ವ್ಯಾನ್ ಗೋ ಕಂಡ ಹಳ್ಳಿಯ ಹಾದಿ

 


ಕುಂಚ ಆಡಿಸಿದ ವ್ಯಾನ್ ಗೋ ಬಣ್ಣದಲ್ಲಿ ಅದ್ದಿ 
ಹಸಿರು ನೀಲಿ ಬಂಗಾರ ಹಳದಿ.

ಬಾನಲ್ಲಿ ಚಿನ್ನ ಕರಗುವ ಹೊತ್ತು
ಶಾಂತಿ ಎಲ್ಲಾ ಕಡೆಗೆ ಪಸರಿಸಿತ್ತು
ಸದ್ದು ಮಾಡುತ್ತಾ ಹೊರಟಿದೆ ಕುದುರೆ ಸಾರೋಟು 
ಅಗೋ ಇನ್ನೇನು ನಮ್ಮ ಹಳ್ಳಿ ಬಂತು
ಕಲ್ಲುಹಾದಿಯ ಮೇಲೆ ಕಠಿಣ ಪ್ರವಾಸ
ಮರೆತುಹೋಯಿತು ಪ್ರಯಾಣದ ಆಯಾಸ
ಕಂಡಾಗ ದೂರದಲ್ಲಿ ಪರಿಚಿತ ಹಳ್ಳಿ
ಇಕ್ಕೆಡೆಗೂ ಕೈಬೀಸುವ ಮರಗಿಡಬಳ್ಳಿ
ಸೈಪ್ರೆಸ್ ಮರದಲ್ಲಿ ಹೊಕ್ಕು ತಂಗಾಳಿ
ಬಳುಕುತ್ತಿದೆ ಮರ ಇಟ್ಟಂತೆ ಕಚಗುಳಿ.
ನನ್ನ ಮೈಯೊಳಗೂ ಸಂಚರಿಸಿ ಅದೇ ಪುಳಕ
ಮರೆಯುತ್ತೇನೆ ಒಂದೆರಡು ಕ್ಷಣ ಎಲ್ಲ ನರಕ.
ಮನೆಯಲ್ಲಿ ನನಗಾಗಿ ಕಾಯುತ್ತಿರುವ ಹಿರಿಯ
ಕೇಳುತ್ತಾನೆ ನೂರಾರು ಪ್ರಶ್ನೆ: ಬಂದೆಯಾ?
ಹೇಗಿತ್ತು ದೂರದ ಪಟ್ಟಣದಲ್ಲಿ ವಾಸ?
ಏನೇನು ಮಾಡಿದೆ ಒಳ್ಳೆಯ ಕೆಲಸ?

ಕುಂಚ ಹಿಡಿದ ಕೈ ನಡುಗಿತು ಸಣ್ಣಗೆ
ಪ್ರತ್ಯುತ್ತರ ಒಂದೂ ತೋರುತ್ತಿಲ್ಲ ನನಗೆ
ಚಿಮ್ಮಿತು ಕಣ್ಣುಗಳ ತುದಿಯಲ್ಲಿ ನೀರು 
ಸ್ವೀಕರಿಸುವುದೇ ನನ್ನನ್ನು ನನ್ನ ತವರೂರು ?
ಏನು ಉಸುರುತ್ತಿದೆ ಸೈಪ್ರೆಸ್ ಮರಕ್ಕೆ ತಂಗಾಳಿ?
ಏನೂ ಕೇಳುತ್ತಿಲ್ಲ ಗಾಡಿಯ ಗಡಗಡದಲ್ಲಿ .

ಸಿ ಪಿ ರವಿಕುಮಾರ್ 
ಅಕ್ಟೋಬರ್ ೬, ೨೦೨೬


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