನನ್ನು ಕಂಡಾಗಿನಿಂದ ತಾನು ಅವನಿಗೆ ಆಕರ್ಷಿತಳಾಗಿ ಲೋಕದ ಲಜ್ಜೆಯನ್ನು ಕಿತ್ತೆಸೆದಿದ್ದೇನೆ ಎಂದು ಮೀರಾ ತನ್ನ ತಾಯಿಯಲ್ಲಿ ತೋಡಿಕೊಳ್ಳುತ್ತಿದ್ದಾಳೆ.  ಇಲ್ಲಿ "ತಾಯಿ" ಎಂದರೆ ಅವಳ ಸ್ವಂತ ತಾಯಿಯೇ ಇರಬೇಕಾಗಿಲ್ಲ, ಅವಳನ್ನು ಕರುಣೆಯಿಂದ ಮಾತಾಡಿಸಿದ ಬೇರೆ ಯಾರೇ ಆಗಿರಬಹುದು.   ಕೃಷ್ಣನ ಕಿವಿಯಲ್ಲಿರುವ ಕುಂಡಲದ ಬೆಳಕು ಅವನ ಕೆನ್ನೆಯ ಮೇಲೆ ಪ್ರತಿಫಲಿಸಿದಾಗ ತಾನು ಸರೋವರವನ್ನು ತ್ಯಜಿಸಿ ಮೊಸಳೆಯನ್ನು ಸಂಧಿಸಲು ತಾನೇ ಬಂದ ಮೀನಿನಂತೆ ಎಂಬ ಮೀರಾಬಾಯಿಯ ಉಪಮೆ ತುಂಬಾ ಸುಂದರವಾಗಿದೆ.  ತನಗೆ ಯಾರನ್ನು ಕೊಟ್ಟು ಮದುವೆ ಮಾಡಿದರೋ ಅವನೊಂದಿಗೆ ಬಾಳ್ವೆ ಮಾಡುವುದು ಮೀನು ಸರೋವರದಲ್ಲಿ ಈಜಿದಷ್ಟೇ ಸಹಜ.  ಆದರೆ ತಾನು ಅದೆಲ್ಲವನ್ನೂ ಬಿಟ್ಟು ಕೃಷ್ಣನಲ್ಲಿ ಅನುರಕ್ತಿ ಹೊಂದಿದ್ದೇನೆ! ಇದರಿಂದ ತನಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅರಿವಿದ್ದರೂ ಮೀರಾ ಕೃಷ್ಣನ ಆಕರ್ಷಣೆಯನ್ನು ಮೀರಲಾರಳು! 

ಈ ಭಜನೆಯ ಸರಳ ಅನುವಾದವನ್ನು ಕೆಳಗೆ ಕೊಟ್ಟಿದೆ.  

ನಂದ ನಂದನ ಶಾಮನ ಮೇಲೆ 
ಎಂದು ಬಿದ್ದಿತೋ ದೃಷ್ಟಿ, ಓ ಅಮ್ಮ! 
ಕಿತ್ತೆಸೆದಿರುವೆ ಲೋಕದ ಲಜ್ಜೆ, 
ಕಳಕೊಂಡಿರುವೆ ಇಹದ ಪರಿವೆಯನ್ನ  

ಏನು ಹೇಳಲಿ ಅವನ ನವಿಲುಗರಿಯ ಚಂದ್ರಕಿರೀಟ! 
ನೋಡಲು ಕಣ್ಣು ಸಾಲದು ಹಣೆಗಿಟ್ಟ ಕೇಸರಿ ತಿಲಕ !
ಕೆನ್ನೆ ಮೇಲೆ ಕುಣಿದಾಗ ಕಿವಿಯ ಕುಂಡಲದ ಬೆಳಕು  
ಮೀನು ಸರೋವರವನ್ನು ಬಿಟ್ಟು  ಮಕರಮಿಲನಕ್ಕೆ ಬಂತು!

ಕುಣಿಯುತ್ತಾ ಸೆಳೆದಾಗ ವಿಶ್ವವನ್ನೇ 
ನಮ್ಮ ನಟನಾಲೋಲ ಈ ವೇಷ ಧರಿಸಿ 
ತನ್ನನ್ನೇ  ಬಲಿಗೊಟ್ಟಳು ಗಿರಿಧರನ ಚರಣಕ್ಕೆ  
ಮೀರಾ ಎಂಬ ದಾಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)