೨೧ ಲಿಮರಿಕ್ಸ್

ಸಿ. ಪಿ. ರವಿಕುಮಾರ್ 

Two Yellow Emoji on Yellow Case

(೧) ದೇವರಲ್ಲಿ ಬೇಡಿದ್ದು 

ಇದನ್ನು ಹೇಳಿದ್ದು ಈಮೋ ಫಿಲಿಪ್ಸ್, ಅಮೆರಿಕನ್ ನಗೆಗಾರ
ಕೇಳಿಕೊಂಡನಂತೆ ದೇವರಲ್ಲಿ "ಒಂದು ಬೈಕ್ ಕಳಿಸು ಹೇಗಾರಾ"
ದೇವರು ಹಾಗೆಲ್ಲಾ ಕಳಿಸುತ್ತಾನೆಯೇ, ಪೆದ್ದು!
ಎಂದು ಪಾರ್ಕ್ ಮಾಡಿದ್ದ ಹೊಸ ಬೈಕ್ ಕದ್ದು
ದೇವರೇ ಕ್ಷಮಿಸಿಬಿಡು ಎಂದು ಪ್ರಾರ್ಥಿಸಿದನಂತೆ ರವಿವಾರ

(೨) ಕಲಹಪ್ರಿಯ 

ನಾರದನೆಂಬ ಸೇಜು
ಕಳಿಸಿದ ಮೊದಲ ಮೆಸೇಜು
ಎಡಬಲಗಳಿಗೂ ಚುಚ್ಚಿ
280 ಬೈಟ್‌ನಲ್ಲಿ ಕಚ್ಚಿ
ನೋಡುತ್ತಿದ್ದ ಕಾಮೆಂಟ್ ಕಲಹಗಳ ಮೋಜು

(೩) ಪಾಲಿಟಿಕ್ಸ್ 

"ಲ್ಯಾಟಿನ್ ಭಾಷೆಯಲ್ಲಿ 'ಪಾಲಿ' ಬಹುವಚನ ಸೂಚಿ"
-- ನಟ ರಾಬಿನ್ ವಿಲಿಯಮ್ಸ್ ಹೀಗೆ ಚುಚ್ಚಿದನು ಸೂಜಿ:
"ಇನ್ನು ಟಿಕ್ಸ್ ಎಂದರೆ ನಿಮಗೆಲ್ಲ ಗೊತ್ತು
ರಕ್ತವನ್ನೆಲ್ಲಾ ಹೀರಿಬಿಡುವ ಜಂತು
ಪಾಲಿಟಿಕ್ಸ್ ಎಂದರೆ ಗೊತ್ತಾಯಿತೇ ಎಂಥದದು ಬೂಚಿ?"

(೪)  ಒಂದೇ ಏಟಿಗೆ ಎರಡು ಹಣ್ಣು 

ಹೀಗೆ ಹೇಳಿದನಂತೆ ಜಾನತನ ಸ್ವಿಫ್ಟ
(ಸಿದ್ಧವಾಗುತ್ತದೆ ಅವನ ಜಾಣತನ ಸ್ಪಷ್ಟ)
"ಏರುತ್ತಿರುವ ಜನಸಂಖ್ಯೆ
ಹಾಗೂ ಜಗತ್ತಿನ ಹಸಿವಿನ ಸಮಸ್ಯೆ
ಎರಡಕ್ಕೂ ನರಮಾಂಸ ಭಕ್ಷಣೆಯೇ ಉತ್ರ"


(೫) ಒಗಟು 

ಅದು ಮೇಲೆ ಹೋಗುತ್ತೆ
ಕೆಳಗೂ ಬರುತ್ತೆ
ಆದರೂ ಕದಲೋದಿಲ್ಲ ಒಂಚೂರೂ
ಥಟ್ಟಂತ ಹೇಳು ಏನಿರಬಹುದು
ಗೊತ್ತಾಗಲಿಲ್ವಾ? ಬೆಟ್ಟದ್ ರಸ್ತೆ!

