ಕಾವ್ಯಯುಗಾದಿ
ಸಿ. ಪಿ. ರವಿಕುಮಾರ್
ಹೊಂಗೆ ಮರಕ್ಕೆ ಯಾರು ಓದಿ ಹೇಳಿದರು ಪಂಚಾಗ?
ಟೊಂಗೆ ಟೊಂಗೆಯಲ್ಲೂ ಹೂವು, ಗುಂಜಿಸುವ ಭೃಂಗ!
ಅಗೋ ಹಳದಿ ಹೂಗಳ ಸೆರಗು ಹೊದ್ದು ತಲೆಯ ಮೇಲೆ
ನಗುನಗುತ್ತಾ ನಿಂತ ಸ್ವರ್ಣವರ್ಷ ಮರಗಳ ಸಾಲೇ
ರಂಗವಲ್ಲಿ ಹಾಕುತ್ತಿವೆ ನಾನು ನಡೆವ ಹಾದಿಗೆ!
ರಾಗವೊಂದು ಮೊಳೆಯುತ್ತಿದೆ ನನ್ನ ಹಳೆಯ ಹಾಡಿಗೆ!
ಸಾಗುತ್ತಿದ್ದೆನಲ್ಲ ಇದೇ ರಸ್ತೆಯಲ್ಲಿ ಪ್ರತಿದಿನ,
ಮಾಗಿ ಚಳಿಗೆ ಮುದುರಿ ಮೌನತಳೆಯುತಿತ್ತು ಕವಿಮನ -
ಅಗಣಿತವೆನ್ನಿಸತೊಡಗಿ ಚಳಿಗಾಲದ ರಾತ್ರಿ,
ದುರ್ಗಮವೆನ್ನಿಸುತ್ತಿತ್ತು ಹಿಮಕವಿದ ಧಾತ್ರಿ!
ಈಗ ಏಕಾಏಕಿ ಸ್ವರ್ಣಪುಷ್ಪಗಳ ವೃಷ್ಟಿ!
ಸಾಗುವುದೇ ಹೀಗೇನೋ ಜಗದಲ್ಲಿ ಸೃಷ್ಟಿ!
ಯುಗಾಂತವು ಹೆರಿಗೆಯ ನೋವು, ಸಹನೆಯ ಪರೀಕ್ಷೆ, ಕಹಿ ಬೇವು
ಯುಗಾದಿ ಶಿಶುವಿನ ಕೇಕೆ, ಕವನದ ಮೊದಲ ಸಾಲು, ಮುಂಜಾವು.
(c) ಮಾರ್ಚ್ ೨೦೧೮
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