ನೀ ಕೊಡೆ ನಾ ಬಿಡೆ

 ನೀ ಕೊಡೆ ನಾ ಬಿಡೆ



ಕೊಡೆ ಎಂಬ ಪದ ಹೇಗೆ ಸೃಷ್ಟಿಯಾಗಿರಬಹುದು ಎಂದು ಯೋಚಿಸಿದಾಗ ಉತ್ತರ ಹೊಳೆದೇ ಬಿಡ್ತು. ಮನೆಗೆ ಬಂದ ಅತಿಥಿ ಮಳೆ ಬರುತ್ತಿದೆ ಎಂಬ ಕಾರಣದಿಂದ  ಹೊರಡುವ ಸೂಚನೆಯೇ ಇಲ್ಲ. ಆತಿಥೇಯನ ಹೆಂಡತಿ ಬಿಸಿ ಬೋಂಡಾ, ಕಾಫಿ ಎಲ್ಲ ಮಾಡಿಕೊಟ್ಟದ್ದಾಯಿತು. ಹಾಳಾದ ಜಿಟಿಜಿಟಿ ಮಳೆಯೋ ಟಿವಿ ಧಾರಾವಾಹಿಯ ಹಾಗೆ ನಿಲ್ಲುತ್ತಲೇ ಇಲ್ಲ.  ಆಕೆ ಗಂಡನನ್ನು ಕರೆದು "ಅವರಿಗೆ ಛತ್ರಿ ಕೊಟ್ಟು ಕಳಿಸಿ" ಎಂದಳು. "ನಾ ಕೊಡೆ" ಎಂದು ಗಂಡ ಹಠ ಹಿಡಿದ. ಅವನಿಗೆ ಕಾಶೀಯಾತೆಯ ಸಮಯದಲ್ಲಿ ಮಾವನು ತಲೆಯ ಮೇಲೆ ಹಿಡಿದ ಛತ್ರಿ.  "ನೋಡಪ್ಪಾ ಈ ಛತ್ರಿ ಕೆಲಸ ಮಾಡಿದ್ದಕ್ಕೆ ಕ್ಷಮಿಸು!" ಎಂದು ಅವರು ಹಾಸ್ಯ ಮಾಡಿ ಆಶೀರ್ವದಿಸಿ ಕೊಟ್ಟ ಛತ್ರಿ. ಅದನ್ನು ಹಾಗೆಲ್ಲ ಬೇರೆಯವರಿಗೆ ಕೊಡಲಾಗದು.  ಆಕೆ "ಛತ್ರಿ ಕೊಟ್ಟು ಕಳಿಸಿ" ಎಂದೂ ಇವನು "ಛತ್ರಿ ಕೊಡೆ" ಎಂದೂ ವಾಗ್ವಾದ ಮಾಡುತ್ತಿರುವಾಗ ಅತಿಥಿಗೆ ಅದು ಕೇಳಿಸಿ ಅವನು ಅಲ್ಲಿಂದ  ಹೊರಟು ನಿಂತ ಪ್ರಸಂಗ "ಛತ್ರಿ = ಕೊಡೆ" ಎಂಬ ಸಮೀಕರಣವನ್ನು ಹುಟ್ಟುಹಾಕಿತು. 


