ಜಯಾ ಬಚ್ಚನ್ ಕೋ ಗುಸ್ಸಾ ಕ್ಯೋನ್ ಆತಾ.ಹೈ

 



ಶಾಪಿಂಗ್ ಮಾಲಿನ ಮೇಲಿನ ಶಾಪಿಂಗ್ ಮಾಲಿಗೆ ಹೋಗಿ ಬಂದಿರಬಹುದಾದ ಕಾರಣ ಜಯಾ ಅವರು ಶಾಪದ ಮೇಲೆ ಶಾಪ ಹಾಕುತ್ತಿದ್ದಾರೆ. ಹಿಂದೊಮ್ಮೆ ಅವರ ಪತಿ ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಆಗ ಜಯಾ ಬಚ್ಚನ್ ಅವರಿಗೆ ಕ್ತೈಯಿಂಗ್ ಯಂಗ್ ವುಮನ್ ಎಂಬ ಹೆಸರನ್ನು ಯಾರೂ ಕೊಡಲಿಲ್ಲ ಎಂದು ಆಕೆಗೆ ಸಹಜವಾಗಿ ಕೋಪ ಬಂತು. ಎಲ್ಲ ಸಿನಿಮಾಗಳಲ್ಲೂ ಆಕೆ ಅಳುವುದು ಸಾಮಾನ್ಯವಾಗಿತ್ತು.  ಈ ಕೋಪವೇ ಈಗ ಭುಗಿಲ್ ಎಂದು ಮೇಲೆದ್ದು ಆಕೆ ಆಂಗ್ರಿ ಓಲ್ಡ್ ವುಮನ್ ಉಪಾಧಿ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.  ಎಲ್ಲರ ಮೇಲೂ ಕೋಪ. ಕಭೀ ಜ್ಯಾದಾ ಕಭೀ ಕಮ್.  ಕೆಲವು ತಿಂಗಳ ಕೆಳಗೆ ಪಾರ್ಲಿಮೆಂಟಲ್ಲಿ ಕೋಪಿಸಿಕೊಂಡು ಶಾಪ ಹಾಕಿದ್ದು ಬಹಳ ಚರ್ಚೆಗೆ ಕಾರಣವಾಯಿತು. ಈಗ ಫೋಟೋ ತೊಗೊಳ್ಳುವ ಪಾಪರಾಟ್ಜಿಗೆ ಶಾಪ ಹಾಕಿದ್ದಾರೆ ಎಂದು ಪಾಪ ಅವರೆಲ್ಲ ಕೋಪಗೊಂಡು ಸೇಡು ತೀರಿಸಿಕೊಳ್ಳುವ ಪಣ ತೊಟ್ಟಿದ್ದಾರೆ. 


ಈಗ ಯಾರು ಬೇಕಾದರೂ ಪತ್ರಕರ್ತರಾಗಬಹುದು. ಹಿಂದೊಮ್ಮೆ ಫೋಟೋ ತೆಗೆಯಲು ಫೋಟೋಗ್ರಾಫರ್ ಬೇಕಿತ್ತು. ಬರೆಯಲು ಟೈಪ್ ರೈಟರ್ ಬೇಕಿತ್ತು. ಅಚ್ಚು ಮಾಡಲು ಪತ್ರಿಕೆ ಬೇಕಿತ್ತು. ಈಗ ಮೊಬೈಲ್ ಇದ್ದರೆ ಇವು ಎಲ್ಲವೂ  ಬೆರಳ ತುದಿಯಲ್ಲೇ.  "ಅಯ್ಯೋ, ಇದು ಇದ್ದರೆ ಸಾಕೇ? ಬರೆಯೋಕ್ಕೆ ಬರಬೇಡವೆ?" ಎಂದು ಕೇಳಿದರೆ ನೀವು ಬಹಳ ಹಳೇ ಕಾಲದವರು. ಬರೆಯಲು ಈಗ ಏನೇನೂ ಕಷ್ಟವಿಲ್ಲ. ಗೂಗಲ್ ಹುಡುಕಾಡಿದರೆ ಹಳೆಯ ಫೋಟೋ ಸಿಕ್ಕೀತು. ಅದನ್ನು ಸಾಂದರ್ಭಿಕ ಚಿತ್ರ ಎಂದು ಹಾಕಬಹುದು. ಹುಡುಕುವಾಗ ಜನರಿಗೆ ಎಂಥ ಚಿತ್ರ ಇಷ್ಟ  ಆಗುತ್ತದೆ ಎಂದು ಸ್ವಲ್ಪ ಯೋಚಿಸಬೇಕು, ಅಷ್ಟೇ.  ಮಕ್ಕಳಲ್ಲಿ ಒಬೀಸಿಟಿ ಸಮಸ್ಯೆ ಬಗ್ಗೆ ಬರೆಯಬೇಕು ಎಂದರೆ ಗುಂಡು ಗುಂಡಾದ ಅಮೆರಿಕನ್ ಮಗುವಿನ ಚಿತ್ರವೇ ಇರಲಿ.   ನೀವು ಮೊಸರನ್ನದ ರೆಸಿಪಿ ಹಾಕುತ್ತಿದ್ದೀರಾ? ಸ್ಟೀಲ್ ಪ್ಲೇಟಿನಲ್ಲಿ ಇಟ್ಟು ಅದರ ಫೋಟೋ ತೊಗೊಳ್ಳುವುದು ಖಂಡಿತಾ ಬೇಡ.  ಹುಡುಕಿದರೆ ಗಾಜಿನ ಪ್ಲೇಟಲ್ಲಿ ದಾಳಿಂಬೆ ಬೀಜ, ಗೋಡಂಬಿ, ಕೊತ್ತಂಬರಿ ಇತ್ಯಾದಿಗಳಿಂದ ಅಲಂಕೃತವಾದ ದಧ್ಯಾನ್ನದ ಚಿತ್ರ ಸಿಕ್ಕುತ್ತದೆ.  ಪಕ್ಕದಲ್ಲಿ ಗಾಜಿನ ಲೋಟದಲ್ಲಿ ಹೊಗೆಯಾಡುವ ಟೊಮೆಟೋ ಶೋರ್ಬಾ ಅಥವಾ ಮಂಜಿನ ಹನಿಮುತ್ತುಗಳಿಂದ ಅಲಂಕೃತವಾದ ಲೆಮನ್ ಸೋಡಾ ಇರುವ ಚಿತ್ರವೂ ಸಿಕ್ಕೀತು. ಹುಡುಕುವಾಗ ತಾಳ್ಮೆ ಇರಲಿ. ತಾಳಿದವನು ಬಾಳಿಯಾನು. 


