ಅಶ್ವತ್ಥ ಮತ್ತು ಅಸ್ವಸ್ಥ (ಒಂದು ಅತಿಸಣ್ಣಕತೆ)

Brown and Green Trees Near Body of Water
"ಅಶ್ವತ್ಥ ಮರಕ್ಕೆ ಐದು ರಂಧ್ರ ಕೊರೆದು ವಿಷ ತುಂಬಿದರಂತೆ." ಎಂದು ಮೂಕಜ್ಜಿ ಪೇಪರ್ ಓದಿ ಹೇಳಿದಳು.

"ಅಯ್ಯೋ! ಯಾಕಂತೆ?" ಎಂದು ಮೊಮ್ಮಗ ಸುಬ್ಬರಾಯ ಕೇಳಿದ.

"ಅದನ್ನು ಬೀಳಿಸುವ ಪ್ರಯತ್ನ. ಒಳಗಿಂದ ಒಳಗೇ ನಾಶವಾಗಿ ಒಣಗಿಹೋದಾಗ ಅದನ್ನು ಬೀಳಿಸಬಹುದು."

"ಯಾಕೆ?"

"ಕೆಲವರಿಗೆ ಅದರ ಕಟ್ಟಿಗೆಯ ಮೇಲೆ ಕಣ್ಣು. ಕೆಲವರಿಗೆ ಅದು ಬೆಳೆದ ಸ್ಥಳದ ಮೇಲೆ ಕಣ್ಣು. ಕೆಲವರಿಗೆ ಅವರಿಗೇ ಅರ್ಥವಾಗದ ಅಸಹನೆ. ಕೆಲವರಿಗೆ ಯಾವುದೋ ಹಳೆಯ ಸೇಡು. ಕೆಲವರಿಗೆ ಅದರಲ್ಲಿ ನೆಲೆಸಿರುವ ಮಂಗಗಳನ್ನು ಓಡಿಸುವ ಹುಮ್ಮಸ್ಸು."

"ಆಯಿತಲ್ಲ, ಈ ಐದು ವಿಷಗಳೇ ಸಾಕಿತ್ತು."

"ಇಲ್ಲ, ಸುಬ್ಬ. ಅಶ್ವತ್ಥದ ಮರ ಹಾಗೆಲ್ಲಾ ಸಾಯುವುದಿಲ್ಲ. ನೀನು ನೋಡಿರಬಹುದು. ಅದು ಅಸಾಧ್ಯವೆನ್ನಿಸುವ ಕಡೆಯಲ್ಲೂ ಕುಡಿಯೊಡೆಯುತ್ತದೆ. ಕಟ್ಟಡದ ಆರನೇ ಮಹಡಿಯ ಗೋಡೆಯಲ್ಲೂ ಬೆಳೆಯಲು ಹವಣಿಸುತ್ತದೆ. ಇವರಿಗೆ ಅದನ್ನು ಕೊಲ್ಲುವ ಒತ್ತಾಸೆ ಎಷ್ಟಿದೆಯೋ ಅದರ ಎರಡು ಪಟ್ಟು ಬದುಕುವ ಆಸೆ ಅಶ್ವತ್ಥದ ಮರಕ್ಕಿದೆ. ಅದು ನೂರಾರು ಕಾಲ ಬದುಕುತ್ತದಂತೆ. ಅಶ್ವತ್ಥದ ಮರದ ಕೆಳಗೆ ಹಗಲಲ್ಲಿ ಕುಳಿತರೆ ನಿನಗೆ ಆಕ್ಸಿಜನ್ ಸಿಕ್ಕುತ್ತದೆ. ನಿನ್ನ ಮನಸ್ಸು ನಿರಾಳವಾಗುತ್ತದೆ. ರಾತ್ರಿ ಅದರ ಕೆಳಗೆ ಮಲಗಿದರೆ ಅಲ್ಲಿ ಆಕ್ಸಿಜನ್ ಸಿಕ್ಕದೆ ಭೂತಪ್ರೇತಗಳೂ ಕಂಡಾವು."

"ಇದಕ್ಕೇ ಕೆಲವರು ಈ ಮರದಲ್ಲಿ ಭೂತವಿದೆ ಎಂದು ಹೆದರುತ್ತಾರೇನೋ!"

