ಬೆಟ್ಟದ ಗಾಳಿ (ಮಕ್ಕಳ ಕವಿತೆ)
ಮೂಲ - ಎ. ಎ. ಮಿಲ್ನ್
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್
ಬರುವುದೆಲ್ಲಿಂದ ಬೀಸುವ ಗಾಳಿ,
ಹೋಗುವುದೆಲ್ಲಿಗೆ ಎನ್ನುವ ವಿಷಯ -
ಕೇಳಿದೆ ಎಷ್ಟೋ ಜನರನು ನಾನೂ
ಅರಿಯರು ಯಾರೂ ರ-ಹ-ಸ್ಯ!
ಬರುವುದು ಎಲ್ಲಿಂದಲೋ ವೇಗದಲಿ
ಹೊರಡಲು ಅಷ್ಟೇ ಗಡಿಬಿಡಿ ತೋರಿ -
ಹಿಂಬಾಲಿಸಿದರೂ ಓಡೋಡುತ್ತಾ
ಕೈಯಿಗೆ ಸಿಗದೇ ಆಗಿ ಪರಾರಿ!
ಪಟಪಟ ಹಾರುವ ಗಾಳೀಪಟದ
ದಾರವ ಬಿಟ್ಟರೆ ಮೇಲ್ಗಡೆ ಹಾರಿ
ಗಾಳಿಯ ಜೊತೆಗೆ ಹಗಲೂರಾತ್ರಿ
ಮಾಡುವಾಗ ಜುಮ್ಮೆಂದು ಸವಾರಿ
ಹಿಂಬಾಲಿಸುವೆನು ಪಟವನು ನಾನೂ
ಬರುವುದು ನನಗೂ ಪತ್ತೇದಾರಿ!
ಕಂಡುಹಿಡಿಯುವೆನು ಖಂಡಿತವಾಗಿ
ಹೋಗುವುದೆಲ್ಲಿಗೆ ಗಾಳಿಯು, ಅಲೆಮಾರಿ!
ಬಿಡಿಸಿದರೂ ಬೀಸುವ ಸುಳಿಗಾಳಿ
ಎಲ್ಲಿಗೆ ಹೋಗುವುದೆಂಬ ರಹಸ್ಯ-
ಗೂಢವಾಗಿಯೇ ಉಳಿದುಬಿಡುವುದೇ
ಅದರ ಮೂಲ ಎಲ್ಲೆನ್ನುವ ವಿಷಯ!
(c) ಸಿ. ಪಿ ರವಿಕುಮಾರ್, ೨೦೧೯
(c) ಸಿ. ಪಿ ರವಿಕುಮಾರ್, ೨೦೧೯
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