ಬೆಂಗಳೂರಲ್ಲಿ ಹ್ಯಾಲೋವೀನ್
ಕೆಲವು ವರ್ಷಗಳ ಹಿಂದೆ ಹ್ಯಾಲೋವೀನ್ ಸಂಜೆ ನಾನು ಮನೆಯಲ್ಲಿ ಒಬ್ಬನೇ ಇದ್ದಾಗ ಕರೆಗಂಟೆ ಬಾಜಿಸಿತು. ತೆರೆದರೆ ಅಲ್ಲೊಬ್ಬಳು ಮರಿ ಮಾಯಾವಿನಿ ಮತ್ತು ಮರಿ ಡ್ರಾಕುಲಾ ನಿಂತಿದ್ದರು. ಟ್ರಿಕ್ ಆರ್ ಟ್ರೀಟ್ ಎಂದು ಬಾಯಲ್ಲಿ ಹೇಳಿದರೂ ಟ್ರೀಟ್ ಪಡೆದುಕೊಳ್ಳಲು ಕೈಯಲ್ಲಿ ಹಿಡಿದಿದ್ದ ಡಬ್ಬವನ್ನು ಮುಂದೆ ಮಾಡಿದರು.
ಓಹೋ!
ಭಾರತದಲ್ಲಿ ಹೀಗೆ ಟ್ರಿಕ್ ಆರ್ ಟ್ರೀಟ್ ಅಂತ ಬರುವುದು ಯಾವಾಗಿನಿಂದ ಪ್ರಾರಂಭವಾಯಿತು ಎಂದು ಯೋಚಿಸಲು ನನಗೆ ಸಮಯವಿರಲಿಲ್ಲ. ಮಾಯಾವಿನಿ ಮತ್ತು ಡ್ರಾಕುಲಾಗೆ ಅರ್ಜೆಂಟಾಗಿ ಏನಾದರೂ ಟ್ರೀಟ್ ಹೊಂದಿಸಲೇ ಬೇಕಾಗಿತ್ತು. ಏನಾದರೂ ಟ್ರಿಕ್ ತೋರಿಸಿಬಿಡಲಾ ಎಂದರೆ ಅಂಥ ಹೇಳಿಕೊಳ್ಳುವಂಥ ಟ್ರಿಕ್ ನನಗೇನೂ ಬರದು. ನಾನು ಅವರಿಗೆ ಜೋಕ್ ಏನಾದರೂ ಹೇಳಿ ನಗುಬಂತಾ ಎಂದು ಕೇಳಿಬಿಡೋಣವೇ ಎಂದು ಚಿಂತಿಸಿದೆ. ನನ್ನ ಮಕ್ಕಳು ಇಂಥದಕ್ಕೆ ಹೇಗೆ ಪ್ರತಿಕ್ರಿಯಿಸಬಹುದೆಂದು ಯೋಚಿಸಿದಾಗ ಅಂಥ ಸಾಹಸಕ್ಕೆ ಕೈ ಹಾಕದಿರುವುದೇ ಮೇಲೆಂದು ಅಡಿಗೆಮನೆಗೆ ನುಗ್ಗಿ ಹುಡುಕಿದೆ. ನಮ್ಮ ಮನೆಯಲ್ಲಿ ಚಾಕೊಲೇಟ್ ಇಟ್ಟುಕೊಳ್ಳುವುದಿಲ್ಲ. ಬಿಸ್ಕೆಟ್ ನೀಡೋಣವೆಂದರೆ ಯಃಕಶ್ಚಿತ್ ಮಾರಿ ಬಿಸ್ಕೆಟ್ಟಿಗೆ ಯಾವ ಮಾಯಾವಿನಿಯೂ ಯಾಮಾರಿ ಹೋಗುವುದಿಲ್ಲವೆಂದು ತೋರಿತು. ಸೇಬಿನ ಹಣ್ಣು ಕಣ್ಣಿಗೆ ಬಿತ್ತು. ಸ್ನೋವೈಟ್ ಎಂಬ ರಾಜಕುಮಾರಿಗೆ ಹಿಂದೊಮ್ಮೆ ಮಾಯಾವಿನಿ ಮಲತಾಯಿ ಸೇಬನ್ನು ಕೊಟ್ಟಿದ್ದು ನೆನಪಾಗಿ ಯುರೇಕಾ ಎಂದು ಕೂಗುತ್ತಾ ಹೊರಗೆ ಬಂದೆ. ಅಂಕಲ್ ನನ್ನ ಹೆಸರು ರೇಖಾ ಅಲ್ಲ, ಅದು ನನ್ನ ತಾಯಿಯ ಹೆಸರು ಎಂದು ಮಾಯಾವಿನಿ ಹಲ್ಲು ಕಿರಿದಳು. ಅವಳ ಡಬ್ಬಕ್ಕೆ ಸೇಬನ್ನು ಹಾಕಿದಾಗ ನೀವೆಷ್ಟು ಔಟ್ ಡೇಟೆಡ್ ಇದ್ದೀರಾ ಅನ್ನುವಂತೆ ನನ್ನೆಡೆಗೆ ನೋಡಿದಳು. ಡ್ರಾಕುಲಾ ಸೇಬನ್ನು ಕಚ್ಚುವ ಬದಲು ನನ್ನ ಕುತ್ತಿಗೆಯನ್ನೇ ಕಚ್ಚುವಂತೆ ನನ್ನ ಕಡೆಗೆ ನೋಡಿ ಹಲ್ಲು ಮಸೆದ. ಅವರು ತೆರಳಿದ ಮೇಲೆ ನನಗೆ ಒಮ್ಮೆಲೇ ಹಾರರ್ ಸಿನಿಮಾ ನೋಡಿದಷ್ಟೇ ಭಯವಾಯಿತು. ನಮ್ಮ ಅಪಾರ್ಟ್ಮೆಂಟಿನಲ್ಲಿರುವ ಮಕ್ಕಳೆಲ್ಲ ಟ್ರಿಕ್ ಆರ್ ಟ್ರೀಟಿಗೆ ಬಂದಂತೆ ಸಂಜೆಗನಸು ಕಂಡೆ. ಹಿಂದಿನಿಂದಲೂ ನನಗೆ ಟ್ರೀಟಿಗಳೆಂದರೆ ಭಯ. ಟ್ರೀಟಿ ಆಫ್ ಲಾಹೋರ್, ಟ್ರೀಟಿ ಆಫ್ ಮೈಸೋರ್ ಇವನ್ನೆಲ್ಲ ನೆನಪಿನಲ್ಲಿಡಲು ಬಹಳ ಹೋರಾಡಬೇಕಾಗಿತ್ತು. ಟ್ರಿಕ್ ಆರ್ ಎಂಬ ಟ್ರೀಟಿಯ ವಿಷಯದಲ್ಲಂತೂ ನಾನು ಏನೇನೂ ತಯಾರಿ ಇಲ್ಲದ ಸೇನಾನಿ ಎಂದು ಮನವರಿಕೆಯಾಗಿ ಭಯವಾಯಿತು. