ಹರೀಶ್ ನಂಜಪ್ಪ ಅವರಿಗೆ

ಹರೀಶ್ ನಂಜಪ್ಪ ಅವರಿಗೆ 

೧೬-೨-೧೬ : ಸಮತೋಲನವುಳ್ಳ ದಿನಾಂಕ ಅಲ್ಲವೇ? ಆದರೆ ಹರೀಶ್ ನಂಜಪ್ಪ ಅವರಿಗೆ ಈ ದಿವಸ ಶುಭಕರವಾಗಲಿಲ್ಲ. ರಸ್ತೆ ಅಪಘಾತದಲ್ಲಿ ಅವರು ಭೀಕರ ರೀತಿಯಲ್ಲಿ ಸಾವನ್ನಪ್ಪಿದರು. ಅವರ ದೇಹ ಎರಡು ತುಂಡುಗಳಾಗಿ  ಆಚೀಚೆ ಬಿದ್ದಿತ್ತು. ಜನ ಅದನ್ನು ಚಿತ್ರೀಕರಿಸಿಕೊಂಡು ನಿಂತರು. ಕೊನೆಗೊಬ್ಬ ಕರುಣಾಳು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ದ. ದಾರಿಯಲ್ಲಿ ಅವರು ಮಾತಾಡುತ್ತಿದ್ದರು. "ನಾನು ಬದುಕಿ ಉಳಿಯುವುದಿಲ್ಲ, ನನ್ನ ಕಣ್ಣುಗಳನ್ನು ದಾನ ಮಾಡಿ," ಎಂದು ತಮ್ಮ ಅಂತಿಮ ಇಚ್ಛೆ ವ್ಯಕ್ತ ಪಡಿಸಿದರು.  ಅವರ ಚೇತನಕ್ಕೆ ಇದೊಂದು ಶ್ರದ್ಧಾಂಜಲಿ.  


ಸಿ. ಪಿ. ರವಿಕುಮಾರ್ 



ನಮ್ಮನ್ನು ಕ್ಷಮಿಸಿ ಹರೀಶ್
ನಮಗೆ ವಿಪರೀತ ತರಾತುರಿ
ಇಪ್ಪತ್ತೊಂದನೇ ಶತಮಾನದಲ್ಲಿ
ಹಾಗಿರುತ್ತದೆ ಎದೆ ಉರಿ

ಯಾರಿಗೂ ನಾವು ನಿಲ್ಲುವುದಿಲ್ಲ
ಇದೋ ಹೇಳುತ್ತೇವೆ ಸಾರಿಸಾರಿ
ಗಂಟೆಗೆ ಎಂಬತ್ತು ವೇಗದಲ್ಲಿ
ನಮ್ಮದು ಮುಕ್ತ ಹೆದ್ದಾರಿ

ವೇಗವಾಗಿ ಹೊರಟಿದ್ದೇವೆ
ಮುಟ್ಟಬೇಕಾಗಿದೆ ಗುರಿ
ಯಾವುದು ಗುರಿ ಎಂಬುದೆಲ್ಲ
ಕಲ್ಪನೆಯ ನವಿಲುಗರಿ!  

ವೇಗವಾಗಿ ದಾಟಲಾರದ
ಮುದುಕರು ಮಕ್ಕಳು-ಮರಿ
ಕಾಯುತ್ತಿರಿ ಹಹ್ಹಹ್ಹ!  
ಹಕ್ಕು ನಮ್ಮದೀಗ, ಸಾರಿ!

ನಮ್ಮನ್ನು ಕ್ಷಮಿಸಿ ಹರೀಶ್
ನಮಗಿದೆ ವಿಪರೀತ ತರಾತುರಿ
ಇಪ್ಪತ್ತೊಂದನೇ ಶತಮಾನದಲ್ಲಿ
ಹಾಗಿರುತ್ತದೆ ಎದೆ ಉರಿ

ನಮ್ಮ ಆತುರಕ್ಕೆ ಬಲಿಯಾಗಿ
ಎರಡು ತುಂಡಾಗಿ ಹೋದಿರಿ
ಚಿಂತಿಸದಿರಿ ಶೇರ್ ಮಾಡಿದೆವು
ನಿಮ್ಮ ನೋವು ಚಿತ್ರ-ಮಂಜರಿ

ನೋಡಿ ನಿಮಗಿಂತ ಭಿನ್ನವಲ್ಲ
ಹರೀಶ್ ನಮ್ಮ ಪರಿ
ಎಡಕ್ಕೊಂದು ಬಲಕ್ಕೊಂದು
ಬಿದ್ದಿದ್ದೇವೆ ಸರಾಸರಿ

ಧನ್ಯವಾದಗಳು ನಿಮಗೆ ಹರೀಶ್
ನೇತ್ರಗಳನ್ನು ದಾನ ಮಾಡಿದಿರಿ
ನಿಮ್ಮ ದೃಷ್ಟಿಯಿಂದ ನೋಡುವಷ್ಟು
ನಮಗಿಲ್ಲ ವ್ಯವಧಾನ, ಸಾರಿ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)