"ಭೂತ ಮರದಲ್ಲಿ ಮಾತ್ರ ಇದೆಯೇ? ಅದು ಇರುವುದು ನಮ್ಮ ಮನಸ್ಸಿನಲ್ಲಿ. ನಮ್ಮ ನೆನಪಿನಲ್ಲಿ. ಭೂತ ಓಡಿಸಬೇಕಾಗಿರುವುದು ನಮ್ಮ ಒಳಗಿನಿಂದ ಹೊರತು ಅಶ್ವತ್ಥದ ಮರದಿಂದಲ್ಲ. ಈಗ ನನ್ನನ್ನೇ ನೋಡು. ಅದೆಷ್ಟು ಭೂತಗಳಿವೆ ನನ್ನಲ್ಲಿ. ಒಂದು ಕಾಲದಲ್ಲಿ ಒಬ್ಬ ಮಂತ್ರವಾದಿಯನ್ನೂ ಕರೆಸಿದ್ದರಲ್ಲ ಭೂತ ಓಡಿಸಲು, ಅವನು ನನಗೆ ಮರದ ಬಿರಲಿನಿಂದ ಹೊಡೆದ ಕಥೆ ನಿನಗೆ ಹೇಳಿದ್ದೇನಲ್ಲ. ಅದರಿಂದ ನನ್ನ ಭೂತಗಳು ಬಿಟ್ಟು ಓಡಿಹೋದವೇ? ಹೋದರೂ ಎಲ್ಲಿಗೆ ಹೋಗುತ್ತಿದ್ದವಪ್ಪ! ನನ್ನಿಂದ ಹೋಗಿ ಇನ್ನೊಬ್ಬರನ್ನು ಸೇರಿಕೊಳ್ಳುತ್ತಿದ್ದವು! ಏನು ಸಾಧಿಸಿದ ಹಾಗಾಯಿತು? ಹಾಗೆ ಹೋದ ಭೂತ ಬೇಕೆಂದರೆ ಮತ್ತೆ ನನ್ನ ಬಳಿಗೇ ಮರಳುವದಿಲ್ಲವೋ! ನಾನು ಭೂತದೊಂದಿಗೆ ಬದುಕುವುದನ್ನು ಕಲಿತಾಗ ಅದು ಶಾಂತವಾಯಿತು. ಅದನ್ನು ಬೈದು, ಅದಕ್ಕೆ ಹೆದರಿ, ಅದನ್ನು ಓಡಿಸಲು ಪ್ರಯತ್ನ ಪಟ್ಟಷ್ಟೂ ಅದು ಬಾಧಿಸುತ್ತದೆ. ಅದನ್ನು ಆರಾಧಿಸಿದರೆ ಅದು ಮತ್ತಷ್ಟು ಆರಾಧನೆಯನ್ನು ಬೇಡುತ್ತದೆ. ಈಗ ನನ್ನ ಸ್ಮರಣೆಯಲ್ಲಿ ಅದೆಷ್ಟು ಭೂತಗಳಿವೆ ಸುಬ್ಬ! ಹಳೆಯ ಭೂತಗಳೊಂದಿಗೆ ಹೊಸಹೊಸ ಭೂತಗಳು ಪ್ರತಿದಿನ ಸೇರಿಕೊಳ್ಳುತ್ತಲೇ ಇರುತ್ತವೆ. ಅಶ್ವತ್ಥದ ಮರದಲ್ಲಿ ಪ್ರಾಣಿಪಕ್ಷಿಗಳು ಸೇರಿಕೊಂಡಂತೆ! ವಿಷ ಹಾಕಿ ಭೂತಗಳನ್ನು ಕೊಲ್ಲಲು ಆಗುತ್ತದೋ? ಭೂತ ಇರುವುದು ನಮ್ಮ ಮನಸ್ಸಿನಲ್ಲೇ ಅಲ್ಲವೋ? ಅದಕ್ಕೆ ಯಾವ ವಿಷ ತರುತ್ತೀಯ?"

ಮೂಕಜ್ಜಿಯ ಪ್ರಶ್ನೆಗೆ ಏನೂ ಹೇಳಲು ತೋರದೆ ಸುಬ್ಬರಾಯ ಸುಮ್ಮನಿದ್ದ. ಮೂಕಜ್ಜಿ ನಕ್ಕಳು.

"ರಾತ್ರಿ ಕಂಡ ಭೂತಗಳು ಬೆಳಗ್ಗೆ ಹೊರಟು ಹೋಗುವುದಿಲ್ಲವೋ? ರಾತ್ರಿ ಬೆದರಿಸಿದ ಅಶ್ವತ್ಥ ಬೆಳಗ್ಗೆ ನಮಗೆ ನೆಮ್ಮದಿ ನೀಡುವುದಿಲ್ಲವೋ? ಅಶ್ವತ್ಥದ ಬಳಿಗೆ ಹೋಗಿ ಅದನ್ನು ಕಡಿದು ಹಾಕುವ ಜನರನ್ನು ಬೆದರಿಸಲೆಂದೇ ಭೂತಗಳನ್ನು ಮರ ಸೃಷ್ಟಿ ಮಾಡುವುದೋ ಏನೋ! ಎಲ್ಲಾ ಸರಿ, ಈಗ ಭೂತಕ್ಕಿಂತ ನನ್ನನ್ನು ಕಾಡುತ್ತಿರುವುದು ಚಳಿ! ನಿನ್ನ ಹೆಂಡತಿ ಅದೇನೋ ಕಾಫಿ ಉಪ್ಪಿಟ್ಟು ಮಾಡುತ್ತಿದ್ದಳಲ್ಲ, ಅದರ ಕಥೆ ಏನಾಯಿತು ನೋಡಿ ಬಾ!"

"ಮೂಕಜ್ಜಿ, ನಿನಗೆ ಕಾಫಿ ಉಪ್ಪಿಟ್ಟು ಕೂಡಾ ಕನಸಿನಲ್ಲಿ ಬಂದದ್ದೋ?" ಎಂದು ನಗುತ್ತಾ ಸುಬ್ಬರಾಯ ಅಡುಗೆಮನೆಯ ಕಡೆಗೆ ಹೊರಟ.
-- ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)