ನನ್ನ ಸಮಾಧಿಯ ಎದುರು ನಿಂತು ಅಳದಿರು
ಮೂಲ: ಕ್ಲೇರ್ ಹಾರ್ನರ್ ಅನುವಾದ: ಸಿ. ಪಿ. ರವಿಕುಮಾರ್ ನನ್ನ ಸಮಾಧಿಯ ಎದುರು ನಿಂತು ಅಳದಿರು, ನಾನಲ್ಲಿಲ್ಲ, ನಾನು ನಿದ್ರಿಸುವುದಿಲ್ಲ, ತಿಳಿದಿರು: ಲೀನವಾಗಿದೆ ಬೀಸುವ ಗಾಳಿಗಳಲ್ಲಿ ಸಾವಿರಾರು ವಜ್ರದಂತೆ ಹೊಳೆವ ಹಿಮಕಣದಲ್ಲಿ ನನ್ನುಸಿರು. ಬಲಿತ ಕಾಳಿನ ಮೇಲೆ ಹೊಳೆವ ಕಿರಣವು ನಾನು, ನಾನು ಶ್ರಾವಣದ ನಿಶಬ್ದ ತುಂತುರು ಮಳೆ. ಶಾಂತ ನಸುಕಿನೊಳು ನಿದ್ದೆಯಿಂದೆದ್ದಾಗ ನೀನು ಯಾವ ಸದ್ದಿನಿಂದ ಪುಳಕಗೊಳ್ಳುವುದೋ ಇಳೆ, ಆ ಇಂಚರಗೈಯುವ ಪಕ್ಷಿವೃಂದವು ನಾನು, ದಿವರಾತ್ರಿಗಳ ಮಾಯಾ ಪರಿವರ್ತನೆ ನಾನು. ಸುರಿಸದಿರು ನನ್ನ ಸಮಾಧಿಯ ಎದುರು ನಿನ್ನ ಕಣ್ಣುಗಳಿಂದ ಅಶ್ರುಬಿಂದು. ನಾನಲ್ಲಿಲ್ಲ ಎಲ್ಲರೂ ತಿಳಿದಿರುವಂತೆ, ಯಾರು ಹೇಳಿದರು ನಾನು ಇನ್ನಿಲ್ಲವೆಂದು?