ಎಪ್ಪತ್ತೈದರ ವಯಸ್ಸಿನಲ್ಲಿ ಹಳೆಯ ಪುಸ್ತಕದ ಮರುಓದು
ಮೂಲ : ಹೇಡೆನ್ ಕಾರುತ್ ಅನುವಾದ: ಸಿ ಪಿ ರವಿಕುಮಾರ್ ನನ್ನ ಪ್ರಾರ್ಥನೆಗಳು ಫಲ ನೀಡಿವೆ. ಅವುಗಳನ್ನು ಪ್ರಾರ್ಥನೆ ಎನ್ನುವುದಾದರೆ. ನಾನು ಬದುಕಿದ್ದೇನೆ. ಇನ್ನೂ ಜೀವಂತವಾಗಿದ್ದೇನೆ. ಆರೋಗ್ಯವಾಗಿಯೇ ಇದ್ದೇನೆ ಎನ್ನಬಹುದು. ಸಿಗರೇಟ್ ಬಿಟ್ಟರೆ ನೂರು ವರ್ಷ ಬದುಕಿಯೇನು. ಇದು ನಿಜಕ್ಕೂ ಆಶ್ಚರ್ಯವೇ - ಅಷ್ಟೆಲ್ಲ ಬಡತನ, ನೋವು ಅನುಭವಿಸಿ, ನರಳಿ. ಯಃಕಶ್ಚಿತ್ ಸಹನೆಯಿಂದ ಇಷ್ಟೆಲ್ಲ ಸಾಧ್ಯವಾದೀತೆಂದು ಎಣಿಸಿರಲಿಲ್ಲ. ಮತ್ತು ಪ್ರಾರ್ಥನೆಗಳು? ಅವು ಪ್ರಾರ್ಥನೆಗಳಾಗಿದ್ದವೆ? ನಾನು ಉದ್ದಕ್ಕೂ ಯಾವ ಧರ್ಮಕ್ಕೂ ಅಂಟಿಕೊಳ್ಳದ ಛಲಕ್ಕೆ ಬಲವಾಗಿ ಅಂಟಿಕೊಂಡವನು. ಅದಕ್ಕೆ ಕಾರಣವೂ ಇತ್ತು. ಇಷ್ಟಾದರೂ ಈಗ ವಯಸ್ಸಾದ ಮೇಲೆ ನನಗೆ ಅರ್ಥವಾಗುತ್ತಿದೆ, ಪ್ರಾರ್ಥನೆ ಎಂದರೆ ಅದೊಂದು ಶಿಸ್ತಲ್ಲ, ಸಿದ್ಧಾಂತವಲ್ಲ, ಇನ್ನಿತರ ಪ್ರಾಣಿಗಳಿಗಿಂತ ವಿಭಿನ್ನವಾಗಿ ಮನುಷ್ಯನ ಪ್ರಾಕೃತಿಕ ಬುದ್ಧಿಯ ಚಲನೆ. ನಾನು ಪ್ರಾರ್ಥಿಸಿದೆ. ಮತ್ತು ಹಾಳೆಗಳ ಮೇಲೆ ಬರೆದಿಟ್ಟುಕೊಂಡೆ ನಾನು ಉಸುರಿದ ಒಂದಿಷ್ಟು ಪದಗಳನ್ನು. ಅವೇ ಈ ಪದ್ಯಗಳು.