ಅಮೃತವಿಶ್ವ


Person Doing Heart Hand Sign
ಅಮೃತಾಳನ್ನು ಕಾಲೇಜಿನಲ್ಲಿ ನೋಡಿದ ಕೂಡಲೇ ವಿಶ್ವ ಪೂರಾ ಬೋಲ್ಡ್ ಆಗಿಹೋದ. ಅವನ ಅದೃಷ್ಟ ಹೇಗಿತ್ತೆಂದರೆ ಅಮೃತಾ ಕೂಡಾ ಅವನನ್ನು ಇಷ್ಟ ಪಟ್ಟಳು. ಮನೆಗೆ ಕರೆದುಕೊಂಡು ಹೋಗಿ ತನ್ನ ತಂದೆತಾಯಿಗೆ ಪರಿಚಯ ಮಾಡಿಸಿದಳು. ಇದು ಫಿಲ್ಮ್ ಕತೆಯಾಗಿದ್ದರೆ ನೀವು ಅವರಿಬ್ಬರೂ ಹಾಡು ಹೇಳುತ್ತಾ ಮರಗಳ ಸುತ್ತಲೂ ಓಡುವುದನ್ನು ಕಲ್ಪಿಸಿಕೊಳ್ಳಬಹುದು. ಅಷ್ಟರಲ್ಲಿ ಇಂಟರ್ವಲ್.

ನೀವು ಪಾಪ್ ಕಾರ್ನ್ ಐಸ್ ಕ್ರೀಮ್ ಕೋಡುಬಳೆ ಎಲ್ಲಾ ತಿಂದು ಮತ್ತೆ ವಾಪಸ್ ಬಂದಾಗ ವಿಶ್ವ ಅಮೃತಾಳನ್ನು ಕಾಲೇಜ್ ಟ್ರಿಪ್ ಗೆ ಕರೆಯಲು ಬಂದಿದ್ದಾನೆ. ಅಮೃತಾ ಕಪ್ಪು ಡ್ರೆಸ್ ಹಾಕಿಕೊಂಡಿದ್ದಾಳೆ. ಅವಳು ಹಾಲಿನಲ್ಲಿ ಕೂತು ಒಂದು ಕೈಯಲ್ಲಿ ಮೊಬೈಲ್ ಹಿಡಿದು ಇನ್ನೊಂದು ಕೈಯಿಂದ ಬಾಳೆಹಣ್ಣು ತಿನ್ನುತ್ತಿದ್ದಾಳೆ.

ಅಮ್ಮೂ ಎಂದು ವಿಶ್ವ ಕರೆದಾಗ ಅವಳು ತಿರುಗಿ ಕೂಡಾ ನೋಡುತ್ತಿಲ್ಲ. ಅವಳು ಮೊಬೈಲಿನಲ್ಲಿ ಮಾತಾಡುತ್ತಾ ನಗುತ್ತಾ ತನ್ನದೇ ಲೋಕದಲ್ಲಿದ್ದದ್ದು ನೋಡಿ ವಿಶ್ವನಿಗೆ ಶಾಕ್, ಕೋಪ, ದುಃಖಎಲ್ಲಾ ಒಟ್ಟಿಗೆ ಆಗಿ ಅವನು ಕುಸಿಯುವುದೊಂದು ಬಾಕಿ. ಆದರೂ ಹೇಗೋ ಶಕ್ತಿ ತಂದುಕೊಂಡು ಅವಳ ಮುಂದೆ ಹೋಗಿ ನಿಲ್ಲುತ್ತಾನೆ.

ಅವಳು ಕೂಲಾಗಿ ವಾಟ್ ಎಂದು ಹುಬ್ಬೇರಿಸಿ ನೋಡುತ್ತಾಳೆ.

ಅಮ್ಮೂ! ಯಾರ ಜೊತೆ ಮಾತಾಡ್ತಿದೀಯ!

ಮೈಂಡ್ ಯುವರ್ ಓನ್ ಬಿಸಿನೆಸ್! ಹೂ ಆರ್ ಯೂ ಎನಿ ವೇ?

ವಿಶ್ವನಿಗೆ ಈಗ ನಿಲ್ಲಲೂ ಶಕ್ತಿಯಿಲ್ಲ. ಇದೇನು ಹುಡುಗಾಟ!

ಅಮ್ಮೂ! ನಿನಗೇನಾಯಿತು? ನನ್ನ ನೆನಪಿಲ್ಲ ಅಂತ ಹೇಳ್ತಿದೀಯಲ್ಲ?!

ಸ್ಟಾಪ್ ಕಾಲಿಂಗ್ ಮೀ ಅಮ್ಮೂ. ನೀನು ಯಾವ ದೊಡ್ಡ ಹೀರೋ ಅಂತ ನಿನ್ನನ್ನು ನಾನು ಗುರುತು ಹಿಡೀಬೇಕು? ಯಾರಯಾರದೋ ಮನೆಗೆ ಹೀಗೆ ನುಗ್ಗಿ ಅಮ್ಮೂ ಅಪ್ಪೂ ಅಂತ ಕರೆದರೆ ಏನು ಅಂದುಕೋಬೇಕು? ಹೂ ಆರ್ ಯೂ! ನಿನ್ನ ಗಡ್ಡ ನೋಡಿದ್ರೆ ಯಾರೋ ರೌಡಿ ಥರಾ ಕಾಣ್ತೀಯ!

