ಯಾರು ಕಿವಿ ಮುಚ್ಚಿದರೂ!



ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ! ಈ ಸಾಲನ್ನು ಬರೆದ ಕವಿ ಶ್ರೋತೃಗಳಿಗೆ ಬಹಳ ಅನ್ಯಾಯ ಮಾಡಿದ್ದಾರೆ.  "ಎದೆ ತುಂಬಿ ಹಾಡುವೆನು" ಭಾವಗೀತೆಗೆ ಈಗ ಐವತ್ತರ ಸಂಭ್ರಮ ಇರಬಹುದು. ಎಂ. ಎಸ್. ಐ.ಎಲ್. ಗೀತೆಗಳು ಎಂಬ ರೇಡಿಯೋ ಕಾರ್ಯಕ್ರಮದಲ್ಲಿ ಇದು ಮೊದಲು ಪ್ರಸಾರವಾಯಿತು. ಮೈಸೂರು ಅನಂತಸ್ವಾಮಿ ಅವರು ಈ ಕಾರ್ಯಕ್ರಮಕ್ಕೆ ಅನೇಕ ಭಾವಗೀತೆಗಳನ್ನು ಧ್ವನಿಮುದ್ರಿಸಿದರು.  ಆದರೆ ಈ ಗೀತೆ ಮಾತ್ರ ಅತ್ಯಂತ ಜನಪ್ರಿಯವಾಗಿದ್ದಕ್ಕೆ ಕಾರಣ ಮೇಲಿನ ಸಾಲಿನಲ್ಲೇ ಇದೆ. ಗಾಯಕಿ ಬಹಳ ಹೈ ಪಿಚ್ನಲ್ಲಿ ಹಾಡುತ್ತಿದ್ದಾಗ ಶ್ರೋತೃಗಳು  ಕಿವಿ ಮುಚ್ಚಿದರೂ ಐ ಕಾಂಟ್ ಕೇರ್ ಲೆಸ್ ಎನ್ನುವ ಭಾವದಿಂದ ಗೀತೆಯನ್ನು ಕಂಪ್ಲೀಟ್ ಮಾಡಿಯೇ ಬಿಡುವ ಗಾಯಕಿಯರು ಈ ಗೀತೆಗೆ ಅಪಾರ ಜನಪ್ರಿಯತೆ ತಂದುಕೊಟ್ಟರು. ಆಗ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎದೆ ತುಂಬಿ ಹಾಡುವೆನು! ಭಾವಗೀತೆ ಸ್ಪರ್ಧೆಯಲ್ಲಿ ಮೂವತ್ತು ಜನ ಭಾಗವಹಿಸಿದರೆ ಕನಿಷ್ಠ ಹತ್ತು ಜನ ಎದೆ ತುಂಬಿ ಹಾಡಿ ಶ್ರೋತೃಗಳ ಕಿವಿ ತುಂಬುತ್ತಿದ್ದರು. 


ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ! ಇದೇನು ಅಂಥ ಹೆಮ್ಮೆಯ ವಿಷಯವೇ ಹೇಳಿ! ನಿಮ್ಮ ಮಿತ್ರರ ಮೇಲೆ ನಿಮಗೆ ಕೋಪ ಬಂದಿದೆಯೇ? ಅವರ ಮೂರು ವರ್ಷದ ಮಗುವಿಗೆ ಡ್ರಮ್ಸ್ ಉಡುಗೊರೆ ಕೊಡಿ. ಅದು ಪರಮಸಂತೋಷದಿಂದ ಇಡೀ ದಿನವೆಲ್ಲಾ ಡಿಂಡಿಮ ಡಂಡಮ ಬಾರಿಸುತ್ತದೆ. ನಿಮ್ಮ ಮಿತ್ರರು ಕಿವಿಯಲ್ಲಿ ಹತ್ತಿ ಇಟ್ಟುಕೊಂಡರೇನು, ಬೆಟ್ಟು ಇಟ್ಟುಕೊಂಡರೇನು! ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ ಎಂದು ಪಾಪು ಡ್ರಮರುಗ ಬಾಜಿಸುತ್ತದೆ. ಮಗುವನ್ನು ಬೈದು ಅದರ ಕೈಯಿಂದ ಡ್ರಂ ಸ್ಟಿಕ್ ಕಿತ್ತು ಕೊಂಡರೆ ನೀವು "ಮೂರ್ತಿ! ಮಗುವಿಗೆ ಪ್ರೋತ್ಸಾಹ ಕೊಡೋ ಬದಲು ಅವನ ಕೈಯಿಂದ ಆಟದ ಸಾಮಾನು ಕಿತ್ಕೋತಿದೀಯಲ್ಲ! ಎಷ್ಟು ಆರಾಮವಾಗಿ ತನ್ನ ಪಾಡಿಗೆ ತಾನು ಡ್ರಂ ಬಾರಿಸುತ್ತಿದೆ ನೋಡು!' ಎಂದು ಸಮಾಧಾನ ಹೇಳಿ. ಮೂರ್ತಿ ಕೋಪದಿಂದ "ನೀನು ಸುಮ್ನಿರು.  ಹೀಗೆ ಎಲ್ಲರೂ ಮುದ್ದು ಮಾಡಿ ಹಾಳಾಗಿದ್ದಾನೆ. ಪಕ್ಕದ ಮನೆ ಮಗು ಈಗಾಗಲೇ ಎಬಿಸಿಡಿ ಬರೆಯುತ್ತೆ!" ಎಂದು ಹಾರಾಡುತ್ತಾನೆ.  ಅವನ ಹೆಂಡತಿ ಕೊಟ್ಟ ಕಾಫಿ ಕುಡಿದು ಡ್ರಂ ಸಂಗೀತವನ್ನು ಒಂದಿಷ್ಟು ಆನಂದಿಸಿ ನೀವು ಜಾಗ ಖಾಲಿ ಮಾಡಿ.  ಪಾಪು ನಿಶ್ಚಿಂತೆಯಿಂದ ತನ್ನ ಸಂಗೀತ ಮುಂದುವರೆಸಲಿ.


