ಫ್ಲೋರಿಡಾ ಎಂಬ ಹೆಸರಿನ ಕೋಣೆ
ಮೂಲ ಅಮೇರಿಕನ್ ಕವಿತೆ - ರಿಚರ್ಡ್ ಬ್ಲಾಂಕೋಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಓದುವ ಕೋಣೆಯಲ್ಲ, ಕೂಡಿಹಾಕುವ ಕೋಣೆಯೂ ಅಲ್ಲ,
ಅದಕ್ಕೆ ಅಮ್ಮ ಕೊಟ್ಟ ಹೆಸರು "ಫ್ಲೋರಿಡಾ"
ಸುಂದರ ಹೆಸರು, ಹೊರಗೆ ಅತ್ಯಂತ ಸುಂದರ ನೋಟ,
ಗಾಢ ಲಿಪ್ ಸ್ಟಿಕ್ ಬಣ್ಣದ ಕೆಂಪು ದಾಸವಾಳಗಳು
ಕಿಟಕಿ ಗಾಜಿಗೆ ಮುತ್ತಿಡುತ್ತವೆ, ತಂಗಾಳಿಯಲ್ಲಿತೇಲಿ ಬರುತ್ತದೆ ಹಿತ್ತಲಿನ ಮರದಿಂದ
ಲಕ್ಕೋಟೆ ಹಣ್ಣುಗಳ ಸಿಹಿ ಸುಗಂಧ
ಅದು ಬಿಸಿಲುಕೋಣೆಯಲ್ಲ,
ಆದರೆ ಸೂರ್ಯ ಅಲ್ಲಿಂದಲೇ ಹುಟ್ಟುತ್ತಿದ್ದ, ಮುಳುಗುತ್ತಿದ್ದ
ಬಾಳೆಲೆಗಳ ನೆರಳು ದಿನವಿಡೀ ಹರಿದಾಡುತ್ತಿತ್ತು ನೆಲದ ಮೇಲೆ,
ಮಳೆಯಾದರೆ ಹೆಚ್ಚು ಸಪ್ಪಳ ಇದೇ ಕೋಣೆಯಲ್ಲೇ
ಗಾಜಿನ ಗೋಲಿಗಳು ಬಾರಿಸಿದಂತೆ
ಯಾವಾಗ ಬೀಳುವುದೋ ಆಕಾಶದಿಂದ ತೆಂಗಿನಕಾಯಿ
ಎಂದು ಹೆದರಿದ್ದ ಛಾವಣಿಯ ಮೇಲೆ.
ಅದು ಆರಾಮಕೋಣೆಯಲ್ಲ, ಆದರೆ
ನಾನು ಕುಳಿತು ಕಳೆದಿದ್ದೇನೆ ತಾಸುಗಟ್ಟಲೆ
ಪಾಲಿಯೆಸ್ಟರ್ ಪರದೆಗಳ ಮೇಲೆ
ತಟಸ್ಥವಾದ ಚಿಟ್ಟೆಗಳ ಜೊತೆ
ಪಿಂಗಾಣಿಯ ನಾಜೂಕು ಬೊಂಬೆಗಳ ಮುಖಗಳ ಜೊತೆ
ಖಿನ್ನಮುಖದ ದೇವತೆಗಳು, ವಿದೂಷಕರು, ರಾಜಕುವರಿಯರು
ಗೋಡೆಯ ಮೇಲಿನ ಕಪಾಟಿನ ಗಾಜಿನ ತೆರೆಯಿಂದ
ನನ್ನ ಕಡೆಗೇ ನೋಡುವ ನೀಲಿ ಮತ್ತು ಬೂದುಬಣ್ಣದ ಕಣ್ಣುಗಳ ಜೊತೆ.