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಈಗಿಂದೀಗಲೇ ಮಕ್ಕಳಿಗೆ ಟ್ರೀಟ್ ತಯಾರಿಸಿಡಲೇ ಎನ್ನಿಸಿದರೂ ಈಗಿನ ಮಕ್ಕಳು ಮಮ್ಮಿ ಕಾ ಮ್ಯಾಜಿಕ್ ಇತ್ಯಾದಿ ಕಾರ್ಯಕ್ರಮಗಳನ್ನು ನೋಡುತ್ತಾ ದಿನ ಬೆಳಗಾದರೆ ಬರ್ಗರ್ ಸ್ಯಾನ್ಡ್ವಿಚ್ ಪೀಟ್ಸಾ ಇತ್ಯಾದಿಗಳನ್ನು ಮೆಲ್ಲುವವರೆಂದು ನೆನೆದು ಉತ್ಸಾಹಭಂಗವಾಯ್ತು. ಕೂಡಲೇ ಚಪ್ಪಲಿ ಧರಿಸಿ ಅಪಾರ್ಟ್ಮೆಂಟಿನಲ್ಲೇ ಇರುವ ಅಂಗಡಿಗೆ ಓಡಿದೆ. ಅಯ್ಯೋ! ಅಲ್ಲಿ ಆಗಲೇ ನನ್ನಂತೆ ಪೂರ್ವತಯಾರಿಯಿಲ್ಲದ ಅದೆಷ್ಟೋ ತಂದೆಯರು ಮತ್ತು ಕೆಲವು ತಾಯಿಯರೂ ಸಹಾ ಇದ್ದಬದ್ದ ಚಾಕೊಲೇಟ್ಗಳನ್ನು ಕೊಳ್ಳುವ ಸನ್ನಾಹದಲ್ಲಿದ್ದರು. ಕೊನೆಗೆ ಯಾವ ಚಾಕೊಲೇಟ್ ಸಿಕ್ಕಿತೋ ಅದನ್ನೇ ಕೊಂಡುತಂದದ್ದಾಯ್ತು. ಮನೆಗೆ ಭೇಟಿಯಿತ್ತ ನರಕಂಕಾಲ, ಶಾರ್ದೂಲ ಮತ್ತು ನಾನು ಗುರುತಿಸಲಾಗದ ಇನ್ನೂ ಅನೇಕಾನೇಕ ಹಾರರ್ ಚಿತ್ರಕಥಾಪಾತ್ರಧಾರಿಗಳಿಗೆ ನೀನು ಯಾವ ಪಾತ್ರದಲ್ಲಿ ಬಂದಿದ್ದೀ ಎಂಬ ಟ್ರಿಕ್ ಕ್ವೆಶ್ಚನ್ನಿನಿಂದ ಪ್ರಾರಂಭಿಸಿ ಟ್ರೀಟ್ ಕೊಟ್ಟಿದ್ದಾಯ್ತು. ಮೂರು ನಾಲ್ಕು ವರ್ಷದ ಕೆಲವು ಮಕ್ಕಳಿಗೆ ತಾವು ಯಾವ ಪಾತ್ರದಲ್ಲಿ ಬಂದಿದ್ದೇವೋ ತಿಳಿಯದೆ ನನ್ನ ಟ್ರಿಕ್ ಕ್ವೆಶ್ಚನ್ನಿಗೆ ಉತ್ತರ ಹೇಳಲು ಅಸಮರ್ಥರಾಗಿ ಸುಮ್ಮನೆ ನಿಂತವು. ಅವುಗಳ ಗಮನವೆಲ್ಲ ನನ್ಮ ಕೈಯಲ್ಲಿದ್ದ ಚಾಕೊಲೇಟ್ ಮೇಲೇ ಇರುತ್ತಿತ್ತು.
