ಸೋಪ್ ಆಪರಾ

 



ಸೋಪ್ ಆಪರಾ ಎನ್ನುವ ಪದ ಯಾಕೆ ನೆನಪಿಗೆ ಬಂತು ಅಂದರೆ ಸ್ನೇಹಿತರು ಒಬ್ಬರು ಫೇಸ್ಬುಕ್ ಮೇಲೆ ಹಂಚಿಕೊಂಡ ಚಿತ್ರ ನೋಡಿ.  ಮಳೆ ಪ್ರವಾಹ ಮನೆಗೆ ನುಗ್ಗಿ ರೂಮಿನಲ್ಲಿ ಮೊಳಕಾಲುಮಟ್ಟ ಸೇರಿದೆ. ಇಷ್ಟಾದರೂ ಮನೆಯವರು ಕುರ್ಚಿಗಳಲ್ಲಿ ಆಸೀನರಾಗಿ ಸೀರಿಯಲ್ ನೋಡುತ್ತಿದ್ದಾರೆ. 

ಈ ಸೀರಿಯಲ್ ಆಕರ್ಷಣೆ ಬರೀ ಭಾರತೀಯರಿಗೆ ಮಾತ್ರ ಎಂದು ಖಂಡಿತಾ ತಿಳಿಯಬೇಡಿ. ಅಮೆರಿಕನ್ ಮಹಿಳೆಯರೂ ಈ ಧಾರಾವಾಹಿಗಳಿಂದ ಅಷ್ಟೇ ಆಕರ್ಷಿತರು.  ಅಮೆರಿಕನ್ ಮನೆಗಳಲ್ಲಿ ನಿತ್ಯಚರಿ ಬೆಳಗ್ಗೆ ಬಹಳ ಬೇಗ ಪ್ರಾರಂಭವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಕೆಲಸಕ್ಕೆ ಹೋಗುವ ಗಂಡ ಎಲ್ಲರಿಗೂ ಬೆಳಗಿನ ಉಪಾಹಾರ ತಯಾರಿಸಿ ಡಬ್ಬಿಗಳಲ್ಲಿ ಊಟ ತುಂಬಿಸಿ ಗಂಡನನ್ನು ಚುಂಬಿಸಿ ಐ ಲವ್ ಯು ಎಂದು ಬೈಬೈ ಹೇಳಿ (ಇದು ಅಲ್ಲಿಯ ನಿಯಮ) ಉಸ್ ಎಂದು ಸೋಫಾ ಮೇಲೆ ಕುಸಿದ ಗೃಹಿಣಿ ಮುಂದೆ ಹೊತ್ತು ಕಳೆಯುವುದು ಹೇಗೆ? ಕೆಲಸವನ್ನು ಔಟ್ ಸೋರ್ಸ್ ಮಾಡುವ ಪದ್ಧತಿ ಇಲ್ಲಿ ಬಹಳ ಹಿಂದಿನಿಂದಲೇ ಬಂದಿದೆ. . ಬಟ್ಟೆಗಳನ್ನು ವಾಷಿಂಗ್ ಮಶೀನಿಗೆ ಹಾಕಿದರೆ ಮೂವತ್ತು ನಿಮಿಷಗಳಲ್ಲಿ ಒಗೆದು ಪೂರೈಸುತ್ತದೆ.  ಹಿಂಡಿದ ಬಟ್ಟೆಗಳನ್ನು ಡ್ರೈಯರ್ ಯಂತ್ರಕ್ಕೆ ಸಾಗಿಸಿದರೆ ನಲವತ್ತು ನಿಮಿಷಗಳಲ್ಲಿ ಬಟ್ಟೆಗಳು ಮಡಿಸಲು ಸಿದ್ಧ.   ಐರನ್ ಬೇಡದ ಬಟ್ಟೆಗಳನ್ನು ಮಡಿಸಿಟ್ಟರೆ ಸಾಕು. ಉಳಿದ ಬಟ್ಟೆಗಳನ್ನು ಇಸ್ತ್ರಿ ಮಾಡಲೇಬೇಕೆಂದರೆ ನಾನಾ ಬಗೆಯ ತಂತ್ರಜ್ಞಾನಗಳಿವೆ.  ಗಂಡನು ಬಟ್ಟೆ ಧರಿಸಿದ್ದಾಗ ಸ್ಟೀಮ್ ಐರನ್ ಮೂಲಕ ಗರಿಮುರಿ ಮಾಡುವುದು (ಬಟ್ಟೆಯನ್ನು, ಗಂಡನನ್ನಲ್ಲ)  ಕೂಡಾ ಇವುಗಳಲ್ಲಿ ಒಂದು. ಬಟ್ಟೆ ಮಡಿಸಲು ಒಂದು ಯಂತ್ರ ಇದೆಯೋ ಇಲ್ಲವೋ ತಿಳಿಯದು. ಬಟ್ಟೆಗಳನ್ನು ಹ್ಯಾಂಗರಿನಲ್ಲಿ ತೂಗುಹಾಕುವುದೇ ಸುಲಭ.