ಚಿತ್ರ  ಫ್ರೀ ಸಿಕ್ಕಿದಾಗ ಚಿತ್ರಾನ್ನದ ರೆಸಿಪಿ ಫ್ರೀ ಸಿಕ್ಕದೇ? ತರಲಾ  ಅವರ  ಸರಳ ಪಾಕದಿಂದ ಹಿಡಿದು ವಿಮಲಾ ಅವರ ವಿರಳ ಪಾಕದವರೆಗೆ ಎಲ್ಲ ಲಭ್ಯ.  ಅವರ ರೆಸಿಪಿಯನ್ನು ಸ್ವಲ್ಪ ಬದಲಾಯಿಸಿ. ಅವರು ಫೈನ್ಲಿ ಚಾಪ್ಡ್  ಟೊಮೆಟೋಸ್ ಎಂದರೆ ನೀವು ಅದನ್ನು ಕನ್ನಡದಲ್ಲಿ "ಟೊಮೇಟೋಗಳನ್ನು ಫೈನ್ ಆಗಿ ಚಾಪ್ ಮಾಡಿಕೊಳ್ಳಿ" ಎಂದೇ ಬರೆಯಿರಿ. "ಹೆವಿ ಬಾಟಮ್ಡ್ ಪ್ಯಾನ್" ಇತ್ಯಾದಿಯನ್ನು ಗೂಗಲ್ಲಿನಲ್ಲಿ ಭಾಷಾಂತರ ಮಾಡುವಾಗ ಸ್ವಲ್ಪ ಎಚ್ಚರ ಇರಲಿ.  ಕೆಲವೊಮ್ಮೆ ಆಭಾಸಾಂತರ ಆಗಬಹುದು.