ಮುಂದಿನ ವರ್ಷ ಅಕ್ತೋಬರ್ ತಿಂಗಳಲ್ಲಿ ನಾನು ಅಮೆರಿಕಾಗೆ ಪ್ರವಾಸ ಮಾಡಬೇಕಾಯಿತು. ಅಲ್ಲಿ ಆಗಲೇ ಮುಂಬರುವ ಹ್ಯಾಲೋವೀನ್ ಆಚರಣೆಗೆ ತಯಾರಿ ಪ್ರಾರಂಭವಾಗಿತ್ತು. ಮಾಲಿನಲ್ಲಿ ಎಲ್ಲಿ ನೋಡಿದರೂ ಹ್ಯಾಲೋವೀನ್ ಅಲಂಕಾರಗಳು! ನಾನು ತಡಮಾಡದೆ ಧoಡಿಯಾಗಿ ಬ್ಯಾಗ್ ಗಟ್ಟಲೆ ಚಾಕೊಲೇಟ್ ಕೊಂಡುತಂದೆ. ಅಮೆರಿಕನ್ನರಿಗೆ ಒಂದು ಎರಡು ಚಾಕೊಲೇಟ್ ತಿಂದು ಅಭ್ಯಾಸವೇ ಇಲ್ಲ. ಅಲ್ಲಿ ಎಲ್ಲವೂ ಅತಿಶಯವೇ. ಹೀಗೆ ತಂದ ಚಾಕೊಲೇಟ್ ಬ್ಯಾಗುಗಳನ್ನು ಮನೆಯಲ್ಲಿ ಇತರರಿಂದ ಕಾಪಾಡಿಕೊಳ್ಳುವುದೇನು ಸುಲಭವೇ! "ನೋಡಿ, ಇದು ಹ್ಯಾಲೋವೀನ್ ಅಂತ ಮನೆಗೆ ಬರೋ ಮಕ್ಕಳಿಗೆ, ಇದನ್ನು ಓಪನ್ ಮಾಡಬೇಡಿ" ಎಂದು ಹೇಳಿದರೂ ಯಾರೋ ಕುತೂಹಲದಿಂದ ಬ್ಯಾಗನ್ನು ತೆರೆದೇ ತೆರೆಯುವರು. ಆ ವರ್ಷ ನನ್ನ ಕೈಯಿಂದ ಜೆಮ್ಸ್ ಚಾಕೊಲೇಟ್ ಪ್ಯಾಕೆಟ್ ಪಡೆದ ಮಗುವಿನ ಕಣ್ಣು ಅರಳಿದ್ದು ನೋಡಿ ನನ್ನ ಶ್ರಮವೆಲ್ಲಾ ಸಾರ್ಥಕವಾಯಿತು. ಈ ಮನೆಯಲ್ಲಿ ಜೆಮ್ಸ್ ಕೊಡುತ್ತಿದ್ದಾರೆಂದು ಆ ಮಗು ಎಲ್ಲರಿಗೂ ಪ್ರಸಾರ ಮಾಡಿರಬಹುದೇನೋ. ನಾನು ಬೇರಾವುದೋ ಚಾಕೊಲೇಟ್ ಕೊಟ್ಟಾಗ ಮುಖಕ್ಕೆ ಮೀಸೆ ಬಳಿದುಕೊಂಡಿದ್ದ ವೇಷಧಾರಿ "ಅಂಕಲ್ ಜೆಮ್ಸ್!" ಎಂದು ನಿಸ್ಸಂಕೋಚವಾಗಿ ಕೇಳಿತು. ಸುಮಾರು ಐದೂವರೆ ಅಡಿಯ ಒಬ್ಬ ಭೂಪ ಮಕ್ಕಳೊಂದಿಗೆ ಬಂದಿದ್ದ. ಅವನಿಗೆ ನಿಜವಾದ ಮೀಸೆಯೇ ಮೂಡುತ್ತಿತ್ತು. ಅವಸರದಲ್ಲಿ ಏನೋ ಒಂದು ಮೇಕಪ್ ಮಾಡಿಕೊಂಡು ಬಂದಿದ್ದ. ಅವನು ಯಾವ ಪಾತ್ರಧಾರಿಯೋ ಎಂಬುದೇ ಒಂದು ಟ್ರಿಕ್ ಕ್ವೆಶ್ಚನ್ ಆಗಿತ್ತು. ಪಾಪ ಹದಿಮೂರರ ವಯಸ್ಸಿನ ಮಕ್ಕಳ ಪಾಡು ನೋಡಿ! ಅತ್ತ ವಯಸ್ಕರೂ ಅಲ್ಲ. ಇತ್ತ ಮಕ್ಕಳೂ ಅಲ್ಲ. ಅಮ್ಮನ ಕೈಯಲ್ಲಿ ಮೇಕಪ್ ಮಾಡಿಸಿಕೊಳ್ಳಲು ನಾಚಿಕೆ. ಆದರೆ ಚಾಕೊಲೇಟ್ ಮೇಲೆ ಕಣ್ಣು. "ಯಾರು ಯಾರು ನೀ ಯಾರು? ಎಲ್ಲಿಂದ ಬಂದೆA ಯಾವೂರು?" ಎಂದು ನಾನು ಕೇಳಿದರೂ ಪ್ರಯೋಜನವಿಲ್ಲ. ಈ ಮಕ್ಕಳಿಗೆ ಕನ್ನಡ ಏನಿದ್ದರೂ ಪ್ರೈಮರಿ ಶಾಲೆಯಲ್ಲಿ ಥರ್ಡ್ ಲಾಂಗ್ವೇಜ್. ಹೇ ವಾಟ್ ಆರ್ ಯೂ ಮ್ಯಾನ್ ಎಂದು ಅವನ ಭಾಷೆಯಲ್ಲೇ ಕೇಳಿದೆ. ಅದೇನೋ ಪಿಟಿಪಿಟಿ ಎಂದು ಮಂಬಲಿಸಿದ. ನಾನು ಓ ಐ ಸೀ ಎಂದು ಅರ್ಥವಾದವನಂತೆ ನಟಿಸಿ ಚಾಕೊಲೇಟ್ ಕೊಟ್ಟು ಕಳಿಸಿದೆ.
ನಾವು ಮಕ್ಕಳಾಗಿದ್ದಾಪ್ಗ ದಸರಾ ಹಬ್ಬಕ್ಕೆ ಮನೆಮನೆಗೆ ಬೊಂಬೆ ನೋಡಲು ಹೋಗುತ್ತಿದ್ದದ್ದು ನೆನಪಾಯ್ತು. ವಠಾರದ ಎಲ್ಲರ ಮನೆಯಲ್ಲೂ ಪುಟ್ಟ ಮಕ್ಕಳು. ಎಲ್ಲರೂ ಗುಂಪಿನಲ್ಲಿ ಮನೆಯಿಂದ ಮನೆಗೆ ಹೋಗಿ ರೀ ಗೊಂಬೆ ಕೂಡಿಸಿದ್ದೀರಾ ಎಂದು ಕೇಳುವುದು. ಇದು ಒಂದು ದಿನದ ಮಾತಲ್ಲ. ಹತ್ತೂ ದಿವಸಗಳ ಕಥೆ. ಅವರ ಮನೆಯಲ್ಲಿ ಗೊಂಬೆ ಕೂಡಿಸಿದ್ದಾರೆಂದು ಮೊದಲ ದಿನವೇ ಗೊತ್ತಾದರೂ ಪ್ರತಿದಿನ ಅದೇ ಪ್ರಶ್ನೆ! ನೇರವಾಗಿ ಒಳಗೆ ಹೋಗಿಬಿಡಲು ಬಿಡದ ಒಣಜಂಭ! ನಮ್ಮ ಕನ್ನಡ ತಾಯಂದಿರು ಕೂಡಾ ಟ್ರಿಕ್ ಆರ್ ಟ್ರೀಟ್ ಅನಸರಿಸುತ್ತಿದ್ದರು. ಆದರೆ ಅದನ್ನು ಟ್ರೀಟ್ ಫಾರ್ ಟ್ರಿಕ್ ಎಂದು ಬದಲಾಯಿಸಿಕೊಂಡಿದ್ದರು, ಅಷ್ಟೇ. ಯಾರು ಹಾಡು ಹೇಳುತ್ತಾರೋ ಕೋಲಾಟ ಮಾಡುತ್ತಾರೋ ಅವರಿಗೆ ಮಾತ್ರ ಬಾಗಿನ ಎಂದು ಘೋಷಿಸುತ್ತಿದ್ದರು. ಮೊದಲ ದಿವಸ ಎಲ್ಲರೂ ಏನಾದರೂ ಒಪ್ಪಿಸುತ್ತಿದ್ದೆವು. ಏನಿಲ್ಲದಿದ್ದರೆ "ನಾಯಿಮರಿ ನಾಯಿಮರಿ ತಿಂಡಿ ಬೇಕೆ?" ಇತ್ತಲ್ಲ. ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹೇಳಿಬಿಟ್ಟರಂತೂ ನಮ್ಮ ಸ್ಟೇಟಸ್ ಏರಿ ಬಿಡುತ್ತಿತ್ತು. ಅಪ್ಪಬೋವ್ ಅನ್ನುವಾಗ ಅಪ್ಪ ಯಾಕೆ ಬೋವ್ ಅನ್ನುತ್ತಾರೆ ಎಂದು ಯಾರಿಗೂ ಗೊತ್ತಿರದಿದ್ದರೂ ಕೇಳುತ್ತಲೂ ಇರಲಿಲ್ಲ. ಕ್ರಮೇಣ ಈ ಮನೆಯವರು ಎಲ್ಲರಿಗೂ ಬಾಗಿನ ಕೊಟ್ಟುಬಿಡುವ ಉದಾರಿಗಳು ಎಂದು ನಮಗೆ ಗೊತ್ತಾಗಿ ಹೋಗುತ್ತಿತ್ತು. ಆಗೆಲ್ಲ ಮಷೀನ್ ಲರ್ನಿಂಗ್ ಮುಂತಾದವು ಇಲ್ಲದಿದ್ದರೂ ನಮಗೆ ಅವೆಲ್ಲ ಬೇಕಿರಲಿಲ್ಲ, ಬಿಡಿ. ಹುಡುಗಿಯರು ಅದೇ ಹಾಡು ಅದೇ ಕೋಲಾಟಗಳನ್ನು ಒಪ್ಪಿಸುವಾಗ ಹುಡುಗರು ಇವತ್ತು ಇವರ ಮನೆಯಲ್ಲಿ ಏನು ಬಾಗಿನ ಎಂದು ಲೆಕ್ಕ ಹಾಕುತ್ತಿದ್ದರು. ಒಂದು ದಿನ ಚಕ್ಕುಲಿ, ಇನ್ನೊಂದು ದಿನ ಕೋಡುಬಳೆ, ಇನ್ನೊಂದು ದಿನ ರವೆ ಉಂಡೆ ಇತ್ಯಾದಿಯಾಗಿ ತಾಯಂದಿರು ಪ್ಲಾನ್ ಮಾಡಿಕೊಳ್ಳುತ್ತಿದ್ದರು. ನನ್ನ ಅಮ್ಮನಿಗೆ ಹೆಣ್ಣು ಮಕ್ಕಳಿಲ್ಲವೆಂಬ ಕೊರಗು ನವರಾತ್ರಿಯಲ್ಲಿ ವಿಶೇಷವಾಗಿ ಬಾಧಿಸುತ್ತಿತ್ತೇನೋ. ಹೀಗಾಗಿ ಪ್ರತಿದಿನ ವಿಶೇಷ ಅಡುಗೆ ಮಾಡಿ ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ಕೊಡುತ್ತಿದ್ದರು. ಯಾವ ದಿನ ಏನು ಬಾಗಿನ ಎಂದು ವಾರದ ಹಿಂದೆಯೇ ಪ್ಲಾನ್ ಮಾಡಿರುತ್ತಿದ್ದರು. ವಿಜಯದಶಮಿಯ ದಿನ ಎಲ್ಲರಿಗೂ ಪುಟ್ಟ ಹೋಳಿಗೆ ಬಾಗಿನ ಕೊಡುತ್ತಿದ್ದದ್ದು ವಠಾರದಲ್ಲಿ ನಮ್ಮ ಸ್ಟೇಟಸ್ ಹೆಚ್ಚಿಸುತ್ತಿತ್ತು.