ಎಂ. ಎಸ್. ಐ. ಎಲ್. ಗೀತೆಗಳು ಮುಂತಾದ ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ರೇಡಿಯೋ ಯಾವಾಗ ಎಫ್ ಎಂ ವಾಹಿನಿಗಳಿಂದ ಆಕ್ರಮಿಸಲ್ಪಟ್ಟಿತೋ, ಯಾವಾಗ ಡ್ರಂ ಬಾರಿಸುವ ಪಾಪುಗಳು ಬೆಳೆದು ಸಂಗೀತ ನಿರ್ದೇಶಕರಾದರೋ?! ಅನೇಕ ವರ್ಷ ಬೆಂಗಳೂರಿನಿಂದ ಹೊರಗಿದ್ದು ಮರಳಿಬಂದ ಹೊಸತರಲ್ಲಿ ರೇಡಿಯೋ ಕೇಳುವ ಅವಕಾಶ ಸಿಕ್ಕಿದ್ದು ಆಫೀಸ್ ಒದಗಿಸಿದ ವಾಹನ ವ್ಯವಸ್ಥೆಯಲ್ಲಿ.  ಅದೇನು ಬೀಟ್ಸ್, ಅದೇನು ಡ್ರಮ್ಸ್, ಅದೇನು ಸಾಹಿತ್ಯ! ಶ್ರೀನಿವಾಸ್, ಸುಶೀಲಾ, ಜಾನಕಿ, ರಾಜಕುಮಾರ್ ಇವರನ್ನೆಲ್ಲ ಹಿಂದಟ್ಟಿ ಯಾರೋ ಒಬ್ಬ ಗಾಯಕಿ ವಿಪರೀತ ಹೈ ಪಿಚ್ನಲ್ಲಿ ಎಲ್ಲ ಹಾಡುಗಳನ್ನೂ ಹಾಡುತ್ತಿದ್ದರು. ಯಾರು ಕಿವಿ ಮುಚ್ಚಿದರೂ ಡ್ರೈವರ್ ತನಗಿಲ್ಲ ಚಿಂತೆ ಎಂದು ವಾಲ್ಯೂಮ್ ಜೋರಾಗಿ ಇಟ್ಟುಕೊಂಡು ವಾಹನ ಓಡಿಸುತ್ತಿದ್ದರೆ ಪಕ್ಕದಲ್ಲಿ ಕೂತಿದ್ದವರ ಜೊತೆ ಸಂಭಾಷಣೆ ಕೂಡಾ ಕಷ್ಟವಾಗುತ್ತಿತ್ತು. ಆಗ ಸ್ಮಾರ್ಟ್ ಫೋನ್ ಇತ್ಯಾದಿ ಇರಲಿಲ್ಲ.  ನ್ಯೂಸ್ ಪೇಪರ್ ಇಟ್ಟುಕೊಂಡು ಓಡುವ ವಾಹನದಲ್ಲಿ ಓದುವ ಅಭ್ಯಾಸ ಮಾಡಿಕೊಂಡೆ. ಕ್ರಮೇಣ ವಾರ್ತಾ ಪತ್ರಿಕೆಗಳಲ್ಲೂ "ಯಾರು ಕಿವಿ ಮುಚ್ಚಿದರೂ" ಧೋರಣೆ ಕಾಣತೊಡಗಿತು. ಮೊದಮೊದಲು ಪತ್ರಿಕೆಗಳಲ್ಲಿ ಸ್ಪೆಲ್ಲಿಂಗ್ ತಪ್ಪುಗಳನ್ನು ಕಂಡಾಗ ಕೋಪ ಬರುತ್ತಿತ್ತು.  ಈಗ ಸ್ಪೆಲ್ಲಿಂಗ್ ತಪ್ಪುಗಳು ಗೌಣ ಅನ್ನಿಸುತ್ತಿವೆ.  ದೀಪಾವಳಿ ವಿಶೇಷಾಂಕಗಳು ಬಂದಾಗ ಬಹಳ ಸಂಭ್ರಮದಿಂದ ಓದುತ್ತಿದ್ದ ನಾನು ಅದೇ ಆಸೆಯಿಂದ ವಿಶೇಷಾಂಕ ಓದಲು ಹೋಗಿದ್ದನ್ನು ನೋಡಿ ನನ್ನ ಅಣ್ಣ ಮೊದಲೇ ವಾರ್ನಿಂಗ್ ಕೊಟ್ಟ. ಸರಿ, ವಿಶೇಷಕ್ಕೂ ಅಂಕದ ಪರದೆ ಬಿತ್ತು.


