ಹೂವಿನ ಸಂಕೋಲೆ



ಮೂಲ ಇಂಗ್ಲಿಷ್ ಕವಿತೆ : ಜಾನ್ ಕೀಟ್ಸ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 
Image result for andromeda greek mythology wiki
ಕವಿತಾಸ್ವಾದನೆ: ಇಪ್ಪತ್ತಾರರ ಎಳೆಯ ವಯಸ್ಸಿನಲ್ಲೇ ಕಾಲವಾದ ಜಾನ್ ಕೀಟ್ಸ್ ಇಂಗ್ಲಿಷ್ ಭಾಷೆಯ ಪ್ರಮುಖ ಕವಿಗಳಲ್ಲಿ ಒಬ್ಬ. ಅವನು 64 ಸಾನೆಟ್ ಗಳನ್ನು ರಚಿಸಿದ್ದಾನೆ. ಅವನ ಸಮಕಾಲೀನ ವಿಮರ್ಶಕರು ಅವನ ಕಾವ್ಯವನ್ನು ಕಟುವಾಗಿ ವಿಮರ್ಶಿಸುತ್ತಿದ್ದರು. ಅಂದು ಸಾನೆಟ್ ಕಾವ್ಯಪ್ರಕಾರವನ್ನು ವಿಮರ್ಶಕರು ಕಡೆಗಣ್ಣಿನಿಂದ ನೋಡುತ್ತಿದ್ದರು. ಹಿಂದೊಮ್ಮೆ ಷೇಕ್ಸ್ ಪಿಯರ್ ಬಳಸಿದ ಈ ಕಾವ್ಯಪ್ರಕಾರವು ಜಾನ್ ಕೀಟ್ಸ್ ಗೆ ಆಪ್ಯಾಯವಾದದ್ದು. ವಿಮರ್ಶಕರ ಅಸಡ್ಡೆಯ ಬಗ್ಗೆ ಅವನಿಗೆ ತುಂಬಾ ಕೋಪ-ತಾಪಗಳಿದ್ದವು. ತನ್ನ ಕಾವ್ಯಕ್ಕೆ ಸಿಕ್ಕಿದ ಕಟುವಾದ ವಿಮರ್ಶೆಯೇ  ಅವನನ್ನು ಸಾವಿಗೆ ದೂಡಿತು ಎಂದು ಕೆಲವರು ನಂಬಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಅವನು ತನಗೆ ಇಷ್ಟವಾದ ಕಾವ್ಯಪ್ರಕಾರವಾದ ಸಾನೆಟ್ ಕುರಿತು ಬರೆದಿದ್ದಾನೆ. ಇಲ್ಲಿ ಬರುವ ಆಂಡ್ರೋಮೀಡಾ ಎಂಬ ಚೆಲುವೆಯ ಉಲ್ಲೇಖ ಗ್ರೀಕ್ ಪುರಾಣದಿಂದ ಆಯ್ದುಕೊಂಡದ್ದು. ಇವಳ ತಾಯಿಯು ತನ್ನ ಮಗಳ ಸೌಂದರ್ಯ ಜಲಕನ್ಯೆಯರ ಸೌಂದರ್ಯವನ್ನೂ ಮೀರಿದ್ದು ಎಂದು ಕೊಚ್ಚಿಕೊಂಡಾಗ ಕುಪಿತಗೊಂಡ ಸಮುದ್ರದೇವತೆ ಪೊಸೈಡನ್ ಜಲರಾಕ್ಷಸರನ್ನು ಕಳಿಸಿ ತಾಯಿ ಮತ್ತು ಮಗಳನ್ನು ಬಂಧಿಸುತ್ತಾನೆ. ಚೆಲುವೆ ಆಂಡ್ರೋಮೀಡಾಳನ್ನು ಜಲದೇವತೆಗೆ ಬಲಿ ನೀಡುವ ಉದ್ದೇಶದಿಂದ ಬಂಡೆಗೆ ಬಿಗಿದು ಕಟ್ಟಲಾಗುತ್ತದೆ. ಪರ್ಸಿಯಸ್ ಎಂಬ ದೇವತೆ ಅವಳನ್ನು ರಕ್ಷಿಸುತ್ತಾನೆ. ಪ್ರಸ್ತುತ ಕವಿತೆಯಲ್ಲಿ ಕಾವ್ಯವನ್ನು (ಪ್ರಾಸದ) ಬಂಧನಕ್ಕೆ ಒಳಗಾದ ಚೆಲುವೆ ಆಂಡ್ರೋಮೀಡಾಗೆ ಹೋಲಿಸಲಾಗಿದೆ. ಅವಳನ್ನು ಬಂಧಮುಕ್ತಗೊಳಿಸಲು ಇಷ್ಟವಿಲ್ಲದಿದ್ದರೆ ಹೂವಿನ ಸಂಕೋಲೆಯಿಂದ ಬಂಧಿಸಬಹುದಲ್ಲಾ ಎಂಬುದು ಕವಿಯ ಸಲಹೆ. ಸಾನೆಟ್ ಒಂದು ನಾಯನಾಜೂಕಿನ ಕಾವ್ಯಪ್ರಕಾರ. ಹದಿನಾಲ್ಕು ಸಾಲುಗಳ ಕಾವ್ಯಪ್ರಕಾರದಲ್ಲಿ ಅಂತ್ಯಪ್ರಾಸಕ್ಕೆ ಹಲವಾರು ಬಗೆಗಳಿವೆ. ಪ್ರಸ್ತುತ ಸಾನೆಟ್ಟಿನಲ್ಲಿ ಕವಿ ABC ABD CABCDE DE ಎಂಬ ಪ್ರಾಸಾಲಂಕಾರವನ್ನು  ಬಳಸಿದ್ದಾನೆ. ಹೀಗೇ ನಾನಾಬಗೆಯ ಅಲಂಕಾರಗಳು ಸಾನೆಟ್ ಪ್ರಕಾರದಲ್ಲಿ ಸಾಧ್ಯ.  ಸಾನೆಟ್ ಪ್ರಕಾರದಲ್ಲಿ ಭಾಷೆಯ ಬಳಕೆಯೂ ಸೂಕ್ಷ್ಮ.  ಕುಸುರಿಕೆಲಸದವರಂತೆ ಕವಿ ಕೆಲಸ ಮಾಡಬೇಕು.  ಇವೆಲ್ಲವನ್ನೂ ಹೇಳುತ್ತಾ ಕವಿ ಸಾನೆಟ್ ಪ್ರಕಾರದ ಹಿರಿಮೆಯನ್ನು ಹೊಗಳುತ್ತಾನೆ.  ಇಲ್ಲಿ ಬಳ್ಳಿಯ  ಕಿರೀಟದ ಪ್ರಸ್ತಾಪವಿದೆ. ಲಾರೆಲ್ ಎಂಬುದು ಹಿಂದೊಮ್ಮೆ ಸಾಧಕರಿಗೆ ತೊಡಿಸುತ್ತಿದ್ದ ಕಿರೀಟ.  "ನಮ್ಮ ಲಾರೆಲ್ ಮೇಲೆ ಕೂಡುವುದು" ಎಂದರೆ ಹಿಂದಿನ ಸಾಧನೆಗಳನ್ನೇ ಆಧರಿಸಿ ಜೀವನ ಮಾಡುವುದು ಎಂದರ್ಥ. ಇಂಗ್ಲಿಷ್ ಭಾಷೆಯಲ್ಲಿ ಆಗಿಹೋದ ಹಳೆಯ ಕವಿಗಳ ಕಾವ್ಯವು ಕವಿಗೆ ಲಾರೆಲ್ ಎಂಬಂತೆ ತೋರುತ್ತದೆ. ಅವುಗಳಲ್ಲಿ ತರಗೆಲೆಗಳಿದ್ದರೂ ಅವುಗಳಿಗೆಷ್ಟು ಮನ್ನಣೆ ಎಂಬ ಅಸೂಯೆ ಕೂಡಾ ಅವನಿಗಿದೆ!