(೬)  ಫಿಲಾಸಫಿ 

ನಿಟ್ಟುಸಿರಿಟ್ಟು ಅವನೆಂದ: "ಬದುಕೆಂದರೆ ಅಷ್ಟೇ!
ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ತೆರೆಯುತ್ತೆ!"
"ಇರಬಹುದು ಸರ್, ಆದರೆ ಕಾರಿನ ರಿಪೇರಿ
ನೀವು ಈಗಲೇ ಮಾಡಿಸಲಿಲ್ಲಾಂದ್ರೆ ಭಾರೀ
ಡಿಸ್ಕೌಂಟ್ ನಮಗೆ ಕೊಡಬೇಕು ಮತ್ತೆ!"


(೭)  ಛೋಟೀ ಸೀ ಆಶಾ 

"ಮತ್ತೊಮ್ಮೆ ಶಿಮ್ಲಾಗೆ ಹೋಗುವ ಆಸೆಯಾಯ್ತು"
"ನೀವು ಶಿಮ್ಲಾಗೆ ಹೋಗಿದ್ದೀರಾ?" (ಆಶ್ಚರ್ಯವಿತ್ತು)
ಇಲ್ಲವೆಂದಾಗ ಲಕ್ಷ್ಮಿ ಸುಮ್ಮನಿರಲಾರದೆ
"ಮತ್ತೆ?" ಎಂದು ಕೇಳಿದರು ಶಾರದೆ
"ಏನಿಲ್ಲ ಶಿಮ್ಲಾಗೆ ಹೋಗುವ ಆಸೆ ಮತ್ತೊಮ್ಮೆ ಆಯ್ತು"

(೮) ಗುಂಡ 

ಪ್ಲೇಸ್ಕೂಲಿನಿಂದ ಕರೆತಂದು ಮಗುವನ್ನು ಗಂಡ
"ಅಬ್ಬಾ ಯಾಕೇ ಅಳ್ತಾನೆ ಒಂದೇ ಸಮನೆ ಪ್ರಚಂಡ!
ಟೆಂಪರೇಚರ್ ನೋಡು ಜ್ವರವಿದೆಯೋ ಹೇಗೆ"
ಎಂದಾಗ ತಾಳ್ಮೆಯಿಂದಲೇ ಉತ್ತರಿಸಿದಳಾಕೆ
"ಚೆನ್ನಾಗೇ ಇದೆ ಮಗು, ಆದರೆ ಇವನಲ್ಲ ನಮ್ ಗುಂಡ"


(೯) ಮಂದ 

ನವವಧುವಿನ ಅಡಿಗೆ ಯಾಕೋ ಬಹಳ ನಿಧಾನ
ಬೆಳಗ್ಗೆ ಶುರುವಾದರೆ ಮುಗಿಯುವುದು ಮಧ್ಯಾಹ್ನ
ಯಾಕೆ ಹೀಗೆಂದು ಕೇಳಿದಾಗ ಅತ್ತೆ
ಸೊಸೆಯು ತಿಳಿಸಿದ ಕಾರಣ ಇಷ್ಟೇ
ದಿನಾ ಫಾಸ್ಟ್ ಫುಡ್ ತಿನ್ನುವುದು ಸರೀನಾ?


(೧೦) ಸಾರ್ ಸಾರ್ 

ಎಷ್ಟ್ ಚೆನ್ನಾಗಿ ಮಾಡಿದ್ದೀ ಕಾವೇರು
ಘಮಘಮಾ ಅವರೆಕಾಯ್ ಸಾರು
ಬೇಕು ಇನ್ನೊಂದ್ ಸಲ ಅಂದ್ರು
ಚಪ್ಪರಿಸ್ಕೊಂಡು ತಿಂದ್ರು
ಇದಕ್ಕೇ ಅನ್ನೋದು ಡೈನ್ ಓ ಸಾರು


(೧೧) ಹೊಸತು 

ಸಕ್ಕರೆ ಬದಲು ಹಾಕಿರುವೆ ಚಹಾಗೆ ಉಪ್ಪು
ಹೊಟ್ಟೆಗೆ ಹಾಕಿಕೊಳ್ಳಿರಿ ನನ್ನೆಲ್ಲಾ ತಪ್ಪು
ಎಂದಾಗ ಪತ್ನಿ ಮದುವೆಯಾದ ಹೊಸತರಲ್ಲಿ 
ಪ್ರತಿಯೊಬ್ಬ ಪತಿಯೂ ನೀಲಕಂಠನ ರೂಪ ತಾಳಿ 
ಕಣ್ಮುಚ್ಚಿ ಕಪ್ಪಿನಿಂದ ಸ್ವೀಕರಿಸುವನು ಸಿಪ್ಪು 