ಅವಳ ಒಂದೊಂದು ಮಾತಿಗೂ ವಿಶ್ವ ಒಂದೊಂದು ಸೆಂಟಿಮೀಟರ್ ಕುಸಿಯುತ್ತಿದ್ದ. ಓ ವಿಧಿಯೇ! ಅಷ್ಟು ಹೊತ್ತಿಗೆ ಸರಿಯಾಗಿ ಒಂದು ದುಃಖಭರಿತ ಹಿನ್ನೆಲೆ ಗೀತೆ ಕೂಡಾ ಶುರುವಾಯ್ತು.

* * *

ವಿಶ್ವನಿಗೆ ದಿಕ್ಕೇ ತೋಚಲಿಲ್ಲ. ಅವನು ಅಲ್ಲಿಂದ ಎದ್ದು ಅದು ಹೇಗೆ ಹೊರಗೆ ಬಂದನೋ ಅವನಿಗೇ ಗೊತ್ತಿಲ್ಲ. ಹೇಗೋ ಸಾವರಿಸಿಕೊಂಡು ಬೈಕ್ ಹತ್ತಿದ. ಕಾಲೇಜಿನ ಕಡೆಗೆ ಬೈಕ್ ಓಡಿಸಿದ. ಅವನ ಮನಸ್ಸು ಕುದಿಯುತ್ತಿತ್ತು. ಅಮೃತಾ ನನ್ನ ಜೊತೆ ಹೀಗೆ ಆಟವಾಡಬಹುದೇ? ಅವಳು ಫೋನಿನಲ್ಲಿ ಯಾರೊಂದಿಗೆ ಮಾತಾಡುತ್ತಿದ್ದಳು? ಡಿಯರ್, ಡಾರ್ಲಿಂಗ್ ಎಂದೆಲ್ಲಾ ಮಾತಾಡುತ್ತಿದ್ದಳು. ನನ್ನನ್ನು ಸಂಪೂರ್ಣ ಅಲಕ್ಷಿಸಿದಳು! ತನ್ನ ಪರಿಚಯವೇ ಇಲ್ಲದಂತೆ ಉಪೇಕ್ಷಿಸಿದಳು!

ಕೋಪದಲ್ಲಿ ಅವನು ಬೈಕ್ ವೇಗವನ್ನು ಹೆಚ್ಚಿಸಿದ..ಎದುರಿಗೆ ಬರುತ್ತಿರುವ ಕಾರನ್ನು ಅವನು ನೋಡಲಿಲ್ಲ. ಅವನ ಮುಂದೆ ಕತ್ತಲು ಆವರಿಸಿತು.

ವಿಶ್ವ ಕಣ್ಣು ಬಿಟ್ಟಾಗ ಅವನ ಸುತ್ತಲೂ ಜನ ಘೇರಾಯಿಸಿದ್ದರು. ಎಲ್ಲರೂ ಅವನ ಕಡೆಗೆ ನೋಡುತ್ತಿದ್ದರು. ಆದರೆ ಗುಂಪಿನಲ್ಲಿದ್ದ ಒಂದು ಚಹರೆ ಅವನನ್ನು ಬೆಚ್ಚುವಂತೆ ಮಾಡಿತು. ಅಮೃತಾ!

ಅವಳ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. "ವಿಶ್ವ! ವಿಶ್ವ!" ಎಂದು ಬಡಬಡಿಸುತ್ತಿದ್ದಳು.

"ದೇವರೇ! ನನ್ನ ಪ್ರಾರ್ಥನೆ ನಿನಗೆ ಕೇಳಿಸಿತು! ಥ್ಯಾಂಕ್ ಯೂ!" ಎಂದು ಅವಳು ಕೂಗಿಕೊಂಡಳು. ವಿಶ್ವನ ತಲೆ ಸಿಡಿಯುತ್ತಿತ್ತು. ಮೈಕೈಗಳಲ್ಲೂ ನೋವಿತ್ತು.

ತನ್ನ ಬಿಳಿ ದುಪಟ್ಟಾ ಹರಿದು ಅವಳು ಅವನ ಹಣೆಯ ಗಾಯಕ್ಕೆ ಕಟ್ಟಿದಳು. "ಯಾರಾದರೂ ಹೆಲ್ಪ್ ಮಾಡಿ. ಪ್ಲೀಸ್ ಇವರನ್ನು ನನ್ನ ಗಾಡಿಯಲ್ಲಿ ಮಲಗಿಸಿ. ನಾನೇ ಅವರನ್ನು ಹತ್ತಿರದ ಕ್ಲಿನಿಕ್ಕಿಗೆ ಕರೆದುಕೊಂಡು ಹೋಗ್ತೀನಿ"

