ಹನುಮಾನ ಚಾಲೀಸಾ
(ಪೀಠಿಕೆ - ತುಲಸೀದಾಸರು ರಚಿಸಿದ ಹನುಮಾನ್ ಚಾಲೀಸಾ ಬಗ್ಗೆ ಗೊತ್ತಿಲ್ಲದವರು ಯಾರು? ಎಂ.ಎಸ್. ಸುಬ್ಬುಲಕ್ಷ್ಮಿ ಮೊದಲಾಗಿ ಅನೇಕ ಗಾಯಕರು ಹಾಡಿದ ಹನುಮಾನ್ ಚಾಲೀಸಾ ಪ್ರತಿನಿತ್ಯ ರೇಡಿಯೋ/ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತದೆ. ಭಾರತದ ಮಂದಿರಗಳಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಯುತ್ತಲೇ ಇರುತ್ತದೆ. ಹನುಮಂತನನ್ನು ಸ್ಮರಿಸಿ ತುಲಸೀದಾಸರು ರಚಿಸಿದ ನಲವತ್ತು ಸಾಲುಗಳ ರಚನೆಯೇ ಹನುಮಾನ್ ಚಾಲೀಸಾ. ಪ್ರಾರಂಭದಲ್ಲಿ ಕವಿ ಹನುಮಂತನನ್ನು ತನಗೆ ಬಲ-ಬುದ್ಧಿ-ವಿದ್ಯೆ ನೀಡಲೆಂದು ಪ್ರಾರ್ಥಿಸುತ್ತಾರೆ. ಇದಾದ ನಂತರ ಹನುಮಂತನನ್ನು ಕುರಿತು ಸ್ತುತಿ ಮತ್ತು ಹನುಮಂತನ ಸ್ಮರಣೆಯಿಂದ ಸಿಗುವ ಲಾಭವನ್ನು ತುಲಸೀದಾಸರು ಹೇಳುತ್ತಾರೆ. ಕೊನೆಯಲ್ಲಿ ಹನುಮಂತನನ್ನು ತನ್ನ ಹೃದಯದಲ್ಲಿ ರಾಮ-ಲಕ್ಷ್ಮಣ-ಸೀತೆಯರೊಂದಿಗೆ ಬಂದು ನೆಲೆಸು ಎಂದು ಪ್ರಾರ್ಥಿಸುತ್ತಾರೆ.)
ಶ್ರೀಗುರು ಪದ್ಮಪಾದಗಳ ಧೂಳು ತೊಳೆಯಲೆನ್ನ ಮನದ ಕನ್ನಡಿಯ ನಿಜಮುಖ
ವರ್ಣಿಸುವೆ ರಘುವರನ ವಿಮಲಯಶ, ಯಾವುದು ನೀಡುವುದೋ ನಾಲ್ಕು ಫಲಗಳ ಸುಖ
ವರ್ಣಿಸುವೆ ರಘುವರನ ವಿಮಲಯಶ, ಯಾವುದು ನೀಡುವುದೋ ನಾಲ್ಕು ಫಲಗಳ ಸುಖ
ಬುದ್ಧಿಹೀನ ನಾನೆಂದು ಬಗೆದು ಸ್ಮರಿಸುವೆನಿದೋ ರಕ್ಷಿಸಲಿ ಪವನಕುಮಾರ
ಬಲಬುದ್ಧಿವಿದ್ಯೆಗಳ ವರ ನೀಡಿ ಮಾಡಲೆನ್ನ ಸಕಲ ಕ್ಲೇಶವಿಕಾರಗಳ ದೂರ
