ನಾನಿರುವುದಿಲ್ಲ ಎಂಬ ಭೀತಿ

ಮೂಲ: ಜಾನ್ ಕೀಟ್ಸ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ನಾನಿರುವುದಿಲ್ಲ ಮುಂದೊಂದು ದಿನ, ಅದಕ್ಕೆ ಮೊದಲೇ

ಜೇನುನೊಣದಂತೆ ಹೀರಿಕೊಂಡು ನನ್ನ ಲೇಖನಿಯು

ಮಾನಸೋದ್ಯಾನದ ಅಸಂಖ್ಯ ಕಲ್ಪನಾಪುಷ್ಪಗಳ ಮಧುವನ್ನು

ಘನೀಕರಿಸದಿದ್ದರೆ ಅಕ್ಷರರೂಪ ಗ್ರಂಥಮಾಲೆಯಲ್ಲಿ , ಎಂದು

ಧೇನಿಸಿ ಭೀತಗೊಳ್ಳುವೆನು. ನೋಡಿದಾಗ ಆಗಸದ ಕಡೆಗೆ

ಕಾಣಿಸಿ ನಕ್ಷತ್ರಪುಂಜದಲ್ಲಿ ಯಾವುದೋ ಪ್ರೇಮಕಥನವು

ಬಾನಲ್ಲಿ, ನಿಡುಸುಯ್ಯುವೆನು ಅದರ  ನೆರಳನ್ನಾದರೂ

ನಾನಿಲ್ಲಿ ಗ್ರಹಿಸಿಡಲು ಬಿಡುವುದೇ ವಿಧಿಯ ಮಾಯಾಹಸ್ತ!

ನಿನ್ನ ಮೊಗದ ಚೆಲುವನ್ನು ನೋಡುತ್ತಾ ದುಃಖಿಸುವೆ ಮತ್ತೆ

ಇನ್ನೆಂದೂ ಕಾಣಲು ಸಿಕ್ಕದೆಂದು;  ದೊರೆಯದು ನನಗೆ

ಇನ್ನೆಂದೂ ಭಾವನಾತೀತ, ನಿಷ್ಕಲ್ಮಶ ಪ್ರೇಮದ ಸುಖ;

ಕಣ್ಣಾಡಿಸಿ ನೋಡುತ್ತೇನೆ ಜಗತ್ತಿನ ಕಿನಾರೆಯಲ್ಲಿ ನಿಂತು:

ಎಲ್ಲಿಯವರೆಗೆ ನಿಂತಿರುತ್ತೇನೆ ಇಲ್ಲಿ ನಾನೆಂದರೆ ಯಾವ ಘಳಿಗೆ

ಮುಳುಗುವುವೋ ಕೀರ್ತಿ ಮತ್ತು ಪ್ರೇಮ ಶೂನ್ಯದೊಳಗೆ.


ಕಾಮೆಂಟ್‌ಗಳು

  1. ಸಾವಿನ ಹೊಸ್ತಿಲಲ್ಲಿ ನಿಂತವನಿಗೆ ಮಾತ್ರ ಬದುಕಿನ ಒಂದೊಂದು ಕ್ಷಣವನ್ನೂ ಇಷ್ಟು ತೀವ್ರತೆಯಿಂದ ಬದುಕುವಾಸೆ!
    Beatiful translation👌🏻👌🏻👌🏻

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)