"ಬೇಡ!" ಎಂದು ವಿಶ್ವನಿಗೆ ಚೀರುವ ಮನಸ್ಸಾಯಿತು. ಆದರೆ ಅಷ್ಟು ತ್ರಾಣವಿಲ್ಲದೆ ಸುಮ್ಮನಾದ. ಇವಳ ಉಪಕಾರ ನನಗೇಕೆ! ನನ್ನನ್ನು ಅವಮಾನ ಮಾಡಿದ, ನನಗೆ ಮೋಸ ಮಾಡಿದ ಇವಳನ್ನು ನಾನು ಒಂದು ಕ್ಷಣವೂ ನೋಡಲಾರೆ! ವಿಶ್ವ ಕಣ್ಣುಮುಚ್ಚಿದ. ಅವನನ್ನು ಯಾರೋ ಇಬ್ಬರು ಮೇಲೆತ್ತಿ ಕಾರಿನ ಕಡೆಗೆ ಕರೆದೊಯ್ದರು. ಕಾರಿನಲ್ಲಿ ಅವನನ್ನು ಮಲಗಿಸುವ ಮುನ್ನ ವಿಶ್ವ ಗಮನಿಸಿದ. ಕಾರಿನ ಪಕ್ಕಕ್ಕೆ ಜಖಂ ಆಗಿದೆ! ಇದರ ಅರ್ಥ ... ತನ್ನ ಬೈಕ್ ಗುದ್ದಿದ್ದು ಇದೇ ಕಾರಿಗೆ! ಅಮೃತಾ ಓಡಿಸುತ್ತಿದ್ದ ಕಾರಿಗೆ! ಓ ಮೈ ಗಾಡ್! ಅವಳು ತನ್ನನ್ನು ಬೇಕೆಂದೇ ಅಪಘಾತದಲ್ಲಿ ಸಿಕ್ಕಿಸಿದಳೆ?! ನನ್ನನ್ನು ಮುಗಿಸಿಯೇ ಬಿಡುವ ಸಂಚೆ?

ಫೋನಿನಲ್ಲಿ ಅವಳು ನಗುತ್ತಾ ಮಾತಾಡುತ್ತಿದ್ದದ್ದು ನೆನೆಸಿಕೊಂಡ. ಡಿಯರ್ ... ಡಾರ್ಲಿಂಗ್! ಈಗ ತನ್ನನ್ನು ಅವಳ ಕಾರಿನಲ್ಲೇಕೆ ಕರೆದುಕೊಂಡು ಹೊರಟಿದ್ದಾಳೆ? ತನ್ನನ್ನು ಮುಗಿಸಿಬಿಡುವ ಸಂಚೇ?!

ಅವಳು ಡ್ರೈವರ್ ಸೀಟಿನಲಲ್ಲಿ ಕೂತು ಕಾರಿನ ಬಾಗಿಲು ಹಾಕಿದಳು. ಧಡ್ ಎಂಬ ಸದ್ದಿಗೆ ವಿಶ್ವನ ಎದೆ ಹೊಡೆದುಕೊಳ್ಳಲು ಪ್ರಾರಂಭಿಸಿತು. ಅವನ ಮನಸ್ಸು ವಿಹ್ವಲವಾಯಿತು. ಅಮ್ಮೂ ನನಗೇಕೆ ಮೋಸ ಮಾಡಿದೆ! ನಾನು ನಿನಗೇನು ಮಾಡಿದ್ದೆ ! ನಿನ್ನನ್ನು ಜೀವಕ್ಕಿಂತ ಪ್ರೀತಿಸಿದೆ! ನೀನು ನನ್ನೊಂದಿಗೆ ಆಟವಾಡಿದೆ!

ತಲೆ ನೋಯುತ್ತಿದ್ದರೂ ವಿಶ್ವನ ಮನಸ್ಸಿನಲ್ಲಿ ಆಲೋಚನೆಗಳ ಮಹಾಪೂರವೇ ನುಗ್ಗಿಬರುತ್ತಿತ್ತು. ಅವನಿಗೆ ಮತ್ತೊಂದು ಯೋಚನೆ ಹೊಳೆಯಿತು. ಅಮ್ಮುವಿಗೆ ಮಾನಸಿಕ ಕಾಯಿಲೆ ಇರಬಹುದೇ? ಕೆಲವರು ದ್ವಂದ್ವ ವ್ಯಕ್ತಿತ್ವ ಹೊಂದಿರುತ್ತಾರೆಂದು ಕೇಳಿದ್ದೇನೆ. ಅಮ್ಮು ಕೂಡಾ ಇಂಥದೇ ವ್ಯಾಧಿಯಿಂದ ಬಳಲುತ್ತಿರಬಹುದೇ? ಈಗ ಅವನ ಮನಸ್ಸು ಮತ್ತೊಮ್ಮೆ ಡೋಲಾಯಮಾನವಾಯಿತು. ಛೆ! ಅಮ್ಮು ನನ್ನ ಜೊತೆ ಆಟವಾಡಲಿಲ್ಲ! ಅವಳು ವಿಧಿಯ ಕೈಗೊಂಬೆ! ಅವನ ಕಣ್ಣುಗಳು ಮಂಜಾದವು.