ಅದು ಟೆಲಿವಿಷನ್ ಕೋಣೆಯಲ್ಲ,
ಆದರೆ ನಾನು ಹುಡುಗನಾಗಿದ್ದಾಗ ಇಲ್ಲೇ ನೋಡಿದ್ದು
ಬೆಚ್ಚಿ ಬೀಳಿಸುವ ಧಾರಾವಾಹಿ, ಅಣ್ಣನಿಗೆ ಅಂಟಿಕೊಂಡು,ನೆತ್ತರುದೆವ್ವಗಳಿಂದ ಸುರಕ್ಷಿತನಾಗಿ,
ಸೋಫಾ ಮೇಲೆ ಕುಳಿತೇ ನಾನು ಮನಸೋತಿದ್ದು
ಕ್ಲಿಂಟ್ ಈಸ್ಟ್ ವುಡ್ ಗೆ ಮತ್ತು ನನ್ನ ಅಜ್ಜನಿಗೆ,
ಕೌಬಾಯ್ ಚಿತ್ರಗಳನ್ನು ನೋಡುತ್ತಾ,
ಧಾರಾವಾಹಿಗಳ ಸ್ತ್ರೀಪಾತ್ರಗಳೊಂದಿಗೆ ಅಳುವ ಅಜ್ಜಿಯೊಂದಿಗೆ.
ಅದೇನೂ ಪಡಸಾಲೆಯಲ್ಲ, ಆದರೂ
ಅಲ್ಲೇ ನನ್ನ ತಂದೆ ಎಲ್ವಿಸ್ ನ ಹಾಡುಗಳನ್ನು ಕೇಳುತ್ತಾ
ತಲೆಗೂದಲಲ್ಲಿ ಬೆರಳಾಡಿಸುತ್ತಿದ್ದದ್ದು, ಅಲ್ಲೇ
ಅವನು ಸಾಯುವ ಮುನ್ನ
ನೀಜ ಮತ್ತು ಕ್ಯಾಂಟ್ ಕೃತಿಗಳನ್ನು ಓದಿದ್ದು,
ಅಲ್ಲೇ ನನ್ನ ಅಮ್ಮ ಕಸ ಗುಡಿಸುವಾಗ
ಒಬ್ಬಂಟಿ ನರ್ತಿಸುತ್ತಿದ್ದದ್ದು, ಅಲ್ಲೇ ನಾನು ಸಾಲ್ಸಾ
ನರ್ತಿಸಲು ಕಲಿತದ್ದು ನನ್ನ ಮುದ್ದಿನ ಜೂಲಿಯಾಳ
ಬೃಹತ್ ಸ್ತನಗಳಿಗೆ ಒರಗಿಕೊಂಡು.
ನಗರದ ತುದಿಯಲ್ಲಿ, ಜೀರುಂಡೆಗಳ ಸಂಗಾತದಲ್ಲಿ,
ಬಟ್ಟೆ ಒಣಗಿಸುವ ಖಾಲಿ ತಂತಿಗಳ ಹೊರತಾಗಿ,
ಟೆಲಿಫೋನ್ ತಂತಿಗಳ ಮತ್ತು ಚಂದ್ರನ ಹೊರತಾಗಿ,
ಈ ರಾತ್ರಿ ನನ್ನೊಂದಿಗಿದೆ ನನ್ನ ಬದುಕು,
ಪಕ್ಕದಲ್ಲಿ ಕುಳಿತ ನನ್ನ ಹಳೆಯ ಸಂಗಾತಿಯಂತೆ
ಲಿವಿಂಗ್ ರೂಮಿನಲ್ಲಲ್ಲ, "ಫ್ಲಾರಿಡಾ"ದ ಬೆಳಕಿನಲ್ಲಿ,
ಮೌನವಾಗಿ, ಮೇಲೆ ಹೊಳೆಯುವ ತಾರೆಗಳಂತೆ,
ಅವುಗಳಷ್ಟೇ ಅವಶ್ಯಕವಾಗಿ.