ಕೊಡೆಯು ಎಷ್ಟು ಪ್ರಮುಖ ಸ್ಥಾನ ವಹಿಸಿತ್ತು ಗೊತ್ತೇ? ಮಹಾರಾಜನಿಗೆ ಬಿಳಿ ಬಣ್ಣದ ಕೊಡೆ ಹಿಡಿಯುತ್ತಿದ್ದರಂತೆ. ಇದನ್ನು ಬೆಳ್ಗೊಡೆ ಅಥವಾ ಶ್ವೇತಛತ್ರ ಎಂದು ಕರೆಯುತ್ತಿದ್ದರು. ಸಾಮಾನ್ಯರು ಬಿಳಿ ಬಣ್ಣದ ಛತ್ರಿ ಬಳಸುವುದು ನಿಷೇಧವಾಗಿತ್ತು. ಕರಿ ಬಣ್ಣದ ಛತ್ರಿ ಅಥವಾ ಕರ್ಗೊಡೆ ಹೀಗೆ ರೂಢಿಗೆ ಬಂತು.  ಬೇರೆ ಬಣ್ಣದ ಛತ್ರಿ ಮಾಡಬಹುದು ಎಂದು ಯಾರಿಗೂ ಹೊಳೆಯಲೇ ಇಲ್ಲ. ಏಕೆಂದರೆ ಅಂಗಡಿಗೆ ಛತ್ರಿ ಖರೀದಿಸಲು ಹೆಂಗಸರು ಹೋಗುತ್ತಿರಲಿಲ್ಲ. ಇದು ನನಗೆ ಹೇಗೆ ಗೊತ್ತು ಎಂದಲ್ಲವೇ ನಿಮ್ಮ ಪ್ರಶ್ನೆ! ಛತ್ರಪತಿ ಎಂಬ ಹೆಸರನ್ನಲ್ಲದೆ ಛತ್ರಪತ್ನಿ ಎಂಬ ಹೆಸರನ್ನು ನೀವು ಚರಿತ್ರೆಯಲ್ಲಿ ಎಲ್ಲೂ ಕೇಳಿದ್ದೀರಾ? ಹೀಗಾಗಿ ಛತ್ರಿ ಖರೀದಿಸುವಾಗ ಬೇರೆ ಕಲರ್ ತೋರಿಸಿ ಎಂದು ಕೇಳುವವರೇ ಇಲ್ಲದೆ ಕರ್ಗೊಡೆಗಳದ್ದೇ ರಾಜ್ಯವಾಗಿತ್ತು.  ಮುಂದೆ ವಿದೇಶಗಳಿಂದ ಬಣ್ಣಬಣ್ಣದ ಛತ್ರಿಗಳು ಬಂದು ಕಪ್ಪು ಕೊಡೆಗಳು ಕ್ರಮೇಣ ಮಾಯವಾಗುತ್ತಿವೆ. ಈ ವಿದೇಶಿ ಛತ್ರಿಗಳನ್ನು ಮಡಿಸಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಳ್ಳಬಹುದಾದ್ದರಿಂದ "ಕೊಡೆ" ಪ್ರಸಂಗಗಳ ಪುನರಾವರ್ತನೆ ಆಗಲಿಲ್ಲ.   ಛತ್ರಿಯನ್ನು ಸಾಲ ಪಡೆದು ಕೆಲವರು ಛತ್ರಸಾಲ ಎಂಬ ಹೆಸರು ಪಡೆದರು, ಅಷ್ಟೇ. ಕೊಡೆಯನ್ನು ಬಿಚ್ಚಲು ವಿದೇಶೀ ತಯಾರಕರು ಒಂದು ಬಟನ್ ನೀಡಿ, ಅದನ್ನು ಅದುಮಿದ ಕ್ಷಣವೇ ಛತ್ರಿಯು ಫಟ್ ಎಂದು ಮುನ್ನುಗ್ಗಿ ಮುಂದೆ ನಿಂತವರಿಗೆ ಪ್ರಹಾರ ಮಾಡುವ ಕಾರಣ ಅದೊಂದು ಆಯುಧವೂ ಸಹ.  