ಕೊನೆಗೊಂದು ಕುತೂಹಲವನ್ನು ನಿಮಗೆ ಹೇಳಲೇಬೇಕು.

ನನ್ನ ನರಿ ನೀ ನಿನ್ನ ನರಿ ನಾ ಎಂದೇನೋ ಒಂದು ಹಾಡು ಆಗ ಪ್ರತಿದಿನ ಪ್ರಸಾರವಾಗುತ್ತಿತ್ತು.  ಹೀಗೆ ನರಿಗಳು ಪರಸ್ಪರ ಪ್ರೇಮವನ್ನು ಹಂಚಿಕೊಳ್ಳುವ ಗೀತೆಯ ಹಿಂದಿನ ಗೂಢಾರ್ಥ ನನಗಂತೂ ಆಗಲಿಲ್ಲ. ಹಿಂದೆ ನೀನು ಚಂದ್ರ, ನಾನು ಚಕೋರಿ ಅಥವಾ ಚಂದ್ರಿಕೆ, ನೀನು ದೀಪ ನಾನು  ಬತ್ತಿ ಅಥವಾ ಎಣ್ಣೆ, ನೀನು ಮೇಘ, ನಾನು ನವಿಲು ಇತ್ಯಾದಿ ಸಾಹಿತ್ಯ ಇರುತ್ತಿತ್ತು. ಈಗ ಚಂದ್ರಿಕೆ, ಚಕೋರಿ ಇವೆಲ್ಲ ಯಾರಿಗೂ ಅರ್ಥವಾಗುವ ಪದಗಳಲ್ಲ ಎಂಬುದು ನಿಜ, ಬಿಡಿ. ಇನ್ನು ಎಣ್ಣೆ ಎಂಬ ಪದದ ಅರ್ಥವನ್ನು ಅಪಾರ್ಥ ಮಾಡಿಟ್ಟಿದ್ದಾರೆ.  ನಿನಗೆ ಯಾರು ಬತ್ತಿ ಇಟ್ಟರು ಎಂದೆಲ್ಲಾ ಹೇಳುತ್ತಾ ಬತ್ತಿ ಪದದಲ್ಲಿದ್ದ ತೈಲವೂ   ಬತ್ತಿಹೋಗಿದೆ.  ಮೇಘ ಎಂದರೆ ಅದೊಂದು ಮಾರ್ಟ್ ಎಂದು ತಿಳಿದು ಬೈ ವನ್ ಗೆಟ್ ಟೂ ಫ್ರೀ ಎಂದು  ನವಿಲುಗಳಂತೆ ನರ್ತಿಸುವ ಜನರೂ ಇದ್ದಾರೆ.  ಹೀಗಾಗಿ ಕವಿ ಈ ಎಲ್ಲ ಹೋಲಿಕೆಗಳನ್ನು ಡಿಲೀಟ್ ಮಾಡಿಬಿಟ್ಟನೋ ಏನು ಕಥೆ?!  ನಿಮಗೆ ತಿಳಿದಿದ್ದರೆ ನನಗೂ ತಿಳಿಸಿ. 


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)