"ವಿಶ್ವ! ಅದ್ಯಾಕೆ ಅಷ್ಟೊಂದು ಜೋರಾಗಿ ಬೈಕ್ ಓಡಿಸೋಕೆ ಹೋದೆ! ಇವತ್ತು ಬೇರೇನಾದರೂ ಆಗಿದ್ದಿದ್ದರೆ! ದೇವರ ದಯ! ಮೈಕೈಗೆ ಸ್ವಲ್ಪ ಗಾಯಗಳಾಗಿವೆ, ಅಷ್ಟೇ. ನನಗೂ ತಲೆಗೆ ಒಂದಿಷ್ಟು ಪೆಟ್ಟಾಗಿದೆ. ಆದರೆ ಹೆಚ್ಚಿಲ್ಲ. ನಿಮ್ಮ ತಂದೆತಾಯಿಗೆ ಫೋನ್ ಮಾಡಬೇಕು. ಅವರು ಇರೋದು ಚಿಕ್ಕಮಗಳೂರಲ್ಲಿ ಆಲ್ವಾ?"

ಅಬ್ಬಾ! ಅವಳ ಧ್ವನಿಯಲ್ಲಿ ಎಂಥ ಮೋಹಕತೆಯಿದೆ! ಅಮೃತ ಸುರಿದಂತಾಗುತ್ತಿದೆ. ಅವಳ ಹೆಸರೇ ಅಮೃತಾ! ವಿಶ್ವ ಆಯಾಸದಿಂದ ಕಣ್ಣುಮುಚ್ಚಿದ.

ಅವನು ಮತ್ತೊಮ್ಮೆ ಕಣ್ಣುಬಿಟ್ಟಾಗ ಅವನು ಒಂದು ಆಸ್ಪತ್ರೆಯ ಕೋಣೆಯಲ್ಲಿ ಮಲಗಿದ್ದ. ಇಡೀ ಕೋಣೆಯಲ್ಲಿ ಎಲ್ಲವೂ ಬೆಳ್ಳನೆಯ ವಸ್ತುಗಳು. ಬೆಳ್ಳನೆಯ ಗೋಡೆ, ಬೆಳ್ಳನೆಯ ಚಾದರ, ಬೆಳ್ಳನೆಯ ಬಾಗಿಲುಗಳು. ಡ್ರಿಪ್ಸ್ ಮೂಲಕ ಅವನ ನಾಡಿಗಳಲ್ಲಿ ಗ್ಲೂಕೋಸ್ ಇಳಿಯುತ್ತಿತ್ತು.

ಪರ್ಫ್ಯೂಮ್ ಪರಿಮಳ ತೇಲಿಬಂದು ಅವನು ಚಕಿತನಾಗಿ ಕಣ್ಣೆತ್ತಿ ನೋಡಿದ. ಕಪ್ಪು ಡ್ರೆಸ್ ಹಾಕಿದ ಅಮ್ಮು!

ಅವನು ಕ್ಷೀಣವಾಗಿ ನಕ್ಕು, "ಅಮ್ಮೂ! ಥ್ಯಾಂಕ್ಸ್!" ಎಂದ. ಅವಳು ಮುಖ ಸಿಂಡರಿಸಿದಳು. "ಓ ನೀನಾ!" ಎಂದು

ಮೂಗು ಮುರಿದಳು. ವಿಶ್ವನಿಗೆ ಮತ್ತೊಮ್ಮೆ ಆಘಾತವಾಯಿತು.

"ನೀನೇನು ನನ್ನನ್ನು ಫಾಲೋ ಮಾಡ್ತಿರೋ ಹಾಗಿದೆ! ಹೂ  ಎವರ್ ಯೂ ಆರ್, ಐ ಹೇಟ್ ಯೂ! ನೀನು ನನಗೊಂದು ಅಪಶಕುನ!" ಎಂದು ಅವಳು ಧಡಧಡ ಎಂದು ಕೋಣೆಯಿಂದ ಆಚೆಗೆ ಹೋದಳು.

* * *
ವಿಶ್ವನಿಗೆ ದಿಗ್ಭ್ರಾಂತಿಯಾಯಿತು. ಅಮೃತಾ ನಿಜಕ್ಕೂ ದ್ವಂದ್ವ ವ್ಯಕ್ತಿತ್ವ ಹೊಂದಿದ್ದಾಳೆ! ಅವಳ ವ್ಯಕ್ತಿತ್ವ ಇಷ್ಟು ಬೇಗ ಬದಲಾಯಿಸಲು ಏನು ಕಾರಣ? ಕಳೆದ ಮೂರು ತಿಂಗಳುಗಳಲ್ಲಿ ಇಂಥ ಒಂದು ಘಟನೆಯೂ ನಡೆಯಲಿಲ್ಲವಲ್ಲ! ಒಮ್ಮೆಲೇ ಈಗೇನಾಯಿತು? ಅವಳ ತಲೆಗೆ ಪೆಟ್ಟಾಯಿತೆಂದು ಹೇಳಿದಳಲ್ಲ. ಅದರಿಂದ ಹೀಗಾಯಿತೇ? ಆದರೆ ಪೆಟ್ಟಾಗಿದ್ದು ಅನಂತರ. ಮನೆಯಲ್ಲಿದ್ದಾಗಲೇ ಅವಳ ವಿಚಿತ್ರ ಸ್ವಭಾವದ ಅನುಭವ ತನಗೆ ಆಯಿತಲ್ಲ! ಏನೂ ತೋರದೆ ವಿಶ್ವನಿಗೆ ಕಣ್ಣಲ್ಲಿ ನೀರು ಬರುವಂತಾಯಿತು. "ಸಿಸ್ಟರ್ ..." ಎಂದು ಕ್ಷೀಣ ಧ್ವನಿಯಲ್ಲಿ ಕರೆದ. ಯಾರೂ ಬರಲಿಲ್ಲ. ಪಕ್ಕದಲ್ಲಿ ಹೊರಳಿದಾಗ ಹಾಸಿಗೆಗೆ ಜೋಡಿಸಿದ ಸ್ವಿಚ್ ಕಾಣಿಸಿತು. ಕಷ್ಟ ಪಟ್ಟು ಅದನ್ನು ಒತ್ತಿದ.