ಯಂತ್ರಗಳು ತಮ್ಮ ಕೆಲಸ ಮಾಡುತ್ತಿರುವಾಗ ಗೃಹಿಣಿ ತನ್ನ ಉಪಾಹಾರಕ್ಕೆ ತಯಾರಿ ನಡೆಸಬಹುದು. ಫ್ರೆಷ್ ಕಾಫಿ ಮಾಡಲು ಯಂತ್ರದಲ್ಲಿ ಒಂದಷ್ಟು ನೀರು ಸುರಿದು ಒಂದು ಪೌಚ್ ಕಾಫಿಪುಡಿಯನ್ನು ಯಂತ್ರದಲ್ಲಿ ಅಳವಡಿಸಿಬಿಟ್ಟರೆ ಆಯಿತು.  ಐದು ನಿಮಿಷದಲ್ಲಿ ಬಿಸಿ ಡಿಕಾಕ್ಷನ್ ಸಿದ್ಧ. ಅಷ್ಟರಲ್ಲಿ ಬ್ರೆಡ್ ಸ್ಲೈಸ್ ಎರಡನ್ನು ಟೋಸ್ಟರಿಗೆ ಹಾಕಿ ಬಟನ್ ಒತ್ತಿದರೆ ಎರಡು ನಿಮಿಷದಲ್ಲಿ ಟೋಸ್ಟ್ ರೆಡಿ. ಇನ್ನು ಆರೆಂಜ್ ಜೂಸ್ ಒಂದು ಗ್ಲಾಸಿಗೆ ಹಾಕಿಕೊಂಡರೆ ಆಯಿತು. ಇದು ಬೋರ್ ಆದರೆ ಒಂದು ಬಟ್ಟಲಿಗೆ ಸೀರಿಯಲ್ ಹಾಕಿಕೊಂಡು ಮೇಲೆ ಹಾಲು ಸುರಿದರೆ ಅದೂ ಓಕೆ.

