ಕೋಆಲಾ, ಕಾಂಗರೂ ಮತ್ತು ಬೆಂಕಿ (ಸ್ವಂತ ಕವಿತೆ)

ಆಸ್ಟ್ರೇಲಿಯಾದ ಕಾಡುಗಳಲ್ಲಿ
ಕಚ್ಚಾಡುತ್ತಿದ್ದ
ಕೋಆಲಾ ಕರಡಿಗಳ ಕಣ್ಣುಗಳಲ್ಲಿ
ತುಂಬಿಕೊಂಡಿತ್ತು
ಪರಸ್ಪರ ದ್ವೇಷದ ಧಗೆ
ಹೀಗಾಗಿ
ಕಾಣಲೇ ಇಲ್ಲ
ಹಬ್ಬಿಕೊಳ್ಳುತ್ತಿರುವ ದಟ್ಟ ಹೊಗೆ

ಒಂದು ಇನ್ನೊಂದರ  ವಿರುದ್ಧ
ಕಾರುತ್ತಿದ್ದವು ಕಿಡಿ
ಮಸೆಯುತ್ತಿದ್ದವು ಮಚ್ಚಿನ ಕಾವು
ಒಳಗೊಳಗೇ ಬೇಯುತ್ತಿತ್ತು ಕಿಚ್ಚು
ಒಮ್ಮೊಮ್ಮೆ ಕಣ್ಣುಗಳಿಂದ  ಫೂತ್ಕರಿಸುತ್ತಿತ್ತು
ಬೆಂಕಿಯ ಜ್ವಾಲೆ
ಹೀಗಾಗಿ
ಕಾಣಲೇ ಇಲ್ಲ
ಹರಡಿಕೊಳ್ಳುತ್ತಿರುವ ಹಳದಿ ಅಲೆ.

ತನ್ನ ಮಕ್ಕಳನ್ನು ತನ್ನ ಮಡಿಲಲ್ಲಿ
ಬಚ್ಚಿಟ್ಟುಕೊಂಡು
ನೆಗೆಯುತ್ತಿದ್ದ ಕಾಂಗರೂ ಸಂತತಿಗೆ
ಯಥೇಚ್ಛ ಹುಲ್ಲು ತಿಂದು
ಹೊಟ್ಟೆ ತುಂಬಿದಾಗ
ಕೋಆಲಾ ಕರಡಿಗಳ ದೃಷ್ಟಿಯುದ್ಧವನ್ನೇ ನೋಡುತ್ತಾ
ಆನಂದಿಸುತ್ತಿದ್ದವು
ಒಳಗೇ ಬೆಚ್ಚಗೆ ಮಲಗಿದ್ದ ಮರಿಗಳೂ
ಹೊರಗೆ ಹಾಕಿ ತಲೆ
ಕಣ್ಣುಬಿಟ್ಟು ನೋಡುತ್ತಿದ್ದವು ಪಿಳಿಪಿಳಿ
ಯಾಕೋ ಅಮ್ಮನ ಮಡಿಲಿನ ಕಾವು
ಹೆಚ್ಚಾಗುತ್ತಿದೆ ಎಂಬ ಕಳಕಳಿ

ಆಸ್ಟ್ರೇಲಿಯಾದ ನಿಬಿಡಾರಣ್ಯಗಳಲ್ಲಿ
ಹೀಗಿದ್ದಾಗ ಸೂಪರ್ ಚಾರ್ಜ್ ವಾತಾವರಣ
ಯಾರೋ ಗೀರಿದರು ಬೆಂಕಿಕಡ್ಡಿ
ಯಾರೋ ಎಸೆದರು ಸಿಗರೆಟ್ ಕೊನೆ
ಯಾರೋ ಮಸೆದರು ಮಚ್ಚಿನ ಮೊನೆ

ಕಣ್ತುಂಬಾ ಹೊಗೆ ತುಂಬಿದ್ದ
ಕೋಆಲಾ ಕರಡಿಗಳಿಗೆ ಕಾಣಲಿಲ್ಲ
ಹೊಟ್ಟೆ ತುಂಬಾ ಕಿಚ್ಚು ತುಂಬಿದ್ದ
ಕಾಂಗರೂಗಳಿಗೆ ಕಾಣಲಿಲ್ಲ
ಬೆಚ್ಚಗೆ ತಾಯಿಯ ಮಡಿಲಲ್ಲಿ
ಮಲಗಿದ ಮರಿಗಳಿಗೆ ಗೊತ್ತಾಗಲೇ ಇಲ್ಲ


ಸಿ.ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)