ಅವಿವಾಹಿತೆಯರು


ಮೂಲ ಹಿಂದಿ ಕವಿತೆ - ಅನಾಮಿಕಾ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
Image result for woman art wikipedia
ಅಮ್ಮಾ ಯಾರೊಂದಿಗೆ ಹೇಳಿಕೊಳ್ಳಲಿ ಮನಸ್ಸಿನ ಪೀಡೆ!
ಮೀರಾಬಾಯಿ, ನಿನ್ನ ಈ ರಚನೆ ಕೇಳಿದಾಗೆಲ್ಲಾ
ಯೋಚನೆಗೆ ಬೀಳುತ್ತೇನೆ.
ಇನ್ನೆಂಥ ಪೀಡೆ ಇರಬಹುದು, ಅಮ್ಮನೊಂದಿಗೂ ಹೇಳಿಕೊಳ್ಳಲಾಗದ್ದು?
ಇಷ್ಟಾಗಿ ಗೀತೆಗಳಲ್ಲಿ ಸಂಬೋಧನೆ 
ಸಾಧಾರಣವಾಗಿ ಅಮ್ಮನಿಗೆ ತಾನೇ!

ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಹಿಂದಿರುವ ಢಾಬಾ!
ಹತ್ತು ವರ್ಷದ ಛೋಟೂ ಮುಸುರೆ ತಿಕ್ಕುತ್ತಾ
ಹಳೇ ಟೇಪ್ ರಿಕಾರ್ಡರ್ ಮೇಲೆ
ಅದೇನು ಯೋಚಿಸಿಕೊಂಡು
ಹಾಕುತ್ತಾನೋ ನಿನ್ನ ಹಾಡನ್ನು ಮತ್ತೆಮತ್ತೆ!

ಅವನಲ್ಲೂ ಲಕ್ಷ್ಮಣಗಳು ಕಾಣುತ್ತವೆ
ಮುಂದೆ ಅವನೂ ಆಗುವನೇನೋ ಒಬ್ಬ ಮನಮೋಹನ ಪುರುಷ
ಪುಟ್ಟ ಮೀರಾ ಒಬ್ಬಳ ಒಲವಿನ ಆಧಾರ,
ಅಷ್ಟು ಹಠಮಾರಿಯಲ್ಲ, ಸ್ವಲ್ಪ ಮಧುರ!

ವರ್ಕಿಂಗ್ ವಿಮೆನ್ಸ್ ಹಾಸ್ಟೆಲಿನ ಮಹಿಳೆಯರು ನಾವು
ಹುಡುಕುತ್ತಲೇ ಇದ್ದುಬಿಟ್ಟೆವು
ಒಬ್ಬನಾದರೂ ಕಾಣುವನೇ ಪುರುಷ
ಅವನನ್ನು ಕಂಡು ಮನದಲ್ಲಿ ಹುಟ್ಟುವುದೇ
ಪ್ರೇಮಿಸುವ ಸಾಹಸ!

ಸಿಕ್ಕಲಿಲ್ಲವೆಂದಲ್ಲ, ಆದರೆ ಎಂಥವರು ಸಿಕ್ಕರು!
ಜ್ಞಾನಿಗಳಲ್ಲ, ಪಂಡಿತರು
ನಿಷ್ಠಾವಂತರಲ್ಲ, ಬಾಲಬಡುಕರು
ಸಾಹಸಿಗಳಲ್ಲ, ಜಗಳಗಂಟರು
ದೃಢ ಪ್ರತಿಜ್ಞೆ ಎಲ್ಲಿ ಬಂತು, ಶುದ್ಧ ಮೊಂಡರು
ಪ್ರಭಾವಿಗಳಲ್ಲ ಬರೀ ಮಾತಿನಮಲ್ಲರು
ಸ್ನೇಹಿತರಲ್ಲ ಯಜಮಾನರು
ಸಾಮಾಜಿಕರಲ್ಲ, ಏಕಾಂತಭೀರುಗಳು
ಧಾರ್ಮಿಕರಲ್ಲ, ಸಂಪ್ರದಾಯವಾದಿಗಳು

ಪ್ರತಿಪಕ್ಷಿಗಳ ಮೇಲೆ ಸದಾ ದಾಳಿ ಮಾಡಲು ಸಿದ್ಧ
ಪ್ರತಿಪಕ್ಷಿಗಳು ನಿಜಕ್ಕೂ ಪಕ್ಷಿಗಳೇ
ಇವರ ಹಾಗೆಯೇ.
ಇವರಿಂದ ಗಾಯಗೊಂಡಿವೆ ಅವರ ರೆಕ್ಕೆಪುಕ್ಕ.

ಇಂಥವರನ್ನು ಏನೆಂದು ಪ್ರೀತಿಸುವುದು?
ಅವರ ಕೊರಳಿಗೆ ಹಾಕಬೇಕಾದ ವರಮಾಲೆ
ನಮ್ಮದೇ ಹೆರಳಲ್ಲಿ ಮುಡಿದು
ನಾವು ಹೇಳಿಕೊಂಡೆವು ನಮಗೆ ನಾವೇ:
ಏಕೋಹಂ ಬಹುಸ್ಯಾಮ್.

ಅಲ್ಲಿ ನೋಡಿ, ಬಟ್ಟಲು ತೊಳೆಯುವ 
ಪುಟ್ಟ ಘನಶ್ಯಾಮ!
ಆತ್ಮಕ್ಕೂ ಕರುಳೆನ್ನುವುದೊಂದು ಇರುತ್ತದಲ್ಲ!
ಹೀಗಾಗಿ ನಾವು ಕಲ್ಪಿಸಿಕೊಳ್ಳುತ್ತೇವೆ
ಒಂದು ಹೊಸಬಗೆಯ ಸೃಷ್ಟಿ.
ಎಲ್ಲಿ ಜ್ಞಾನ ಸಂಜ್ಞಾನವೂ 
ಆಗಿರುತ್ತದೋ ಸಾಹಸ ಸದ್ಭಾವನೆ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)