ಹ್ಯಾಲೋವೀನ್ ದಿವಸ ಬರುವ ಮಕ್ಕಳಿಗೆ ಬೊಂಬೆ ಬಾಗಿನ ಎಂದರೇನು ಅಂತಲೂ ಗೊತ್ತಿಲ್ಲವಲ್ಲ ಎಂದು ನನಗೆ ಬೇಸರವಾಯಿತು. ಛೇ ಏನಪ್ಪಾ ಈ ಹುಡುಗರು, ಇವರಿಗೆ ಚನಾ ಚಾಕೊಲೇಟ್ ಚಾಟ್ ಚೀಸ್ ಇವೆಲ್ಲ ತಿಂದು ಚೂಡಾ, ಚುರ್ಮಾ, ಚಂಚಂ ಇವೆಲ್ಲ ಮರೆತೇ ಹೋಗಿದೆ ಎಂದು ಗೊಣಗಾಡಿದೆ. ಇವರಿಗೆ ಯಾಕೆ ರವೆ ಉಂಡೆ ಬಾಗಿನ ಮಾಡಿಕೊಡಬಾರದು ಎಂದು ಚರ್ಚೆ ಪ್ರಾರಂಭಿಸಿದಾಗ ನನ್ನ ಹೆಂಡತಿ ನನ್ನ ಕಡೆ ಕನಿಕರದಿಂದ ನೋಡಿದಳು. ನನಗೆ ಇದರಿಂದ ಚಾಲೆಂಜ್ ಸಿಕ್ಕಂತಾಗಿ ಈ ವರ್ಷ ನಾನು ಏನಾದರೂ ಬಡಲಾಯಿಸಿಯೇ ತೀರುವೆನೆಂದು ಶಪಥ ತೊಟ್ಟೆ. ಶಪಥ ತೊಡುವುದು ಸುಲಭ! ಅದನ್ನು ಕಾರ್ಯರೂಪಕ್ಕೆ ತರುವುದು ಮಾತ್ರ ಕಷ್ಟ. ಏತನ್ಮಧ್ಯೆ ಯಾರೋ ಸ್ನೇಹಿತರು ಫೇಸ್ಬುಕ್ ಮೇಲೆ ಚಿಕ್ಕಿಯ ಬಗ್ಗೆ ಚರ್ಚೆ ಪ್ರಾರಂಭಿಸಿದರು. ಯುರೇಕಾ ಎಂದು ನಾನು ಕೂಗಿದೆ. ಕೂಡಲೇ ನೆಟ್ ಮೇಲೆ ಹುಡುಕಾಡಿ ಚಿಕ್ಕಿ ಆರ್ಡರ್ ಮಾಡಿದೆ. ದೊಡ್ಡ ಪ್ಲಾಸ್ಟಿಕ್ ಜಾಡಿಯಲ್ಲಿ ಬಂದ ಚಿಕ್ಕಿಗಳನ್ನು ನೋಡಿ ಹೆಮ್ಮೆಯಿಂದ ಬೀಗಿದೆ. ಪ್ರತಿಯೊಂದೂ ಚಿಕ್ಕಿಗೆ ಪೇಪರ್ ಕವರ್ ಹಾಕಿತ್ತು. ನಾವು ಬಾಲ್ಯದಲ್ಲಿ ಐದು ಪೈಸೆಗೆ ಕೊಳ್ಳುತ್ತಿದ್ದ ಚಿಕ್ಕಿಯ ಎರಡರಷ್ಟು ಗಾತ್ರದ ಚಿಕ್ಕಿಗಳು. ಹ್ಯಾಲೋವೀನ್ ಬಂತು. ನಾನು ಚಿಕ್ಕಿಗಳನ್ನು ಮಕ್ಕಳ ಕೈಗೆ ಕೊಟ್ಟು ಟ್ರೀಟ್ ಅಂಡ್ ಟ್ರಿಕ್ ಮಾಡಿದೆ.
-- ಸಿ.ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