ನಡುರಾತ್ರಿಯ ಪರಿಚಯ



Image result for man standing near street lamp -pexels.com

ಕವಿತೆ ಓದುವ ಮುನ್ನ:

ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಮುಖ ಅಮೆರಿಕನ್ ಕವಿ.  ಈ ಸಾನೆಟ್ಟಿನಲ್ಲಿ ಅವನು ಒಂದು ಘಟನೆಯ ಚಿತ್ರಣವನ್ನು ನೀಡಿದ್ದಾನೆ. ಘಟನೆಯ ವಿವರಗಳು ಸ್ಪಷ್ಟವಾಗಿಲ್ಲ. ಮಳೆ ಬೀಳುತ್ತಿರುವ ಒಂದು ರಾತ್ರಿ. ಯಾವುದೋ ಕಾರಣಕ್ಕಾಗಿ ನಾಯಕ ಮನೆಯಿಂದ ಹೊರಗೆ ಹೊರಟು ಬಂದಿದ್ದಾನೆ.  ಮನೆಯಲ್ಲಿ ನಡೆದ ಯಾವುದೋ ಅಹಿತಕರ ಘಟನೆಯಿಂದ ಅವನ ಮನಸ್ಸು ಪ್ರಕ್ಷುಬ್ಧವಾಗಿರಬಹುದು. ಹೀಗೆ ಹೊರಟುಬಂದವನು ಬಹಳ ದೂರದವರೆಗೂ ಮಳೆಯಲ್ಲೇ ನಡೆದು ನಗರದ ತುದಿಯವರೆಗೂ ಹೋಗಿನಿಂತಿದ್ದಾನೆ. ಕಾವಲುಗಾರ ಇವನನ್ನು ಅನುಮಾನದ ದೃಷ್ಟಿಯಿಂದ ನೋಡಿದಾಗ ಸರೀಕನಾದ ಇವನಿಗೆ ಏನೂ ತೋಚದೆ ಮುಖ ಕೆಳಗೆ ಹಾಕಿದ್ದಾನೆ. ತನ್ನ ಹೆಜ್ಜೆಯ ಸಪ್ಪಳ ತನಗೇ ಅಸಹನೀಯವೆನ್ನಿಸಿ ಸ್ವಲ್ಪಹೊತ್ತು ಸುಮ್ಮನೆ ನಿಂತುಬಿಡುತ್ತಾನೆ.   ನಗರದ ಅತ್ಯಂತ ದುಃಖದ ಬೀದಿಗಳ ಮೂಲಕ ಹಾದುಹೋಗುವಾಗ ಅವನಿಗೆ ತನ್ನ ದುಃಖ ಅಂಥ ದೊಡ್ಡದೇನೂ ಅಲ್ಲ ಎನ್ನಿಸಿರಬಹುದು. ದೂರದಲ್ಲೆಲ್ಲೋ ಅವನಿಗೆ ಒಂದು ಕರೆ ಕೇಳುತ್ತದೆ. ಅವನಿಗೆ ವಿದಾಯ ಹೇಳಲು ಹೊರಟ ಕರೆಯಲ್ಲ; ಅವನನ್ನು ಮರಳಿ ಬಾ ಎಂದು ಕೂಗುವ ಕರೆಯೂ ಅಲ್ಲ. ದೂರದಲ್ಲಿ ಅವನಿಗೆ ಗಡಿಯಾರದ ಗೋಪುರ ಕಾಣುತ್ತದೆ. ಬಹುಶಃ ಅವನಿಗೆ ಕೇಳಿದ ಕರೆಯು ಈ ಗಡಿಯಾರದ ಗಂಟೆಯೇ ಇದ್ದರೂ ಇರಬಹುದು. "ಮನೆಗೆ ಮರಳು" ಎಂದು ಅದು ಹೇಳುತ್ತಿದೆಯೇ? "ಇಲ್ಲ, ಹೊರಡು" ಎಂದು ಅದು ಹೇಳುತ್ತಿದೆಯೇ? ಇದು ಯಾವುದೂ ಅಲ್ಲ. ಸರಿಯಾದ ಕಾಲ ಎನ್ನುವುದು ತನ್ನ ಮನಸ್ಸಿನ ಸ್ಥಿತಿ, ಅಷ್ಟೇ ಎಂಬ ನಿರ್ಧಾರಕ್ಕೆ ನಾಯಕ ಬರುತ್ತಾನೆ. ನಾಯಕ ದುಡುಕಿ ಮನೆಯನ್ನು ಬಿಟ್ಟು ಹೊರಟನೆ? "ಮಳೆಯಲ್ಲೇ ಹಿಂದಿರುಗಿದವನಿಗೆ" ಎಂಬ ಸಾಲು ನೋಡಿದಾಗ ನಾಯಕ ದುಡುಕಲಿಲ್ಲ ಎಂಬ ಸಂಶಯ ಬರುತ್ತದೆ. ಮನೆಯನ್ನು ಬಿಟ್ಟು ಹೊರಟ ಗೌತಮ ಬುದ್ಧನ ಮನಸ್ಸಿನಲ್ಲೂ ಇಂಥ ಹೊಯ್ದಾಟ ಉಂಟಾಗಿರಬಹುದಲ್ಲವೇ?