ಸ್ವಲ್ಪ ಹೊತ್ತಿನಲ್ಲಿ ಒಬ್ಬಳು ನರ್ಸ್ ಪ್ರವೇಶಿಸಿದಳು. "ಗುಡ್ ಈವನಿಂಗ್ ಮಿ. ವಿಶ್ವ. ಹೇಗಿದೀರಿ?" ಎಂದು ದೊಡ್ಡ ನಗೆ ಪ್ರದರ್ಶಿಸಿ ಕೇಳಿದಳು.

"ಈವನಿಂಗ್?!" ಎಂದು ವಿಶ್ವ ಹೌಹಾರಿದ.

ನರ್ಸ್ ತನ್ನ ವಾಚ್ ಗಮನಿಸಿ "ಈಗ ಸಂಜೆ ಆರೂವರೆ ಆಗಿದೆ. ಗುಡ್ ಈವನಿಂಗ್ ತಾನೇ?" ಎಂದಳು. ತಾನು ಇಲ್ಲಿಗೆ ಬಂದಾಗ ಮಧ್ಯಾಹ್ನ ಹನ್ನೆರಡೋ ಹನ್ನೆರಡೂವರೆಯೋ ಆಗಿದ್ದೀತು. ಇಷ್ಟು ಬೇಗ ಸಂಜೆಯಾಯಿತೆ? ಅವನ ಭಾವನೆ ಅರ್ಥಮಾಡಿಕೊಂಡವಳಂತೆ ನರ್ಸ್ "ನೀವು ಚೆನ್ನಾಗಿ ರೆಸ್ಟ್ ತೆಗೆದುಕೊಂಡಿದ್ದೀರ ಮಿ. ವಿಶ್ವ. ನಿಮಗೆ ಹಸಿವಾಗಿರಬಹುದು. ಇಲ್ಲಿ ಊಟದ ಸಮಯ ಸಂಜೆಯ ಏಳೂವರೆ. ನಿಮಗೆ ಬೇಕೆಂದರೆ ಜೂಸ್ ತರಲು ಹೇಳುತ್ತೇನೆ" ಎಂದಳು. ಅವನಿಗೆ ನಿಜವಾಗಲೂ ಹಸಿವಾಗಿತ್ತು. ಜೂಸ್ ತರಿಸಲು ಒಪ್ಪಿದ. ನರ್ಸ್ ಫೋನ್ ಮಾಡಿ ಆರ್ಡರ್ ಕೊಟ್ಟಳು.

"ಸಿಸ್ಟರ್, ಇಲ್ಲಿ ಬಿಲ್ ಕಟ್ಟಲು ನನ್ನ ಹತ್ತಿರ ಹಣ ಇಲ್ಲವಲ್ಲ ... ನನ್ನ ರೂಂಮೇಟ್ ಅಶ್ವಿನ್ ಬಂದರೆ ಅವನು ಕಟ್ಟುತ್ತಾನೆ," ಎಂದು ವಿಶ್ವ ಸಂಕೋಚದಿಂದ ಹೇಳಿದ.

ನರ್ಸ್ "ನೀವು ಇರೋದು ಸ್ಪೆಷಲ್ ವಾರ್ಡಿನಲ್ಲಿ. ಇಲ್ಲಿಗೆ ಬರುವ ಮುಂಚೆಯೇ ಒಂದು ದಿನದ ಬಿಲ್ ಕಟ್ಟಬೇಕು. ಅದಲ್ಲದೆ ಔಷಧವನ್ನು ನಿಮ್ಮ ಜೊತೆಗೆ ಇರುವವವರೇ ತಂದುಕೊಡಬೇಕು" ಎಂದಳು.

"..." ಅವನು ಅವಳ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದ.