ಅನುವಾದದಲ್ಲಿ ನಾನು ಅಂತ್ಯಪ್ರಾಸದ ಬದಲು ಆದಿಪ್ರಾಸ ಬಳಸಿದ್ದೇನೆ.   



ನೀರಸ ಪ್ರಾಸಗಳಿಂದ ಬಂಧಿಸಲೇಬೇಕೆ ಇಂಗ್ಲಿಷ್ ಭಾಷೆಯನ್ನು?
ಬಂಡೆಗಲ್ಲಿಗೆ ಕಟ್ಟಿಹಾಕಬೇಕೇ ಮಧುರ ಸಾನೆಟ್ ಪ್ರಕಾರವನ್ನು
ನರಳಿಸಿದಂತೆ ಚೆಲುವೆ ಆಂಡ್ರೊಮೀಡಾಳನ್ನು  ಹೆಡೆಮುರಿ ಕಟ್ಟಿ?
ಪರಿಮಿತಿಗಳೇ ನಮಗೆ ಬೇಕಾದಲ್ಲಿ ಕಾವ್ಯಕನ್ನಿಕೆಯ ಬರಿಗಾಲಿಗೆ 

ತೊಡಿಸಲು ಹುಡುಕಿಕೊಳ್ಳೋಣ ತೆಳ್ಳನೆಯ ನಯವಾದ
ಬಿದಿರಿನ ನಾಜೂಕು ಹೆಣಿಗೆಯ ಪಾದರಕ್ಷೆಗಳನ್ನು;
ಪರೀಕ್ಷಿಸೋಣ ನಮ್ಮ ವೀಣೆ, ಮೀಟುತ್ತ ಒಂದೊಂದೇ ತಂತಿ
ತಿರುಪನ್ನು ಬಿಗಿಗೊಳಿಸುತ್ತ ಕೇಳೋಣ ಹೊಮ್ಮುವ ನಾದ;
ಸಾಧಿಸಬಹುದೇನೆಂದು ಒರೆಹಚ್ಚಿ ನೋಡೋಣ ನಮ್ಮ
ಕಠಿಣ ಶ್ರವಣ ಪರಿಶ್ರಮದಿಂದ, ಧ್ಯಾನ ಚಿಂತನೆಯಿಂದ ;
ಸಿರಿಯ ವಿಷಯದಲ್ಲೆಷ್ಟು  ಲೋಭಿಯಾಗಿದ್ದನೋ ಮಿದಾಸ್ 
ಅಷ್ಟೇ ಜಿಪುಣರಾಗೋಣ ಶಬ್ದ, ಅಕ್ಷರಗಳ ವಿಷಯದಲ್ಲಿ;
ಕಂಡು ಕರುಬೋಣ 
ಬಳ್ಳಿಯ  ಕಿರೀಟದಲ್ಲಿರುವ ತರಗೆಲೆಗಳನ್ನು;
ಇಷ್ಟವಿಲ್ಲವೆ ಕಾವ್ಯಕನ್ನಿಕೆಯನ್ನು ಮುಕ್ತ ಗೊಳಿಸಲು? 
ಬಂಧಿಸಲು  ಕಟ್ಟೋಣ ಹೂವಿನ ಸಂಕೋಲೆಗಳನ್ನು. 

(c) 2017, ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

  1. If by dull rhymes our English must be chain’d,
    And, like Andromeda, the sonnet sweet
    Fetter’d, in spite of painéd loveliness;
    Let us find out, if we must be constrain’d,
    Sandals more interwoven and complete
    To fit the naked foot of Poesy;
    Let us inspect the lyre, and weigh the stress
    Of every chord, and see what may be gain’d
    By ear industrious, and attention meet;
    Misers of sound and syllable, no less
    Than Midas of his coinage, let us be
    Jealous of dead leaves in the bay wreath crown;
    So, if we may not let the Muse be free,
    She will be bound with garlands of her own.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)