ಮೂಲ: ರಾಬರ್ಟ್ ಫ್ರಾಸ್ಟ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ನಡುರಾತ್ರಿಯ ಪರಿಚಯವು ಚೆನ್ನಾಗಿದೆ ನನಗೆ
ಮಳೆಯಲ್ಲಿ  ಹೊರಬಿದ್ದು ಮಳೆಯಲ್ಲೇ ಹಿಂದಿರುಗಿದವನಿಗೆ 
ದಾಟಿ ಬಂದಿರುವೆ ನಗರದ ಕಟ್ಟಕಡೆಯ ಸಾಲುದೀಪವನ್ನೂ  
ನಗರದ ಅತ್ಯಂತ ದಯನೀಯ ಬೀದಿಯನ್ನೂ ದೃಷ್ಟಿಸಿವೆ  ಕಣ್ಣು  
ರಾತ್ರಿ ಪಹರೆಗೆ ಹೊರಟ ಕಾವಲುಗಾರನ ಎದುರಿಗೆ   
ನತಶಿರನಾದೆ  ಪ್ರಶ್ನಿಸುವ ಕಣ್ಣಿಗೆ ಉತ್ತರಿಸಲಾಗದೆ; 
ಸ್ತಬ್ಧನಾಗಿ ನಿಂತೆ ಅಡಗಿಸಲೆಂದು ಹೆಜ್ಜೆಗಳ ಸದ್ದು
ದೂರದ ಬೀದಿಯಿಂದೆಲ್ಲೋ ಆರ್ತನಾದವೊಂದು ಮೇಲೆದ್ದು 
ಅರ್ಧಕ್ಕೇ ನಿಂತದ್ದು ನನ್ನನ್ನು ಹಿಂದಕ್ಕೆ ಕರೆಯಲೆಂದಲ್ಲ 
ನನಗೆ ಶುಭವಿದಾಯ ಹೇಳಲೆಂದೂ ಅಲ್ಲ;
ವಿಲಕ್ಷಣ ಎತ್ತರದಲ್ಲಿ, ಅಲ್ಲೇ ಇನ್ನೂ ಸ್ವಲ್ಪ ದೂರ -
ಘೋಷಿಸಿತು ಗಂಭೀರವಾಗಿ ಗೋಪುರದ ಗಡಿಯಾರ
ಕಾಲ ಸರಿಯಾಗಿಲ್ಲ  ಸರಿಯಾಗಿಲ್ಲದೆಯೂ ಇಲ್ಲ. 

ನಡುರಾತ್ರಿಯು ನನಗೆ ಅಪರಿಚಿತವೇನಲ್ಲವಲ್ಲ. 


ಕಾಮೆಂಟ್‌ಗಳು

  1. I have been one acquainted with the night.
    I have walked out in rain—and back in rain.
    I have outwalked the furthest city light.

    I have looked down the saddest city lane.
    I have passed by the watchman on his beat
    And dropped my eyes, unwilling to explain.

    I have stood still and stopped the sound of feet
    When far away an interrupted cry
    Came over houses from another street,

    But not to call me back or say good-by;
    And further still at an unearthly height,
    One luminary clock against the sky

    Proclaimed the time was neither wrong nor right.

    I have been one acquainted with the night.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)