ಕೊಡೆಗಳನ್ನು ಕುರಿತು ಅದೆಷ್ಟು ಕತೆಗಳನ್ನು ಸಾಹಿತಿಗಳು ರಚ್ಚಿಸಿದ್ದಾರೋ! ಮೂಪಸಾ ಎಂಬ ಫ್ರೆಂಚ್ ಲೇಖಕ  "ದ ಅಂಬ್ರೆಲಾ" ಎಂಬ ಲಘುಹಾಸ್ಯ ಕಥೆಯನ್ನು ಬರೆದಿದ್ದಾನೆ. ಕಥೆಯ ನಾಯಕಿ ಶ್ರೀಮತಿ ಆರೆಲ್ ಮಹಾಜಿಪುಣಿ.  ಗಂಡನ ಸಂಬಳವನ್ನು ಹೇಗೆ ಖರ್ಚು ಮಾಡಬೇಕೆಂದು ನಿರ್ಧರಿಸಿರುವವಳು ಅವಳೇ.  ಅವಳ ಗಂಡನೋ ಅವಳಿಗೆ ಹೆದರಿ ಸಾಯುವ ಪ್ರಾಣಿ. ಅವನ ಛತ್ರಿ ತೀರಾ ಹಳೆಯದಾಗಿ ತೇಪೆಗಳಿಂದ ತುಂಬಿ  ಸಹೋದ್ಯೋಗಿಗಳು ಕೀಟಲೆ ಮಾಡಿದ ಕಾರಣ ಅವನು ಗೋಗರೆದು ಹೊಸ ಛತ್ರಿ ಕೊಡಿಸೆಂದು ಹೆಂಡತಿಯನ್ನು ಕೇಳುತ್ತಾನೆ. ಅವಳು ಕೊನೆಗೂ ಮಣಿದು ಒಂದು ಹೊಸ ಛತ್ರಿ ತಂದರೆ ಅಂದು ಏನಾಯಿತು ಗೊತ್ತೇ? ಗೊತ್ತಾದರೆ ನಿಮಗೆ ಖಂಡಿತಾ ಶಾಕ್ ಆಗುತ್ತದೆ. ಯಾರೋ ಛತ್ರಿಯಲ್ಲಿ ಸಿಗರೆಟ್ ಕಿಡಿಯಿಂದ ತೂತು ಮಾಡುತ್ತಾರೆ. ಹೌಹಾರಿದ ಶ್ರೀಮತಿ ಆರೆಲ್ ಗಂಡನಿಗೆ ಬೈದು ತೇಪೆ ಹಾಕಿ ಕಳಿಸುತ್ತಾಳೆ. ಅಯ್ಯೋ, ಆದರೆ ಅಂದು ಅವನು ಮರಳಿದಾಗ ಕೊಡೆಯಲ್ಲಿ ನೂರಾರು ರಂಧ್ರಗಳು!  ಅವಳು ವಿಮಾ ಕಂಪನಿಗೆ ಹೋಗಿ ಕೊಡೆಯ ಖರ್ಚು ವಸೂಲಿ ಮಾಡುವ ಪ್ರಸಂಗವನ್ನು ಮೂಪಸಾ ಸ್ವಾರಸ್ಯವಾಗಿ ಬರೆದಿದ್ದಾನೆ. 


ಅಂಬ್ರೆಲಾ ಮ್ಯಾನ್ ಎಂಬ ಕಥೆಯನ್ನು ರೋಆಲ್ಡ್ ಡಾಲ್ ಬರೆದಿದ್ದಾನೆ. ದಂತವೈದ್ಯರ ಕಡೆಗೆ ಮಗಳನ್ನು ಕರೆದುಕೊಂಡು ಹೊರಟ ತಾಯಿಯೊಬ್ಬಳು ಐಸ್ ಕ್ರೀಮ್ ತಿನ್ನಲು ಮಗಳನ್ನು ಕರೆದೊಯ್ಯುತ್ತಾಳೆ. ಹೊರಗೆ ಬಂದಾಗ ಒಮ್ಮೆಲೇ ಮಳೆ! ಇಂಗ್ಲೆಂಡ್ ದೇಶದಲ್ಲಿ ಹಠಾತ್ ಮಳೆ ಅಪರೂಪ ಏನಲ್ಲ. ಅಂದು ತಾಯಿ ಕೊಡೆ ತಂದಿಲ್ಲ.  ಆಗ ಎಲ್ಲಿಂದಲೋ ಪ್ರತ್ಯಕ್ಷನಾದ ಒಬ್ಬ ವೃದ್ಧ ಅವಳಿಗೆ ತನ್ನ ಕೊಡೆ ನೀಡುತ್ತಾನೆ. ಇವಳು ಹಣ ಕೊಟ್ಟಾಗ ಪ್ರತಿಭಟಿಸಿದರೂ ಆಕೆಯ ಗೌರವಕ್ಕೆ ಬೆಲೆ ಕೊಟ್ಟು ಒಂದಿಷ್ಟು ಹಣ ಪಡೆಯುತ್ತಾನೆ. ಮುಂದಿನ ಸ್ವಾರಸ್ಯವನ್ನು ಹೇಳಿದರೆ ರೋಆಲ್ಡ್ ಡಾಲ್  ಕನಸಿನಲ್ಲಿ ಬಂದು ನನಗೆ ಕೊಡೆಯಲ್ಲಿ ಹೊಡೆಯುವ ಭಯದಿಂದ ಇಲ್ಲಿಗೇ ನಿಲ್ಲಿಸುತ್ತೇನೆ. ನೀವು ಕಥೆಯನ್ನು ಓದಿಯೇ ಅನುಭವಿಸಿ.

ಕೊಡೆಗಳ ಸುತ್ತ ಸ್ವಾರಸ್ಯಕರ ಕಥೆಗಳು ಇರುವುದು ಸಾಮಾನ್ಯ. ನಿಮಗೂ ಇಂಥ ಕತೆಗಳು ನೆನಪಾಗಿರಬಹುದು. ಹಂಚಿಕೊಳ್ಳಿ.


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)