"ಅಂದರೆ ನಿಮ್ಮ ಜೊತೆ ಬಂದವರು ಈಗಾಗಲೇ ನಿಮ್ಮ ಬಿಲ್ ಕಟ್ಟಿದ್ದಾರೆ ಅಂತ ಅರ್ಥ. ನೀವು ಈಗ ಯೋಚನೆ ಮಾಡದೆ ರೆಸ್ಟ್ ತೊಗೊಳ್ಳಿ" ಎಂದು ಅವನ ಟೆಂಪರೇಚರ್ ಇತ್ಯಾದಿಗಳನ್ನು ರೆಕಾರ್ಡ್ ಮಾಡಿದಳು. ನಂತರ ಗ್ಲೂಕೋಸ್ ಸಿರಿಂಜನ್ನು ಬಿಡಿಸಿ ಮೇಲಿಟ್ಟಳು.

"ನನ್ನನ್ನು ಕರೆದುಕೊಂಡು ಬಂದವಳು ಅಮೃತಾ ..."

"ಹೌದು. ಅವರೇ ಬಿಲ್ ಕಟ್ಟಿರಬಹುದು. ಅವರೂ ಕೂಡಾ ಇನ್ ಪೇಷೆಂಟ್."

"ಏನಂದ್ರಿ?"

"ಯಾಕೆ ಹಾಗೆ ನೋಡ್ತಿದೀರಿ? ಆಕ್ಸಿಡೆಂಟ್ ಆದಾಗ ಅವರಿಗೂ ಪೆಟ್ಟಾಗಿತ್ತಲ್ಲ."

"ಹೌದು. ಆದರೆ ಈಗತಾನೇ ಅವಳು ಈ ರೂಮಿಗೆ ಬಂದುಹೋದಳು."

"ಹೌದಾ?! ಅವರು ಇರೋದು ಕೆಳಗಿನ ಫ್ಲೋರಿನಲ್ಲಿ. ಅವರಿಗೂ ರೆಸ್ಟ್ ಅವಶ್ಯಕತೆಯಿದೆ. ಪೇಷೆಂಟ್ ಹಾಗೆಲ್ಲಾ ಓಡಾಡಕೂಡದು. ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತ ನರ್ಸ್ ಮೇಲೆ ಆರೋಪ ಬರುತ್ತೆ."

"ಸಿಸ್ಟರ್, ಅಮೃತಾಗೆ ತುಂಬಾ ಗಂಭೀರವಾದ ಪೆಟ್ಟಾಗಿದೆಯೇ?"

"ಅಂಥದ್ದೇನೂ ಇಲ್ಲ. ಸಡನ್ ಬ್ರೇಕ್ ಹಾಕಿ ಕಾರಿನಿಂದ ಹೊರಗೆ ಬರುವಾಗ ತಲೆ ಕಾರಿಗೆ ಬಡಿದು ಸ್ವಲ್ಪ ಪೆಟ್ಟಾಗಿದೆ. ಶಾಕ್ ಆಗಿದೆ. ನಿಮ್ಮನ್ನು ಅವರು ಹೇಗೋ ತಾವೇ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾರೆ. ರಿಯಲಿ ಬ್ರೇವ್ ಲೇಡಿ!
ನೀವು ಎಚ್ಚರ ಆದಾಗ ಫೋನ್ ಮಾಡಿ ಅಂತ ನಮಗೆ ರಿಕ್ವೆಸ್ಟ್ ಮಾಡಿದ್ದಾರೆ. ಅವರಿಗೆ ಫೋನ್ ಮಾಡಲೇ? ನೀವು ಫೋನಿನಲ್ಲಿ ಅವರ ಜೊತೆ ಮಾತಾಡಿ."

"ಬೇಡ."

"ಯಾಕೆ? ಅವರು ನಿಮ್ಮ ಬಗ್ಗೆ ಅದೆಷ್ಟು ಕಾಳಜಿ ಇಟ್ಟುಕೊಂಡಿದ್ದಾರೆ!" ಸಿಸ್ಟರ್ ಧ್ವನಿಯಲ್ಲಿ ಆಕ್ಷೇಪಣೆಯಿತ್ತು.

"ಬೇಡ ಸಿಸ್ಟರ್. ಯಾಕೆ ಅಂತ ಕೇಳಬೇಡಿ."

ಅಷ್ಟರಲ್ಲಿ ವಾರ್ಡ್ ಬಾಯ್ ಒಂದು ಟ್ರೇ ಮೇಲೆ ಲೋಟದಲ್ಲಿ ಮೂಸಂಬಿ ಹಣ್ಣಿನ ಜೂಸ್ ತಂದು ಮೇಜಿನ ಮೇಲಿಟ್ಟ. "ರಾತ್ರಿಯ ಊಟಕ್ಕೆ ಈಗಲೇ ಆರ್ಡರ್ ಕೊಡ್ತೀರಾ?" ಎಂದು ಕೇಳಿದ. ವಿಶ್ವ "ಈಗ ಬೇಡ. ನಾನೇ ಫೋನ್ ಮಾಡ್ತೀನಿ" ಎಂದು ಅವನನ್ನು ಕಳಿಸಿದ. ನರ್ಸ್ ಉಳಿದ ರೋಗಿಗಗಳನ್ನು ನೋಡಲು ತೆರಳಿದಳು. ವಿಶ್ವ ಮತ್ತೆ ಒಬ್ಬಂಟಿಯಾದ. ಜೂಸ್ ಕುಡಿದ ನಂತರ ಅವನಿಗೆ ಸ್ವಲ್ಪ ತ್ರಾಣ ಬಂತು.

