ನಡುರಾತ್ರಿಯ ಪರಿಚಯ
ಕವಿತೆ ಓದುವ ಮುನ್ನ: ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಮುಖ ಅಮೆರಿಕನ್ ಕವಿ. ಈ ಸಾನೆಟ್ಟಿನಲ್ಲಿ ಅವನು ಒಂದು ಘಟನೆಯ ಚಿತ್ರಣವನ್ನು ನೀಡಿದ್ದಾನೆ. ಘಟನೆಯ ವಿವರಗಳು ಸ್ಪಷ್ಟವಾಗಿಲ್ಲ. ಮಳೆ ಬೀಳುತ್ತಿರುವ ಒಂದು ರಾತ್ರಿ. ಯಾವುದೋ ಕಾರಣಕ್ಕಾಗಿ ನಾಯಕ ಮನೆಯಿಂದ ಹೊರಗೆ ಹೊರಟು ಬಂದಿದ್ದಾನೆ. ಮನೆಯಲ್ಲಿ ನಡೆದ ಯಾವುದೋ ಅಹಿತಕರ ಘಟನೆಯಿಂದ ಅವನ ಮನಸ್ಸು ಪ್ರಕ್ಷುಬ್ಧವಾಗಿರಬಹುದು. ಹೀಗೆ ಹೊರಟುಬಂದವನು ಬಹಳ ದೂರದವರೆಗೂ ಮಳೆಯಲ್ಲೇ ನಡೆದು ನಗರದ ತುದಿಯವರೆಗೂ ಹೋಗಿನಿಂತಿದ್ದಾನೆ. ಕಾವಲುಗಾರ ಇವನನ್ನು ಅನುಮಾನದ ದೃಷ್ಟಿಯಿಂದ ನೋಡಿದಾಗ ಸರೀಕನಾದ ಇವನಿಗೆ ಏನೂ ತೋಚದೆ ಮುಖ ಕೆಳಗೆ ಹಾಕಿದ್ದಾನೆ. ತನ್ನ ಹೆಜ್ಜೆಯ ಸಪ್ಪಳ ತನಗೇ ಅಸಹನೀಯವೆನ್ನಿಸಿ ಸ್ವಲ್ಪಹೊತ್ತು ಸುಮ್ಮನೆ ನಿಂತುಬಿಡುತ್ತಾನೆ. ನಗರದ ಅತ್ಯಂತ ದುಃಖದ ಬೀದಿಗಳ ಮೂಲಕ ಹಾದುಹೋಗುವಾಗ ಅವನಿಗೆ ತನ್ನ ದುಃಖ ಅಂಥ ದೊಡ್ಡದೇನೂ ಅಲ್ಲ ಎನ್ನಿಸಿರಬಹುದು. ದೂರದಲ್ಲೆಲ್ಲೋ ಅವನಿಗೆ ಒಂದು ಕರೆ ಕೇಳುತ್ತದೆ. ಅವನಿಗೆ ವಿದಾಯ ಹೇಳಲು ಹೊರಟ ಕರೆಯಲ್ಲ; ಅವನನ್ನು ಮರಳಿ ಬಾ ಎಂದು ಕೂಗುವ ಕರೆಯೂ ಅಲ್ಲ. ದೂರದಲ್ಲಿ ಅವನಿಗೆ ಗಡಿಯಾರದ ಗೋಪುರ ಕಾಣುತ್ತದೆ. ಬಹುಶಃ ಅವನಿಗೆ ಕೇಳಿದ ಕರೆಯು ಈ ಗಡಿಯಾರದ ಗಂಟೆಯೇ ಇದ್ದರೂ ಇರಬಹುದು. "ಮನೆಗೆ ಮರಳು" ಎಂದು ಅದು ಹೇಳುತ್ತಿದೆಯೇ? "ಇಲ್ಲ, ಹೊರಡು" ಎಂದು ಅದು ಹೇಳುತ್ತಿದೆಯೇ? ಇದು ಯಾವುದೂ ಅಲ್ಲ. ಸರಿಯಾದ ಕಾಲ ಎನ್ನುವುದು ತನ್ನ ಮನ