ಖಂಡಿತ ಖಡಾಖಂಡಿತ
ಖಂಡಿತ ಎಂದರೆ ಯಾವುದನ್ನು ಖಂಡಗಳಲ್ಲಿ ವಿಭಜಿಸಲಾಗಿದೆಯೋ ಅದು. ಅವರು ಖಂಡಿತವಾದಿ ಎಂದರೆ ಅವರ ಮಾತು ಏಕ್ ಮಾರ್ ದೋ ಟುಕಡಾ ರೀತಿಯದು ಎಂದೇ ಅರ್ಥ. ವಾದ ಮಂಡನೆ ಮಾಡುವವರು ಕೆಲವರು. ವಾದವನ್ನು ಖಂಡನೆ ಮಾಡುವವರು ಹಲವರು. ಇಂಥವರನ್ನು ಟಿವಿ ವಾದವಿವಾದ ಕಾರ್ಯಕ್ರಮಗಳಲ್ಲಿ ಪ್ರತಿದಿನ ನೋಡಿ ನಮಗೆ ಈಗ ಅಭ್ಯಾಸ ಆಗಿಹೋಗಿದೆ. ಮಂಡನೆ ಮಾಡುವ ಮುಂಚೆಯೇ ಖಂಡನೆ ಮಾಡುವವರು, ವಾದಗಳ ಮುಂಡನ ಮಾಡುವವರು, ಪ್ರತಿವಾದಿಗಳನ್ನು ಚಂಡಾಡುವವರು, ಭಂಡ ವಾದಗಳನ್ನು ಮಾಡುವವರು, ಚಂಡಿ ಹಿಡಿದು ಕೂಡುವವರು, ಹೀಗೆ ವಾದಿಗಳಲ್ಲಿ ಅನೇಕಾನೇಕ ಪ್ರಕಾರಗಳು. ಕೆಲವರಂತೂ ಡಿಬೇಟಿಗೆ ದಬ್ಬೇಟು ತಿನ್ನಲೆಂದೇ ಬರುತ್ತಾರೆ ಎನ್ನುವ ಅನುಮಾನ ನನಗೆ ಬರುತ್ತದೆ. ಇಂಥವರನ್ನು ಕರೆಸಿ ಎಲ್ಲರ ಎದುರು ಮುಂಡನ ಮಾಡಿಸಿ ಮನರಂಜನೆ ನೀಡುವುದು ಟಿವಿ ಆಂಕರ್ ಉದ್ದೇಶ.
ಸರಿ, ಖಂಡಿತ ಎಂದರೇನು ಎಂದು ನಿಮಗೆ ಖಂಡಿತಾ ಅರ್ಥವಾಗಿದೆಯಲ್ಲ, "ಖಡಾಖಂಡಿತ" ಎಂದರೆ ಏನು ಅರ್ಥವೋ! ಖಡಾ ಎಂದರೆ ಹಿಂದಿಯಲ್ಲಿ ನಿಂತಿರುವ ಎಂದು ಅರ್ಥ. ಖಡಕ್ ಚಾಯ್ ಎಂದರೆ ಯಾವ ಚಹಾ ಬಟ್ಟಲಲ್ಲಿ ಚಮಚ ನಿಲ್ಲಬಲ್ಲದೋ ಅಂತಹ ಸ್ಟ್ರಾಂಗ್ ಚಹಾ. ಲಕ್ಕಿ ರೆಸ್ಟೋರಾಂ ಎಂಬಲ್ಲಿ ನಾನು ಹಿಂದೆ ಕುಡಿಯುತ್ತಿದ್ದ ಚಾಯ್ ಇಂಥದ್ದು. ಇಂಥ ಧಾಬಾ ಶೈಲಿಯ ಖಾನಾವಳಿಗಳಲ್ಲಿ ಬೆಳಗ್ಗೆ ಚಹಾ ಪಾತ್ರೆಗೆ ಸೊಪ್ಪು ಹಾಕಿದರೆ ಅದು ಇಡೀ ದಿನ ಕುದಿಯುತ್ತದೆ. ಚಹಾ ಬಣ್ಣ ಸ್ವಲ್ಪ ಪೇಲವ ಎನ್ನಿಸಿದರೆ ಮೇಲೆ ಇನ್ನೂ ಒಂದಿಷ್ಟು ಸೊಪ್ಪು ಹಾಕುತ್ತಾರೆ. ಅವರು ಚಹಾ ಕಿತ್ತಲಿಯನ್ನು ಅಕ್ಷಯಪಾತ್ರೆಯಂತೆ ಪರಿಗಣಿಸಿ ಎಂದೂ ತೊಳೆಯುವುದೇ ಇಲ್ಲ ಎಂದು ನನ್ನ ಅನುಮಾನ. ಕಾಢಾ ಎಂದರೆ ಕಷಾಯ. ಕುದ್ದು ಕುದ್ದು ಕಷಾಯವಾದ ಖಡಕ್ ಚಾಯ್ ಕುಡಿದರೆ "ಸತ್ತಂತಿಹರನು ಬಡಿದೆಚ್ಚರಿಸಿ" ಎದ್ದು ನಿಲ್ಲಿಸುವ ಕಾರಣದಿಂದಲೂ ಖಡಕ್ ಎಂಬ ಗುಣವಾಚಕ ರೂಢಿಗೆ ಬಂದಿರಬಹುದು. ಖಡಾ ಪ್ಲಸ್ ಖಂಡಿತ ಎಂದು ಕನ್ನಡ ಪಂಡಿತರು ಪದವನ್ನು ಖಂಡಿಸಿದರೆ ಖಡಾಖಂಡಿತ ಎಂಬ ಪದದ ಗೂಢಾರ್ಥ ಸಿಕ್ಕಬಹುದು. "ನಿಂತುಕೊಂಡಲ್ಲೇ ಖಂಡನೆ ಮಾಡಿದ" ಎಂದರೇನು? ಟಿವಿ ಡಿಬೇಟ್ ವಾದಿಪ್ರತಿವಾದಿಗಳು ಕುಳಿತುಕೊಂಡೇ ವಾದ ಮಾಡುತ್ತಾರೆ. ಕೋಪವು ವಿಕೋಪಕ್ಕೆ ಹೋಗಿ ಎದ್ದು ನಿಂತರೆ ಕ್ಯಾಮೆರಾ ಅವರ ಚೆಹರೆಯಲ್ಲಿ ತಾಂಡವ ಆಡುವ ಕೋಪವನ್ನು ಸೆರೆ ಹಿಡಿಯದಲ್ಲ! ಸ್ಟೂಡಿಯೋದಲ್ಲಿ ಮಾತುಕತೆಗೆ ಕರೆದಾಗ ಜಯಲಲಿತಾ ಅವರು ಕೋಪದಿಂದ ಮೇಲೆದ್ದು ನಿಂತದ್ದು ಖಡಾಖಂಡಿತ ಎಂದೇ ವಿಮರ್ಶಿಸಬೇಕು.