ಇನ್ನು ನೀವು ವಿಡಿಯೋ ನ್ಯೂಸ್ ಚಾನೆಲ್ ಮಾಡಬೇಕು ಎಂದು ಬಯಸಿದರೆ ಅದಕ್ಕೂ ನೂರಾರು ಸುಲಭಮಾರ್ಗಗಳು ಲಬ್ಧ.  ನಿಮ್ಮ ಮೇಕಪ್ ಚೆನ್ನಾಗಿದೆಯಾ ಗಮನಿಸಿ. ನಿಮ್ಮ ಮನೆಯವರಿಗೆ ಒಳ್ಳೆಯ ವಿಡಿಯೋ ತೆಗೆಯುವ ಕಲೆಯನ್ನೂ ಮತ್ತು ಎಡಿಟಿಂಗ್ ಮಾಡುವ ಕಲೆಯನ್ನೂ ಕಲಿಸುವ ಕೋರ್ಸ್ ಮಾಡಲು ಹೇಳಿ. ಇನ್ನಿತರ ನ್ಯೂಸ್ ಚಾನೆಲ್ಲುಗಳು ಏನು ಬಿತ್ತರಿಸುತ್ತಿವೆ ಎಂದು ನಿಗಾ ಇಡಿ.  ಜನರಿಗೆ ಏನು ಇಷ್ಟ  ಎಂದು ಒಂದು ಪಟ್ಟಿ ಮಾಡಿ. ಹೋಟೆಲ್ ಇಡ್ಲಿಯಲ್ಲಿ ಜಿರಳೆ ಸಿಕ್ಕರೆ ಅದು ಅಷ್ಟು ದೊಡ್ಡ ಸುದ್ದಿ ಆಗದು. ಚೇಳು, ಹಲ್ಲಿ ಇಂಥವು ಸಿಕ್ಕರೆ ಭಾರೀ ವೈರಲ್ ನ್ಯೂಸ್ ಆದೀತು.  ಬೇಕಾದರೆ ಹೋಟೆಲ್ಲಿಗೆ ಹೋಗಿ ಇಡ್ಲಿಯಲ್ಲಿ ಅಥವಾ ಸಾಂಬಾರಿನಲ್ಲಿ ಪ್ಲಾಸ್ಟಿಕ್ ಚೇಳು ಹುದುಗಿಸಿ ವಿಡಿಯೋ ತೆಗೆದು ಹಾಕಿ. ಅಯ್ಯೋ ಇದಕ್ಕೆಲ್ಲ ಹೆದರಬೇಡಿ. ಈಗ ಇಂಥದ್ದೇ ಓಡೋದು.


ಜಯಾ ಬಚ್ಚನ್ ಅವರು "ಯಾರು ನೀವು! ಯಾವ ಪತ್ರಿಕೆ ನಿಮ್ಮದು!" ಎಂದು ಹರಿಹಾಯ್ದರೆ? ಅದು  ನಿಮ್ಮ ಲಕ್ಕಿ ಡೇ.  ಅದನ್ನೇ ವಿಡಿಯೋ ಮಾಡಿ. ಟ್ವೀಟ್ ಮಾಡಿ. ನ್ಯೂಸ್ ಸ್ಟೋರಿ ಮಾಡಿ. ಅನೇಕ ರೀತಿಯಲ್ಲಿ ಬರೆಯಲು ಸಾಧ್ಯ ಎಂದು ನೆನಪಿಡಿ. "ಜಯಾ ಬಚ್ಚನ್ ಪತ್ರಕರ್ತರಿಗೆ  ಹಿಡಿಶಾಪ," "ಪತ್ರಕರ್ತನಿಗೆ ಕಪಾಳ ಮೋಕ್ಷ ಮಾಡಿದ ಪ್ರಸಿದ್ಧ ನಟಿ," "ಅಮಿತಾಭ್ ಅವರ ಮೇಲೆ ಕೋಪಗೊಂಡು ಪತ್ರಕರ್ತನ ಮೇಲೆ ಹರಿಹಾಯ್ದ ಜಯಾ," "ಇಡ್ಲಿಯಲ್ಲಿ ಚೇಳು ಸಿಕ್ಕಿತೆಂದು ಜಯಾ ಉಗ್ರಾವತಾರ," ಇತ್ಯಾದಿ.  ನಿಮ್ಮ ಇಮಾಜಿನೇಶನ್ ಮತ್ತು ಇಮೋಜಿನೇಶನ್ ಎರಡನ್ನೂ ವಿಸ್ತರಿಸಿಕೊಳ್ಳಿ.


ಇನ್ನೂ ಸಲಹೆಗಳನ್ನು ನಾನು ನೀಡಬಲ್ಲೆ. ನನ್ನ ವಿಡಿಯೋ ಚ್ಯಾನೆಲ್ಲಿನಲ್ಲಿ ಇಂಥ ನೂರಾರು ಉಪಯುಕ್ತ ಸಲಹೆಗಳನ್ನು ಪ್ರತಿದಿನ ನೀಡುತ್ತೇನೆ. ಸಬ್ಸ್ಕ್ರೈಬ್ ಮಾಡಿ. ಶೇರ್ ಮಾಡಿ. ಬೆಲ್ ಐಕಾನ್ ಒತ್ತಲು ಮರೆಯಬೇಡಿ. 


ನನ್ನ ಕೇಶರಾಶಿಯ ರಹಸ್ಯ: ಜನಕಾ ಆಮ್ಲ ತೈಲ.  ಮೇರಾ, ತುಮ್ಹಾರಾ ಸಬ್ ಜನ್ ಕಾ ತೇಲ್. ಜನಕಾ ಆಮ್ಲ ತೇಲ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)