ಸೋಫಾ ಮೇಲೆ ಮತ್ತೊಮ್ಮೆ ಆಸೀನಳಾಗಿ ಒಂದು ಕೈಯಲ್ಲಿ  ಸೀರಿಯಲ್ ಬೋಲ್ ಹಿಡಿದು ಮತ್ತೊಂದರಲ್ಲಿ ರಿಮೋಟ್ ಹಿಡಿದು ಕೂತ ಗೃಹಿಣಿಗೆ ನೆನ್ನೆ ಕುತೂಹಲಕರ ಘಟ್ಟಕ್ಕೆ ಬಂದು ನಿಂತಿದ್ದ ಸೀರಿಯಲ್ ಎಲ್ಲಿಗೆ ಬಂತೋ ಎಂಬ ಅದಮ್ಯ ಕುತೂಹಲ.  ಸೀರಿಯಲ್ ಕಿಲ್ಲರ್ ಎಂಬ ಪದವನ್ನು ಹೀಗೆ ಸೀರಿಯಲ್ ತಿನ್ನುತ್ತಾ ಸೀರಿಯಲ್ ನೋಡುವ ಗೃಹಿಣಿಗೂ ಅನ್ವಯಿಸಬಹುದೇನೋ! ಸೋಪ್ ಆಪರಾ ಎಂಬ ಸಮಾಸಪದ ಹೇಗೆ ಬಂತು ಎನ್ನುವುದೂ ಕೂಡಾ ಕುತೂಹಲಕರ. ಮನೆಯಲ್ಲಿ ಯಾರು ಎಷ್ಟು ಹೊತ್ತಿನಲ್ಲಿ ಯಾವ ಟಿವಿ ಪ್ರೋಗ್ರಾಂ ನೋಡುತ್ತಾರೆ ಎನ್ನುವುದನ್ನು ಕಂಪನಿಗಳು ಚೆನ್ನಾಗಿ ಬಲ್ಲವು.  ಹೀಗಾಗಿ ಬೆಳಗಿನ ಸೀರಿಯಲ್ ಬಿತ್ತರಿಸುವಾಗ ತೋರಿಸುವ ಜಾಹೀರಾತುಗಳು: ವಾಷಿಂಗ್ ಮಶೀನಿನಲ್ಲಿ ಬಳಸುವ ಸೋಪ್, ಸ್ನಾನಕ್ಕೆ ಬಳಸುವ ಸೋಪ್, ಮುಖದ ಕಾಂತಿಯನ್ನು ಹೆಚ್ಚಿಸುವ ಸೋಪ್ ಇತ್ಯಾದಿ. ಈ ಸೋಪ್ ಜಾಹೀರಾತುಗಳ ನಡುವೆ ಪ್ರತಿದಿನ ಅದೆಷ್ಟು ಪಾತ್ರಗಳು ಪ್ರೇಮಪಾಶದಲ್ಲಿ ಸಿಲುಕುತ್ತವೆ,.ಅದೆಷ್ಟು ಪಾತ್ರಗಳು ಪ್ರೇಮಕಲಹದಲ್ಲಿ ವಿಚ್ಛೇದನಕ್ಕೆ ಸಿದ್ಧವಾಗುತ್ತವೆ, ಅದೆಷ್ಟು ಪಾತ್ರಗಳು ಸಾಯುತ್ತವೆ, ಅದೆಷ್ಟು ಪಾತ್ರಗಳು ಪುನರ್ಜೀವ ಪಡೆದು ಮತ್ತೆ ಉದ್ಭವವಾಗುತ್ತವೆ! ಸೋಫಾ ಮೇಲೆ ಕೂತು ಸೋಪ್ ಜಾಹೀರಾತುಗಳ ನಡುವೆ ಗೃಹಿಣಿಯರು ನೋಡುವ ಧಾರಾವಾಹಿಗಳಿಗೆ ಸೋಪ್ ಆಪರಾ ಎಂಬ ಹೆಸರು ಸರಿಯಾಗೇ ಇದೆ.  ಮಕ್ಕಳ ಡಯಪರ್ ಜಾಹೀರಾತುಗಳೂ ಬರುವ ಕಾರಣ ಇವನ್ನು ಡಯಾಪರ್ ಆಪರಾ ಅಥವಾ ಡಯಾಪರಾ ಎಂದು ಕೂಡಾ ಕರೆಯಬಹುಸಾಗಿತ್ತು. ದಯಾಪರ ಚಾನೆಲ್ಲುಗಳು ಹಾಗೆ ಮಾಡಲಿಲ್ಲ.