(೧೨) ಎಳ್ಳು ಬೆಲ್ಲ 

ಎಲ್ಲರಿಗೂ ಹಂಚಲಾಗದು ಎಳ್ಳುಬೆಲ್ಲ
ಒಳ್ಳೆಸುದ್ದಿ ಧಾರಾಳ ಹಂಚಬಹುದಲ್ಲ!
ಕಳಿಸಿ ಎಲ್ಲರಿಗೂ ಹ್ಯಾಪಿ ಸಂಕ್ರಾಂತಿ ವಿಶಸ್ಸು
ನಿಮಗೆ ಎಲ್ಲದರಲ್ಲೂ ಸಿಕ್ಕಲಿ ಯಶಸ್ಸು
ನನಗೆ ಮಾತ್ರ ಕಳಿಸಿ ಸಿಹಿ ಪೊಂಗಲ್ಲ

(೧೩) ನಾಗಾ 

ನಾಗಾನಂದ ಎಂದಿಟ್ಟರು ಹೆಸರು ಹುಟ್ಟಿದಾಗ
ಆದರೆ ಎಲ್ಲರೂ ಕರೆಯುವ ಹೆಸರು ನಾಗಾ
ಸೋಜಿಗವೆಂದರೆ ಅವನು ಯುವಕನಾದಾಗ
ಏನು ಕೊಟ್ಟರೂ ಕುಡಿಯಲು ನಾಗಾ
ಲೋಟದಿಂದಲೇ ಕುಡಿಯುತ್ತಾನೆ ಬೇಗ ಬೇಗ

(೧೪) ಸೆಮಿನಾರಿಗೆ 

ಎಲ್ಲಿಗೆ ಹೊರಟಿರಿ ಸವಾರಿ ಅಪರಾತ್ರಿ ಹೊತ್ತು?
ಎಂದು ಕೇಳಿದ ಪೊಲೀಸ್ ಪೇದೆಗೆ ಹೇಳಿದನು ಗುಟ್ಟು
"ಕುಡಿತದ ದುಷ್ಪರಿಣಾಮಗಳ ಕುರಿತ ಸೆಮಿನಾರಿಗೆ ಹೊರಟೆ"
"ಯಾರು ಕೊಡುತ್ತಾರೆ ಸೆಮಿನಾರ್ ಈ ಹೊತ್ತು, ತಲೆಹರಟೆ!"
"ನನ್ನ ಹೆಂಡತಿ" ಎಂದ ಬಾಡಿದ ಮುಖ ಹೊತ್ತು

(೧೫) ಸಂದರ್ಶನ

"ನೋಡಿ ಈ ಉದ್ಯೋಗ ಬೇಡುವ ಜವಾಬ್ದಾರಿ ಅಸಾಮಾನ್ಯ!
ಹೊರಬಲ್ಲಿರಾ ನೀವು?" ಎಂದಾಗ ಕೆರಳಿ ಸ್ವಾಭಿಮಾನ
"ಸರ್ ಯೋಚನೆಯೇ ಬೇಡ ನಿಮಗೆ ಈ ವಿಷಯದಲ್ಲಿ!
ಅಸಂಖ್ಯ ನಿದರ್ಶನ ಕೊಡಬಲ್ಲೆ ಪೂರ್ವ ಉದ್ಯೋಗದಲ್ಲಿ
"ಇದಕ್ಕೆ ನೀವೇ ಜವಾಬ್ದಾರಿ" ಎನ್ನುತ್ತಿದ್ದದ್ದು ಬಹಳ ಸಾಮಾನ್ಯ"

(೧೬) ಆಮೇಲೆ 

ಸಂದರ್ಶಕರು ಹೇಳಿದರು "ಕಂಗ್ರಾಟ್ಸ್ ಮಿ. ಕಿಟ್ಟಿ!
ಸಂಬಳ ವರ್ಷಕ್ಕೆರಡು ಲಕ್ಷ ಮತ್ತು ಊಟ ಬಿಟ್ಟಿ!
ಆರು ತಿಂಗಳ ನಂತರ ನಿಮ್ಮ ಭತ್ತೆ
ಡಬ್ಬಲ್ ಆಗುತ್ತದೆ ನಿಮಗೆ ಗೊತ್ತೇ?"
"ಆರು ತಿಂಗಳ ನಂತರವೇ ಸೇರಬಹುದೇ ಮಿ ಶೆಟ್ಟಿ?"

