ಒಂದು ಡಜನ್ ಲಿಮರಿಕ್ (ಹಾಸ್ಯ)
ಖೇಚರ
~~~~~
ಆಕಾಶದಲ್ಲಿ ಚಲಿಸುವುದೇ "ಖೇಚರ"
ಅರ್ಥಾತ್ ಹಕ್ಕಿ ಎಂದ ಕನ್ನಡ ಟೀಚರ
ಮಾತು ಕೇಳಿ ಯೋಚಿಸಿದ ಭಾನು
ವಾಟ್ ಅಬೌಟ್ ಪ್ಲೇನು ವಾಟ್ ಅಬೌಟ್ ಡ್ರೋನು
ಹೀಗೆ ಕನ್ಫ್ಯೂಸ್ ಆಗೋದೇ ಅವನ ನೇಚರ
ಮಾರೀಚ
~~~~~ ~~
ಬ್ರದರ್ಸ್ ಮಾರೀಚ ಮತ್ತು ಸುಬಾಹು
ರಾಮನ ಕೈಯಲ್ಲಿ ಅಪ್ಪಿದರು ಸಾವು
ಇನ್ನಿಬ್ಬರು ಇದ್ದರಲ್ಲ ಏನಾದರೋ ಅವರು
ಗಣಿತದ ಮೇಷ್ಟ್ರು ಹೇಳ್ತಿದ್ರು ಹೆಸರು
ಬ್ರದರ್ಸ್ ಸಮಬಾಹು ಮತ್ತು ವಿಷಮಬಾಹು
ದೀರ್ಘ
~~~~~
ಧೂಮ್ರಪಾನದಿಂದ ಆರೋಗ್ಯಹಾನಿ
ಎಂದು ನುಡಿದನು ಒಬ್ಬ ದೊಡ್ಡ ವಿಜ್ಞಾನಿ
"ಇನ್ನುಮೇಲೆ ಎಲ್ಲರೂ ಸಿಗರೇಟ್ ಬೀಡಿ"
ದೊಡ್ಡಕ್ಷರದಲ್ಲಿ ಟೈಪಿಂಗ್ ದೋಷ ನೋಡಿ
ಸುದೀರ್ಘವಾಗಿ ಎಳೆದುಕೊಂಡರು ಶ್ವಾಸ ನೆರೆದಿದ್ದ
ಮೇಕೆ
~~~~
ಮೇ ಮೇ ಅಂತಿತ್ತು ಕನ್ನಡ ಮೇಕೆ
ಪ್ರಯತ್ನಿಸಿದೆ ಇಂಗ್ಲಿಷ್ ಕಲಿಸೋಕೆ
Me Me ಅಂತ ಬರೆದೆ ಪಕ್ ಪಕ್ಕ
ನಗೋಕೆ ಶುರು ಮಾಡ್ತು ಮೇಕೆ ಪಕ್ ಪಕಾ
ಚೆನ್ನಾಗಿದೆ ನಿನ್ನ MeMe ಅಂತ ಅನ್ಬೇಕಾ, ಪಕ್ಕಾ!
ದೇವಕಣ
~~~~~~
ದೇವಕಣ ಕಂಡು ಹಿಡಿದ ಕೀರ್ತಿ
ಕುವೆಂಪು ಅವರಿಗೇ ಸಲ್ಲಬೇಕಿತ್ರೀ
ಓದಿದರೆ ಅವರ ಕವಿತೆ
ಹೇಳಿ ಸಿಕ್ಕದೇ ಇದ್ದೀತೇ
ಮಂತ್ರಕಣಾ ಶಕ್ತಿಕಣಾ ದೇವಕಣಾ ಆಲ್ ತ್ರೀ
ಜಲಚರ
~~~~~~~
"ಜಲದಲ್ಲಿ ಚಲಿಸಿದ್ದು ಜಲಚರ"
ಎಂದು ವಿವರಿಸುವಾಗ ಕನ್ನಡ ಟೀಚರ
ಭಾನುವಿನ ಕಣ್ಮುಂದೆ ಮೂಡಿತೊಂದು ಚಿತ್ರ
ಹೊಟೆಲಿನಲ್ಲಿ ಅಂದು ತಾನು ಕಂಡ ವಿಚಿತ್ರ
ಟೀನಲ್ಲಿ ಓಡಾಡುತ್ತಿತ್ತು ತೇಲಾಡುತ್ತಿತ್ತೊಂದು ಟೀ-ಚರ
ಬಸ್ಯಾ
~~~~
ಹಳ್ಳಿಯಲ್ಲೋದಿದನು ಶಾಲೆ ನಮ್ ಬಸ್ಯಾ
ಕರೆಯುತಿದ್ದನು ಏ ವೆಂಕ್ಯಾ ಏ ಕಿಟ್ಯಾ