ನಾನು ಪಿಎಚ್. ಡಿ ಮಾಡುತ್ತಿದ್ದಾಗ ಮಧ್ಯಾಹ್ನ ಹನ್ನೆರಡು ಗಂಟೆಗೆ ಊಟಕ್ಕೆ ನಮ್ಮ ಯೂನಿವರ್ಸಿಟಿಯ ಕೆಫೆಟೆರಿಯಾಗೆ ಹೋಗುತ್ತಿದ್ದೆ.   ಅಲ್ಲಿ ಅನೇಕ ವಿಭಾಗಗಳು. ಮೆಕ್ಸಿಕನ್ ಆಹಾರ, ಪೀಟ್ಸಾ, ಇತ್ಯಾದಿ. ಕಾಮನ್ಸ್ ಎಂಬ ಕಡೆ ಮೆಕ್ಸಿಕನ್ ಬರೀಟೋ ಇತ್ಯಾದಿ ಸಿಕ್ಕುತ್ತಿದ್ದವು. ಥೀಸಿಸ್ ಬರೀತಿರೋವಾಗ  ಈ ಬರೀತೋ ಏನಾದರೂ ಉಪಯೋಗವಾದೀತು ಎಂದು ಪಿಎಚ್. ಡಿ. ವಿದ್ಯಾರ್ಥಿಗಳು ನಂಬಿದ್ದರು. ಇರಲಿ. ನಾನು ಸಾಧಾರಣ ನನ್ನ ಊಟವನ್ನು ಹೊರಗೆ ತೆಗೆದುಕೊಂಡು ಕಲ್ಲುಮೇಜಿನ ಮುಂದೆ ಕೂತು ತಿನ್ನುವುದು ರೂಢಿ. ಒಂದು ದಿವಸ ನಾನು ಒಳಗೆ ಸ್ಥಳ ಹುಡುಕಿ ಕುಳಿತುಕೊಂಡೆ. ಅಲ್ಲಿ ಎಲ್ಲರ ಕಣ್ಣುಗಳೂ ಮೇಲೆ ಅಳವಡಿಸಿದ ಟಿವಿ ಕಡೆಗಿತ್ತು. ಅಲ್ಲೊಂದು ಸೋಪ್ ಆಪರಾ ನಡೆಯುತ್ತಿತ್ತು. ಎಲ್ಲರೂ ಊಟವನ್ನು ಮರೆತು ನೋಡುತ್ತಿದ್ದರು. ಸೋಪ್ ಆಪರಾ ಹೇಗೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ! ನಮ್ಮಲ್ಲಿ ಸೋಪ್ ಆಪರಾ ಪ್ರಾರಂಭವಾಗಿದ್ದು ಹಮ್ ಲೋಗ್ ಮತ್ತು ಬುನಿಯಾದ್ ಎಂಬ ಧಾರಾವಾಹಿಗಳ ಮೂಲಕ. ಹಮ್ ಲೋಗ್ ಪ್ರಾರಂಭವಾಗುವ ಮುನ್ನ ನಟ ಅಶೋಕ್ ಕುಮಾರ್ ಹಿಂದಿನ ಕಥೆಯನ್ನು ಮೆಲುಕು ಹಾಕಿ ಮುಂದಿನ ಕಥೆ ಬಗ್ಗೆ ಸುಳಿವು ನೀಡುವುದು ಕುತೂಹಲ ಹೆಚ್ಚುವಂತೆ ಮಾಡುತ್ತಿತ್ತು. ಬುನಿಯಾದ್ ಧಾರಾವಾಹಿ ಪ್ರಸಾರ ಆಗುತ್ತಿದ್ದಾಗ ನಾನು ಐಐಎಸ್ಸಿ ಸಂಸ್ಥೆಯಲ್ಲಿ ವಿದ್ಯಾರ್ಥಿ.  ಅಲ್ಲಿಯ ಜಿಮ್ ಖಾನಾ ದಲ್ಲಿದ್ದ ಟಿವಿ ಮುಂದೆ ವಿದ್ಯಾರ್ಥಿಗಳ ದೊಡ್ಡ ಸಮೂಹ ಕೂತು ಬುನಿಯಾದ್ ಧಾರಾವಾಹಿ ನೋಡುತ್ತಿತ್ತು.  