ವಿಶ್ವನಿಗೆ ಅಮೃತಾಳನ್ನು ನೋಡಿ ಅವಳೊಂದಿಗೆ ಮಾತಾಡಬೇಕೆಂಬ ಆಸೆ ಅದಮ್ಯವಾಯಿತು. ತನ್ನನ್ನು ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ಕೊಡಿಸಿದ್ದಕ್ಕೆ ಕನಿಷ್ಠ ಧನ್ಯವಾದಗಳನ್ನಾದರೂ ತಿಳಿಸಬೇಕು. ಫೋನ್ ಮಾಡಿ ಅವಳ ರೂಮ್ ನಂಬರ್ ತಿಳಿದುಕೊಂಡ. ರೂಮಿಗೆ ಡಯಲ್ ಮಾಡಲು ಪ್ರಾರಂಭಿಸಿದವನು ಅರ್ಧಕ್ಕೇ ನಿಲ್ಲಿಸಿದ. ತಾನೇ ಅವಳನ್ನು ನೋಡಿಬರುವುದು ಮೇಲು ಎಂದು ನಿರ್ಧರಿಸಿದ.

ತಲೆ ಇನ್ನೂ ಸಣ್ಣಗೆ ನೋಯುತ್ತಿತ್ತು. ಮೈಕೈ ನೋವಿತ್ತು. ಆದರೂ ಕಷ್ಟಪಟ್ಟು ಕೆಳಗಿಳಿದ. ಸದ್ಯ ಯಾವ ಗಂಭೀರವಾದ ಗಾಯಗಳೂ ಆಗಲಿಲ್ಲವಲ್ಲ ಎಂದು ನಿಟ್ಟುಸಿರುಬಿಟ್ಟ. ನಿಧಾನವಾಗಿ ನಡೆಯುತ್ತಾ ಅವನು ಲಿಫ್ಟ್ ಹತ್ತಿರ ಬಂದ. ನರ್ಸ್ ರೌಂಡ್ ಮೇಲೆ ಹೋಗಿದ್ದಳು. ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿ ಮಾಡಲು ಬಂಧುಗಳು ಬರುವ ಸಮಯವಾದ್ದರಿಂದ ತುಂಬಾ ಗಲಾಟೆಯಿತ್ತು. ನರ್ಸ್ ಸ್ಟೇಷನ್ನಿನಲ್ಲಿ ಇದ್ದ ಇನ್ನೊಬ್ಬಳು ನರ್ಸ್ ಕೂಡಾ ಇವನನ್ನು ಗಮನಿಸಲಿಲ್ಲ.

ಅವನು ಲಿಫ್ಟ್ ಮೂಲಕ ಕೆಳಗಿಳಿದು ಅಮೃತಾ ಇದ್ದ ಫ್ಲೋರಿಗೆ ಬಂದ. ಕೋಣೆಗಳ ಸಂಖ್ಯೆ ಗಮನಿಸುತ್ತಾ ಸಾಗಿದ. ಜನರ ಓಡಾಟವಿತ್ತು. ಊಟ ತಂದುಕೊಡಲು, ರೋಗಿಗಳಿಗೆ ಶುಭಾಶಯ ಕೋರಲು ಬರುವ ಬಂಧುಮಿತ್ರರು ಓಡಾಡುತ್ತಿದ್ದರು. ಅವನು ನಡೆಯುವಾಗ ಸ್ವಲ್ಪ ಕುಂಟುತ್ತಿದ್ದ. ಕೈಕಾಲುಗಳಿಗೆ ಸ್ವಲ್ಪ ಬ್ಯಾಂಡೇಜ್ ಹಾಕಿದ್ದರು. ಆದರೂ ಯಾರೂ ಅವನನ್ನು ಗಮನಿಸಲಿಲ್ಲ.

ಕೋಣೆ 402ರ ಮುಂದೆ ಅವನು ಹೋಗಿ ನಿಂತ. ಒಳಗಿನಿಂದ ಧ್ವನಿ ಕೇಳಿಸುತ್ತಿತ್ತು.
"ನೋ ಡಾರ್ಲಿಂಗ್. ಸ್ವಲ್ಪ ತಲೆಗೆ ಪೆಟ್ಟಾಗಿದೆ ಅಷ್ಟೇ. ನಥಿಂಗ್ ಟು ವರಿ ... ನೋ! ನೀನು ಇಲ್ಲಿ ಬರೋದು ಬೇಕಾಗಿಲ್ಲ. ಬಂದ್ರೆ ನನಗೇನೋ ಇಷ್ಟವೇ! (ನಗು) ಆದರೆ ಆಸ್ಪತ್ರೆಯಲ್ಲಿ ಯಾಕೆ ಮೀಟ್ ಮಾಡೋದು! ನಾಳೆ ಸಂಜೆ ಸಿನಿಮಾಗೆ ಹೋಗೋ ಪ್ರೋಗ್ರಾಂ ಇದೆಯಲ್ಲ! ..."

