ನರನಾಗಿ ಏಕೆ ನಿರಾಸೆ, ಮನವು ಅಧೀರ?

ಮೂಲ ಹಿಂದಿ ಕವಿತೆ: ಮೈಥಿಲೀಶರಣ ಗುಪ್ತ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 
ನರನಾಗಿ ಏಕೆ ನಿರಾಸೆ, ಮನವು ಅಧೀರ? 

Person Rock Climbing
ಯಾವುದೇ ಕಾರ್ಯದಲ್ಲಿ ತೊಡಗಿಸು ನಿನ್ನುಸಿರು
ಜಗತ್ತಿನಲ್ಲಿದ್ದು ಗಳಿಸು ಒಳ್ಳೆಯ ಹೆಸರು
ನಿನ್ನ ಜನ್ಮಕ್ಕೂ ಇರುವುದೊಂದು ಅರ್ಥ:
ಏನೆಂದು ತಿಳಿದುಕೋ, ಮಾಡದಿರು ವ್ಯರ್ಥ
ಹೇಗಾದರೂ ಉಪಯೋಗವಾಗಲಿ ಶರೀರ 
ನರನಾಗಿ ಏಕೆ ನಿರಾಸೆ, ಮನವು ಅಧೀರ? 

ಸಾವರಿಸಿಕೋ ಸುಯೋಗ ಲುಪ್ತವಾಗುವ ಮೊದಲೇ!  
ಸದುಪಾಯವು ಎಂದಾದರೂ ವ್ಯರ್ಥವಾಗಿದೆಯೇ?
ಜಗವು ಸಹಕರಿಸೀತೆಂಬ ಸ್ವಪ್ನವನು ತೊರೆದು 
ನೀನೇ ಮಾರ್ಗವನ್ನು ಮಾಡಿಕೋ ಕೊರೆದು 
ಅಖಿಲೇಶ್ವರನು ಇದ್ದಾನೆ ನಿನಗೆ ಆಧಾರ! 
ನರನಾಗಿ ಏಕೆ ನಿರಾಸೆ, ಮನವು ಅಧೀರ? 
ನಿನಗೆ ಪ್ರಾಪ್ತವಾಗಿರುವಾಗ ಎಲ್ಲವೂ  ತತ್ತ್ವ
ಎಲ್ಲಿ ಹೋಗಲು ಸಾಧ್ಯ ಹೇಳು ಆ ಸತ್ವ?
ಮಾಡು ನಿನ್ನದೇ ತತ್ತ್ವಗಳ ಸುಧಾಪಾನ 
ಎದ್ದು ಅಮೃತತ್ವದ ಕಡೆಗೆ ಇಡು ಹೆಜ್ಜೆಯನ್ನ 
ದಾಟಿ ಬಾ ಮುಂದಕ್ಕೆ ಭವಕಾನನ ಘೋರ 
ನರನಾಗಿ ಏಕೆ ನಿರಾಸೆ, ಮನವು ಅಧೀರ?


ಆತ್ಮಗೌರವವನ್ನು ಮರೆಯದಿರು ಎಂದೂ 
ನೆನಪಿರಲಿ  ಶಕ್ತಿಗಿನ್ನೂ ಬಂದಿಲ್ಲ ಕುಂದು,
ಏನು ಕಳೆದರೂ ಕಳೆಯದಿರಲೆಂದೂ ಮಾನ 
ಸತ್ತ ಮೇಲೂ ಜನರು ಮಾಡಬೇಕು ಗುಣಗಾನ 
ಸಾಗಲಿ ಸಾಧನೆಯತ್ತ ನಿನ್ನ ಸಂಚಾರ 
ನರನಾಗಿ ಏಕೆ ನಿರಾಸೆ, ಮನವು ಅಧೀರ? 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)