ಬಂದು ಸೇರಿದಾಗ ಬೆಂಗಳೂರು ಐಟೀ ಕಂಪನಿ
ಬಸವರಾಜ್ ಆನಂದದಿಂದ ಸುರಿಸಿದನು ಕಂಬನಿ
ಇಲ್ಲೂ ಎಲ್ಲರೂ ತನ್ನಂತೆ ವಾಟ್ಯಾ ಎಸ್ಯಾ
ಸಾಂಭರ್
~~~~~~~~~
ಏನಿದು ಸಾಂಭರ್, ಮಸಾಲಾ ಡೋಸಾ
ಕನ್ನಡ ಭಾಷೆಗೆ ಮಾಡಿದ ಮೋಸ
ದೋಸೆ ಎನ್ನಿರಿ ಸಾಂಬಾರ್ ತಿನ್ನಿರಿ
ಮಸಾಲಾ ಯಾಕೆ, ಮಸಾಲೆ ಅನ್ನಿರಿ
ನಾವು ಕಲಿಯಲಿಲ್ಲವೇ ಪಲಾವ್ ಟೊಮೆಟೊ ಪೂರಿ, ಪೀಜಾ
ಕಾಣದ ಕಡಲಿಗೆ
~~~~~~~~~~~~
"ಕಾಣದ ಕಡಲಿಗೆ ಹಂಬಲಿಸಿದೆ ಮನ" ...
ಕವಿ ಕರಾವಳಿಯವನೆಂದುಕೊಂಡರು ಜನ
ಹಲ್ಲಿದ್ದಾಗ ಇರದಿದ್ದ ಕಡಲೆ
ಸಿಕ್ಕಾಗ ಹಲ್ಲೇ ಇಲ್ಲದೆಲೆ
ಬರೆದ ಸಾಲೆಂದು ನನ್ನ ದಟ್ಟ ಅನುಮಾನ
ವಿಕ್ಕಿ
~~~~
ವಿಕ್ರಮನು ವಿಕ್ಕಿ, ದೀಕ್ಷಿತನು ಡಿಕ್ಕಿ,
ಲಕ್ಷ್ಮಣನು ಲಕ್ಕಿ, ಅಕ್ಷಯನು ಅಕ್ಕಿ
ನಿಖಿಲನಾದನು ನಿಕ್ಕಿ
ಟೆಕ್ನಾಲಜಿಸ್ಟನು ಟೆಕ್ಕಿ
ಎಂಥ ಸಿಕಂದರನೂ ಜನರ ನಾಲಗೆಯಲ್ಲಿ ಸಿಕ್ಕಿ
ಸ್ಟಾರ್ ಮುಖಿ
~~~~~~~~~~
ಕಮಲಮುಖಿ ಚಂದ್ರಮುಖಿ ಇತ್ಯಾದಿ ಪೂರ್ತಿ
ಟೈಪ್ ಮಾಡೋದ್ಯಾಕೆ ಅಂತ ಪ್ರೋಗ್ರಾಮರ್ ಕೀರ್ತಿ
ಟೈಪ್ ಮಾಡಿದನು ರೆಗ್ಯುಲರ್ ಎಕ್ಸ್ಪ್ರೆಷನ್ ಒಂದು
ಏನಿಲ್ಲ, ಸರಳ, ಡಾಟ್ ಸ್ಟಾರ್ ಮುಖಿ ಎಂದು
ಜ್ವಾಲಾಮುಖಿ ಅಗ್ನಿಮುಖಿಯರ ನೋಡಿ ಕಳಕೊಂಡನು ಸ್ಫೂರ್ತಿ
ಪಾಪಕರ್ಮ
~~~~~~~~
ದೇವರೇ ನನ್ನ ಪಾಪಕರ್ಮಗಳನ್ನೆಲ್ಲ
ಹೊಟ್ಟೆಗೆ ಹಾಕಿಕೋ ಎಂದು ಪ್ರಾರ್ಥಿಸಿದೆನಲ್ಲ
ಬೆಳಗ್ಗೆ ಎದ್ದು ನೋಡಿದರೆ ಆಶ್ಚರ್ಯ
ಇಡೀ ಪ್ಯಾಕೆಟ್ ಪಾಪ್ ಕಾರ್ನ್ ಮಾಯ
ದೇವರಿಗೆ ಸರಿಯಾಗಿ ಕೇಳಿಸಿತಾ, ತಿಳೀಲಿಲ್ಲ
ಸಿ. ಪಿ. ರವಿಕುಮಾರ್
ಗೆಳೆಯ ಸೀತಾರಾಮ್ ಕಳಿಸಿದ ಕಾಮೆಂಟ್ಸ್ ನೋಡಿ ನಿಮಗೆ ಖಂಡಿತಾ ನಗು ಬರುತ್ತೆ:
ಪ್ರತ್ಯುತ್ತರಅಳಿಸಿ======================================================
ಆಹಾ ಎಂಥ In(n)ಚರದ ಶಬ್ದಗಳ capಚರ! T-ಚರ, K-ಚರ...ಇಂಥ feaಚರಗಳ ಈ picಚರಕ್ಕೆ ನಾನು waಚರನಾಗುತ್ತಿದ್ದಂತೆಯೇ, ನನ್ನ denಚರದ fixಚರ ಅದುರತೊಡಗಿತು. ಸುತ್ತಲ furniಚರ, ಪರಿಸರ ಚರಚರ ಎಂದಂತಾಯ್ತು. ಬಾಯಲ್ಲಿ ಹುದುಗಿದ್ದ ಅಗೋಚರ creaಚರಗಳು "ಜೊಲ್-ಚರ"ಗಳಾಗಿ ತೇಲಾಡತೊಡಗಿದವು. ಈ ಬಗೆಯ venಚರಗಳಾಗುತ್ತಿರುವಲ್ಲಿ, ಕನ್ನಡವನ್ನು ಯಾವ vulಚರಗಳೂ puncಚರ, fracಚರ ಮಾಡಲಾರರು; ಕನ್ನಡದ culಚರ, staಚರ, strucಚರ, textಚರ, ಇಡೀ fuಚರ ಎಂದಿಗೂ "ಗಟ್ಟಿ ಕಣಾ, ಚೆಂದ ಕಣಾ" ಎನಿಸತೊಡಗಿತು. - Watchaaಮ Goಚರನ್.
* ಕೆಲಸಕ್ಕೆ ಹೋಗಿಬರಲು ಏನು ವಾಹನಾನುಕೂಲವಿದೆ ಎಂದಿದ್ದಕ್ಕೆ, "ನಮ್ busಯಾ" ಎಂದನಂತೆ ನಮ್ ಬಸ್ಯಾ.
* ಇದೆಂಥ "ಮಸಾಲಾ ಡೋಸಾ"? ಕಾಫೀ "ಡೋಸ್" ರೀತಿ doseಗಳಲ್ಲಿ ತಿನ್ನುವುದೇನು?
* ಹೋತಗಳ ವಿರುದ್ಧ she-ಗೋಟು mateಗಳು ಇದೇ May 2, "#ಮೇ-too" ಚಳವಳಿ ಶುರುಮಾಡಲಿವೆಯೆಂದು Fake News Today ವರದಿ ಓದಿದ್ದ ನೆನಪು.
* ತನ್ನಲ್ಲಿದ್ದ ಬಲವನ್ನೆಲ್ಲ ಪ್ರಯೋಗಿಸಿ ಬೋರ್ಡ್ ಮೇಲೊಂದು ಸಮಬಾಹು ತ್ರಿಭುಜವನ್ನು "ಒತ್ತಿದ್ದ" ಹುಡುಗ, ನಾನು "ಬಾಹುಬಲಿ" ಅಭಿಮಾನಿ ತಂಡದವನು ಎಂದು ಕೊಚ್ಚಿಕೊಂಡನಂತೆ. ಹಿಂದೊಮ್ಮೆ "ಚತುರ್ಭುಜ ಬರಿ" ಎಂದಿದ್ದಕ್ಕೆ, "ವಿಷ್ಣು" ಚಿತ್ರವನ್ನು ಬಿಡಿಸಿ, ನೋಡುಗರ ಕಣ್-ಕಣ್, ಬಾಯ್-ಬಾಯ್ ಬಿಡಿಸಿದ ವಿ-ಚಿತ್ರ ಬಾಯ್ ಈತನೇ.
-------------------------------------------------------------------------------------------------------