ಗಾಂಧಿಯ ಕೊಲೆ ಎಂಬ ಫೇಕ್ ನ್ಯೂಸ್

ಸಿ ಪಿ ರವಿಕುಮಾರ್ 




ಗಾಂಧಿ, ನಿನ್ನ ಕೊಲೆಯಾದದ್ದು ಕೂಡಾ
ಫೇಕ್ ನ್ಯೂಸ್ ಇರಬಹುದೇ
ಎಂಬ ಅನುಮಾನ ಹುಟ್ಟುತ್ತಿದೆ
ಏಕೆಂದರೆ ಇಂದಿಗೂ ನಿನ್ನ ಮೇಲೆ
ಗುಂಡಿನ ಮಳೆ
ಪ್ರತಿದಿನವೂ ಸುರಿಯುತ್ತಿದೆ

ಭೀತಿ ಹುಟ್ಟಿಸುವ ದ್ಯೂತದಲ್ಲಿ
ಸೋತು ಹೋದರೆ ಹೇಗೆಂದು
ಕೀತುಹೋದದ್ದನ್ನು ಪ್ರತಿನಿತ್ಯವೂ ಕಿತ್ತುವ
ಪೀತಪತ್ರಿಕೆಯ ಪಾತಕ ಬರಹಗಳಲ್ಲಿ
ಮಾತಿಗೆ ಬೆಲೆಯಿಲ್ಲದ ಸಾಮಾಜಿಕ ತಾಣಗಳಲ್ಲಿ 
ಪ್ರತಿದಿನವೂ ನಿನ್ನ ಕೊಲೆಯಾಗುತ್ತದೆ


ನೀನು ಭೀಷ್ಮಪಿತಾಮಹ ಹಾಗೆ
ರಣರಂಗದಲ್ಲಿ  ನೇರವಾಗಿ ಕಾದಾಡಿ ಸೋಲಿಸಲು ಅಸಾಧ್ಯ
ಹೇಗೆ ಕೊಲ್ಲುವುದು ಎಂದು ನಿನ್ನನ್ನೇ ಕೇಳಿದರೆ
ತೋರಿಸುತ್ತೀಯೆ ನೀನೇ ದಾರಿ
ಬರುತ್ತವೆ ನಿನ್ನ ಪೂರ್ವಜನ್ಮದಲ್ಲಿ
ನೀನು ತಿಂದ  ಮಾಂಸ
ತಂದೆಗೆ ಮಾಡಿದ ಮೋಸ
ನೀನೇ ಹೇಳಿಕೊಂಡ ಕಥೆಗಳು ತೊಟ್ಟು ಹೊಸಹೊಸ  ವೇಷ
ಸತ್ಯದೊಂದಿಗೆ ಪ್ರಯೋಗ ನಡೆಸುವ ಜನ
ಚಿತ್ರವನ್ನು ಫೋಟೋಶಾಪ್ ಮೂಸೆಯಲ್ಲಿ
ಕಾಯಿಸಿ ಕುಟ್ಟಿ ಬಡಿದು ಬಗ್ಗಿಸಿ
ತೆಗೆಯುತ್ತಾರೆ ಎಲ್ಲರಿಗೂ ಸ್ವಯಂ ಗೋಚರ ಸತ್ಯ
ನೀನು ಬಾಲೆಯೊಬ್ಬಳೊಂದಿಗೆ ಮಾಡುತ್ತಿರುವೆ ನೃತ್ಯ

ತಂದೆ ಎಂದಿಗೂ ಹೇಳಿಕೊಳ್ಳಬಾರದು ಮಕ್ಕಳಿಗೆ
ತನ್ನ ಯೌವ್ವನದ  ಎಡವಟ್ಟುಗಳನ್ನು
ಮಕ್ಕಳಿಗೆ ಅಷ್ಟೇ ಸಾಕು
ಅಪ್ಪನೂ ಮಾಡಿಬಿಟ್ಟದ್ದೇ ಎಂಬ ಅಣಕು
ರಾಷ್ಟ್ರಪಿತನಾಗಿ ನೀನೂ ಇದನ್ನು ಪಾಲಿಸಬೇಕಾಗಿತ್ತು
ಆದರೆ ನೀನು ಭಯಂಕರ ಸತ್ಯಾಗ್ರಹಿ
ನಿನ್ನ ಪರವಾಗಿ ನೀನು ಮಾಡಿಕೊಳ್ಳಲಿಲ್ಲ ವಕಾಲತ್ತು
ಹೊರಟುಹೋದೆ ಸ್ವಯಂಕೃತಾಪರಾಧಗಳ ಪಟ್ಟಿಯನ್ನೇ ಬಿಟ್ಟು
ಎಲ್ಲಿ ಒಂದನ್ನು ಭೂತಗಾಜಿನಲ್ಲಿ ಮಾಡುತ್ತಾರೋ ಹತ್ತುಪಟ್ಟು


ಗಾಂಧಿ, ನಿನ್ನ ಕೊಲೆಯಾದದ್ದು ಕೂಡಾ
ಫೇಕ್ ನ್ಯೂಸ್ ಇರಬಹುದೇ
ಎಂಬ ಅನುಮಾನ ಹುಟ್ಟುತ್ತಿದೆ
ಏಕೆಂದರೆ ಇಂದಿಗೂ ನಿನ್ನ ಮೇಲೆ
ಗುಂಡಿನ ಮಳೆ
ಪ್ರತಿದಿನವೂ ಸುರಿಯುತ್ತಿದೆ


  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