ಜೈ ಹನುಮಂತ, ಜ್ಞಾನಗುಣಸಾಗರ, ಜೈ ಕಪೀಶ, ಮೂರು ಲೋಕೋದ್ಧಾರ
ಜೈ ಹನುಮಂತ, ಜ್ಞಾನಗುಣಸಾಗರ, ಜೈ ಕಪೀಶ, ಮೂರು ಲೋಕೋದ್ಧಾರ
ರಾಮದೂತ, ಅತುಲಿತ ಬಲಧಾಮ, ಅಂಜನಿಪುತ್ರ, ಪವನಸುತ ನಾಮ
ಮಹಾವೀರ, ವಿಕ್ರಮ ವಜ್ರಾಂಗಿ, ಕುಮತಿ ನಿವಾರಕ, ಸನ್ಮತಿಗಳ ಸಂಗಿ
ಹೊನ್ನ ಮೈಬಣ್ಣ, ಕೇಸರಿ ವೇಷ, ಕಿವಿಯೊಳು ಕುಂಡಲ, ಗುಂಗುರು ಕೇಶ
ಕೈಯಲಿ ಹಿಡಿದಿಹೆ ವಜ್ರವ ಧ್ವಜವ, ಜನಿವಾರ ಅಲಂಕರಿಸಿದೆ ಭುಜವ,
ಶಿವನವತಾರ, ಕೇಸರೀನಂದನ, ತೇಜಪ್ರತಾಪಿ ಮಹಾಜಗವಂದನ ,
ವಿದ್ಯಾನಿಧಿ, ಸದ್ಗುಣಿ, ಅತಿ ಚತುರ, ರಾಮಕಾರ್ಯ ಮಾಡಲು ಕಾತುರ,
ರಾಮಚರಿತೆ ಕೇಳಲು ಮಹದಾಸೆ, ಲಕ್ಷ್ಮಣಸೀತಾರಾಮಮನವಾಸಿ
ಸೂಕ್ಷ್ಮರೂಪದೊಳು ಸೀತೆಗೆ ನಮನ, ವಿಕಟರೂಪದೊಳು ಲಂಕಾದಹನ
ಸೂಕ್ಷ್ಮರೂಪದೊಳು ಸೀತೆಗೆ ನಮನ, ವಿಕಟರೂಪದೊಳು ಲಂಕಾದಹನ
ಭೀಮರೂಪದೊಳು ಅಸುರ ಸಂಹಾರ, ಶ್ರೀರಾಮನ ಕೆಲಸಕೆ ನೇತಾರ
ನೀಡಿದೆ ಲಕ್ಷಣನಿಗೆ ಮರುಜೀವ, ಎದೆಗಪ್ಪಿದ ಹರುಷದಿ ರಘುವೀರ
ಮಳೆಗರೆದನು ರಘುಪತಿಯು ಪ್ರಶಂಸೆ, ನೀನೂ ಸೋದರ ಭರತನ ಹಾಗೆ
ಯುಗಸಹಸ್ರವೂ ನಿನ್ನ ಯಶಸ್ಸಿನ ಗಾನ, ಹೀಗೆ ಹರಸಿ ನೀಡಿದ ವರದಾನ
ಸನಕಾದಿಕ ನಾರದ ಮುನಿವಂದ್ಯ, ಬ್ರಹ್ಮಶಾರದಾ ದೇವತಾಮಾನ್ಯ
ನಮಿಸಲಿ ಯಮಕುಬೇರ ದಿಕ್ಪಾಲ, ಕವಿಗಳು ಹೊಗಳುತ್ತಿರಲನುಗಾಲ
ಮರೆವನೆೇ ಸುಗ್ರೀವನು ಉಪಕಾರ, ಕೊಡಿಸಿದೆ ರಾಮನಿಂದ ರಾಜ್ಯಭಾರ
ವಿಭೀಷಣನು ನಿನ್ನನು ಅನುಸರಿಸಿ ಆಗಲಿಲ್ಲವೇ ಲಂಕಾಧಿಪತಿ?