ಟಿಪ್ಪಣಿ - ಪದ್ಯದ ಕೊನೆಯ ಸಾಲುಗಳನ್ನು ಓದಿದ ನಂತರ ಪದ್ಯವನ್ನು ಮತ್ತೊಮ್ಮೆ ಓದಿ. ಕವಿ ಎಲ್ಲಿ ಕುಳಿತಿದ್ದಾನೆ? "ಫ್ಲಾರಿಡಾ" ಅವನು ಹುಟ್ಟಿ ಬೆಳೆದ ಮನೆಯಾಗಿರಬಹುದು. ಈಗ ಅದು ಹಳೆಯ ಮನೆ. ಬಟ್ಟೆ ಒಣಗಿಸುವ ತಂತಿಗಳು ಖಾಲಿಯಾಗಿವೆ ಎನ್ನುವುದರ ಅರ್ಥವೇನು? ಪ್ರಾಯಶಃ ಈಗ ಅಲ್ಲಿ ದೊಡ್ಡ ಕುಟುಂಬ ನೆಲೆಸಿಲ್ಲ. ಮನೆ ಈಗ ಖಾಲಿ ಬಿದ್ದಿರಲೂ ಬಹುದು. ಅದನ್ನು ಮಾರಾಟ ಮಾಡಲು ಕವಿ ಬಂದಿರಬಹುದು. ಹಾಗೆ ಬಂದವನು ತನ್ನ ಜೀವನವನ್ನು ಮೆಲುಕು ಹಾಕುತ್ತಿದ್ದಾನೆ. ತನ್ನ ಜೀವನದಲ್ಲಿ ತನ್ನ ಸಂಗಾತಿಯಾದ "ಫ್ಲಾರಿಡಾ" ಎಂಬ ಕೋಣೆಯ ಅನೇಕ ಸಿಹಿ ನೆನಪುಗಳು ಅವನನ್ನು ಕಾಡುತ್ತಿವೆ. ಈ ಮನೆ ಪ್ರಾಯಶಃ ಬಹಳ ಚಿಕ್ಕದು. ಕವಿಯ ಕುಟುಂಬ ಅಂಥ ಶ್ರೀಮಂತಿಕೆಯನ್ನೇನೂ ಕಂಡಿಲ್ಲವೇನೋ. ನಡುಕೋಣೆಯಲ್ಲಿ ಕುಟುಂಬದವರೆಲ್ಲರ ಜೀವನವೂ ಕಳೆಯುತ್ತಿರಬಹುದು. ಈ ಮನೆ ಫ್ಲಾರಿಡಾ ರಾಜ್ಯದಲ್ಲಿತ್ತೇ? ಅಥವಾ ಒಮ್ಮೆ ಫ್ಲಾರಿಡಾ ರಾಜ್ಯಕ್ಕೆ ಹೋಗಬೇಕೆಂಬ ಆಸೆ ಹೊಂದಿದ್ದ ತಾಯಿ ಕೋಣೆಗೆ ಆ ಹೆಸರನ್ನು ಕೊಟ್ಟಳೆ? ಈಗ ಎಲ್ಲರೂ ದೊಡ್ಡವರಾಗಿ ಬೇರೆ ಬೇರೆಯಾಗಿದ್ದಾರೆನೋ. ವೃದ್ಧ ತಂದೆತಾಯಿ ಅಜ್ಜ-ಅಜ್ಜಿಯರು ಗತಿಸಿಹೋಗಿರಬಹುದು (ಮೇಲೆ ಹೊಳೆಯುವ ತಾರೆಗಳು ಅವರೇ ಇರಬಹುದು). ಆದರೆ ಅವರ ನೆನಪುಗಳು ಕವಿಯ ಸ್ಮೃತಿಯಲ್ಲಿವೆ. ಈ ನೆನಪುಗಳೇ ಅವನ ಬಾಳಿನ ಬೆಳಕು ಎಂಬ ಅರ್ಥವೂ ಕೊನೆಯ ಸಾಲುಗಳಲ್ಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