"ನಮ್ಮ ಮನೆಗೆ ಖಂಡಿತಾ ಬನ್ನಿ" ಎನ್ನುವ ಆಹ್ವಾನ ಸಿಕ್ಕರೆ ಅಲ್ಲಿ ಏನು ಖಂಡಿತವಾಗುವುದೋ ಎಂದು ಮೊದಲೇ ವಿಚಾರಿಸಿ. ಹ್ಯಾಪಿ ಬರ್ತ್ ಡೇ ಆದರೆ ಕೇಕ್ ಒಂದನ್ನು ಖಂಡತುಂಡ ಮಾಡುವುದು ಈಗ ಸರ್ವೇ ಸಾಮಾನ್ಯ. ಅದಾದ ನಂತರ ಒಂದು ಖಂಡವನ್ನು ಮೇಲೆತ್ತಿ ಹ್ಯಾಪಿ ಬರ್ತ್ ಡೇ ಹುಡುಗ ಅಥವಾ ಹುಡುಗಿ ಮುಖಕ್ಕೆ ತಿಕ್ಕಿ ಕೇಕೆ ಹಾಕುವುದು ಕೂಡಾ ಈಗ ಒಂದು ಸಂಪ್ರದಾಯ. ನಿಮ್ಮ ಬಾಸ್ ಅವರ ಬರ್ತ್ ಡೇ ಇದ್ದಲ್ಲಿ ಇದನ್ನೆಲ್ಲಾ ಖಂಡಿತಾ ಪ್ರಯೋಗಿಸಲು ಹೋಗಬೇಡಿ. ಓಂ ನಮೋ ಬಾಸುದೇವಾಯ ಎಂದು ದೂರದಲ್ಲೇ ಇದ್ದು ಹ್ಯಾಪಿ ಬರ್ತ್ ಡೇ ಟೂ ಯೂ ಎಂದು ಹಾಡಿ ಅವರ ಕೃಪೆಗೆ ಪಾತ್ರರಾಗಿ. ಒಬ್ಬರು ಲಖನೌ ನವಾಬರು ತಮ್ಮ ಬೀಗರ ಮನೆಗೆ "ಖಂಡಿತಾ ಬನ್ನಿ" ಎಂಬ ಆಹ್ವಾನಕ್ಕೆ ಕಟ್ಟುಬಿದ್ದು ಹೋದರಂತೆ. ಅಲ್ಲಿ ಪ್ರತಿದಿವಸ ಅವರಿಗೆ ಮೊಟ್ಟೆಯ ಮೇಜವಾನಿ ನಡೆಯಿತು. ಕೊನೆಗೊಂದು ದಿನ ಅವರಿಗೆ ತಡೆಯಲಾಗದೆ "ಬೀಗರೇ, ಮೊಟ್ಟೆಗಳನ್ನು ಪ್ರತಿದಿನ ಭೇಟಿ ಮಾಡುತ್ತಿದ್ದೇನೆ. ಅವುಗಳ ಮುಂದಿನ ಪೀಳಿಗೆಯವರನ್ನೂ ಪರಿಚಯಿಸಿ" ಎಂದು ಕೇಳಿದರಂತೆ. "ಖಂಡಿತ!" ಎಂದು ಕೂಡಲೇ ಬಾಣಸಿಗನು ಬಾಣ ಹಿಡಿದು ಹೊರಟನಂತೆ. ಬಿಲ್ಲನ್ನು ಅವನು ಯಾರಿಗೆ ಕೊಟ್ಟನೋ ವಿವರಗಳು ಸ್ಪಷ್ಟವಾಗಿಲ್ಲ.
