ಹಾಡುವರಾರು ನದೀತಟದಲ್ಲಿ?
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್ ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ ಹಾಡುವರಾರು ನದೀತಟದಲ್ಲಿ? ಭಂಗಗೊಳಿಸುತ್ತ ನಿಶೆಯ ನೀರವ ಮೇಲೇಳುವ ಈ ಗ್ರಾಮೀಣ ಸ್ವರ ಹಾಯುತ ಹುರುಳಿಯ ಹೊಲಗಳ ಮೇಲೆ ಎಬ್ಬಿಸುತಿದೆ ಕಾವೇರಿಯೊಳು ಅಲೆ! ಹಾಡುವರಾರು ನದೀತಟದಲ್ಲಿ? ಬಂಧುಗಳಿರಬಹುದಿಲ್ಲೇ ಸನಿಹದಲಿ, ಧ್ಯಾನಿಸುತ್ತ ಮೌನದಿ ಮನದಲ್ಲಿ, ವ್ಯರ್ಥವಲ್ಲ ತಮ್ಮಯ ಆಲಾಪ, ಶ್ರವಣಸುಖವ ತರುತಿದೆ ಜನಪದಕೆ! ಹಾಡುವರಾರು ನದೀತಟದಲ್ಲಿ? ವಿಚಲಿತವಾಗಿದೆ ಇಂದೇತಕೆ ಮನ ಕೇಳುತ ಈ ಏಕಾಂತದ ಗಾಯನ? ಇದನೇ ಕೇಳುತ ನಾ ಮುಂಜರಿವೆ! ಇದನೇ ಹಾಡುವೆ, ಇದನೇ ಬರೆವೆ! ಹಾಡುವರಾರು ನದೀತಟದಲ್ಲಿ?