ಮಧುರಫಲವೆಂದು ರವಿಯನು ಬಗೆದೆ, ಪಡೆಯಲು ಸಹಸ್ರಯೋಜನ ಜಿಗಿದೆ
ಸೀತೆಗೆ ಮುದ್ರಿಕೆ ನೀಡುವ ಕಾರ್ಯ ಜಲಧಿ ಲಂಘಿಸಿದೆ ಏನಾಶ್ಚರ್ಯ
ಇರಲಿ ಯಾವುದೇ ಕಾರ್ಯ ದುರ್ಗಮ ನಿನ್ನ ಅನುಗ್ರಹವಿದ್ದರೆ ಸುಗಮ
ರಾಮನ ನೆಚ್ಚಿನ ಸೇವಕ ನೀನೇ ನೀನಿಲ್ಲದೆ ಹೊರಡದು ರಾಜಾಜ್ಞೆ
ಸುಖ ಪಡೆವರು ಶರಣಾದವರೆಲ್ಲ ನೀ ಜೊತೆಗಿದ್ದರೆ ಭಯವೇನಿಲ್ಲ
ನಿನ್ನಯ ತೇಜಕೆ ಬೇರಾರು ಸರಿ ದುಷ್ಟಶಕ್ತಿ ನಡುಗುತ್ತವೆ ಹೆದರಿ
ಓಡಿಹೋಗುವುವು ಭೂತಪಿಶಾಚಿ ಮಹಾವೀರನ ಹೆಸರೇನು ಕೇಳಿ
ರೋಗಗಳು ನಾಶ, ನೋವು ನಿರ್ನಾಮ, ಬಿಡದೆ ಜಪಿಸಿದರೆ ಹನುಮನ ನಾಮ
ಕಷ್ಟಸಂಕಟಗಳಿಂದ ವಿಮೋಚನ, ಹನುಮನ ನೆನೆದರೆ ಮನ-ಕ್ರಮ-ವಚನ
ತಾಪಸಿ ರಾಜನು ನೀಡಿದ ಕೆಲಸ, ಮಾಡಲು ನಿನಗೆಲ್ಲಿಲ್ಲದ ಹರುಷ
ಯಾರು ತಂದರೂ ಮನೋಭಿಲಾಷೆ, ಪೂರೈಸುವೆ ಅವರೆಲ್ಲರ ಆಸೆ
ಮೆರೆದೆ ಶೌರ್ಯ ನಾಕೂ ಯುಗದೊಳಗೆ, ಕೀರ್ತಿ ಹರಡಿ ನಾಕೂ ದಿಸೆಗಳಿಗೆ
ಸಾಧು ಸಂತರಿಗೆ ನೀಡುವೆ ಶ್ರೀರಕ್ಷೆ, ಅಸುರರ ಕೊಲ್ಲುವೆ, ಭಯವೇತಕ್ಕೆ
ಅಷ್ಟಸಿದ್ಧಿ ನನನಿಧಿಗಳ ಒಡೆಯ, ಸೀತಾಮಾತೆಯು ನೀಡಿದ ಅಭಯ
ರಾಮರಸಾಯನವಿದೆ ನಿನ್ನಬಳಿ, ಸದಾ ರಾಮಕಿಂಕರನಾಗಿ ಉಳಿ
ನಿನ್ನ ಭಜಿಸಿ ಶ್ರೀರಾಮನ ಪಡೆದು ಜನ್ಮಜನ್ಮಗಳ ದುಃಖವ ಕಳೆದು
ಅಂತ್ಯದಲ್ಲಿ ರಘುಪತಿಪುರ ಪ್ರಾಪ್ತಿ, ಆಜನ್ಮ ಭಕ್ತನೆಂಬ ಸಂಕೀರ್ತಿ
ಬೇಡ ಅನ್ಯ ದೇವತೆಗಳ ಧ್ಯಾನ, ಹನುಮನ ನೆನೆದರೆ ಸುಖಪ್ರದಾನ
ಸಕಲ ಪೀಡೆ-ಸಂಕಟ ಪರಿಹಾರ, ಸ್ಮರಿಸಿದರೂ ಹನುಮದ್ಬಲವೀರ
ಜೈ ಜೈ ಜೈ ಹನುಮಾನ ಶ್ರೀಗುರು, ಕೃಪಾಕಟಾಕ್ಷವ ನಮ್ಮೆಡೆ ಬೀರು
ಭಜಿಸಿದರಿದನು ನೂರಾವರ್ತಿ, ಸುಖಸಮೃದ್ಧಿ, ಬಂಧನಮುಕ್ತಿ
ಪಠಿಸಲು ಈ ಹನುಮಾನ ಚಾಲೀಸಾ, ಖಚಿತ ವಿಜಯ, ಸಾಕ್ಷಿಯು ಗೌರೀಶ
ತುಲಸೀದಾಸ ಸದಾ ಹರಿದಾಸ, ಮಾಡು ನಾಥ ಎನ್ನೆದೆಯೊಳು ವಾಸ
ಪವನತನಯ, ಸಂಕಟಹರಣ ಮಂಗಳಮೂರ್ತಿರೂಪ, ರಾಮಲಕ್ಷಣಸೀತೆಯೊಡಗೂಡಿ ಹೃದಯದಲ್ಲಿರು ಸುರಭೂಪ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