ಸ್ತ್ರೀಯರು
ಮೂಲ ಹಿಂದಿ ಕವಿತೆ - ಅನಾಮಿಕಾ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ನಮ್ಮನ್ನು ಓದಲಾಯಿತು
ಕಡಲೆಪುರಿ ಸುತ್ತಿಕೊಡಲು ಬಳಸುತ್ತಾರಲ್ಲ
ಮಕ್ಕಳ ನೋಟ್ ಪುಸ್ತಕದ ಹರಿದ ಹಾಳೆಗಳು,
ಹಾಗೆ.
ನಮ್ಮನ್ನು ನೋಡಿದ್ದು ಹೇಗೆಂದರೆ
ಬೆಳ್ಳಂಬೆಳಗ್ಗೆ ಅಲಾರಂ ಹೊಡೆದಾಗ
ನಿದ್ದೆಗಣ್ಣಿನಲ್ಲಿ ಕೈಗಡಿಯಾರದ ಕಡೆ ನೋಡಿದಂತೆ.
ನಮ್ಮನ್ನು ಕೇಳಿದ್ದು
ಲಹರಿಯ ಮನಸ್ಸಿನಿಂದ,
ಅಗ್ಗದ ಕ್ಯಾಸೆಟ್ ಹಚ್ಚಿ
ಸಿನಿಮಾಹಾಡು ಕೇಳುತ್ತಾರಲ್ಲ
ನೂಕುನುಗ್ಗಲಿನ ಬಸ್ಸಿನಲ್ಲಿ,
ಹಾಗೆ.
ನಮ್ಮನ್ನು ಭೋಗಿಸಿದ್ದು
ಬಹಳ ದೂರದ ನಂಟರ ದುಃಖದ ಹಾಗೆ.
ಒಂದು ದಿನ ನಾವು ಅಂದೆವು -
ನಾವೂ ಮನುಷ್ಯರು.
ನಮ್ಮನ್ನು ಲಕ್ಷಣವಾಗಿ ಓದಿ
ಹೇಗೆ ಬಿ.ಎ. ಮುಗಿಸಿ ನೌಕರಿ ಹುಡುಕುವಾಗ
ಮೊದಲ ಜಾಹೀರಾತಿನ ಅಕ್ಷರ ಅಕ್ಷರವನ್ನೂ
ಬಿಡದೇ ಓದಿದಿರಲ್ಲ, ಹಾಗೆ.
ನೋಡಿ ನಮ್ಮ ಕಡೆ
ಚಳಿಯಲ್ಲಿ ನಡುಗುತ್ತಾ
ದೂರದಲ್ಲಿ ಉರಿಯುವ ಬೆಂಕಿಯನ್ನು ನೋಡಿದ ಹಾಗೆ.
ನಮ್ಮನ್ನು ಕೇಳಿಸಿಕೊಳ್ಳಿ
ಅನಂತವನ್ನು ಕೇಳಿಸಿಕೊಂಡಂತೆ.
ನಮ್ಮನ್ನು ಅರ್ಥೈಸಿಕೊಳ್ಳಿ
ಹೊಸದಾಗಿ ಕಲಿತ ಭಾಷೆಯನ್ನು ಅರ್ಥೈಸಿಕೊಂಡಂತೆ.
ಇಷ್ಟು ಕೇಳಿದ್ದೇ ತಡ
ತುಟಿಗಳಿಂದ ಜೋತಾಡುತ್ತಿದ್ದ ಒಂದು ಅದೃಶ್ಯ ಟೊಂಗೆಯಿಂದ
ಹಾರಿದವು ಹಕ್ಕಿಗಳು
ಬಣ್ಣಬಣ್ಣದ ಗಾಳಿಮಾತುಗಳನ್ನು
ಚೀಂವ್ ಚೀಂವ್ ಎಂದು ಅರಚಿಕೊಳ್ಳುತ್ತಾ :"ಕೆಟ್ಟ ಚಾರಿತ್ರ್ಯದ ಹೆಂಗಸರು! ಕೆಟ್ಟ ಚಾರಿತ್ರ್ಯದ ಹೆಂಗಸರು!
ಯಾರದೋ ಕೃಪಾಪೋಷಣೆಯಲ್ಲಿ ಬೆಳೆದು
ಹಬ್ಬಿರುವ ಕಾಡು ಲತೆಗಳು!
ತಿಂದುಂಡು, ಸುಖದ ಆಲಸ್ಯದಲ್ಲಿ ಹೊರಳಾಡುವ
ಮಾಡಲು ಕೆಲಸವಿಲ್ಲದೇ ತೊಳಲಾಡುವ
ತಿರುಗಾಲಿ ಹೆಂಗಸರ ತೆವಲುಗಳೇ ಈ ಕಥೆ-ಕವಿತೆಗಳು!
ಇಷ್ಟಾಗಿ ಇವನ್ನು ಬರೆದವರು ಇವರೇ ಎಂದೇನು ಗೊತ್ತು!'
(ವಾರೆಗಣ್ಣಿನ ನೋಟ, ಮತ್ತೆ ವಾರೆಗಣ್ಣು)
ಮಿಕ್ಕ ಕಥೆ ಏನಿದ್ದರೂ ಬರಿ ವಾರೆಗಣ್ಣಿನ ನೋಟ.
ಓ ಪರಮಪಿತೃಗಳೇ,
ಪರಮಪುರುಷರೇ,
ನಮ್ಮನ್ನು ಕ್ಷಮಿಸಿ, ಇನ್ನು ನಮ್ಮನ್ನು ಕ್ಷಮಿಸಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