ಕೇವಲ ಡಿಡಿ ವಾಹಿನಿ ಮಾತ್ರ ಇದ್ದ ದಿನಗಳಲ್ಲಿ ಭಾನುವಾರ ಬಹುತೇಕ ಇಡೀ ದಿವಸ ಮನರಂಜನೆ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ರಾಮಾಯಣ, ಮಹಾಭಾರತ, ಚಾಣಕ್ಯ ಮುಂತಾದ ಧಾರಾವಾಹಿಗಳು ವಿಪರೀತ ಜನಪ್ರಿಯವಾದವು. ನಾನು ದೆಹಲಿಯ ಐಐಟಿ ಸೇರಿದ ಹೊಸತರಲ್ಲಿ ಮಹಾಭಾರತ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಆಗ  ಕ್ಯಾಂಪಸ್ ಒಳಗೆ ಒಂದು ನರಪಿಳ್ಳೆಯೂ ಎಲ್ಲೂ ಓಡಾಡುತ್ತಿರಲಿಲ್ಲ!  ಸಣ್ಣ ಪುಟ್ಟ ಅಂಗಡಿಗಳಲ್ಲೂ ಪುಟ್ಟ ಟಿವಿ ಅಳವಡಿಸಿ ಕಪ್ಪು ಬಿಳುಪು ತೆರೆಯ ಮೇಲೆ ಈ ಕಾರ್ಯಕ್ರಮಗಳನ್ನು ನೋಡುತ್ತಾ ಕೂಡುವುದು ಸಾಧಾರಣವಾಗಿತ್ತು.

ಈಗ ಬಹುಶಃ ನೂರಾರು ಧಾರಾವಾಹಿಗಳು ಇಪ್ಪತ್ತನಾಲ್ಕು ಗಂಟೆಯೂ ನಡೆಯುತ್ತಿರತ್ತವೆ. ಪುನರ್ ಪ್ರಸಾರಗಳೂ ನಡೆಯುತ್ತವೆ. ಒಮ್ಮೆ ರಾಜಾಸ್ಥಾನದ ಪಿಲಾನಿ ಎಂಬ ಸ್ಥಳದಲ್ಲಿ ಒಂದು ಫೋಟೋ ಕಾಪಿ ಅಂಗಡಿಯಲ್ಲಿ ನನಗೆ ಕೆಲಸ ಇತ್ತು. ಅಂಗಡಿಯ ಮಾಲೀಕ ವಾಚಾಳಿ. ಈಗಿನ ಸೀರಿಯಲ್ಲುಗಳು ಹೇಗೆ ಜನರ ಮನಸ್ಸು ಕೆಡಿಸುತ್ತಿವೆ ಎಂದು ನನಗೆ ಭಾಷಣ ಕೊಟ್ಟ. ಸೊಸೆಯರನ್ನು ದ್ವೇಷಿಸುವ ಅತ್ತೆಯರು, ಅತ್ತೆಯರನ್ನು ದ್ವೇಷಿಸುವ ಸೊಸೆಯಂದಿರು. ಇದರಿಂದ ಮನೆಯಲ್ಲಿ ಶಾಂತಿಯೇ ಇಲ್ಲ ಎಂದು ಕೋಪ ಮಾಡಿಕೊಂಡ. ನಾನು ಧಾರಾವಾಹಿಗಳನ್ನು ಫಾಲೋ ಮಾಡದ ಕಾರಣ ನನ್ನ 'ಸೋಪ್ ಅಜ್ಞತೆ'ಯನ್ನು ಕ್ಷಮಿಸುವಂತೆ ಕೇಳಿಕೊಂಡು ಹೊರಬಂದೆ.


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)