ವಿಶ್ವನ ಕಿವಿಯಲ್ಲಿ ಕಾದ ಸೀಸ ಸುರಿದಂತಾಯಿತು. ಇಂಥ ಸಮಯದಲ್ಲೂ ಇವಳಿಗೆ ತನ್ನ ಫಿಲ್ಮ್ ಡೇಟ್ ಮುಖ್ಯವಾಯಿತೇ? ನಾನು ಇಲ್ಲಿ ನರಳುತ್ತಾ ಇರುವಾಗ ಇವಳು ಯಾರೋ ಬೇರೆಯವನ ಜೊತೆ ಫಿಲ್ಮ್ ನೋಡಲು ಹೋಗುತ್ತಾಳಂತೆ!

ಅವನು ತಡೆಯಲಾರದೆ ಒಳಗೆ ನುಗ್ಗಿ "ಸಾಕು ನಿಲ್ಸು!" ಎಂದು ಕೂಗಿದ.

ಫೋನ್ ಸಂಭಾಷಣೆಯನ್ನು ಅರ್ಧದಲ್ಲಿ ನಿಲ್ಲಿಸಿ ಅವಳು ಸರಕ್ಕನೆ ಹಿಂದಕ್ಕೆ ತಿರುಗಿ "ಓ! ಯೂ ಅಗೇನ್! ಮೈ ಗಾಡ್! ನೀನು ನನ್ನ ಫಾಲೋ ಮಾಡ್ತಿದೀಯ ಅಂತ ಕಾಣತ್ತೆ! ಕೂಡಲೇ ಇಲ್ಲಿಂದ ಹೋಗದೇ ಇದ್ರೆ ನಾನು ಸೆಕ್ಯೂರಿಟಿಗೆ ಫೋನ್ ಮಾಡಬೇಕಾಗುತ್ತೆ!" ಎಂದು ಧ್ವನಿ ಎತ್ತರಿಸಿ ಮಾತಾಡಿದಳು.

"ಅಮ್ಮು, ಸ್ಟಾಪ್ ಇಟ್! ನಿನ್ನ ಬಿಹೇವಿಯರ್ ನನಗೆ ತಡೆದುಕೊಳ್ಳೋಕಾಗ್ತಿಲ್ಲ. ಯಾರವನು? ಯಾರ ಜೊತೆ ಮಾತಾಡ್ತಿದೀಯ?"

"ಷಟಪ್! ಯಾರೋ ನೀನು ಲೋಫರ್! ನಾನು ಸೆಕ್ಯೂರಿಟಿಗೆ ಫೋನ್ ಮಾಡ್ತೀನಿ ತಾಳು!"

"ಯಾರು?" ಎಂದು ಒಂದು ಕ್ಷೀಣ ಧ್ವನಿ ಕೇಳಿಸಿತು. ಅವನು ಸರಕ್ಕನೆ ಆ ಕಡೆಗೆ ತಿರುಗಿ ನೋಡಿದ. ಮಂಚದ ಮೇಲೆ ಮಲಗಿದ್ದ ವ್ಯಕ್ತಿ ನಿಧಾನವಾಗಿ ಕಣ್ಣು ಬಿಟ್ಟು "ಓ ವಿಶ್ವ!" ಎಂದಿತು.

"ಅಮ್ಮು!!"

"ವಿಶ್ವ ನೀನು ಹೇಗಿದ್ದೀಯ! ತುಂಬಾ ಪೆಟ್ಟಾಗಿತ್ತಲ್ಲ!"

ಅವನು ಅವಾಕ್ಕಾಗಿ ಮಲಗಿದ್ದವಳ ಕಡೆಗೊಮ್ಮೆ ಮತ್ತು ಫೋನ್ ಹಿಡಿದವಳ ಕಡೆಗೊಮ್ಮೆ ನೋಡಿದ.

ಫೋನ್ ಹಿಡಿದ ಕಪ್ಪು ಡ್ರೆಸ್ ತೊಟ್ಟ ಯುವತಿಯೂ ಅವನ ಕಡೆಗೆ ಕುತೂಹಲದಿಂದ ನೋಡುತ್ತಿದ್ದಳು. "ದಿಸ್ ಈಸ್ ವಿಶ್ವ?" ಎಂದು ಮಲಗಿದ್ದವಳ ಕಡೆಗೆ ನೋಡಿ ಕೇಳಿದಳು.

"ಹೌದು ಅಂಜು! ಪ್ಲೀಸ್ ಮೀಟ್ ವಿಶ್ವ! ವಿಶ್ವ, ಇವಳು ನನ್ನ ಅವಳಿ ಸಿಸ್ಟರ್ ಅಂಜನಾ."

"ವೀ ಹಾವ್ ಆಲ್ರೆಡಿ ಮೆಟ್!" ಎಂದು ಅಂಜನಾ ನಗಲು ಪ್ರಾರಂಭಿಸಿದಳು.

ಅಮೃತಾ ... ಅಂಜನಾ... ವಿಶ್ವನ ತಲೆನೋವು ಈಗ ಮಾಯವಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)