(೧೭) ಪ್ರೋಗ್ರಾಮರ್ 

ರಾತ್ರಿ ಕತ್ತಲೆಯಲ್ಲಿ ಯಾಕೋ ಪ್ರೋಗ್ರಾಮು
ಬರೆಯುತ್ತಾ ಕೂತಿದ್ದೀ ಸಿದ್ಧರಾಮು?
ಏನೋ ಹಾಗೆ ಕೇಳ್ತೀಯಾ ಜಗ್ಗು!
ಲೈಟ್ ಹಾಕಿದರೆ ಕೂಡಲೇ ಬಗ್ಗು
ಬರೋದಿಲ್ವೇನೋ ಎಂದು ತಿಳಿಸಿದನು ಸ್ಕೀಮು

(೧೮)  ಮುಕ್ತಮುಕ್ತ 

ಹೇಳಿದ್ದೆನಲ್ಲ ಮಲಗುವ ಮುನ್ನ ರಾತ್ರಿಹೊತ್ತು
ಮಲಗಬೇಕು ಕೋಣೆಯ ಕಿಟಕಿ ತೆಗೆದುಬಿಟ್ಟು --
ಮಾಡಿದಿರಾ? ಹೋಯಿತೇ ನಿಮ್ಮ ಒಣಕೆಮ್ಮು?
ಇಲ್ಲ ಡಾಕ್ಟ್ರೇ ಕೆಮ್ಮು ಹೋಗಿಲ್ಲ ಇನ್ನೂ!
ಹೋಗಿದ್ದು ನನ್ನ ಅಚ್ಚುಮೆಚ್ಚಿನ ಹವಳದ ಸೆಟ್ಟು


(೧೯) ಜಾಹೀರಾಯ್ತು 

ಕೊಟ್ಟಿದ್ದಿರಲ್ಲ ನಿಮ್ಮ ಅಂಗಡಿಗೆ ಬೇಕೆಂದು
ಒಬ್ಬ ಸೆಕ್ಯೂರಿಟಿ ಗಾರ್ಡ್ ಎಂದು ಜಾಹೀರಾತು
ಪ್ರತಿಕ್ರಿಯೆ ಏನಾದರೂ ಬಂತೇ ಅದಕ್ಕೆ?
ಬಂತು, ದೊಡ್ಡ ಲಾಕ್ ಹಾಕಿದ್ದರೂ ಕದಕ್ಕೆ
ಮುರಿದು ದೋಚಿದ್ದಾರೆ ಸ್ವಲ್ಪವೂ ಬಿಡದೆ ಗುರುತು


(೨೦) ಡಾಕ್ 

ಮಾಡುವೆ ನಿಮ್ಮ ಬಗ್ಗೆ ಡಾಕ್ಯುಮೆಂಟರೀ
ಎಂದು ನಿರ್ದೇಶಕ ಪ್ರಾಮಿಸ್ ಮಾಡಿದ ರೀ
ಏನಾಯಿತೋ ಒಮ್ಮೆಲೇ
ಪತ್ರಿಕೆ ನೋಡಿದ ಮೇಲೆ
ಕೇಳುತ್ತಿದ್ದಾನೆ "ಬೇಕು ನಿಮ್ಮೆಲ್ಲ ಡಾಕ್ಯುಮೆಂಟ ರೀ"

(೨೧)

ಹೋಟೆಲ್ ಮುಂದೆ ನಿಂತರು  ಕನ್ನಡ ಮೇಷ್ಟ್ರು
ಟೀ ಕುಡಿಯಬೇಕೆನ್ನಿಸುವಂತಿತ್ತು ಕೊರೆವ ವಿಂಟರ್ ಉ
ಅಲ್ಲಿ ಹಾಕಿತ್ತೊಂದು ದೊಡ್ಡ ಜಾಹೀರಾತು
"ನಮ್ಮ ಸ್ಪೆಷಲ್ ಶುಂಠಿ ಚಹಾ ಕುಡೀದೇ ಹೋಗಬೇಕು"
ಪಾಪ ಹಾಗೇ ಹೊರಟರು ಮೇಷ್ಟ್ರು ದೀರ್ಘ ನಿಟ್ಟುಸಿರಿಟ್ಟು





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)