ಮೊನ್ನೆ ಟ್ಯಾಕ್ಸಿಯಲ್ಲಿ ಕೂತು ಬರುವಾಗ ರಸ್ತೆಯಲ್ಲಿ "ಖಂಡವಿದೆ ಕೋ" ಎಂಬ ಬೋರ್ಡ್ ಕಂಡು ಗುಂಡಿಗೆ ಬಾಯಿಗೆ ಬಂದಹಾಗಾಯಿತು. ಅಷ್ಟರಲ್ಲೇ ಸಾವರಿಸಿಕೊಂಡು ಕನ್ನಡಿಗರ ಜಾಣ್ಮೆಯನ್ನು ಮೆಚ್ಚಿಕೊಂಡೆ. ಮಕ್ಕಳು ಚಿತ್ರ ಬರೆದು ಲೇಬಲ್ ಮಾಡುವಂತೆ ಗುಂಡಿಗಾಗಿ ಹೇಳಿ ಮಾಡಿಸಿದ ಸ್ಥಳವನ್ನು "ಗುಂಡಿಗೆ" ಎಂದು ಲೇಬಲ್ ಮಾಡಿದವರ ಪ್ರಜ್ಞೆಯನ್ನು ನೆನೆದು ಹನಿಗಣ್ಣಾದೆ. ಒಂದು ಕಾಲದಲ್ಲಿ ದಾಸರು ಕಲ್ಲುಸಕ್ಕರೆ ಕೊಳ್ಳಿರೋ ಎಂದು ಸಕ್ಕರೆಯ ಖಂಡವನ್ನು ಮಾರಿದರೆ ಅಯ್ಯಯ್ಯೋ ಇಲ್ಲಿ ಅದಾವುದೋ ಕಟುಕ ಅಂಡ್ ಕೋ "ಖಂಡವಿದೆ ಕೋ" ಎಂದು ಇನ್ನೇನೋ ಮಾರುತ್ತಿದೆಯಲ್ಲ! ಕೂಡಲೇ ಕಣ್ಣು ಮುಚ್ಚಿಕೊಂಡು ಇದನ್ನು ನೋಡಿದ ಮಾತ್ರಕ್ಕೇ ನನ್ನ ಅಕೌಂಟಿಗೆ ಬಂದ ಪಾಪಕೋಟಿಗಳನ್ನು ಕಳೆಯಲು ಎಲ್ಲ ದೇವರನ್ನೂ ಬೇಡಿಕೊಂಡೆ. ಈಗಂತೂ ಬೀದಿಬೀದಿಗಳಲ್ಲಿ ಇಂಥ ದಂಧೆಗಳು ಬಂದುಬಿಟ್ಟಿವೆ. ಸ್ಮೋಕ್ ಶಾಪ್ ಎಂಬ ಫಲಕ ನೋಡಿ ಇಂಥದ್ದನ್ನೆಲ್ಲ ತೆರೆದು ಯುವಜನರನ್ನು ಕೆಡಿಸುತ್ತಿರುವವರಿಗೆ ಶಾಪ ಹಾಕಿದೆ. ಇನ್ನು ಬಾರುಗಳ ಬಗ್ಗೆ ಏನೆಂದು ಹೇಳೋಣ. ಒಬ್ಬ ಕ್ಯಾಬ್ ಡ್ರೈವರ್ ನನಗೆ ಒಮ್ಮೆ ಹೇಳಿದ ಮಾತು ನೆನಪಾಗುತ್ತಿದೆ. ಅವನು ಡ್ಯೂಟಿ ಮುಗಿಸಿಕೊಂಡು ಹೋಗುವಾಗ ಹಿಂದೆ ಬಾರುಗಳು ಬಾಗಿಲು ಹಾಕಿರುತ್ತಿದ್ದವಂತೆ. ಈಗ ಅನನ್ಯ ಕರುಣೆಯಿಂದ ಸರಕಾರವು ಈ ಸೇವೆಗಳನ್ನು ೨೪x೭ ಮಾಡಿ ಅವನ ಸಂಯಮಕ್ಕೆ ಪರೀಕ್ಷೆ ಒಡ್ಡುತ್ತಿವೆಯಂತೆ. ಬೇಡ ಬೇಡ ಎಂದು ಒಂದು ಮನಸ್ಸು ಹೇಳಿದರೆ ಬಾರೋ ಬಾರೋ ಎಂದು ಕರೆಯುವ ಬಾರುಗಳು ಬಿಡಬೇಕಲ್ಲ! ಈ ರತ್ನನ ಪರ್ಪಂಚವನ್ನು ಯಾವ ಪಂಚ್ ನಿಯತಕಾಲಿಕೆಯೂ ಹಿಡಿದಿಡಲಾರದು ಎಂಬ ಖಡಾಖಂಡಿತ ವಾದವನ್ನು ಮಂಡಿಸುತ್ತಾ ಈ ಮಾತನ್ನು ಇಲ್ಲಿಗೇ ತುಂಡರಿಸುತ್ತೇನೆ.
ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