ಸ್ನೇಹಕ್ಕೆ ಕೈಚಾಚುವ ಮುನ್ನ
ಮೂಲ ಉರ್ದು - ನಕ್ಷ್ ಲಾಲ್ ಪುರಿ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಉಲ್ಫತ್ ಮೇ ಜಮಾನೇ ಕೀ ಹರ್ ರಸ್ಮ್ ಕೋ ಠುಕರಾಓ ... ಎಂದು ಪ್ರಾರಂಭವಾಗುವ ಈ ಗೀತೆಯನ್ನು ನಕ್ಷ್ ಲಾಲ್ ಪುರಿ ಅವರು ಬರೆದಿದ್ದಾರೆ. ಇದನ್ನು ಕಾಲ್ ಗರ್ಲ್ ಎಂಬ ಚಿತ್ರದಲ್ಲಿ ಬಳಸಲಾಗಿದೆ. ಲತಾ ಮಂಗೇಶ್ಕರ್ ಈ ಗೀತೆಯನ್ನು ಹಾಡಿದ್ದಾರೆ. ಬಹಳ ಇಂಪಾದ ಈ ಹಾಡನ್ನು ನೀವು ಕೂಡಾ ಕೇಳಬಹುದು - ಯೂ ಟ್ಯೂಬಿನಲ್ಲಿ ಲಭ್ಯವಾಗಿದೆ ದೊಂದು ಗಂಭೀರವಾದ ಸನ್ನಿವೇಶ. ಅನುರಕ್ತನಾಗಿ ತನ್ನತ್ತ ಬಂದವನಿಗೆ ಒಬ್ಬಳು ಹೆಣ್ಣು ಎಚ್ಚರಿಕೆ ನೀಡುತ್ತಿದ್ದಾಳೆ. ಅವಳ ಜೀವನದಲ್ಲಿ ಯಾವುದೋ ಕಪ್ಪು ನೆರಳಿದೆ. ಇದನ್ನು ಅರಿತೂ ತನ್ನ ಸ್ನೇಹ ಬೇಡಿ ಬಂದಿರುವ ಗಂಡನ್ನು ಕುರಿತು ಅವಳಿಗೆ ಸಹಜವಾಗಿ ಅನುಮಾನಗಳಿವೆ. ಮುಂದಿರುವ ದಾರಿ ಸುಗಮವಾದದ್ದಲ್ಲ ಎಂದು ಅವಳಿಗೆ ಗೊತ್ತು. ಕಷ್ಟಗಳು ಬಂದಾಗ ತನ್ನನ್ನು ಇವನು ತೊರೆದು ಹೋದರೆ ಎಂಬ ಅಳುಕು ಕೂಡಾ ಅವಳನ್ನು ಕಾಡುತ್ತದೆ. ತಾನು ಹೇಗೋ ಈ ಸಮಾಜದಲ್ಲಿ ಒಬ್ಬಂಟಿಯಾಗಿ ಬಾಳಬಲ್ಲೆ. ಆದರೆ ನಾಲ್ಕು ಹೆಜ್ಜೆ ತನ್ನೊಂದಿಗೆ ನಡೆದು ಮುಂದೆ ತನ್ನನ್ನು ಏಕಾಂಗಿಯಾಗಿ ತೊರೆದರೆ ತಾನು ಬಾಳಬಲ್ಲೆನೇ?
ನನ್ನ ಸ್ನೇಹಕ್ಕೆ ಕೈಚಾಚುವ ಮುನ್ನ
ದಾಟಬೇಕು ಜಗತ್ತಿನ ನಿಯಮಗಳನ್ನ
ಎಲ್ಲೆಗಳನ್ನು ದಾಟಿ ಎಲ್ಲರಿಂದಲೂ ದೂರ
ನಾವು ಸಾಗಬೇಕೆಂದಿರುವ ಮುನ್ನಡೆಯ ಹಾದಿ
ಆ ದಾರಿಯಲ್ಲಿ ಪ್ರತಿಯೊಂದು ಹೆಜ್ಜೆಗೂ ಮುಳ್ಳಿದೆ
ಎಂಬ ಎಚ್ಚರಿಕೆ ಮೊದಲೇ ಎದೆಯಲ್ಲಿ ಇರಲಿ
ಹೆದರುವೆಯಾದರೆ ಕಷ್ಟಗಳಿಗೆ ಹೇಳಿಬಿಡುತ್ತೇನೆ ಈಗಲೇ
ನಿಲ್ಲು ಇನ್ನೊಂದು ಹೆಜ್ಜೆ ಇಡುವ ಮುನ್ನವೇ
ನನ್ನ ಮುರುಕಲು ದೋಣಿಯನ್ನು ನಾನೇ
ಹೇಗೋ ತೀರದವರೆಗೆ ಕೊಂಡೊಯ್ದು ಜಯಿಸುವೆನು
ದಿಕ್ಕೆಡಿಸುವ ಬಿರುಗಾಳಿಯೇ ನನ್ನಕೈಯಲ್ಲಿ
ಚುಕ್ಕಾಣಿಯಾದೀತು ದಡಕ್ಕೆ ಕರೆದೊಯ್ಯಲು
ಹೊಳೆಯಲ್ಲಿ ಸೆಳೆವಿದೆಯೆಂಬ ಹೆದರಿಕೆಯಿದ್ದರೆ
ನಿಂತುಬಿಡು ಅಲ್ಲೇ ದೂರ ತೀರದಲ್ಲೇ
ಮುಂದೆ ಬೇರಾರಿಗೂ ನಿನ್ನ ಹೃದಯವನ್ನು ಕೊಟ್ಟು
ಬದಲಾಗುವುದಾದರೆ ಇದೋ ಈಗಲೇ ಹೇಳುವೆನು
ಇನ್ನೂ ಸಮಯವಿದೆ ಇನ್ನಷ್ಟು ಯೋಚಿಸು
ದಾರಿಯನ್ನು ಈಗಲೇ ಬದಲಿಸುವುದು ಮೇಲು
ನಾಲ್ಕು ಹೆಜ್ಜೆಯ ಹಾಕಿ ನನ್ನೊಂದಿಗೆ ನಂತರ
ನಿನ್ನ ನಿರ್ಧಾರವನ್ನು ಬದಲಿಸುವೆಯೇನು?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