ಪ್ಲವ

ಪ್ಲವವು ತರಲಿ ನವಪಲ್ಲವ ನಮ್ಮೆಲ್ಲರ ಬಾಳಲಿ
ಕವಲು ಒಡೆದ ದಾರಿ ಮತ್ತೆ ಒಂದಾಗಿ ಸೇರಲಿ
ತವಕ, ಕ್ಷೋಭೆ, ಅನಿಶ್ಚಿತತೆ, ಭೀತಿ ಹಿಂದೆ ಸರಿಯಲಿ
ಕವಿತೆಯಲ್ಲಿ ಮತ್ತೆ ಮಾವು ಮಲ್ಲಿಗೆಗಳು ಬಿರಿಯಲಿ.

ಕೆಟ್ಟ ಕನಸಿನಿರುಳಿನಂತೆ ಕಳೆದು ಹೋದ ಶಾರ್ವರೀ
ಬಿತ್ತಿಹೋದ ಭೀತಿಭಾವ ಕತ್ತಲಂತೆ ಕರಗಲಿ
ದಟ್ಟಗಪ್ಪು ಮೋಡದಂಚಿನಲ್ಲಿ ಬೆಳ್ಳಿ ಮಿಂಚಲಿ
ಮತ್ತೆ ಸ್ಥೈರ್ಯ ಹುಟ್ಟಿ ಪ್ಲವದ ಕಣ್ಣಿನಲ್ಲಿ ಹೊಳೆಯಲಿ

ಒಡೆದ ವಿಶ್ವದಲ್ಲಿ ಮತ್ತೆ ಒಂದೇ ಬಿಂಬ ಮೂಡಲಿ
ಒಡಕಲು ಸ್ವರ ಒಂದಾಗಿ ಒಂದೆ ರಾಗ ಹಾಡಲಿ
ಕಡೆದ ಕಡಲಿನಲ್ಲಿ ಸುಧೆಯ ಹೊತ್ತು ತರಲಿ ಪ್ಲವ
ತಡೆದು ಗಂಟಲಲ್ಲಿ ನಂಜು ಕಾಯುತಿಹನು ಶಿವ!

(c) ಸಿ. ಪಿ. ರವಿಕುಮಾರ್, ಏಪ್ರಿಲ್ ೧೩, ೨೦೨೧



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)